ಯೋಜನೆ ಜಾರಿಗೆ ಇಚ್ಛಾಶಕ್ತಿ ಬೇಕು
ಹಾನಗಲ್ಲ: ಸರ್ಕಾರಿ ಕಾರ್ಯಕ್ರಮ ಸರಿಯಾಗಿ ಅನುಷ್ಠಾಗೊಳ್ಳಬೇಕು. ಸರ್ಕಾರ ಯೋಜಿಸಿರುವ ಯೋಜನೆಗಳು ಚೆನ್ನಾಗಿವೆ. ಆದರೆ, ಯೋಜನೆ ಕಾರ್ಯರೂಪಕ್ಕೆ ತರಲು ಅಧಿಕಾರಿಗಳು, ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರಬೇಕು ಎಂದು ಹಾನಗಲ್ಲಿನಲ್ಲಿಯೂ ತಾಲೂಕು ಪಂಚಾಯಿತಿ ಅಧ್ಯಕ್ಷ ಮಲ್ಲನಗೌಡ ವೀರನಗೌಡ್ರ ಹೇಳಿದರು.
ಮೈಸೂರಿನಲ್ಲಿ ಗ್ರಾಮೀಣಾಭಿವೃದ್ಧಿಯ 7 ಯೋಜನೆಗಳ ಕಾರ್ಯಕ್ರಮಗಳಿಗೆ ಚಾಲನೆ ಕುರಿತಂತೆ ಹಾನಗಲ್ ತಾಪಂನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷ ಮಲ್ಲನಗೌಡ ವೀರನಗೌಡ್ರ ಯೋಜನೆ ಕೈಪಿಡಿ ಬಿಡುಗಡೆಗೊಳಿಸಿದರು.
ತಾಂತ್ರಿಕ ಕಾರಣಗಳಿಂದಾಗಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಆಯೋಜಿಸಿದ್ದ ಗ್ರಾಮೀಣಾಭಿವೃದ್ಧಿಯ 7 ಕಾರ್ಯಕ್ರಮಗಳ ಚಾಲನೆ ಹಾಗೂ 15 ಕಾರ್ಯಕ್ರಮಗಳ ಕೈಪಿಡಿ ಬಿಡುಗಡೆಯ ಸೆಟಲೈಟ್ ಕಾರ್ಯಕ್ರಮ ವಿಳಂಬವಾದರೂ ಬಹುಸಂಖ್ಯಾತ ಜನಪ್ರತಿನಿಧಿಗಳ ಪಾಲ್ಗೊಳ್ಳುವಿಕೆ ಮೂಲಕ ಯಶಸ್ವಿಯಾಗಿ ಜರುಗಿತು.
ಶನಿವಾರ ಹಾನಗಲ್ ತಾಪಂ ಸಭಾಭವನದಲ್ಲಿ ಏರ್ಪಡಿಸಿದ್ದ ಸೆಟಲೈಟ್ ಕಾರ್ಯಕ್ರಮ ವೀಕ್ಷಣೆಗೆ ತಾಲೂಕಿನ 40 ಗ್ರಾಪಂ ಸದಸ್ಯರು, ಅಧ್ಯಕ್ಷರು, ಜಿಪಂ ಸದಸ್ಯರು, ತಾಪಂ ಸದಸ್ಯರು ಕಾತರರಾಗಿ ಕಾದು ಕುಳಿತಿದ್ದರು. ಆದರೆ, ತಾಂತ್ರಿಕ ತೊಂದರೆಯಿಂದಾಗಿ ಒಂದು ಗಂಟೆ ವಿಳಂಬವಾಗಿ ಪರದೆ ಮೇಲೆ ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ ಮಾತನಾಡುವಾಗ ಕಾಣಿಸಿಕೊಂಡಿತು. ಈವರೆಗೆ ಗಲಿಬಿಲಿಯಲ್ಲಿದ್ದ ಅಧಿಕಾರಿಗಳು ನಿಟ್ಟುಸಿರು ಬಿಟ್ಟರು.
ಕಾರ್ಯಕ್ರಮ ಕುರಿತು ಜಿಪಂ ಸದಸ್ಯ ಪದ್ಮನಾಭ ಕುಂದಾಪುರ ಪ್ರತಿಕ್ರಿಯಿಸಿ, ಎನ್ಆರ್ಇಜಿ ಕಾರ್ಯಕ್ರಮಗಳ ಸಮಗ್ರ ಅನುಷ್ಠಾನಕ್ಕೆ ತರಬೇತಿ ರೂಪದ ಕಾರ್ಯಕ್ರಮ ಸಹಕಾರಿಯಾಗಬಲ್ಲದು. ಜನಪ್ರತಿನಿಧಿಗಳು ಅಧಿಕಾರಿಗಳ ನಡುವೆ ಇರುವ ಹಲವು ಗೊಂದಲಗಳನ್ನು ಇದು ನಿವಾರಿಸಿದೆ. ನರೇಗಾ ಯೋಜನೆ ಅನುಷ್ಠಾನದ ಕುರಿತು ಸದಸ್ಯರಿಗೆ ಹಲವು ಸಮಸ್ಯೆಗಳಿಗೆ ಪರಿಹಾರವೂ ಸಿಕ್ಕಂತಾಗಿದೆ. ಆದರೆ, ಈ ಕಾರ್ಯಕ್ರಮ ಅನುಷ್ಠಾನಕ್ಕೆ ಕೆಲಸಗಾರರ ಕೂಲಿ ಸಾಲದು. ರು. 250ದಿಂದ ರು. 300 ವರೆಗೆ ಹೆಚ್ಚಿಸಬೇಕು ಎಂದು ಹೇಳಿದರು.
