ಹಾವೇರಿ

ಕಾಮಗಾರಿ ಶೀಘ್ರ ಪೂರ್ಣಗೊಳಿಸಿ

Published On :

ಕನ್ನಡಪ್ರಭ ವಾರ್ತೆ, ಹಾವೇರಿ, ಅ. 28
ಹಾವೇರಿ ಹಾಗೂ ಹಾನಗಲ್ಲ ಬಸ್ ನಿಲ್ದಾಣ ಕಾಮಗಾರಿಗಳನ್ನು ವಹಿಸಿಕೊಂಡಿದ್ದ ಗುತ್ತಿಗೆದಾರಕ ಶ್ರೀದೇವಿ ಕನ್ಸ್ಟ್ರಕ್ಷನ್ನ ಟೆಂಡರ್ ರದ್ದುಗೊಳಿಸಿ, ಮರು ಟೆಂಡರ್ ಕರೆಯಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಬೇಗನೆ ಕಾಮಗಾರಿ ಮುಗಿಸುವಂತೆ ಸಣ್ಣ ಕೈಗಾರಿಕೆ, ಮುಜರಾಯಿ, ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಕಾಶ ಹುಕ್ಕೇರಿ ತಿಳಿಸಿದರು.
ಜಿಪಂ ಸಭಾಂಗಣದಲ್ಲಿ ಸೋಮವಾರ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಾವೇರಿ ಮತ್ತು ಹಾನಗಲ್ಲ ಬಸ್ ನಿಲ್ದಾಣಗಳ ಕಾಮಗಾರಿ ಗುಣಮಟ್ಟದ್ದಾಗಿ, ಗ್ರಾಮೀಣರಿಗೆ ಅನುಕೂಲ ಮಾಡಿಕೊಡಬೇಕು. ಶಿಗ್ಗಾಂವಿ ಬಸ್ ನಿಲ್ದಾಣದ ಕಾಮಗಾರಿಗೂ ಚಾಲನೆ ನೀಡಲಾಗಿದೆ. ಗ್ರಾಮೀಣ ಭಾಗಗಳಿಗೆ  ಸಾರಿಗೆ ಸಂಸ್ಥೆ ಬಸ್ಗಳ ಓಡಾಟ ಕಡಿಮೆಯಾಗಿದೆ. ಇನ್ನಷ್ಟು ಬಸ್ ಓಡಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸವಣೂರಲ್ಲಿ ಡಾ೤ ವಿ.ಕೃ. ಗೋಕಾಕರ ಸ್ಮಾರಕ ಭವನ ನಿರ್ಮಿಸುತ್ತಿದ್ದು, ಕಾಮಗಾರಿಗೆ ರು. 2.45 ಕೋಟಿ ಮಂಜೂರಾಗಿದೆ. ರು. 73 ಲಕ್ಷ ಬಿಡುಗಡೆ ಮಾಡಲಾಗಿದೆ. ರು. 30 ಲಕ್ಷ ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದೆ. ಮಾ. 31ರೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಉದ್ಯೋಗ ಖಾತ್ರಿ ಯೋಜನೆಯಲ್ಲಿ 2012-13ನೇ ಸಾಲಿನಲ್ಲಿ ಅನುಷ್ಠಾನಗೊಳಿಸಿದ ಕಾಮಗಾರಿಗಳನ್ನು ಎಂ.ಐ.ಎಸ್.ನಲ್ಲಿ ದಾಖಲಿಸಿದ್ದು, 30.15 ಕೋಟಿ ಅನುದಾನ ಪಾವತಿ ಮಾಡಬೇಕು. 2013-14ನೇ ಸಾಲಿಗೆ ಬಿಡುಗಡೆಯಾದ ಅನುದಾನದಲ್ಲಿ ರು. 27.70 ಕೋಟಿಯನ್ನು ಅ. 11ರ ವರೆಗೆ ಪಾವತಿ ಮಾಡಲಾಗಿದೆ. ಸುವರ್ಣ ಗ್ರಾಮೋದಯ ಯೋಜನೆಯಲ್ಲಿ 32 ಕಾಮಗಾರಿಗಳು ಪ್ರಗತಿಯಲ್ಲಿದ್ದು, ಮಳೆಗಾಲದಿಂದ ಅನುಷ್ಠಾನ ಕಾರ್ಯ ವಿಳಂಬವಾಗಿದೆ. ಕೂಡಲೇ ಕಾಮಗಾರಿ ಮುಗಿಸಿ, ಸಂಬಂಧಿಸಿದವರಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿಸಿದರು. ಹಾವೇರಿ ನಗರಸಭೆ ವ್ಯಾಪ್ತಿಯಲ್ಲಿ ಸ್ವಚ್ಛತೆ ಪಾಲಿಸಿ, ರೋಗ ಹರಡುವುದನ್ನು ತಡೆಗಟ್ಟುವಂತೆ ಪೌರಾಯುಕ್ತರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಯಿತು.
