ಹಾವೇರಿ

ಮಹಿಕೋ ವಿರುದ್ಧ ರೈತರ ಆಕ್ರೋಶ

Published On :

ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಅ. 28
ಮಹಿಕೋ ಕಂಪನಿ ವಿತರಿಸಿದ್ದ ಕನಕ ಮತ್ತು ನಿಕ್ಕಿ ಪ್ಲಸ್ ಹತ್ತಿ ಬೀಜಗಳನ್ನು ಬಿತ್ತಿ ಹಾನಿಗೊಳಗಾದ ರೈತರಿಗೆ ಪರಿಹಾರ ನಿರ್ಧರಿಸುವ ಸಲುವಾಗಿ ಭಾನುವಾರ ತಹಸೀಲ್ದಾರ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸಭೆಗೆ ಕಂಪನಿ ಅಧಿಕಾರಿಗಳು ಹಾಜರಾಗದ ಬಗ್ಗೆ ಆಕ್ರೋಶಗೊಂಡ ರೈತರು ಸೋಮವಾರ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದರು.
ನೇತೃತ್ವ ವಹಿಸಿದ್ದ ರೈತ ಸಂಘದ ತಾಲೂಕು ಅಧ್ಯಕ್ಷ ಸುರೇಶಪ್ಪ ಗರಡಿಮನಿ ಮಾತನಾಡಿ, ಮಹಿಕೋ ಕಂಪನಿ ವಿತರಿಸಿದ ಕಳಪೆ ಬೀಜಗಳಿಂದ ರೈತರಿಗೆ ಭಾರಿ ಪ್ರಮಾಣದ ಹಾನಿಯಾಗಿದೆ ಎಂಬುದಕ್ಕೆ ಇಲ್ಲಿ ಸೇರಿರುವ ಅನ್ನದಾತರೇ ಸಾಕ್ಷಿ. ಲಾಭದಾಸೆಗೆ ಕಂಪನಿ 4 ಪ್ಯಾಕೆಟ್ಗಳ ಜತೆಗೆ ಒಂದು ಪ್ಯಾಕೆಟ್ ಕಳಪೆ ಬೀಜ ಬೆರೆಸಿ ಮಾರಿದೆ. ಉತ್ತರ ಕರ್ನಾಟಕದ ಹಲವೆಡೆ ರೈತರ ಹೊಲಗಳಲ್ಲಿ ಗಿಡಗಳು ಬೆಳೆದಿದ್ದರೂ ಹೂವು-ಕಾಯಿ ಕಟ್ಟದೆ ನಷ್ಟ ತಂದೊಡ್ಡಿವೆ. ರೈತರು ಖರೀದಿಸಿದ ಬೀಜದ ಪ್ರತಿ ಡಬ್ಬಕ್ಕೂ ಕಂಪನಿ 35 ಸಾವಿರ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ರವಿಂದ್ರಗೌಡ ಎಫ್. ಪಾಟೀಲ ಮಾತನಾಡಿ, ರೈತರು ಹತ್ತಿ ಹಾಗೂ ಗೋವಿನಜೋಳ ಬೆಳೆಯಲು ಪ್ರತಿ ಎಕರೆಗೆ ಕನಿಷ್ಠ ರು. 20 ಸಾವಿರ ಖರ್ಚು ಮಾಡಿದ್ದಾರೆ. ಈಗ ಖರ್ಚೂ ಹುಟ್ಟದೆ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಯಲ್ಲಿದ್ದಾರೆ. ಎಕರೆವಾರು ಪರಿಹಾರ ನೀಡದೆ, ಬೀಜಗಳ ಡಬ್ಬದ ಆಧಾರದಲ್ಲಿ ಕೊಡುವಂತೆ ಒತ್ತಾಯಿಸಿದರು. ರೈತ ಸಂಘದ ತಾಲೂಕು ಉಪಾಧ್ಯಕ್ಷರಾದ ಜಯಪ್ಪ ಮಾಗನೂರು, ಶಿವಾನಂದ ಲಿಂಗದಹಳ್ಳಿ, ಮಲ್ಲೇಶಪ್ಪ ಬಿಳಿಎಲಿ, ಸುರೇಶ ಅರಳಿ, ಸಂಜೀವರೆಡ್ಡಿ ಸೋಮರಡ್ಡೇರ, ಸಂಗನಗೌಡ ಮಲ್ಲನಗೌಡ್ರ, ಶಂಕರ ತರಗನಹಳ್ಳಿ, ಕೆ.ಎಂ. ಮೇಗಳಮನಿ, ಶಿವಪ್ಪ ಜಾನಪ್ಪನವರ, ನೀಲಪ್ಪ ಹುಬ್ಬಳ್ಳಿ ಮಾತನಾಡಿ, ಮಹಿಕೋ ಕಂಪನಿಯನ್ನು ಸರ್ಕಾರ ಮುಚ್ಚುವಂತೆ ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಹನುಮಂತಪ್ಪ ಬಡದಾಳ ಹಾಗೂ ತಾಲೂಕು ಕೃಷಿ ಅಧಿಕಾರಿ ನಾಗನಗೌಡ ರೆಡ್ಡಿ, ಕಂಪನಿ ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ, ರೈತರಿಗೆ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.