ನೆಹರು ಪಂಚವಾರ್ಷಿಕ ಯೋಜನೆ ರೂವಾರಿ
ಹಿರೇಕೆರೂರು: ದೇಶದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿರುವ ಪಂಚವಾರ್ಷಿಕ ಯೋಜನೆಗಳನ್ನು ರೂಪಿಸಿ ಜಾರಿಗೆ ತಂದ ಮಾಜಿ ಪ್ರಧಾನಿ ಜವಾಹರಲಾಲ ನೆಹರು ಮಕ್ಕಳ ಮೇಲೆ ಅಪಾರ ಪ್ರೀತಿ ಹೊಂದಿದ್ದರು ಎಂದು ಕವಳಿಕುಪ್ಪ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎನ್.ಎಂ. ಕೋಣಸಾಲಿ ತಿಳಿಸಿದರು. ತಾಲೂಕಿನ ಕವಳಿಕುಪ್ಪ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಮಕ್ಕಳ ದಿನಾಚರಣೆ ಮತ್ತು ಮಕ್ಕಳ ಕಲಿಕೋತ್ಸವ ಸಮಾರಂಭದಲ್ಲಿ ನೆಹರು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಅವರು, ಸಂವಿಧಾನ ಮಕ್ಕಳಿಗಾಗಿ ಹಕ್ಕುಗಳನ್ನು ನೀಡಿದೆ. ಯಾವ ಮಗುವೂ ಶಿಕ್ಷಣದಿಂದ ವಂಚಿತವಾಗಬಾರದು. ಈ ನಿಟ್ಟಿನಲ್ಲಿ ಪಾಲಕರು, ಶಿಕ್ಷಕರು ಹಾಗೂ ಸಮುದಾಯ ಜವಾಬ್ದಾರಿ ವಹಿಸಬೇಕು ಎಂದರು. ಪ್ರಶಸ್ತಿ ವಿಜೇತ ಶಿಕ್ಷಕ ಚಂದ್ರಶೇಖರ ಅಂಗಡಿ ಮಾತನಾಡಿ, ಸರ್ವಶಿಕ್ಷಣ ಅಭಿಯಾನ ಯೋಜನೆ ಪರಿಣಾಮಕಾರಿ ಕಲಿಕೆಗೆ ಪೂರಕವಾಗಿದೆ. ಎಲ್ಲ ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು, ಅವರಲ್ಲಿ ಮಾನವೀಯ ಮೌಲ್ಯ ಬೆಳೆಸಬೇಕು. ಮಕ್ಕಳು ನಲಿಯುತ್ತಾ ಕಲಿಯುವುದು ಉತ್ತಮ ವಿಧಾನ ಎಂದರು. ವಿದ್ಯಾರ್ಥಿನಿ ಮಲ್ಲಮ್ಮ ಹಿರೇಮಠ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ವಿದ್ಯಾರ್ಥಿಗಳೇ ಮುಖ್ಯ ಅತಿಥಿಗಳೂ ಆಗಿದ್ದರು. ಕಲಿಕಾ ಪ್ರದರ್ಶನದ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮುಖ್ಯ ಶಿಕ್ಷಕ ಎಂ.ಬಿ. ಗುಡಿಹಿಂದ್ಲರ, ಎಸ್ಡಿಎಂಸಿ ಅಧ್ಯಕ್ಷ ಈರಯ್ಯ ಹಿರೇಮಠ, ಗ್ರಾಪಂ ಸದಸ್ಯೆ ಲತಾ ಪಾಟೀಲ, ರಾಜಕುಮಾರ ಹೆಂದ್ರೆ, ಪರಮೇಶಪ್ಪ ಅಂತರವಳ್ಳಿ ಇದ್ದರು.
--
ಸಾಮರಸ್ಯಕ್ಕೆ ಸಾಹಿತ್ಯ ಮಾಧ್ಯಮ: ಸುಮಾ
ಬ್ಯಾಡಗಿ: ಶರಣರು, ದಾರ್ಶನಿಕರು ಕನ್ನಡದಲ್ಲಿ ರಚಿಸಿದ ಸಾಹಿತ್ಯ ಕಲುಷಿತ ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಪ್ರಭಾವಿ ಮಾಧ್ಯಮ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಜಿ. ಸುಮಾ ಅಭಿಪ್ರಾಯ ವ್ಯಕ್ತಪಡಿಸಿದರು.
