ಹಾವೇರಿ

ಅಕ್ರಮ ಕಲ್ಲುಗಣಿಗಾರಿಕೆ ನಿಲ್ಲಿಸಿ

Published On :

ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಅ. 30
ತಾಲೂಕಿನ ಛತ್ರ ಗ್ರಾಮದ ಪಕ್ಕ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ನಿಷೇಧಿಸುವಂತೆ ಆಗ್ರಹಿಸಿ ಛತ್ರ ಹಾಗೂ ಮೋಟೆಬೆನ್ನೂರು ಗ್ರಾಮಸ್ಥರು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ್ದಾರೆ.
ಮುಖಂಡ ಶಂಕರ ಕುಸಗೂರ ಮಾತನಾಡಿ, ಛತ್ರ ಗ್ರಾಮದ ಸಮೀಪ ಹಲವಾರು ವರ್ಷಗಳಿಂದ ಕಲ್ಲು ಗಣಿಗಾರಿಕೆ ಅವ್ಯಾಹತವಾಗಿ ನಡೆದಿದೆ. ಪರಿಸರ ನಾಶವಾಗುತ್ತಿದೆ. ಬೃಹತ್ ಕ್ರಷರ್‌ಗಳಿಂದ ಹೊರಸೂಸುವ ಧೂಳು ಹಾಗೂ ಕರ್ಕಶ ಶಬ್ದ ಜೀವ ಸಂಕುಲಕ್ಕೆ ಅಪಾಯಕಾರಿಯಾಗಿದೆ ಎಂದರು.
ನಿಯಮ ಉಲ್ಲಂಘನೆ
ಭರಮಪ್ಪ ಓಲೇಕಾರ ಮಾತನಾಡಿ, 20ಕ್ಕೂ ಹೆಚ್ಚು ಕಡೆ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ರಾಷ್ಟ್ರೀಯ ಹೆದ್ದಾರಿಗೆ 2 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆ ನಡೆಯದಂತೆ ಸರ್ಕಾರ ನಿಷೇಧಿಸಿದ್ದರೂ ಕಲ್ಲುಗಣಿ ಮಾಲೀಕರು ಎಗ್ಗಿಲ್ಲದೆ ದಂಧೆ ಮುಂದುವರಿಸಿದ್ದಾರೆ. ಇದರಿಂದ ಹೆದ್ದಾರಿ ಮೇಲೆ ಸಂಚರಿಸುವ ವಾಹನಗಳಿಗೆ ಕ್ರಶರ್‌ಗಳ ಕಲ್ಲುಗಳು ಸಿಡಿದು ಚಾಲಕರಿಗೆ ಅಡ್ಡಿಯಾಗುತ್ತಿದೆ. ಕೆಲವೊಮ್ಮೆ ಅವಘಡಗಳೂ ಸಂಭವಿಸಿವೆ ಎಂದರು.
ತಾಲೂಕಾಡಳಿತ ವಿಫಲ
ಗುಡ್ಡಪ್ಪ ಕುರಿಯವರ ಮಾತನಾಡಿ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿಯಮ ಮೀರಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ನಿಯಂತ್ರಿಸುವಲ್ಲಿ ತಾಲೂಕಾಡಳಿತ ವಿಫಲವಾಗಿದೆ. ಅಧಿಕಾರಿಗಳು ಕಂಡೂ ಕಾಣದಂತಿದ್ದಾರೆ. ಜಿಲ್ಲಾ ಮತ್ತು ತಾಲೂಕು ಆಡಳಿತ ತಕ್ಷಣ ಅಕ್ರಮ ಕಲ್ಲು ಗಣಿಗಾರಿಕೆ ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿದರು.
ಬೆಳೆಹಾನಿ ಪರಿಹಾರ
ಚಿಕ್ಕಪ್ಪ ಬೆಳಕೇರಿ ಮಾತನಾಡಿ, ಕ್ರಶರ್‌ಗಳ ಧೂಳಿನಿಂದ ಬೆಳೆಗಳು ಒಣಗುತ್ತಿವೆ. ಕಷ್ಟಪಟ್ಟು ಬಿತ್ತನೆ ಮಾಡಿದರೂ ಬೆಳೆ ಬಾರದೆ ರೈತ ಕಂಗಾಲಾಗಿದ್ದಾನೆ. ಸಾಲದ ಶೂಲ ಹೊತ್ತು ರೈತ ಬದುಕುವುದೇ ಕಷ್ಟವಾಗಿದೆ. ಕ್ರಷರ್‌ಗಳೂ ಆತನ ಜೀವ ಹಿಂಡುತ್ತಿವೆ ಎಂದರು.
ಸುಪ್ರೀಂ ಕೋರ್ಟ್ ಆದೇಶ
ಫಕ್ಕೀರಪ್ಪ ಕುರಿಯವರ ಮಾತನಾಡಿ, ಛತ್ರ ಗ್ರಾಮದ ಸುತ್ತಮುತ್ತಲ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ನಿಷೇಧಿಸಿ ಸೇಫರ್ ಝೋನ್ ಮಾಡುವಂತೆ ಸುಪ್ರಿಂ ಕೋರ್ಟ್ ಆದೇಶವಿದ್ದರೂ ಗಣಿ ಮಾಲೀಕರ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಅಧಿಕಾರಿಗಳು ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ ಎಂದರು.
ಮಾರ್ತಾಂಡಪ್ಪ ಹೊಂಬರಡಿ ಮಾತನಾಡಿ, ಅಕ್ರಮ ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈಚೆಗೆ ಗ್ರಾಮದ ಸರ್ವೇ ನಂ. 442/ಕ ಜಮೀನಿನಲ್ಲಿ ಗಣಿಗಾರಿಕೆ ನಡೆಸಲು ಹೊಸದಾಗಿ ಅನುಮತಿ ನೀಡಲಾಗಿದೆ. ಇವೆಲ್ಲವನ್ನೂ ಕೂಡಲೇ ಸ್ಥಗಿತಗೊಳಿಸದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಬಸವಣ್ಣೆಪ್ಪ ಹುಲಕಣ್ಣನವರ, ಹನುಮಂತಪ್ಪ ಹುಲಕಣ್ಣನವರ, ಫಕ್ಕೀರಪ್ಪ ಹಲಗಿ, ರವಿಕುಮಾರ ಓಲೇಕಾರ,  ಮಲ್ಲಪ್ಪ ಪೋಟೇರ, ಭರಮಪ್ಪ ಕುರಿಯವರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.