ಇಂದಿರಾ ಆವಾಸ್ ಯೋಜನೆಯಡಿ 2005-14 ಅವಧಿಯಲ್ಲಿ 24,302 ಮನೆಗಳ ಗುರಿ ಹೊಂದಿದ್ದು, 15,235 ಮನೆಗಳು ಪೂರ್ಣಗೊಂಡಿವೆ. 5476 ಮನೆಗಳ ಕೆಲಸ ಪ್ರಗತಿಯಲ್ಲಿದೆ ಎಂದು ಜಿಪಂ ಉಪ ಕಾರ್ಯದರ್ಶಿ ಜಿ. ಗೋವಿಂದ ಸ್ವಾಮಿ ತಿಳಿಸಿದರು.
ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಮುಂಗಾರು ಬಿತ್ತನೆ ಪೂರ್ಣಗೊಂಡಿದೆ. ಜಿಲ್ಲೆಗೆ ರು. 2817.41 ಲಕ್ಷ ಆರ್ಥಿಕ ಗುರಿಯೊಂದಿಗೆ ಹನಿ ನೀರಾವರಿ, ಸಾವಯವ ಗೊಬ್ಬರ, ರೈತರಿಗೆ ಸಹಾಯಧನ, ಬೀಜ ಪೂರೈಕೆ, ಮಣ್ಣಿನ ಸತ್ವ ಹೆಚ್ಚಳ, ಎಣ್ಣೆ ಕಾಳು, ಉತ್ಪಾದನಾ ಮತ್ತು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತದೆ. ಕೃಷಿ ಯಾಂತ್ರಿಕರಣ ಯೋಜನೆ ಸಕಾಲದಲ್ಲಿ ರೈತರಿಗೆ ತಲುಪಿಸುವ ವ್ಯವಸ್ಥೆಯನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ಅನುಷ್ಠಾನ ಮಾಡಲಾಗುತ್ತಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಗಣೇಶ ನಾಯ್ಕ ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯಡಿ ಆರ್ಐಟಿಎಫ್-13 ಯೋಜನೆಯಡಿ ಅಂಗನವಾಡಿ ಕಟ್ಟಡಗಳ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕೆಂದು ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ರಾಣಿಬೆನ್ನೂರು ತಾಲೂಕಿನಲ್ಲಿ 11 ಚೆಕ್ಡ್ಯಾಂ ನಿರ್ಮಿಸಲಾಗಿದೆ. ಕಾರ್ಯಪಡೆಯಲ್ಲಿ ರು. ಕೋಟಿ ಬಿಡುಗಡೆಯಾಗಿದ್ದು, ತಾಲೂಕುವಾರು ಅನುದಾನ ನೀಡಲಾಗಿದೆ ಎಂದು ಜಿಪಂ ಕಾರ್ಯಕಾರಿ ಅಭಿಯಂತರು ತಿಳಿಸಿದರು. ಪಶು ಸಂಗೋಪನಾ ಇಲಾಖೆಯಲ್ಲಿ ಖಾಲಿ ಇರುವ 33 ಪಶುವೈದ್ಯರ ಹುದ್ದೆ ಭರ್ತಿ ಮಾಡಿಸಬೇಕೆಂದು ಹಾಗೂ ಜಿಲ್ಲೆಯಲ್ಲಿ ಶಾಲಾ ದುರಸ್ತಿ ಮತ್ತಿತರ ಕಾಮಗಾರಿಗಳಿಗಾಗಿ ರು. 10 ಕೋಟಿ ಅನುದಾನ ನೀಡಬೇಕೆಂದು ಅಧಿಕಾರಿಗಳು ಸಚಿವರಿಗೆ ಮನವಿ ಮಾಡಿದರು.