ಇನ್ನ್ನೊಬ್ಬ ಜಿಪಂ ಸದಸ್ಯ ಮಹದೇವಪ್ಪ ಭಾಗಸರ ಪ್ರತಿಕ್ರಿಯಿಸಿದರು.
ತಾಪಂ ಸದಸ್ಯ ಕಲವೀರಪ್ಪ ಪವಾಡಿ ಮಾತನಾಡಿ, ಗ್ರಾಮಗಳ ಅಭಿವೃದ್ಧಿಗೆ ಸರ್ಕಾರ ರೂಪಿಸಿದ ಕಾರ್ಯಕ್ರಮಗಳು ಜನಸಾಮಾನ್ಯರಿಗೂ ತಿಳಿಯುವಂತಾಗಿದೆ. ಜನಪ್ರತಿನಿಧಿಗಳಿಗೆ ಈ ಮೂಲಕ ತಿಳಿವಳಿಕೆ ಬಂದಿದೆ. ಆದರೆ, ಇಲ್ಲಿ ಸಂವಾದ ಏರ್ಪಡಿಸಿದ್ದರೆ ಜನಪ್ರತಿನಿಧಿಗಳಿಗೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತಿತ್ತು. ಈ ಮೂಲಕ ಜನಜಾಗೃತಿಯೂ ಸಾಧ್ಯವಾಗುತ್ತಿತ್ತು ಎಂದರು.
ಅಕ್ಕಿಆಲೂರು ಗ್ರಾಪಂ ಅಧ್ಯಕ್ಷೆ ನಂದಿನಿ ವಿರೂಪಣ್ಣನವರ ಪ್ರತಿಕ್ರಿಯಿಸಿ, ಎನ್ಆರ್ ಇಜಿ ಕಾರ್ಯಕ್ರಮಗಳಲ್ಲಿ ಸಾಕಷ್ಟು ಬದಲಾವಣೆಗಳಾಗಬೇಕು. ಈ ಬಗ್ಗೆ ತಿಂಗಳ ಹಿಂದೆ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲರೊಂದಿಗೆ 'ಫೋನ್ಇನ್' ಕಾರ್ಯಕ್ರಮದಲ್ಲಿ ಮಾತನಾಡಿ, ಇಲ್ಲಿನ ಸಮಸ್ಯೆಗಳ ಕುರಿತು ಚರ್ಚಿಸಿದ್ದೇನೆ. ಎಲ್ಲವನ್ನೂ ಕಂಪ್ಯೂಟರ್ ಮೂಲಕ ಮಾಡಲು ಹೊರಟಿರುವುದೇನೋ ಸರಿ. ಆದರೆ, ಅದಕ್ಕೆ ಬೇಕಾದ ತಂತ್ರಜ್ಞಾನ ಮಾಹಿತಿ ನೀಡುವ ಅಗತ್ಯವಿದೆ ಎಂದ ಅವರು, ಕೇರಳ ಮಾದರಿಯಲ್ಲಿ ಪಂಚಾಯಿತಿ ಕಾರ್ಯ ವೈಖರಿ ಬೇಕೆಂದರು.
ತಾಪಂ ಮಾಜಿ ಉಪಾಧ್ಯಕ್ಷ ನಿಂಗಪ್ಪ ಗೊಬ್ಬೇರ, ಜಿಪಂ ಸದಸ್ಯರಾದ ಕಸ್ತೂರವ್ವ ಒಡ್ಡರ, ಮಹದೇವಪ್ಪ ಭಾಗಸರ, ಪದ್ಮನಾಭ ಕುಂದಾಪುರ, ಅಭಿದಾಭಿ ನದಾಫ, ತಾಪಂ ಸದಸ್ಯರಾದ ಕಲವೀರಪ್ಪ ಪವಾಡಿ, ಸುಮಂಗಲವ್ವ ದೊಡ್ಡಮನಿ, ರಾಜೇಂದ್ರ ಬಾರ್ಕಿ, ಸುಭಾಸ ಓಲೇಕಾರ, ಹನುಮಂತಪ್ಪ ಗೊಂದಿ, ಸುರೇಶ ನೆರ್ಕಿಮನಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

