ಹೋಬಳಿಗೊಂದು ವಸತಿ ಶಾಲೆ: ಸಿಎಂ
ಕನ್ನಡಪ್ರಭ ವಾರ್ತೆ, ನರಗುಂದ, ಅ. 28
ಬಹು ದಿನಗಳಿಂದ ರಾಜ್ಯದ ಹಿಂದುಳಿದ ಮತ್ತು ಬಡ ವರ್ಗದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುತ್ತಿಲ್ಲ. ಇದನ್ನು ಗಮನಿಸಿ ಮುಂಬರುವ ದಿನಗಳಲ್ಲಿ ರಾಜ್ಯದ ಪ್ರತಿ ಹೋಬಳಿ ಮಟ್ಟಕ್ಕೊಂದು ವಸತಿ ಶಾಲೆ ನಿರ್ಮಿಸಲು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅವರು ಸೋಮವಾರ ಸಂಜೆ ತಾಲೂಕಿನ ಬೆನಕನಕೊಪ್ಪ ಗ್ರಾಮದಲ್ಲಿ ಮೊರಾರ್ಜಿ ವಸತಿ ಶಾಲೆಯನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿ ಹೋಬಳಿ ಮಟ್ಟಕ್ಕೊಂದು ವಸತಿ ಶಾಲೆ ಪ್ರಾರಂಭಿಸಿ, ಗ್ರಾಮೀಣ ಹಿಂದುಳಿದ ಮತ್ತು ಬಡ ವರ್ಗದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಈ ತಾಲೂಕಿನಲ್ಲಿ ಎಂಜಿನಿಯರಿಂಗ್ ಕಾಲೇಜು ನಿರ್ಮಿಸಲಾಗುವುದು. ರೈತರು ಬೆಳೆಯುವ ಬಿಳಿ ಜೋಳಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇಲ್ಲದೇ ಇರುವುದರಿಂದ ರೈತರಿಗೆ ತೊಂದರೆಯಾಗಿತ್ತು, ಅದಕ್ಕಾಗಿ ಹಿಂದಿನ ಸಚಿವ ಸಂಪುಟದಲ್ಲಿ ಜೋಳಕ್ಕೆ ರು. 1800ಕ್ಕೆ ಬೆಂಬಲ ಬೆಲೆಯಲ್ಲಿ ಜೋಳ ಖರೀದಿಸಲು ಸರ್ಕಾರ ತೀರ್ಮಾನಿಸಿದೆ. ಇನ್ನು ಕೆಲವೇ ದಿನಗಳಲ್ಲಿ ಗೋವಿನಜೋಳಕ್ಕೂ ಬೆಂಬಲ ಬೆಲೆ ಘೋಷಿಸಲಾಗುವುದು ಎಂದರು.
ಜನರಿಗೆ ನಿರಾಸೆ: ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿರುವ ಕಳಸಾ ಬಂಡೂರಿ ಮತ್ತು ಮಹಾದಾಯಿ ನದಿ ನೀರನ್ನು ಮಲಪ್ರಭಾ ನದಿ ಜೋಡಣೆಗೆ ಕ್ರಮ ಕೈಗೊಂಡಿರುವ ಬಗ್ಗೆ ಏನಾದರೂ ಸಿಎಂ ಹೇಳುತ್ತಾರೆ ಎಂದು ಕಾದು ಕುಳಿತಿದ್ದ ಜನರಿಗೆ ನಿರಾಸೆ ಕಾದಿತ್ತು. ಸಿಎಂ ತರಾತುರಿಯಲ್ಲಿ ಭಾಷಣ ಪೂರ್ಣಗೊಳಿಸುತ್ತಿದ್ದಂತೆಯೇ, ರೈತನೋರ್ವ ಎದ್ದು ನಿಂತು 2-3 ವರ್ಷಗಳಿಂದಲೂ ಕಳಸಾ ಬಂಡೂರಿ ಮತ್ತು ಮಹಾದಾಯಿ ನದಿ ನೀರನ್ನು ಮಲಪ್ರಭಾ ನದಿಗೆ ಜೋಡಣೆ ಮಾಡುವ ಕುರಿತು ಹಲವು ಬಾರಿ ಹೋರಾಟ ನಡೆಸಿದ್ದರೂ ಪ್ರಯೋಜನವಾಗಿಲ್ಲ. ಈ ಕುರಿತು ಏನು ಕ್ರಮ ಕೈಗೊಂಡಿದ್ದೀರಾ ಎಂದು ಸಿಎಂಗೆ ಕೇಳಿದಾಗ, ಇದಕ್ಕೆ ಉತ್ತರಿಸಿದ ಸಿಎಂ ಕಳಸಾ ಬಂಡೂರಿ ಮತ್ತು ಮಹಾದಾಯಿ ಯೋಜನೆಗಾಗಿ ನಮ್ಮ ಸರ್ಕಾರ ಬದ್ಧವಿದೆ. ಆದರೆ ಈ ಯೋಜನೆ ಪೂರ್ಣಗೊಳಿಸಲು ಕೆಲವು ಕಾನೂನು ತೊಡಕುಗಳಿದ್ದು, ಅವುಗಳನ್ನು ಕೂಡಲೇ ಸರಿಪಡಿಸಲಾಗುವುದು ಎಂದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ, ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್. ಆಂಜನೇಯ, ಶಾಸಕ ಬಿ.ಆರ್. ಯಾವಗಲ್ ಮಾತನಾಡಿದರು. ಮಾಹಿತಿ ತಂತ್ರಜ್ಞಾನ ಸಚಿವ ಎಸ್.ಆರ್. ಪಾಟೀಲ, ಕೃಷಿ ಸಚಿವ ಕೃಷ್ಣ ಬೈರೇಗೌಡ, ಅಬಕಾರಿ ಸಚಿವ ಸತೀಶ ಜಾರಕಿಹೊಳಿ, ಸಂಸದ ಪಿ.ಸಿ. ಗದ್ದಿಗೌಡರ, ವಿಪ ಸದಸ್ಯ ಶ್ರೀನಿವಾಸ ಮಾನೆ, ಕಾಂಗ್ರಸ್ ಜಿಲ್ಲಾಧ್ಯಕ್ಷ ಜಿ.ಎಸ್. ಗಡ್ಡದೇವರಮಠ, ಚಂಬಣ್ಣ ವಾಳದ, ದಶರಥ ಗಾಣಿಗೇರ, ವಿಠ್ಠಲ್ ಶಿಂಧೆ, ರಾಜು ಕಲಾಲ, ಎಸ್.ಜಿ. ಕೊಳ್ಳಿ, ಡಿ.ಎಸ್. ಪಾಟೀಲ, ಗಿರೀಶ ಪಾಟೀಲ, ಜಿಪಂ ಸದಸ್ಯ ಎಂ.ಎಸ್. ಪಾಟೀಲ, ತಾಪಂ ಅಧ್ಯಕ್ಷ ಗುರಪ್ಪ ಆದಪ್ಪನವರ, ಉಪಾಧ್ಯಕ್ಷ ಶಾನವಾಡಮಠ, ಸದಸ್ಯ ವಿದ್ಯಾವತಿ ಭೂಮಣ್ಣವರ, ಭೀಮವ್ವ ಶಿರಹಟ್ಟಿ, ಮಾರುತಿ ಮೇಟಿ, ಎಂ.ಬಿ. ಅರಹುಣಸಿ, ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಮುಂತಾದವರು ಉಪಸ್ಥಿತರಿದ್ದರು.
ಕೈ ಕೊಟ್ಟ ಕಾಪ್ಟರ್: ಕಾರ್ಯಕ್ರಮ ಪೂರ್ಣಗೊಳ್ಳುತ್ತಿದಂತೆಯೇ ಬೆಂಗಳೂರಿಗೆ ತೆರಳಲು ಸಿಎಂ ಸಿದ್ದರಾಮಯ್ಯ ಅವಸರದಲ್ಲಿಯೇ ಹೆಲಿಕಾಪ್ಟರ್ ಏರಿದರು. ಆದರೆ, ಕಾಪ್ಟರ್ ಮಾತ್ರ 15-20 ನಿಮಿಷಗಳ ಕಾಲ ಮೇಲೆ ಏರದೇ ಸತಾಯಿಸಿದ ಘಟನೆ ಜರುಗಿತು.
