ಪಶು ವೈದ್ಯಾಧಿಕಾರಿ ನಿಯೋಜಿಸಿ
ಶಿಗ್ಗಾಂವಿ: ಕಾಲುಬಾಯಿ ರೋಗ ಉಲ್ಬಣಿಸಿ ಜಾನುವಾರುಗಳು ಸಾವನ್ನಪ್ಪುತ್ತಿದ್ದರೂ ಪಶು ವೈದ್ಯಾಧಿಕಾರಿಗಳು ಬರುತ್ತಿಲ್ಲ, ಚಿಕಿತ್ಸೆಗೂ ಇಲಾಖೆ ಮುಂದಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ರೈತರು ಗೊಟಗೋಡಿ ಗ್ರಾಮದ ಪಶು ಆರೋಗ್ಯ ಕೇಂದ್ರಕ್ಕೆ ಬೀಗ ಹಾಕಿ, ಜಾನುವಾರುಗಳ ಕಳೇಬರವಿಟ್ಟು ಎರಡು ತಾಸಿಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದರು.
ತಾಲೂಕಿನ ಗೊಟಗೋಡಿ ಗ್ರಾಮದ ಪಶು ಆರೊಗ್ಯ ಕೇಂದ್ರಕ್ಕೆ ಗೀತಾ ಗೌಳಿ ಅವರನ್ನು ನಿಯೋಜಿಸಲಾಗಿದೆ. ಅವರು ಒಂದು ದಿನವೂ ಆಸ್ಪತ್ರೆಗೆ ಬರುವುದಿಲ್ಲ. ಐದಾರು ವರ್ಷಗಳಿಂದ ಆಸ್ಪತ್ರೆಯಲ್ಲಿ ಕಾಂಪೌಂಡರ್ ಮಾತ್ರ ಇದ್ದಾರೆ. ಜಾನುವಾರುಗಳು ಸಾವನ್ನಪ್ಪುತ್ತಿದ್ದರೂ ತಾಲೂಕು ಪಶು ಆರೋಗ್ಯಾಧಿಕಾರಿಗಳು ಗಮನ ಹರಿಸಿಲ್ಲ. ಗ್ರಾಮಕ್ಕೆ ಕಾಯಂ ಆಗಿ ಪಶು ಆರೋಗ್ಯ ನಿರೀಕ್ಷಕರನ್ನು ನಿಯೋಜಿಸಬೇಕು. ಗಂಟಲು ಬೇನೆ, ಚಪ್ಪಿ ಬೇನೆ, ಬಾಯಿ ಬೇನೆ ರೋಗಗಳು ಹರಡುತ್ತಿದ್ದರೂ ತಾಲೂಕು ಪಶು ಆರೋಗ್ಯಾಧಿಕಾರಿ ಕ್ರಮ ಜರುಗಿಸುತ್ತಿಲ್ಲ. ಸರ್ಕಾರದ ಯೋಜನೆಗಳ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡುತ್ತಿಲ್ಲ. ಸತ್ತಿರುವ ಜಾನುವಾರುಗಳಿಗೆ ಪರಿಹಾರದ ವ್ಯವಸ್ಥೆ ಮಾಡುವ ತನಕ ಪಶು ಆಸ್ಪತ್ರೆ ಬಾಗಿಲು ತೆಗೆಯುವುದಿಲ್ಲ ಎಂದು ಎಚ್ಚರಿಸಿದರು.
ತಕ್ಷಣ ನಿಯೋಜನೆ: ತಾಲೂಕು ಪಶು ಆರೋಗ್ಯಾಧಿಕಾರಿ ಎಸ್.ಎಸ್. ಪಾಟೀಲ ಆಗಮಿಸಿ, ಸಿಬ್ಬಂದಿ ಕೊರತೆಯಿಂದಾಗಿ ಗೀತಾ ಗೌಳಿ ಅವರನ್ನು ತಮ್ಮ ಕಚೇರಿಗೇ ನಿಯೋಜಿಸಲಾಗಿತ್ತು. ಕಾಯಂ ಪಶು ವೈದ್ಯ ನಿರೀಕ್ಷಕರನ್ನು ತಕ್ಷಣದಿಂದಲೇ ನಿಯೋಜಿಸಲಾಗುವುದು. ರೈತರು ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕು. ಜಾನುವಾರುಗಳ ಮರಣೋತ್ತರ ಪರೀಕ್ಷೆ ನಡೆಸಿ ರೋಗದ ಬಗ್ಗೆ ತಿಳಿಸಲಾಗುವುದು ಎಂದರು. ಬಳಿಕ ಪಶು ಆರೋಗ್ಯ ಕೇಂದ್ರಕ್ಕೆ ಹಾಕಿದ್ದ ಬೀಗ ತೆಗೆಯಲಾಯಿತು.
ಗ್ರಾಪಂ ಸದಸ್ಯ ಯಲ್ಲಪ್ಪ ಶಿಂಧೆ, ಸುಭಾಸ ಸಕ್ಕಣ್ನವರ, ಸೋಮನಗೌಡಾ ಪಾಟೀಲ, ಶಿವಾಜಿ ಜೀವಾಜಿ, ನಿಂಗಪ್ಪ ಹರಿಜನ, ಫಕ್ಕಿರಪ್ಪ ಗುಳೇದ, ಪರಸಪ್ಪ ಹರಿಜನ, ಕೃಷ್ಣಾ ಮಲ್ಲಾಡದ, ಬಸವರಾಜ ಪರಸಾಪುರ, ಚನ್ನಪ್ಪ ದೊಡ್ಡಮನಿ, ಧರ್ಮಪ್ಪ ಹಕಾರಿ, ಮಹದೇವಪ್ಪ ತಳವಾರ, ರಾಮಣ್ಣ ಹುಲಗೂರ, ಪ್ರಕಾಶ ಶಿಂಧೆ, ಎಲ್ಲಪ್ಪ ಮಲ್ಲಾರಿ, ಫಕ್ಕಿರಪ್ಪ ತಳವಾರ ಇದ್ದರು.
ವಾಣಿಜ್ಯೋದ್ಯಮ ಸಂಸ್ಥೆಗೆ ಬಿಎಸ್ ಪಟ್ಟಣಶೆಟ್ಟಿ ಆಯ್ಕೆ
ರಾಣಿಬೆನ್ನೂರು: ನಗರದ ಗಣ್ಯ ವರ್ತಕ, ಕೆಎಲ್ಇ ಶಿಕ್ಷಣ ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿಯ ನಿರ್ದೇಶಕ ಬಿ.ಎಸ್. ಪಟ್ಟಣಶೆಟ್ಟಿ ಅವರು ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅವರನ್ನು ನಗರದ ವ್ಯಾಪಾರಸ್ಥರು, ಮಾಜಿ ಶಾಸಕರು, ತಾಲೂಕು ವರ್ತಕರ ಸಂಘದ ಅಧ್ಯಕ್ಷ-ಸದಸ್ಯರು ಅಭಿನಂದಿಸಿದ್ದಾರೆ ಎಂದು ಕಾಟನ್ ಮತ್ತು ಜಿನ್ನಿಂಗ್ ಅಸೋಸಿಯೇಶನ್ ಮಾಜಿ ಅಧ್ಯಕ್ಷ ಸುಜೀತ್ ಜಂಬಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