ಸಭೆಯಲ್ಲಿ ಶಾಸಕರಾದ ಬಸವರಾಜ ಶಿವಣ್ಣನವರ, ರುದ್ರಪ್ಪ ಲಮಾಣಿ, ಯು.ಬಿ. ಬಣಕಾರ, ಜಿಪಂ ಅಧ್ಯಕ್ಷ ರಾಜೇಂದ್ರ ಹಾವೇರಣ್ಣನವರ, ಉಪಾಧ್ಯಕ್ಷೆ ಡಾ೤ ಶೋಭಾ ನಿಸ್ಸೀಮಗೌಡ್ರ, ಜಿಲ್ಲಾಧಿಕಾರಿ ಪಾಂಡುರಂಗ ನಾಯಕ, ಜಿಪಂ ಸಿಇಒ ಉಮೇಶ ಕುಸುಗಲ್ಲ, ಎಸ್ಪಿ ಎನ್. ಶಶಿಕುಮಾರ ಹಾಜರಿದ್ದರು.

ಬಿಪಿಎಲ್ ಚೀಟಿದಾರರಿಗೆ ನವೆಂಬರ್ನಿಂದ ಪಡಿತರ ನೀಡಿ: ಸಚಿವ ಹುಕ್ಕೇರಿ
ಹಾವೇರಿ: ಬಿಪಿಎಲ್ ಪಡಿತರ ಚೀಟಿಗಾಗಿ ಬಂದಿರುವ ಅರ್ಜಿಗಳನ್ನು ಅ. 31ರೊಳಗಾಗಿ ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ನವೆಂಬರ್ ತಿಂಗಳಿಂದ ಪಡಿತರ ನೀಡಲು ಕ್ರಮ ಕೈಗೊಳ್ಳಬೇಕು. ಹಾವೇರಿ ಜಿಲ್ಲೆಯ ಎಷ್ಟು ಗ್ರಾಮಗಳಲ್ಲಿ ಬಿಪಿಎಲ್ ಫಲಾನುಭವಿಗಳನ್ನು ಗುರುತಿಸಿದ್ದೀರಿ ಎಂಬ ಮಾಹಿತಿ ನೀಡುವಂತೆ ಸಚಿವ ಪ್ರಕಾಶ ಹುಕ್ಕೇರಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ತಿಂಗಳ ಅಂತ್ಯಕ್ಕೆ ಬಿಪಿಎಲ್ ಚೀಟಿದಾರರ ಪಟ್ಟಿ ಅಂತಿಮಗೊಳಿಸುವುದಾಗಿ ಆಹಾರ ಇಲಾಖೆ ಅಧಿಕಾರಿ ನೀಡಿದ ಮಾಹಿತಿಯಿಂದ ಸಂತುಷ್ಟರಾಗದ ಸಚಿವರು, ಫಲಾನುಭವಿಗಳ ಹೆಸರನ್ನು ಈ ತಿಂಗಳ ಕೊನೆಗೆ ಅಂತಿಮಗೊಳಿಸಿ ನವೆಂಬರ್ ತಿಂಗಳಿಂದ ಎಲ್ಲರಿಗೂ ಪಡಿತರ ನೀಡಲು ಕ್ರಮ ಜರುಗಿಸಬೇಕೆಂದು ಆದೇಶ ನೀಡಿದರು.
ಜಿಲ್ಲೆಯಲ್ಲಿ 82 ಸಾವಿರ ಜನರು ಬಿಪಿಎಲ್ ಕಾರ್ಡ್ಗೆ ಅರ್ಜಿ ಸಲ್ಲಿಸಿದ್ದು, ಶೀಫ್ರದಲ್ಲೇ ಪಟ್ಟಿಯನ್ನು ಅಂತಿಮಗೊಳಿಸಲಾಗುವುದು ಎಂದೂ ಅಧಿಕಾರಿಗಳು ತಿಳಿಸಿದರು.
