ಅಭಿವೃದ್ಧಿಗೆ ಸ್ವ-ಸಹಾಯ ಸಂಘ ಪೂರಕ
ಕನ್ನಡಪ್ರಭ ವಾರ್ತೆ, ಹಾವೇರಿ, ಅ. 26
ಮಹಿಳೆಯರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಅಭಿವೃದ್ದಿ ಹೊಂದಲು ಸ್ವ-ಸಹಾಯ ಸಂಘಗಳು ಪ್ರಮುಖ ಪಾತ್ರ ವಹಿಸುತ್ತವೆ. ಮಹಿಳೆಯರ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದು ನೆಹರು ಯುವ ಕೇಂದ್ರದ ಮಹಾನಿರ್ದೇಶಕ ಸಲೀಂ ಅಹಮದ್ ಹೇಳಿದರು.
ಹಾವೇರಿ ಚೈತನ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ(ರಿ) ಹಾಗೂ ಜಿಲ್ಲೆಯ ವಿವಿಧ ಮಹಿಳಾ ಮಂಡಳಿಗಳು, ಸ್ತ್ರೀ-ಶಕ್ತಿ ಸಂಘಗಳು, ಯುವತಿ ಮಂಡಳಗಳ ಆಶ್ರಯದಲ್ಲಿ ಏರ್ಪಡಿಸಿದ್ದ ಮಹಿಳಾ ಸಬಲೀಕರಣ ಹಾಗೂ ಪುನಶ್ಚೇತನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಸ್ವ-ಸಹಾಯ ಸಂಘಗಳಲ್ಲಿ ಸಂಘಟನೆಯಾಗಿ ಆದಾಯೋತ್ಪನ್ನ ಚಟುವಟಿಕೆಗಳನ್ನ್ನು ಕೈಗೊಳ್ಳುವುದರ ಮೂಲಕ ಆರ್ಥಿಕ ಸಬಲರಾಗಬೇಕು ಮತ್ತು ಸಮಾಜದಲ್ಲಿನ ಅನಿಷ್ಟ ಪದ್ಧತಿಗಳಾದ ಬಾಲ್ಯ ವಿವಾಹ, ವರದಕ್ಷಿಣೆ, ದೌರ್ಜನ್ಯಗಳ ಬಗ್ಗೆ ಜಾಗೃತರಾಗಬೇಕು. ಮಹಿಳೆ ಜಾಗೃತಳಾದರೆ ಮನೆ ಸುಧಾರಿಸುತ್ತದೆ. ಅದರಂತೆ ಗ್ರಾಮ, ತಾಲೂಕು ಹೀಗೆ ಸುಧಾರಿಸಿ ಸದೃಢ ರಾಷ್ಟ್ರ ಕಟ್ಟುವಲ್ಲಿ ಮಹಿಳೆಯರ ಪಾತ್ರ ಮುಖ್ಯವಾದದ್ದು ಎಂದರು.
ಸಂಸ್ಥೆ ಉಪಾಧ್ಯಕ್ಷೆ ಗೀತಾ ಪಾಟೀಲ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಿಳಾ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು, ಮಹಿಳೆಯರು ಜಾಗೃತರಾಗಬೇಕು. ಮಹಿಳೆ ಎಲ್ಲ ರಂಗಗಳಲ್ಲಿ ಮುಂದುವರಿದಿದ್ದಾಳೆ. ಆದರೆ ಇನ್ನೂ ಹೆಚ್ಚು ಅಭಿವೃದ್ಧ್ನಿ ಸಾಧಿಸಲು ಮಹಿಳೆಯರಲ್ಲಿ ಒಗ್ಗಟ್ಟು ಬೇಕು. ವಿವಿಧ ಬ್ಯಾಂಕ್ ಅಥವಾ ಸಂಘ-ಸಂಸ್ಥೆಗಳಿಂದ ಸಾಲ್ನ ಪಡೆದು ಆ ಹಣವನ್ನ್ನು ಆದಾಯ ಉತ್ಪನ್ನ ಚಟುವಟಿಕೆಗಳಲ್ಲಿ ತೊಡಗಿಸಲು ಕರೆ ನೀಡಿದರು.
ಚೈತನ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ನಿರ್ದೇಶಕ ಎಸ್.ಎಚ್. ಮಜೀದ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ, ಮಹಿಳೆಯರ ಸಬಲೀಕರಣಕ್ಕಾಗಿ, ಶಿಕ್ಷಣ ವಂಚಿತ ಮಕ್ಕಳಿಗಾಗಿ ಹಾಗೂ ಅವಕಾಶ ವಂಚಿತ ಸಮುದಾಯದ ಜತೆ ಸಂಸ್ಥೆ ಜಿಲ್ಲೆಯಲ್ಲಿ ಹತ್ತು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಮಹಿಳೆಯರಲ್ಲಿನ ಪ್ರತಿಭೆ ಹಾಗೂ ಕೌಶಲ್ಯಗಳನ್ನ್ನು ಇತರೆ ಮಹಿಳೆಯರೊಂದಿಗೆ ವಿನಿಮಯ ಮಾಡಿಕೊಂಡು ಮಹಿಳೆಯರು ಸಂಘಟಿತರಾಗಿ ಅಭಿವೃದ್ಧಿ ಹೊಂದಬೇಕೆಂದರು.
ಶಾಸಕ ರುದ್ರಪ್ಪ ಲಮಾಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪರಿಸರ ವೇದಿಕೆ ಅಧ್ಯಕ್ಷೆ ಮಾಧುರಿ ದೇವಧರ, ವಿಜಯ ಹಿರೇಮಠ, ಜಯಶ್ರೀ ಶಿವಪುರ, ಲಲಿತಾ ಹುಗ್ಗಿ, ನಗರಸಭೆ ಉಪಾಧ್ಯಕ್ಷೆ ರತ್ನಾ ಭೀಮಕ್ಕನವರ, ನೆಹರು ಯುವ ಕೇಂದ್ರದ ಯುವ ಸಮನ್ವಯ ಅಧಿಕಾರಿ ಎಸ್.ಯು. ಜಮದಾರ ಉಪಸ್ಥಿತರಿದ್ದರು. ಶ್ರೀ ವರದಾ ಮಹಿಳಾ ಒಕ್ಕೂಟದ ಅಧ್ಯಕ್ಷೆ ನೀಲಮ್ಮ ಗೌಡಪ್ಪನವರ ಮಹಿಳಾ ಸಬಲೀಕರಣ ಕುರಿತು ಉಪನ್ಯಾಸ ನೀಡಿದರು. ಇದೇ ಸಂದರ್ಭ ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಮಹಿಳಾ ಸಂಘಗಳಿಗೆ ಬಹುಮಾನ ವಿತರಿಸಲಾಯಿತು. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಒತ್ತು ಕೊಡಲು ಚೈತನ್ಯ ಗ್ರಾಮೀಣ ಅಭಿವೃದ್ದಿ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲಾಯಿತು. ಚೈತನ್ಯ ಸಂಸ್ಥೆಯ ರಾಜಪ್ಪ ಟಿ. ನಿರೂಪಿಸಿದರು. ಹಕೀಮ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

