ಹಾವೇರಿ

ಜನರ ಭಾವನೆ ಕೆರಳಿಸುವ ಕಾಂಗ್ರೆಸ್

Published On :

ಕನ್ನಡಪ್ರಭ ವಾರ್ತೆ, ಹಾವೇರಿ, ನ. 11
ದ್ವಂದ್ವ ನೀತಿಯ, ಅವೈಜ್ಞಾನಿಕ ಯೋಜನೆಗಳನ್ನು ಜಾರಿಗೆ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ಜನರ ಭಾವನೆ ಕೆರಳಿಸುವ ಕೆಲಸ ಮಾಡುತ್ತಿದೆ. ಒಂದು ಕೋಮಿಗೆ ಸೀಮಿತಗೊಳಿಸಿರುವ ಶಾದಿಭಾಗ್ಯ ಯೋಜನೆಯನ್ನು ಎಲ್ಲ ವರ್ಗಗಳಿಗೂ ವಿಸ್ತರಿಸಬೇಕು ಎಂದು ಮಾಜಿ ಸಚಿವ ಸಿ.ಎಂ. ಉದಾಸಿ ಆಗ್ರಹಿಸಿದರು.
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಅವೈಜ್ಞಾನಿಕ ಯೋಜನೆಗಳನ್ನು ಖಂಡಿಸಿ ನಗರದಲ್ಲಿ ಸೋಮವಾರ ಜಿಲ್ಲಾ ಕೆಜೆಪಿ ಘಟಕ ಹಮ್ಮಿಕೊಂಡಿದ್ದ ಪ್ರತಿಭಟನೆ ನೇತೃತ್ವ ವಹಿಸಿದ್ದ ಅವರು, ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಸಿಎಂ ಸಿದ್ದರಾಮಯ್ಯ ಒಂದು ಕೋಮಿನ ಕೆಲವೇ ಜನರಿಗೆ ಸೀಮಿತಗೊಳಿಸಿ ಶಾದಿಭಾಗ್ಯ ಯೋಜನೆ ಜಾರಿಗೊಳಿಸಿದ್ದಾರೆ. ಇದು ಅಗ್ಗದ ಪ್ರಚಾರ ಎಂಬುದು ಮುಸ್ಲಿಂ ಸಮುದಾಯಕ್ಕೂ ಅರಿವಾಗಿದೆ. ಯೋಜನೆ ಜಾರಿಗೆ ಪಕ್ಷದ ವಿರೋಧವಿಲ್ಲ. ಆದರೆ ಕೇವಲ 1 ಸಾವಿರ ಜನರಿಗೆ ಉಪಯೋಗವಾಗುವ ಯೋಜನೆ ಮಾಡಿ ಉಳಿದ ಲಕ್ಷಾಂತರ ಬಡ ಜನರನ್ನು ಕಡೆಗಣಿಸಿರುವುದು ಖಂಡನೀಯ. ಯೋಜನೆಯನ್ನು ಎಲ್ಲ ಜಾತಿ, ವರ್ಗದ ಬಡ ಜನರಿಗೂ ಅನ್ವಯವಾಗುವಂತೆ ವಿಸ್ತರಿಸಬೇಕು ಎಂದು ಆಗ್ರಹಿಸಿದರು.
ಮಾತಿನ ಮಂಟಪ
ಸಿಎಂ ಸಿದ್ದರಾಮಯ್ಯ ಮಾತಿನ ಮಂಟಪದಲ್ಲೇ ಸರ್ಕಾರವನ್ನು ಎಳೆದೊಯ್ಯಲು ಯತ್ನಿಸುತ್ತಿದ್ದಾರೆ. ಜನ ಅದನ್ನು ನಂಬುವುದಿಲ್ಲ. ಸಂಪುಟ ಸಹೋದ್ಯೋಗಿಗಳೇ ಸಿಎಂ ಪರ ಮಾತನಾಡುತ್ತಿಲ್ಲ. ಮೌಢ್ಯ ನಿಷೇಧಿಸುವ ಕಾಯ್ದೆ ಜಾರಿಗೆ ತಂದು ಜನರ ಭಾವನೆಗೆ ಧಕ್ಕೆ ತರಲು ಯತ್ನಿಸುತ್ತಿದ್ದಾರೆ. ಪೂಜೆ ಮಾಡುವುದೂ ಅಪರಾಧ ಎಂದಾದರೆ ಹೇಗೆ? ಯಾರದೋ ಮಾತು ಕೇಳಿ ಸಿದ್ದರಾಮಯ್ಯ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ರೈತರು ಬೆಳೆದ ಬೆಳೆಗಳಿಗೆ ಯೋಗ್ಯ ದರ ನಿಗದಿ ಮಾಡಬೇಕು. ಕ್ವಿಂಟಲ್ ಬತ್ತಕ್ಕೆ ರು. 1800 ನೀಡಬೇಕು. ಬೆಳೆ ಹಾನಿ ಅನುಭವಿಸಿದ ರೈತರ ಖಾತೆಗೆ ಶೀಘ್ರ ಬೆಳೆ ವಿಮೆ ಪಾವತಿಸಬೇಕು ಎಂದು ಉದಾಸಿ ಒತ್ತಾಯಿಸಿದರು.
ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಹೊಸ ಉದ್ದಿಮೆ ನೀತಿಯಿಂದ ಉದ್ದಿಮೆದಾರರು ಹೊರ ರಾಜ್ಯಗಳತ್ತ ಮುಖ ಮಾಡುತ್ತಿದ್ದಾರೆ. ಹೊಸ ನೀತಿ ಪ್ರಕಾರ ಒಂದು ಎಕರೆ ಪ್ರದೇಶದಲ್ಲಿ ಉದ್ದಿಮೆ ಸ್ಥಾಪಿಸಿದರೆ 1 ಸಾವಿರ ಜನರಿಗೆ ಉದ್ಯೋಗ ಹಾಗೂ ತಲಾ ರು. 10 ಸಾವಿರ ಸಂಬಳ ನೀಡಬೇಕು. ಇದರಿಂದಾಗಿ ಉದ್ದಿಮೆ ಸ್ಥಾಪನೆ ಅಸಾಧ್ಯ. ಇದು ಮತ್ತಷ್ಟು ನಿರುದ್ಯೋಗ ಸಮಸ್ಯೆ ಹುಟ್ಟುಹಾಕುತ್ತದೆ. ಕಳಪೆ ಬೀಜದಿಂದ ಹಾನಿಗೊಳಗಾದ ರೈತರಿಗೆ ತಕ್ಷಣ ಪರಿಹಾರ ನೀಡಬೇಕು. ಎಪಿಎಲ್ ಕಾರ್ಡುದಾರರಿಗೂ ಪಡಿತರ ನೀಡಬೇಕು. ಈ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದಿದ್ದರೆ ಮತ್ತೆ ಹೋರಾಟಕ್ಕಿಳಿಯುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ಸರ್ಕಾರ ಕಿತ್ತೊಗೆಯಿರಿ
ಮಾಜಿ ಶಾಸಕ ನೆಹರು ಓಲೇಕಾರ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅಭಿವೃದ್ಧಿಗೆ ನಯಾ ಪೈಸೆಯೂ ಬಿಡುಗಡೆಯಾಗಿಲ್ಲ. ಯಡಿಯೂರಪ್ಪ ಬಿಡುಗಡೆ ಮಾಡಿದ ಹಣವನ್ನೇ ಖರ್ಚು ಮಾಡಲು ಸಾಧ್ಯವಾಗುತ್ತಿಲ್ಲ. ಆಡಳಿತ ಯಂತ್ರ ಕುಡಿಸಿದ್ದು, ಜನತೆ ಭ್ರಮನಿರಸನಗೊಂಡಿದ್ದಾರೆ. ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಅಗ್ಗದ ಪ್ರಚಾರಕ್ಕಾಗಿ ಸಿದ್ದರಾಮಯ್ಯ ಅವೈಜ್ಞಾನಿಕ ಯೋಜನೆ ಜಾರಿಗೊಳಿಸುತ್ತಿದ್ದಾರೆ. ಇಂಥ ಸರ್ಕಾರವನ್ನು ಕಿತ್ತೊಗೆದು, ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಬೇಕು ಎಂದು ಆಗ್ರಹಿಸಿದರು.
ರಾಜ್ಯಪಾಲರಿಗೆ ಬರೆದ ವಿವಿಧ ಬೇಡಿಕೆಯುಳ್ಳ ಮನವಿ ಪತ್ರವನ್ನು ತಹಸೀಲ್ದಾರ್‌ಗೆ ಸಲ್ಲಿಸಲಾಯಿತು. ಇದಕ್ಕೂ ಮುನ್ನ ನಗರದ ಪುರಸಿದ್ದೇಶ್ವರ ದೇವಸ್ಥಾನದ ಬಳಿಯಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿ, ಎಂ.ಜಿ. ರಸ್ತೆ, ಗಾಂಧಿ ವೃತ್ತ, ಜೆಪಿ ವೃತ್ತ ಮೂಲಕ ಸಾಗಿ ಪಿ.ಬಿ. ರಸ್ತೆಯ ಸಿದ್ದಪ್ಪ ಹೊಸಮನಿ ವೃತ್ತದಲ್ಲಿ ಮಾನವ ಸರಪಣಿ, ರಸ್ತೆ ತಡೆ ಮಾಡುವ ಮೂಲಕ ಕೆಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.
ಮಾಜಿ ಶಾಸಕ ಜಿ. ಶಿವಣ್ಣ, ಜಿಪಂ ಅಧ್ಯಕ್ಷ ರಾಜೇಂದ್ರ ಹಾವೇರಣ್ಣನವರ, ಕೆಜೆಪಿ ಜಿಲ್ಲಾಧ್ಯಕ್ಷ ಮೈಲಪ್ಪ ಗುಡಗೂರ, ಸುರೇಶ ಹೊಸಮನಿ, ವಿರೂಪಾಕ್ಷಪ್ಪ ನರಗುಂದ, ಕೆ.ಸಿ. ಕೋರಿ, ಈರಣ್ಣ ಸಂಗೂರ, ಜಗದೀಶ ಮಲಗೊಂಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.