ವಾಂತಿ-ಭೇದಿ: ಪರೀಕ್ಷೆಗೆ ಗೈರಾದ ವಿದ್ಯಾರ್ಥಿಗಳು
ಹಾನಗಲ್ಲ: ತಾಲೂಕಿನ ಅಕ್ಕಿಆಲೂರಿನ ಬಿಸಿಎಂ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಆಹಾರ ಮತ್ತು ನೀರಿನ ವ್ಯತ್ಯಾಸವಾಗಿ ತೀವ್ರವಾದ ವಾಂತಿ-ಭೇದಿಯಿಂದ ಬಳಲುತ್ತಿರುವ ವಿದ್ಯಾರ್ಥಿಗಳುಳು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಾರಿಯ ಪರೀಕ್ಷೆ ಬರೆಯುವ ಅವಕಾಶವನ್ನೂ ಕಳೆದುಕೊಂಡಿದ್ದಾರೆ.
ಭಾನುವಾರ ರಾತ್ರಿಯಿಂದ ಆರಂಭವಾದ ವಾಂತಿ-ಭೇದಿ ಪ್ರಕರಣಗಳ ಸರಣಿ ಮಂಗಳವಾರವೂ ಮುಂದುವರಿದಿವೆ. ಘಟನೆಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಆಹಾರ ಮತ್ತು ನೀರು ಕಲುಷಿತಗೊಂಡ ಬಗ್ಗೆ ಶಂಕಿಸಲಾಗಿದೆ. ಅಸ್ವಸ್ಥರಾದವರ ಪೈಕಿ 25-30 ವಿದ್ಯಾರ್ಥಿನಿಯರು ಇಲ್ಲಿನ ಸಿ.ಜಿ. ಬೆಲ್ಲದ ಸರ್ಕಾರಿಪ್ರಥಮ ದರ್ಜೆ ಕಾಲೇಜಿನವರು. ಸದ್ಯ ಕಾಲೇಜಿನಲ್ಲಿ ಸೆಮಿಸ್ಟರ್ ಪರೀಕ್ಷೆಗಳು ನಡೆಯುತ್ತಿದ್ದು, ನ. 25ರಂದು ಇತಿಹಾಸ ಮತ್ತು ನ. 26ರಂದು ಸಮಾಜಶಾಸ್ತ್ರ ವಿಷಯಗಳ ಪರೀಕ್ಷೆಗಳಿಗೆ ಹಾಜರಾಗಲು ಅಸ್ವಸ್ಥ ವಿದ್ಯಾರ್ಥಿಗಳಿಂದ ಸಾಧ್ಯವಾಗಿಲ್ಲ. ಇದರಿಂದ ತಮ್ಮ ಭವಿಷ್ಯದ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಮಾನಸಿಕವಾಗಿಯೂ ಕುಗ್ಗಿದ್ದಾರೆ.
ಇಲಾಖೆಗೆ ಮನವಿ
ಆಸ್ಪತ್ರೆಯಲ್ಲಿರುವ ವಿದ್ಯಾರ್ಥಿಗಳ ಯೋಗಕ್ಷೇವುದ ಜವಾಬ್ದಾರಿ ಹೊತ್ತಿರುವ ಬಿಸಿಎಂ ಇಲಾಖೆಯ ತಾಲೂಕು ವಿಸ್ತರಣಾಧಿಕಾರಿ ಎನ್.ಎಂ. ಪೂಜಾರ ಸುದ್ದಿಗಾರರೊಂದಿಗೆ ಮಾತನಾಡಿ, ಅಸ್ವಸ್ಥ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಅವಕಾಶವನ್ನು ತಪ್ಪಿಸಿಕೊಂಡಿದ್ದು ಬೇಸರ ತಂದಿದೆ. ಈ ಕುರಿತು ಕಾಲೇಜಿನ ಪ್ರಾಚಾರ್ಯರ ಜತೆ ಚರ್ಚಿಸಲಾಗುವುದು. ಇಲಾಖೆ ಸಚಿವರು ಮತ್ತು ಅಧಿಕಾರಿಗಳ ಜತೆ ಚರ್ಚಿಸಿ ಅಸ್ವಸ್ಥಗೊಂಡ ವಿದ್ಯಾರ್ಥಿಗಳಿಗೆ ವಿಶೇಷವಾದ ಪರೀಕ್ಷೆಯನ್ನು ಆಯೋಜಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತದೆ ಎಂದರು.