3 ವರ್ಷದಲ್ಲಿ ವಿದ್ಯುತ್ ಸಮಸ್ಯೆ ನಿವಾರಣೆ
ಗದಗ: ಮುಂಬರುವ 3 ವರ್ಷದಲ್ಲಿ ರಾಜ್ಯದ ವಿದ್ಯುತ್ ಸಮಸ್ಯೆಯನ್ನು ಸಂಪೂರ್ಣ ನಿವಾರಿಸಲು ಸರ್ಕಾರ ಅಗತ್ಯ ಕ್ರಮ ತೆಗೆದುಕೊಂಡಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಸೋಮವಾರ ಗದಗದ ಎಪಿಎಂಸಿ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ರಾಜ್ಯದಲ್ಲಿ ಪ್ರತಿ ದಿನ 9 ಸಾವಿರ ಮೆಗಾವ್ಯಾಟ್ ವಿದ್ಯುತ್ ಅವಶ್ಯಕತೆ ಇದೆ. ಸದ್ಯ 6500 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದ್ದು, 2500 ಮೆಗಾವ್ಯಾಟ್ ವಿದ್ಯುತ್ ಕೊರತೆ ಎದುರಿಸುತ್ತಿದ್ದೇವೆ. ಇದರಿಂದಾಗಿ ಸರ್ಕಾರಕ್ಕೆ ಗ್ರಾಮೀಣ ಪ್ರದೇಶದಲ್ಲಿ ನಿರಂತರ ವಿದ್ಯುತ್ ಕೂಡಲು ಸಾಧ್ಯವಾಗುತ್ತಿಲ್ಲ. ಇದನ್ನು ಸರಿದೂಗಿಸುವ ನಿಟ್ಟಿನಲ್ಲಿ ವಿದ್ಯುತ್ ಉತ್ಪಾದನೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಜನಸಂಖ್ಯೆ ಬೆಳವಣಿಗೆ ಆಧಾರದಲ್ಲಿ ಚಿಂತನೆ ಮಾಡಿ ಕೇವಲ 2500 ಮೆಗಾವ್ಯಾಟ್ ಮಾತ್ರವಲ್ಲ ಹೆಚ್ಚುವರಿಯಾಗಿ 1500 ಮೆಗಾವ್ಯಾಟ್ (ಒಟ್ಟು 4 ಸಾವಿರ) ಉತ್ಪಾದನೆ ಮಾಡಲು ಯೋಜನೆ ರೂಪಿಸಲಾಗಿದೆ. ಇದರಲ್ಲಿ ಸೋಲಾರ್ ಬಳಕೆಗೆ ಉತ್ತೇಜನ ಹಾಗೂ ವಿದ್ಯುತ್ ಉತ್ಪಾದನೆಗೆ ಅವಶ್ಯವಿರುವ ಎಲ್ಲ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದೆ. ಇದಕ್ಕಾಗಿ ವಿಶೇಷ ಅನುದಾನವನವ್ನೂ ಸರ್ಕಾರ ಮೀಸಲಿಟ್ಟಿದೆ ಎಂದರು.
ಇದಕ್ಕೂ ಮೊದಲು ಸರ್ಕಾರ ಗುಣಮಟ್ಟದ ಸ್ನಾನಗೃಹ ಹಾಗೂ ಶೌಚಾಲಯಗಳನ್ನು ಒಂದೇ ಸೂರಿನಡಿ ನೀಡಬೇಕು ಎನ್ನುವ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಹೊಸ ಯೋಜನೆಯಡಿ ಪ್ರಾಯೋಗಿಕವಾಗಿ ನಿರ್ಮಿಸಲಾಗಿರುವ ಸ್ನಾನ ಗೃಹಗಳನ್ನು ಗದಗ ತಾಲೂಕಿನ ಬಿಂಕದಕಟ್ಟಿ ಗ್ರಾಮದಲ್ಲಿ ನಿರ್ಮಿಸಲಾಗಿದ್ದು, ಅವುಗಳನ್ನು ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ಸಚಿವ ಎಚ್.ಕೆ. ಪಾಟೀಲ, ಕೃಷ್ಣ ಬೈರೇಗೌಡ, ಎಚ್. ಆಂಜನೇಯ ಹಾಗೂ ಸ್ಥಳೀಯ ಮುಖಂಡರು ಹಾಜರಿದ್ದರು.
ಶೀಘ್ರ ಕೃಷಿ ಬೆಲೆ ಆಯೋಗ ರಚನೆ
ಗದಗ: ರಾಜ್ಯದ ರೈತರು ಬೆಳೆದ ಬೆಳೆಗಳ ಬೆಲೆಯನ್ನು ರೈತರೇ ನಿರ್ಧರಿಸುವಂತಾಗಬೇಕು. ಹಲವಾರು ವರ್ಷಗಳಿಂದ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರ ಸದ್ಯದಲ್ಲಿಯೇ ಕೃಷಿ ಬೆಲೆ ಆಯೋಗವನ್ನು ರಚನೆ ಮಾಡಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಅವರು ಸೋಮವಾರ ಗದಗ ಎಪಿಎಂಸಿಯ 70ನೇ ವರ್ಷಾಚರಣೆ, ಪುತ್ಥಳಿ ಅನಾವರಣ ಹಾಗೂ ಕೋನಶಿಲಾ ಸಮಾರಂಭದಲ್ಲಿ ಮಾತನಾಡಿದರು.
