ರಸ್ತೆ ಮತ್ತೊಮ್ಮೆ ನಿರ್ಮಿಸಿ
ಕನ್ನಡಪ್ರಭ ವಾರ್ತೆ, ಹಾನಗಲ್ಲ, ನ. 18
ಕಳಪೆ ಕಾಮಗಾರಿಯನ್ನು ಸಹಿಸುವುದಿಲ್ಲ. ಇದಕ್ಕೆ ಕಾಮಗಾರಿ ಮಾಡಿದವರು ಸರಿಯಾದ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ ಹಾನಗಲ್ಲ ಶಾಸಕ ಮನೋಹರ ತಹಶೀಲ್ದಾರ, ತಾಲೂಕಿನ ಹಳ್ಳಿಬೈಲ್ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಆವರಣದಲ್ಲಿ ನಿರ್ಮಾಣಗೊಂಡ ರಸ್ತೆ ಕಾಮಗಾರಿಯನ್ನು ಮತ್ತೆ ನಿರ್ವಹಿಸುವಂತೆ ಸೂಚಿಸಿದ್ದಾರೆ.
ತಾಲೂಕಿನ ಕಿರವಾಡಿ ಮತ್ತು ಹುಲಗಡ್ಡಿ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅಡಿಗಲ್ಲು ಮತ್ತು ಉದ್ಘಾಟನೆಗೆ ಆಗಮಿಸಿದ್ದ ಶಾಸಕರು ಮೊರಾರ್ಜಿ ವಸತಿ ಶಾಲೆ ಆವರಣವನ್ನು ಸುತ್ತಾಡಿ, ಸುದ್ದಿಗಾರರಿಗೆ ಕಳಪೆ ಕಾಮಗಾರಿಯ ಕುರಿತು ವಿವರಣೆ ನೀಡಿದರು. ಇಲ್ಲಿ ನಿರ್ಮಾಣ ಮಾಡಲಾಗಿರುವ ರಸ್ತೆ ಸಂಪೂರ್ಣ ಕಳಪೆಯಾಗಿದೆ. ಇನ್ನು 6 ತಿಂಗಳಲ್ಲಿ ಈ ರಸ್ತೆ ಪೂರ್ಣ ಕಿತ್ತು ನಾಮಾವಶೇಷ ಆಗುತ್ತದೆ. ಈ ಕಾಮಗಾರಿಯ ಗುಣಮಟ್ಟದ ಕುರಿತು ಬೆಂಗಳೂರಿನಲ್ಲಿ ನಡೆಯುವ ಎಸ್ಸಿ ಎಸ್ಟಿ ಕಲ್ಯಾಣ ಸಮಿತಿಯ ಸಭೆಯಲ್ಲಿ ಚರ್ಚೆ ನಡೆಸಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಶಾಸಕರು ಹೇಳಿದರು.
ರು. 1.27 ಕೋಟಿ ಅನುದಾನ
ಕ್ರೈಸ್ (ಕರ್ನಾಟಕ ವಸತಿ ಶಿಕ್ಷಣ ಸಂಘ) ವತಿಯಿಂದ ರು. 1.27 ಕೋಟಿ ಅನುದಾನದಲ್ಲಿ ಈ ಶಾಲೆಯ ರಸ್ತೆ, ಆಟದ ಮೈದಾನ, ಕಾಂಪೌಂಡ್, ಅಡುಗೆ ಕೊಠಡಿ, ರಂಗ ಮಂದಿರ ನಿರ್ಮಾಣ ಮತ್ತು ಕೊಠಡಿಗಳ ದುರಸ್ತಿ ಕಾಮಗಾರಿ ಏಪ್ರಿಲ್-ಮೇ ತಿಂಗಳಿನಿಂದ ನಡೆಯುತ್ತಿದೆ ಎಂದು ಈ ಮುಖ್ಯ ಶಿಕ್ಷಕ ಎಚ್. ಬಸವಂತಪ್ಪ ತಿಳಿಸಿದರು.
ಈ ಯೋಜನೆಯಲ್ಲಿ 1.50 ಕಿ.ಮೀ.ಯಷ್ಟು ನಿರ್ಮಾಣಗೊಂಡ ರಸ್ತೆ ಕಳಪೆಯಾಗಿದೆ ಎಂದು ಶಾಸಕ ಮನೋಹರ ತಹಸೀಲ್ದಾರ್ ಆರೋಪಿಸಿದರು. ಶಾಲೆ ಆವರಣದಲ್ಲಿ ನಿರ್ಮಾಣ ಹಂತದಲ್ಲಿರುವ ರಂಗ ಮಂದಿರ ಅರ್ಧಕ್ಕೆ ನಿಂತಿದೆ. ಅಲ್ಲದೆ 25 ಎಕರೆ ವಿಸ್ತೀರ್ಣದ ಈ ಶಾಲೆಯ ಆವರಣದ ತುಂಬೆಲ್ಲ ಆಳೆತ್ತರಕ್ಕೆ ಮುಳ್ಳು-ಪೊದೆ ಬೆಳೆದು ನಿಂತಿವೆ. ಆಟದ ಮೈದಾನ ಎನ್ನುವ ಜಾಗ ಗಿಡ-ಗಂಟಿಗಳಿಂದ ಕಾಡಿನಂತಾಗಿದೆ. ವಸತಿ ಶಾಲೆಯಾಗಿದ್ದರಿಂದ ಇಲ್ಲಿ 6-10ನೇ ತರಗತಿಯ 244 ವಿದ್ಯಾರ್ಥಿಗಳು ವಿಷ ಜಂತುಗಳ ಭಯದಲ್ಲಿದ್ದಾರೆ. ಶಾಲಾ ಆವರಣ ಸ್ವಚ್ಛಗೊಳಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ವಾತಾವರಣಕ್ಕೆ ವ್ಯವಸ್ಥೆ ಆಗಬೇಕಾಗಿದೆ ಎಂದು ತಿಳಿಸಿದರು.
ಮುಖಂಡರಾದ ಯಲ್ಲಪ್ಪ ಕಲ್ಲೇರ, ಶಿವಾನಂದ ಹಳ್ಳೂರ, ಎ.ಎಂ. ಪಠಾಣ, ಪುಟ್ಟಪ್ಪ ವಾಸನ, ಆರ್.ಎಸ್. ಪಾಟೀಲ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

