ವಿದ್ಯಾರ್ಥಿಗಳಿಗೆ ಗ್ರಂಥಾಲಯ ಆಶ್ರಯ ತಾಣ
ಶಿಗ್ಗಾಂವಿ: ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಗ್ರಂಥಾಲಯ ಒಂದು ಆಶ್ರಯ ತಾಣವಿದ್ದಂತೆ. ಗ್ರಂಥಾಲಯಗಳಿಂದ ಮಕ್ಕಳಿಗೆ ನಮ್ಮ ಇತಿಹಾಸದ ಪುಟಗಳ ಆಗುಹೋಗುಗಳನ್ನು ತಿಳಿದುಕೊಳ್ಳಲು ಅನುಕೂಲವಾಗುತ್ತದೆ ಎಂದು ಜಿಪಂ ಸದಸ್ಯ ಹಾಗೂ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರ ಸದಸ್ಯರಾದ ಬಿ.ಟಿ. ಇನಾಮತಿ ಹೇಳಿದರು.
ಪಟ್ಟಣದ ಸಾರ್ವಜನಿಕ ಗ್ರಂಥಾಲಯ ಇಲಾಖೆ, ಜಿಲ್ಲಾ ಕೇಂದ್ರ ಗ್ರಂಥಾಲಯ ಹಾವೇರಿ, ಶಾಖಾ ಗ್ರಂಥಾಲಯ ಶಿಗ್ಗಾಂವಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾವು ಪಾಶ್ಚಿಮಾತ್ಯ ಮಾಧ್ಯಮಗಳತ್ತ ಒಲವು ತೋರುತ್ತಿರುವುದರಿಂದ ನಮ್ಮ ಇತಿಹಾಸವನ್ನು ಮರೆಯುತ್ತಿದ್ದೇವೆ. ನಮ್ಮ ಮಕ್ಕಳಲ್ಲಿ ಗ್ರಂಥಾಲಯದ ಬಗ್ಗೆ ತಿಳಿಹೇಳಿ ನಮ್ಮ ಮಕ್ಕಳು ಗ್ರಂಥಗಳನ್ನು ಓದಿ ನಮ್ಮ ಸಂಸ್ಕೃತಿ ತಿಳಿದು ವಿದ್ಯಾವಂತರಾಗಲು ಪಾಲಕರ ಜವಾಬ್ದಾರಿ ಮುಖ್ಯವೆಂದು ಇನಾಮತಿ ತಿಳಿಸಿದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎಸ್. ಹಿರೇಮಠ ಮಾತನಾಡಿ, ಪ್ರತಿಯೊಂದು ಗ್ರಾಮದಲ್ಲಿಯೂ ಗ್ರಂಥಾಲಯ ಅವಶ್ಯವಿದ್ದು, ಸರ್ಕಾರವು ಗ್ರಾಮ ಮಟ್ಟದಲ್ಲಿ ಗ್ರಂಥಾಲಯವನ್ನು ತೆರೆಯಬೇಕು. ಪಂಚಾಯಿತಿ ಮಟ್ಟದಲ್ಲಿ ಗ್ರಂಥಾಲಯಗಳಿವೆ. ಅದರಿಂದ ಕೆಲ ಗ್ರಾಮದ ಜನ ಗ್ರಂಥಾಲಯದಿಂದ ವಂಚಿತರಾಗಿದ್ದಾರೆ. ಹಾಗಾಗಿ ಪ್ರತಿ ಗ್ರಾಮಗಳಲ್ಲಿ ಚಿಕ್ಕ ಗ್ರಂಥಾಲಯಗಳ ಅವಶ್ಯಕತೆ ಇದೆ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಸವರಾಜ ಬಸರೀಕಟ್ಟಿ ಮಾತನಾಡಿ, ಮಸ್ತಕಗಳನ್ನು ಶುದ್ಧಗೊಳಿಸುವ ಯಂತ್ರಗಳೇ ಪುಸ್ತಕಗಳು, ಗ್ರಂಥಗಳು ನಮ್ಮ ಬದುಕಿಗೆ ಮುದ ನೀಡಿ ನಮ್ಮೆಲ್ಲರ ಬದುಕನ್ನು ಅರಳಿಸುವ ಕಾರ್ಯವನ್ನು ಮಾಡುತ್ತವೆ ಎಂದರು.
ಜಿಲ್ಲಾ ಕೇಂದ್ರ ಮುಖ್ಯ ಗ್ರಂಥಪಾಲಕ ಬಿ. ಕೆ. ಹೊಸಳ್ಳಿ, ಪುರಸಭೆ ಸದಸ್ಯ ಫಕ್ಕಿರೇಶ ಶಿಗ್ಗಾಂವಿ, ಉಪನ್ಯಾಸಕ ರಾಜು ಕೆಂಭಾವಿ ಮಾತನಾಡಿದರು.
ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಆಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಕಾರ್ಯಕ್ರಮಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವರ್ಷದ ಉತ್ತಮ ಓದುಗಾರನಾಗಿ ಅಂಗವಿಕಲ ಖಾಜಾಮುದ್ದಿನ ಮೈನು ಅವರನ್ನು ಆಯ್ಕೆ ಮಾಡಿ ನೆನಪಿನ ಕಾಣಿಕೆ ನೀಡಲಾಯಿತು.
ಗಾನಯೋಗಿ ಪುಟ್ಟರಾಜ ಗವಾಯಿಗಳ ಸಂಗೀತ ಶಾಲೆಯ ವಿದ್ಯಾರ್ಥಿನಿಯರು ಮಲ್ಲಿಕಾರ್ಜುನ ಆರಾಧ್ಯಮಠ ಹಾಗೂ ರಾಜ್ಯ ಪ್ರಶಸ್ತಿ ವಿಜೇತ ಹನುಮಂತಪ್ಪ ಕಾಮನಹಳ್ಳಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಗ್ರಂಥಾಲಯ ಸಹಾಯಕರಾದ ಪ್ರಭಾಕರ್ ಸೂಡಿ ಇದ್ದರು. ಗ್ರಂಥಾಲಯ ಸಿಬ್ಬಂದಿ, ಗ್ರಂಥಾಲಯದ ಓದುಗಾರರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಎಲ್.ಜಿ. ಹಿರೇಮಠ ಸ್ವಾಗತಿಸಿದರು. ದ್ಯಾಮಣ್ಣ ಎನ್. ಹಂಚಿನಮನಿ ವಂದಿಸಿದರು. ಸಾಕ್ಷರತಾ ಸಂಯೋಜಕ ಎಸ್. ಕೆ. ಹೂಗಾರ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

