ಯುವಜನೋತ್ಸವಕ್ಕೆ 27ರಂದು ಆಯ್ಕೆ
ಹಾವೇರಿ: ರಾಜ್ಯ ಮಟ್ಟದ ಯುವಜನೋತ್ಸವಕ್ಕೆ ಹಾವೇರಿ ಜಿಲ್ಲೆಯ ತಂಡ ಕಳುಹಿಸಬೇಕಾಗಿದೆ. ಒಂಭತ್ತು ವಿಭಾಗಗಳಲ್ಲಿ ಸ್ಪರ್ಧಿಗಳ ಆಯ್ಕೆಗೆ ಅ. 27ರಂದು ಬೆಳಗ್ಗೆ 10.30ಕ್ಕೆ ರಾಣಿಬೆನ್ನೂರಿನ ಬಿಎಜೆಎಸ್ಎಸ್ ಮಹಿಳಾ ಕಾಲೇಜಿನಲ್ಲಿ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಹಾವೇರಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವೆ. ಮುತ್ತುಕಾಮಾಚ್ಚಿ ತಿಳಿಸಿದ್ದಾರೆ. 15ರಿಂದ 35 ವಯೋವಾನದ ಯುವಜನತೆ ಪಾಲ್ಗೊಳ್ಳಬಹುದು. ಅ. 26ರ ಒಳಗಾಗಿ ಹಾವೇರಿ ಜಿಲ್ಲಾ ಕ್ರೀಡಾಂಗಣದಲ್ಲಿರುವ ತಮ್ಮ ಕಚೇರಿಯಲ್ಲಿ ಹೆಸರು ನೋಂದಾಯಿಸಬೇಕು. ಜಾನಪದ ನೃತ್ಯ, ಜಾನಪದ ಗೀತೆ, ಏಕಾಂತ ನಾಟಕ (ಇಂಗ್ಲಿಷ್ ಅಥವಾ ಹಿಂದಿ), ಶಾಸ್ತ್ರೀಯ ಗಾಯನ ಸೋಲೋ, ಶಾಸ್ತ್ರೀಯ ವಾದ್ಯಸಂಗೀತ ಸೋಲೋ (ಸಿತಾರ ಕೊಳಲು, ತಬಲಾ, ವೀಣೆ, ಮೃದಂಗ), ಹಾರ್ಮೋನಿಯಂ, ಗಿಟಾರ್, ಶಾಸ್ತ್ರೀಯ ನೃತ್ಯ (ಮಣಿಪುರಿ, ಓಡಿಸ್ಸಿ, ಕಥಕ್, ಕುಚಿಪುಡಿ, ಭರತನಾಟ್ಯ), ಆಶು ಭಾಷಣ (ಇಂಗ್ಲಿಷ್ ಅಥವಾ ಹಿಂದಿ) ಸ್ಪರ್ಧೆಗಳಿವೆ. ವೇಷಭೂಷಣ ಹಾಗೂ ಸಂಗೀತ ಉಪಕರಣಗಳನ್ನು ಸ್ಪರ್ಧಾಳುಗಳೇ ತರಬೇಕು. ರಾಜ್ಯ ಮಟ್ಟದ ಯುವಜನೋತ್ಸವಕ್ಕೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರಯಾಣ ಭತ್ಯೆ ನೀಡಲಾಗುವುದು. ಮಾಹಿತಿಗೆ, ದೂ. 08375-232070, 232443 ಸಂಪರ್ಕಿಸಿ.
ಆರ್ಥಿಕ ಗಣತಿ ಅಧಿಕಾರಿಗಳಿಗೆ ತರಬೇತಿ
ಹಾವೇರಿ: ಆರನೇ ಆರ್ಥಿಕ ಗಣತಿಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ ಹಾಗೂ ಗ್ರಾಮೀಣ, ನಗರ ಹಾಗೂ ಪಟ್ಟಣ ಪ್ರದೇಶದ ಚಾರ್ಜ್ ಅಧಿಕಾರಿಗಳಿಗೆ ಆರನೇ ಆರ್ಥಿಕ ಗಣತಿ ಕೈಕೊಳ್ಳುವ ಕುರಿತು ತರಬೇತಿ ಕಾರ್ಯಕ್ರಮ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಜರುಗಿತು. ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ಅಧ್ಯಕ್ಷತೆ ವಹಿಸಿದ್ದರು. ಗಣತಿ ಕಾರ್ಯಕ್ಕಾಗಿ ಜಿಲ್ಲೆಯಲ್ಲಿ 2828 ಬ್ಲಾಕ್ ಮಾಡಿದ್ದು, 942 ಗಣತಿದಾರರ ಹಾಗೂ 471 ಮೇಲ್ವಿಚಾರಕರ ಅಗತ್ಯವಿದೆ. ಸರ್ಕಾರದ ಆದೇಶದನ್ವಯ ಅಂಗನವಾಡಿ ಕಾರ್ಯಕರ್ತರು, ರೈತ ಅನುವುಗಾರರು, ಗ್ರಾಪಂ ಕಾರ್ಯದರ್ಶಿಗಳು, ಬಿಲ್ ಕಲೆಕ್ಟರಗಳನ್ನು ಗಣತಿಗಾರರನ್ನಾಗಿ ತಗೆದುಕೊಳ್ಳಲಾಗಿದೆ. ಗಣತಿಗೆ ಮೇಲ್ವಿಚಾರಕರರ್ನಾಗಿ ಪ್ರೌಢಶಾಲಾ ಶಿಕ್ಷಕರು ಹಾಗೂ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರನ್ನು ನಿಯೋಜಿಸಲಾಗಿದೆ. ಜಿಲ್ಲೆಯಲ್ಲಿ ಅ. 29 ಹಾಗೂ 30ರಂದು ಗಣತಿದಾರರಿಗೆ ಹಾಗೂ ಮೇಲ್ವಿಚಾರಕರಿಗೆ ತರಬೇತಿ ಏರ್ಪಡಿಸಲು ತೀರ್ಮಾನಿಸಲಾಯಿತು. ನ. 30ರೊಳಗೆ ಗಣತಿ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ತಿಳಿಸಿದರು. ಗಣತಿದಾರರು ಕುಟುಂಬ ಹಾಗೂ ಉದ್ಯಮ ಘಟಕಗಳಿಗೆ ಭೇಟಿ ನೀಡಿದಾಗ ಮುಖ್ಯಸ್ಥರು ಆವಶ್ಯಕ ಮಾಹಿತಿ ನೀಡಿ, ಗಣತಿ ಕಾರ್ಯಕ್ಕೆ ಸಹಕರಿಸುವಂತೆ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎಸ್.ಎಚ್. ಪಾಟೀಲ ಮನವಿ ಮಾಡಿದರು. ಜಿಪಂ ಸಿಇಒ ಉಮೇಶ ಕುಸುಗಲ್ಲ, ಅಪರ ಜಿಲ್ಲಾಧಿಕಾರಿ ಶಶಿಧರ ಕುರೇರ, ಮುಖ್ಯ ಯೋಜನಾಧಿಕಾರಿ ಬಸನಗೌಡ, ಜಿಲ್ಲಾ ಸಂಖ್ಯಾ ಕಚೇರಿಯ ಸಹಾಯಕ ನಿರ್ದೇಶಕ ಎಚ್.ವೈ. ಮಿಸೆ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

