ಹಾವೇರಿ

ಮೆಗಾ ಲೋಕ ಅದಾಲತ್: 141 ಪ್ರಕರಣ ಇತ್ಯರ್ಥ

Published On :

ಕನ್ನಡಪ್ರಭ ವಾರ್ತೆ, ಹಾನಗಲ್ಲ, ನ. 24
ಹಾನಗಲ್ಲ ನ್ಯಾಯಾಲಯದ ವ್ಯಾಪ್ತಿಯಲ್ಲಿ ಮೆಗಾ ಲೋಕ ಅದಾಲತ್ ಮೂಲಕ ಮೂರು ತಿಂಗಳ ಅವಧಿಯಲ್ಲಿ 141 ಪ್ರಕರಣ ಇತ್ಯರ್ಥ ಮಾಡಲಾಗಿದೆ. ಇವುಗಳಲ್ಲಿ ಬ್ಯಾಂಕ್ ಪ್ರಕರಣಗಳದ್ದೇ ಸಿಂಹಪಾಲು ಎಂದು ಹಿರಿಯ ವಿಭಾಗದ ಸಿವಿಲ್ ನ್ಯಾಯಾಧೀಶ ಎಂ. ರಾಮಚಂದ್ರ ಹಾಗೂ ಕಿರಿಯ ವಿಭಾಗದ ನ್ಯಾಯಾಧೀಶ ಮಧ್ವೇಶ ಡಬೇರ ತಿಳಿಸಿದರು.
ಭಾನುವಾರ ಪಟ್ಟಣದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು ಸೆ. 1ರಿಂದ ನ. 23ರ ವರೆಗೆ ಸುಪ್ರೀಂ ಕೋರ್ಟ್ ಆದೇಶದಂತೆ ಹಾನಗಲ್ಲ ನ್ಯಾಯಾಲಯದಲ್ಲಿ ಮೆಗಾ ಲೋಕ ಅದಾಲತ್ ನಡೆಸಲಾಯಿತು. ಬ್ಯಾಂಕ್‌ಗೆ ಸಂಬಂಧಿಸಿದ 102 ಪ್ರಕರಣಗಳನ್ನು ಸಂಧಾನದ ಮೂಲಕ ಇತ್ಯರ್ಥ ಮಾಡಲಾಯಿತು. ಎಸ್‌ಬಿಎಂ ಕೊಪ್ಪರಸಿಕೊಪ್ಪ ಶಾಖೆಯ 60 ಪ್ರಕರಣಗಳು ಇತ್ಯರ್ಥವಾಗಿದ್ದು ಗಮನಾರ್ಹ. ಹಾನಗಲ್ಲ ಎಸ್‌ಬಿಐಯ 36, ತಿಳವಳ್ಳಿಯ ವಿಜಯಾ ಬ್ಯಾಂಕಿನ 6 ಪ್ರಕರಣಗಳು ಇತ್ಯರ್ಥಗೊಂಡವು. ಆಸ್ತಿ ವಿವಾದ, ದಾಯಾದಿ ಹಿಸ್ಸಾ ವ್ಯಾಜ್ಯ, ವಿವಾಹ ವಿಚ್ಛೇದನ ಹಾಗೂ ಚೆಕ್ ಬೌನ್ಸ್‌ಗೆ ಸಂಬಂಧಿಸಿದ 39 ಇತ್ಯರ್ಥಗೊಂಡವು. ಸೆಪ್ಟೆಂಬರ್‌ನಲ್ಲಿ 5, ಅಕ್ಟೋಬರ್‌ನಲ್ಲಿ 19 ಹಾಗೂ ನವೆಂಬರ್‌ನ 23 ದಿನಗಳಲ್ಲಿ 119 ಪ್ರಕರಣಗಳನ್ನು ತೀರ್ಮಾನಿಸಲಾಯಿತು ಎಂದರು.
ಲೋಕ ಅದಾಲತ್‌ನಿಂದ ಹಲವು ವರ್ಷಗಳಿಂದ ಬಾಕಿಯಿದ್ದ ಪ್ರಕರಣಗಳು ಇತ್ಯರ್ಥವಾಗಿ ಪಕ್ಷಗಾರರು ಹಣ, ಸಮಯ ಉಳಿಸಿದ್ದಾರೆ. ಬ್ಯಾಂಕಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಸಾಲಗಾರರು ತಮ್ಮ ಅಸಲಿಗಿಂತ ಕಡಿಮೆ ಹಣಕ್ಕೆ ಪ್ರಕರಣ ಮುಗಿಸಿಕೊಂಡ ನಿದರ್ಶನಗಳಿವೆ. ತಿಂಗಳ ಅವಧಿಯಲ್ಲಿ ಇತ್ಯರ್ಥಗೊಂಡ ಮೊತ್ತವನ್ನು ಸಾಲಗಾರರು ಬ್ಯಾಂಕ್‌ಗೆ ಭರಿಸಬೇಕು. ತಪ್ಪಿದಲ್ಲಿ ಎರಡು ತಿಂಗಳೊಳಗೆ ಬಡ್ಡಿ ಸಮೇತ ಪಾವತಿಸಬೇಕಾಗುತ್ತದೆ ಎಂದು ತಿಳಿಸಿದರು.
ನ್ಯಾಯಾಲಯದಲ್ಲಿ ಪ್ರತಿ ತಿಂಗಳ ಮೂರನೇ ಶನಿವಾರ ಲೋಕ ಅದಾಲತ್ ನಡೆಯುತ್ತಲೇ ಇರುತ್ತದೆ. ಪ್ರಕರಣ ಇತ್ಯರ್ಥಪಡಿಸಿಕೊಳ್ಳಲು ಪಕ್ಷಗಾರರು ಲೋಕ ಅದಾಲತ್‌ನ ಲಾಭ ಪಡೆಯುವಂತೆ ನ್ಯಾಯಾಧೀಶರು ತಿಳಿಸಿದರು.
ಹಾನಗಲ್ಲ ನ್ಯಾಯವಾದಿಗಳ ಸಂಘದ ಅಧ್ಯಕ್ಷ ರವಿ ಒಡೆಯರ, ಕಾರ್ಯದರ್ಶಿ ರಂಗನಾಥ ಅಕ್ಕಿವಳ್ಳಿ, ನ್ಯಾಯಾವಾದಿಗಳಾದ ಎಂ.ಎಂ. ವಿರೂಪಣ್ಣನವರ, ಎಸ್.ಆರ್. ಕದಂ, ಸಂತೋಷ ಸುಣಗಾರ ಇದ್ದರು.
ಮೆಗಾ ಲೋಕ್ ಅದಾಲತ್‌ನಲ್ಲಿ ಪ್ರಕರಣ ಇತ್ಯರ್ಥ ಮಾಡಿಕೊಂಡ ತಿಳವಳ್ಳಿಯ ರೈತ ಎಸ್.ಎಚ್. ಕಲ್ಲೇರ ತಮ್ಮ ಸಂತಸ ಹಂಚಿಕೊಂಡರು. ನ್ಯಾಯವಾದಿಗಳ ಮಧ್ಯಸ್ಥಿಕೆ ಇಲ್ಲದೆ, ವ್ಯಾಜ್ಯಕ್ಕೆ ಅವಕಾಶವಿಲ್ಲದೆ ಪ್ರಕರಣ ಇತ್ಯರ್ಥಪಡಿಸಿಕೊಂಡರೆ ಸಮಯ, ಹಣ ಪೋಲಾಗುವುದು ತಪ್ಪುತ್ತದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.