ಮರಳು ನೀತಿ: ಮರಳಿನ ಅಭಾವದಿಂದಾಗಿ ಜಿಲ್ಲೆಯಲ್ಲಿ ಬಹಳಷ್ಟು ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಹೀಗಾಗಿ, ಮೈಸೂರು ಮುಂತಾದ ಜಿಲ್ಲೆಗಳಲ್ಲಿರುವ ನೀತಿಯನ್ನೇ ಇಲ್ಲೂ ಜಾರಿಗೆ ತರುವಂತೆ ಸಚಿವ ಹುಕ್ಕೇರಿ, ಶಾಸಕರಾದ ಬಸವರಾಜ ಶಿವಣ್ಣನವರ, ರುದ್ರಪ್ಪ ಲಮಾಣಿ ಅಧಿಕಾರಿಗಳಿಗೆ ಸೂಚಿಸಿದರು.
ಕಾಲುಬಾಯಿ ಬೇನೆಯಿಂದ ಜಿಲ್ಲೆಯಲ್ಲಿ 48 ಜಾನುವಾರು ಸಾವನ್ನಪ್ಪಿವೆ. 3.48 ಲಕ್ಷ ಜಾನುವಾರಿಗೆ ಲಸಿಕೆ ಹಾಕಲಾಗಿದ್ದು, ಇನ್ನೂ 1.6 ಲಕ್ಷ ಜಾನುವಾರಿಗೆ ಹಾಕುವಷ್ಟು ಲಸಿಕೆ ಜಿಲ್ಲೆಯಲ್ಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.
ಶುದ್ಧ ಕುಡಿಯುವ ನೀರು: ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆಯಿರುವ 210 ಗ್ರಾಮಗಳ ಪೈಕಿ 197ರಲ್ಲಿ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಪ್ರಸ್ತಾವನೆ ಕಳುಹಿಸಲಾಗಿದೆ. 135 ಘಟಕಗಳ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ ಎಂದು ಜಿಪಂ ಅಭಿಯಂತರು ಮಾಹಿತಿ ನೀಡಿದರು. ಆದರೆ ಒಂದು ಘಟಕವೂ ಜಿಲ್ಲೆಗೆ ಮಂಜೂರಾಗಿಲ್ಲ ಎಂಬ ವಿಷಯ ಹೊರಬಿದ್ದಾಗ ಚರ್ಚೆ ಕಾವೇರಿತು. ಸಚಿವರು ಮಧ್ಯ ಪ್ರವೇಶಿಸಿ, ಘಟಕಗಳ ಮಂಜೂರಾತಿಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ದೇವರಗುಡ್ಡ ಕುಡಿಯುವ ನೀರಿನ ಯೋಜನೆಗೆ ರು. 31 ಲಕ್ಷ ಮಂಜೂರಾಗಿದ್ದರೂ ಕಾಮಗಾರಿ ಆರಂಭವಾಗಿಲ್ಲ. ತಕ್ಷಣ ಆರಂಭಿಸಬೇಕೆಂದು ಶಾಸಕ ಬಸವರಾಜ ಶಿವಣ್ಣನವರ್ ಆಗ್ರಹಿಸಿದರು.
ಕಾಗಿನೆಲೆ ಬಹುಗ್ರಾಮ ನೀರು ಪೂರೈಕೆ ಯೋಜನೆಯನ್ನು ಶೀಘ್ರದಲ್ಲಿ ಆರಂಭಿಸುವುದಾಗಿ ಜಿಪಂ ಕಾರ್ಯನಿರ್ವಾಹಕ ಅಭಿಯಂತ ಶ್ರೀಕಾಂತ ಮೈಸೂರು ತಿಳಿಸಿದರು.

ಬೆಳೆಹಾನಿಗೆ ಶೀಘ್ರ ಪರಿಹಾರ
ಕಳಪೆ ಬಿಟಿ ಹತ್ತಿ ಹಾಗೂ ಗೋವಿನ ಜೋಳದ ಬಿತ್ತನೆ ಬೀಜಗಳಿಂದ ಬೆಳೆ ಹಾನಿಯಾಗಿರುವ ಕುರಿತು ಕೃಷಿ ಸಚಿವರು ಹಾಗೂ ಸಂಬಂಧಿತ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಫ್ರದಲ್ಲೇ ಪರಿಹಾರ ಕಂಡುಕೊಳ್ಳಲಾಗುವುದು. ರು. 88 ಕೋಟಿ ಬೆಳೆ ವಿಮೆಯಲ್ಲಿ ರು. 33 ಕೋಟಿ ಬಿಡುಗಡೆಯಾಗಿದ್ದು, ಮಿಕ್ಕ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು.
- ಪ್ರಕಾಶ ಹುಕ್ಕೇರಿ, ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.