ತಹಸೀಲ್ದಾರ್ ಭೇಟಿ: ತಹಸೀಲ್ದಾರ್ ಡಾ ನಾಗೇಂದ್ರ ಹೊನ್ನಳ್ಳಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ, ಅಡುಗೆ ಸಾಮಗ್ರಿಗಳನ್ನು ಪರಿಶೀಲಿಸಿದರು. ಆಸ್ಪತ್ರೆಗೆ ಭೇಟಿ ಕೊಟ್ಟು ವಿದ್ಯಾರ್ಥಿನಿಯರ ಯೋಗಕ್ಷೇವು ವಿಚಾರಿಸಿ ಹಾಸ್ಟೆಲ್ ಅವ್ಯವಸ್ಥೆ ಬಗ್ಗ್ಗೆ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸುವುದಾಗಿ ಹೇಳಿದರು. ತಾಪಂ ಅಧ್ಯಕ್ಷ ಮಲ್ಲನಗೌಡ್ರು ವೀರನಗೌಡ್ರು ಇದ್ದರು.
ವ್ಯವಸ್ಥೆ ಇಲ್ಲಿಲ್ಲ: ವಸತಿ ನಿಲಯದ ವಿದ್ಯಾರ್ಥಿನಿಯರು ಹಲವಾರು ದಿನಗಳಿಂದ ಸಮಸ್ಯೆ ಎದುರಿಸುತ್ತಿದ್ದು, ಹಲವಾರು ಬಾರಿ ವಸತಿ ನಿಲಯದ ಮೇಲ್ವಿಚಾರಕರಿಗೆ ಮನದಟ್ಟು ಮಾಡಿದರೂ ಕ್ರಮ ತೆಗೆದುಕೊಳ್ಳದೆ ನಿರ್ಲಕ್ಷ್ಯಿಸಿದ್ದಾರೆ. ಇಲ್ಲಿನ ನೀರು ಶೇಖರಣಾ ಘಟಕ ಸಂಪೂರ್ಣವಾಗಿ ಹದಗೆಟ್ಟಿದ್ದು, ರೋಗಗಳನ್ನು ಹರಡುವ ಸ್ಥಿತಿಯಲ್ಲಿದೆ. ಅಡುಗೆ ಮನೆಯಲ್ಲಿ ಬಹಳ ದಿನಗಳಿಂದ ಶೇಖರಿಸಿಟ್ಟ ಆಹಾರ ಸಾಮಗ್ರಿಗಳಲ್ಲಿ ನುಸಿ ಹೊಕ್ಕಿವೆ. ಸ್ನಾನದ ನೀರನ್ನೇ ಅಡುಗೆಗೂ ಬಳಸುತ್ತಿದ್ದು, ಶೌಚಾಲಯಗಳನ್ನೂ ಸ್ವಚ್ಛಗೊಳಿಸುತ್ತಿಲ್ಲ. ಇದೇ ವಾಂತಿ-ಭೇದಿ ಹರಡಲು ಕಾರಣ ಎಂದು ವಿದ್ಯಾರ್ಥಿನಿಯರು ಅಸಮಾಧಾನ ವ್ಯಕ್ತಪಡಿಸಿದರು. ಈ ಘಟನೆಯಿಂದ ಭೀತರಾದ ಪಾಲಕರು ತಮ್ಮ ಮಕ್ಕಳನ್ನು ಮನೆಗೆ ಕರೆದೊಯ್ದಿದ್ದಾರೆ.
ಮಧ್ಯಾಹ್ನದ ಹೊತ್ತಿಗೆ ಆಸ್ಪತ್ರೆಯಲ್ಲಿದ್ದ ವಿದ್ಯಾರ್ಥಿನಿಯರು ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತ ಕಣ್ಣೀರಿಡುತ್ತಿದ್ದರು. ಪಾಲಕರು ಹಾಸ್ಟೆಲ್ ಮೇಲ್ವಿಚಾರಕಿ ವಿರುದ್ಧ ಹರಿಹಾಯ್ದರು. ಸೂಕ್ತ ಕ್ರಮ ಕೈಗೊಳ್ಳುವಂತೆ ಮೇಲಧಿಕಾರಿಗಳನ್ನು ಆಗ್ರಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

