ಹಾವೇರಿ

ಮನೆಗೊಂದು ಶೌಚಾಲಯ ಅಗತ್ಯ: ಹಾವೇರಣ್ಣನವರ

Published On :

ಹಾವೇರಿ: ಗ್ರಾಮೀಣ ಪ್ರದೇಶದಲ್ಲಿ ಬಯಲು ಮಲವಿಸರ್ಜನೆ ತಡೆಯುವ ದೃಷ್ಟಿಯಿಂದ ಸರ್ಕಾರ 2005ರಿಂದ ಸಂಪೂರ್ಣ ಸ್ವಚ್ಛತಾ ಅಭಿಯಾನ ಆರಂಭಿಸಿದ್ದು, ಇತ್ತೀಚೆಗೆ ಕಾರ್ಯಕ್ರಮದ ಹೆಸರನ್ನು ನಿರ್ಮಲ ಭಾರತ ಅಭಿಯಾನವೆಂದು ಬದಲಿಸಲಾಗಿದೆಯೆಂದು ಹಾವೇರಿ ಜಿಪಂ ಅಧ್ಯಕ್ಷ ರಾಜೇಂದ್ರ ಹಾವೇರಣ್ಣನವರ ತಿಳಿಸಿದರು. ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ನಿರ್ಮಲ ಭಾರತ್ ಅಭಿಯಾನ, ಜಿಪಂ, ತಾಪಂ ಹಾಗೂ ಅಗಡಿ ಗ್ರಾಪಂ ಆಶ್ರಯದಲ್ಲಿ ಅಗಡಿ ಗ್ರಾಮದಲ್ಲಿ ಜರುಗಿದ ವಿಶ್ವ ಶೌಚಾಲಯ ದಿನಾಚರಣೆ ಮತ್ತು ಸ್ವಚ್ಛತಾ ಉತ್ಸವ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮಸ್ಥರು ಶುಚಿತ್ವದ ಬಗ್ಗೆ ಅರಿವು ಬೆಳೆಸಿಕೊಂಡು ತಮ್ಮ ಸುತ್ತಣ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳುವುದರೊಂದಿಗೆ ಮನೆಗೊಂದು ಶೌಚಾಲಯ ಕಟ್ಟಬೇಕು. ಎಲ್ಲಿ ಸ್ವಚ್ಛತೆ ಇರುತ್ತದೆಯೋ ಅಲ್ಲಿ ಶುದ್ಧವಾದ ವಾತಾವರಣ ನಿರ್ಮಾಣವಾಗುತ್ತದೆ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಬದುಕುವುದಕ್ಕೆ ಸಹ್ಯ ಪರಿಸರ ನಿರ್ಮಿಸಿ ಶೌಚಾಲಯ ಕಟ್ಟಲು ಕುಟುಂಬದ ಯಜಮಾನರು ಮುಂದಾಗಬೇಕು. ಸರ್ಕಾರ ಗ್ರಾಪಂಗಳಿಗೆ ನೀಡುವ ಅನುದಾನವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಜಿಪಂ ಸಿಇಒ ಕೆ.ಬಿ. ಆಂಜನಪ್ಪ ಮಾತನಾಡಿ, 10 ದಿನಗಳ  ವರೆಗೆ  ಸ್ವಚ್ಛತಾ ಉತ್ಸವವೆಂದು ಅರಿವಿನ ಅಭಿಯಾನ ಜರುಗಲಿದ್ದು, ಈ ಅವಧಿಯಲ್ಲಿ ಗ್ರಾಮಗಳಲ್ಲಿ ಜನಜಾಗೃತಿ ಜಾಥಾ, ಬೀದಿ ನಾಟಕ, ಶಾಲಾ ಮಕ್ಕಳ ರ್ಯಾಲಿ ಏರ್ಪಡಿಸಲಾಗುವುದು ಎಂದರು. ಅಗಡಿ ಗ್ರಾಪಂ ಅಧ್ಯಕ್ಷ ಪುಟ್ಟಯ್ಯ ಮಾಗೋಡ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಗಡಿ ಗ್ರಾಪಂ ಉಪಾಧ್ಯಕ್ಷೆ ಜೈತುನಬಿ ಘಾಡಗಿ, ತಾಪಂ, ಗ್ರಾಪಂ ಸದಸ್ಯರು ಇದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.