ಮೋಟೆಬೆನ್ನೂರಿನ ನವೋದಯ ವಿದ್ಯಾ ಸಂಸ್ಥೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಜರುಗಿದ ವಿ.ಬಿ. ಕಳಸೂರಮಠ ದತ್ತಿನಿಧಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ವರ್ಗ ಪದ್ಧತಿ ಜೀವಂತವಾಗಿಡುವ ನಿಟ್ಟಿನಲ್ಲಿ ಚಿಂತಿಸಿದ ಪುರೋಹಿತ ವರ್ಗ ಅರ್ಥವಾಗದ ಭಾಷೆಯಲ್ಲಿ ಮಂತ್ರ ಪಠಿಸುವ ಮೂಲಕ ಅನಿಷ್ಟ ಸಂಪ್ರದಾಯ, ಕಂದಾಚಾರಗಳ ನೆಪವೊಡ್ಡಿ ಸಮಾಜದ ಜನರ ಮೇಲೆ ಒತ್ತಡ ಹೇರಿತು. 12ನೇ ಶತಮಾನದಲ್ಲಿ ಈ ವರ್ಗದ ವಿರುದ್ಧ ಸಮರ ಸಾರಿದ ಶರಣ ಸಂಪ್ರದಾಯಸ್ಥರು ಎಲ್ಲರಿಗೂ ಅರ್ಥವಾಗುವ ಕನ್ನಡದಲ್ಲಿ ವಚನ ರಚಿಸಿ ಬಡವ-ಬಲ್ಲಿದ, ಮೇಲು-ಕೀಳೆಂಬ ಸಾಮಾಜಿಕ ಸ್ತರದಲ್ಲಿದ್ದ ಅಂತರ ಮತ್ತು ಮೌಢ್ಯಗಳನ್ನಳಿಸಿ ಮಾನವೀಯ ಮೌಲ್ಯ ಬಿಂಬಿಸಲು ಪ್ರಯತ್ನಿಸಿದ್ದಾರೆ. ಈಗ 21ನೇ ಶತಮಾನದಲ್ಲಿದ್ದೇವೆ. ಆದರೂ ಸಾಮಾಜಿಕ ನ್ಯಾಯದ ಕುರಿತು ಸಾಕಷ್ಟು ಚರ್ಚೆ, ಹೋರಾಟ ನಡೆಯುತ್ತಿವೆ ಎಂದರು.
ಡಾ ಪ್ರೇಮಾನಂದ ಲಕ್ಕಣ್ಣನವರ ಕಾರ್ಯಕ್ರಮ ಉದ್ಘಾಟಿಸಿ, ರಾಜಮಹಾರಾಜರು, ಸಂತರು, ಶರಣರು, ಕವಿಗಳು ಹಾಗೂ ಸಾಹಿತಿಗಳು 2 ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ, ಕಲೆ, ಸಾಹಿತ್ಯ, ಸಂಸ್ಕೃತಿ ಜೀವಂತವಾಗಿಡಲು ವಿಶಿಷ್ಟ ಕೊಡುಗೆ ನೀಡಿದ್ದಾರೆ ಎಂದರು.
ಹೋಬಳಿ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಪಾಲಕರ ಇಂಗ್ಲಿಷ್ ಭಾಷಾ ವ್ಯಾಮೋಹದಿಂದಾಗಿ ರಾಜ್ಯದಲ್ಲಿ ಕನ್ನಡ ಅಸ್ತಿತ್ವ ಕಳೆದುಕೊಳ್ಳುವ ಹಂತ ತಲುಪಿದೆ. ಕನ್ನಡಿದರು ಭಾಷಾಭಿಮಾನ ಬೆಳೆಸಿಕೊಳ್ಳಬೇಕು ಎಂದರು.
ಕಸಾಪ ತಾಲೂಕಾಧ್ಯಕ್ಷ ಮಾಲತೇಶ ಅರಳಿಮಟ್ಟ ಪ್ರಾಸ್ತಾವಿಕ ಮಾತನಾಡಿದರು. ಪ್ರಾಚಾರ್ಯ ಲಿಂಗಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಉಪಾಧ್ಯಕ್ಷ ಎಸ್.ಟಿ. ಬೆನ್ನೂರ, ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಅಶೋಕ ಬಣಕಾರ, ನಿರ್ದೇಶಕ ಬಸವರಾಜ ಹಾವೇರಿಮಠ, ಮುಖ್ಯ ಶಿಕ್ಷಕರಾದ ಎಸ್.ಎಂ. ಪಾಟೀಲ, ಸಿ.ಜಿ. ಮಲ್ಲೂರ ಅತಿಥಿಗಳಾಗಿದ್ದರು. ಎನ್.ಐ. ಹುಚ್ಚಣ್ಣನವರ ಸ್ವಾಗತಿಸಿದರು, ವಿ.ಕೆ. ಭಗವಂತಗೌಡ್ರ ನಿರೂಪಿಸಿದರು. ಶಿಕ್ಷಕಿ ಎ.ಆರ್. ಕಾಗಿನೆಲ್ಲಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