ಸ್ವಾತಂತ್ರ್ಯ ಬಂದು ಇಷ್ಟೊಂದು ವರ್ಷಗಳು ಗತಿಸಿದರೂ ರೈತರು ಬೆಳೆದ ಬೆಲೆಯ ವಿಷಯದಲ್ಲಿ ರೈತರಿಗೆ ಅನ್ಯಾಯವಾಗುತ್ತಿದ್ದು, ಕೈಗಾರಿಕೆಗಳಲ್ಲಿ ಮಾತ್ರ ಆ ವಸ್ತುವನ್ನು ಸಿದ್ಧಪಡಿಸಿದವರೇ ಬೆಲೆಯನ್ನು ನಿಗದಿ ಮಾಡುತ್ತಾರೆ. ಆದರೆ ನಮ್ಮ ರೈತರು ಬೆಳೆದ ಬೆಳೆಗಳಿಗೆ ಮಾತ್ರ ಬೇರೆಯವರು ಬೆಲೆ ನಿಗದಿ ಮಾಡುವುದರಿಂದ ರೈತ ಸಮುದಾಯ ಸಾಕಷ್ಟು ಹಾನಿ ಅನುಭವಿಸುತ್ತಿದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.
ಈಗಾಗಲೇ ಕೃಷಿ ಬೆಲೆ ಆಯೋಗದ ಚಿಂತನೆ ನಡೆದಿದ್ದು, ಇದಕ್ಕಾಗಿ ಎಲ್ಲ ರೀತಿಯ ರೂಪುರೇಷೆ ಸಿದ್ಧಮಾಡಿಕೊಂಡಿದ್ದು, ಅದರಲ್ಲಿ ನಾಡಿನ ಪ್ರಮುಖ ಕೃಷಿ ತಜ್ಞರು, ರೈತ ಪ್ರತಿನಿಧಿಗಳು, ಹೋರಾಟಗಾರರು ಆಯೋಗದಲ್ಲಿ ಸದಸ್ಯರಾಗಿದ್ದು, ಅವರೆಲ್ಲ 6 ತಿಂಗಳು ಸುದೀರ್ಘ ಚರ್ಚೆ, ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ನೀಡಲಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರ ಕೃಷಿ ಆಯೋಗವನ್ನು ರಚಿಸಿದೆ.
ಆದರೆ, ಇಲ್ಲಿ ಕೇವಲ ಬೆಂಬಲ ಬೆಲೆ ಮಾತ್ರ ನಿರ್ಧಾರವಾಗಲಿದೆ. ಆದರೆ ನಮ್ಮ ಸರ್ಕಾರ ರಾಜ್ಯದಲ್ಲಿ ಜಾರಿಗೆ ತರಲು ಹೊರಟಿರುವ ಕೃಷಿ ಬೆಲೆ ಆಯೋಗ ಬೆಳೆಗೆ ರೈತರೇ ಬೆಲೆ ನಿರ್ಧರಿಸುವಂತಹ ಸ್ವಾತಂತ್ರ್ಯ ಅವರಿಗೆ ನೀಡುವ ನಿಟ್ಟಿನಲ್ಲಿ ದೇಶದಲ್ಲಿ ಇದು ಮೊದಲ ಕ್ರಾಂತಿಕಾರ ಹೆಜ್ಜೆಯಾಗಲಿದೆ. ಇದರಿಂದ ರೈತರ ಹಲವಾರು ವರ್ಷಗಳ ನ್ಯಾಯಯುತ ಬೇಡಿಕೆ ಈಡೇರಿಸಿದ ತೃಪ್ತಿ ಸರ್ಕಾರಕ್ಕೆ ಲಭ್ಯವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಾಮನೂರ ಶಿವಶಂಕ್ರಪ್ಪ, ಕೃಷಿ ಸಚಿವ ಕೃಷ್ಣ ಬೈರೇಗೌಡ ಸೇರಿದಂತೆ ಗದಗ ಜಿಲ್ಲೆಯ ಪ್ರಮುಖ ನಾಯಕರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

