ರೈತರ ನೆರವಿಗೆ ಧಾವಿಸಲು ಸರ್ಕಾರಗಳು ವಿಫಲ
ಗಜೇಂದ್ರಗಡ: ಸತತ ಬರ ಮತ್ತು ಪ್ರಕೃತಿ ವಿಕೋಪದಂತಹ ಸಂಕಷ್ಟಗಳಿಗೆ ಸಿಲುಕಿ ತೀವ್ರ ಸಂಕಷ್ಟ ಎದುರಿಸುತ್ತಿರುವ ಅನ್ನದಾತನ ನೆರವಿಗೆ ಧಾವಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ಹಾಲಕೆರೆ ಅಭಿನವ ಅನ್ನದಾನ ಸ್ವಾಮಿಗಳು ವಿಷಾದ ವ್ಯಕ್ತಪಡಿಸಿದರು.
ಸಮೀಪದ ಗೋಗೇರಿ ಗ್ರಾಮದ ಅನ್ನದಾನೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ಗ್ರಾಮದ ಸರ್ವ ಸಮುದಾಯ ಭಕ್ತರಿಂದ ನೆರವೇರಿದ 101ನೇ ತುಲಾಭಾರ ಸ್ವೀಕರಿಸಿ ಆಶೀರ್ವಚನ ನೀಡಿದರು.
ಹತ್ತಾರು ಸಮಸ್ಯೆಗಳ ಮಧ್ಯೆ ದೇಶಕ್ಕೆ ಅನ್ನ ನೀಡುವ ರೈತರು ಇತ್ತೀಚಿನ ದಿನಗಳಲ್ಲಿ ಒಂದಿಲ್ಲೊಂದು ಕಾರಣಕ್ಕೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಸಮಾಜ ರೈತರ ಗೋಳಿಗೆ ನೆರವಾಗುವ ಅವಶ್ಯಕತೆ ಇದೆ. ಈ ದೆಸೆಯಲ್ಲಿ ಹಾಲಕೆರೆ ಅನ್ನದಾನೀಶ್ವರ ಸಂಸ್ಥಾನಮಠವು ನಾಡಿನ ರೈತರಲ್ಲಿ ಜಾಗೃತಿ ಮೂಡಿಸಿ ಅವರಲ್ಲಿ ಆತ್ಮಸ್ಥೈರ್ಯ ತುಂಬಲು ಹಗಲಿರುಳು ಶ್ರಮಿಸುತ್ತಿದೆ ಎಂದ ಅವರು, ಸಾವಯವ ಗೊಬ್ಬರ ಬಳಕೆ, ಜೈವಿಕ ಇಂಧನದ ಅವಶ್ಯಕತೆ ಕುರಿತು ಜಾಗೃತಿ ಮೂಡಿಸುವ ಸಲುವಾಗಿ 261 ಚಕ್ಕಡಿಗಳ ಮೂಲಕ ಕೈಗೊಂಡ ಚಕ್ಕಡಿ ಯಾತ್ರೆಯು ಅತ್ಯಂತ ಪರಿಣಾಮಕಾರಿಯಾಗಿ ಯಶಸ್ವಿಯಾಗಿದೆ ಎಂದರು.
ಗ್ರಾಮದಲ್ಲಿ ಸಾಮೂಹಿಕ ಸೇರಿ ಒಟ್ಟು 3 ತುಲಾಭಾರಗಳನ್ನು ಶ್ರೀಗಳಿಗೆ ಸಮರ್ಪಿಸಲಾಯಿತು. ಈ ತುಲಾಭಾರದಿಂದ ಬಂದ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇಟ್ಟು ಅದರಿಂದ ಬಂದ ಬಡ್ಡಿಯಲ್ಲಿ ನಾಡಿನ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ಬಳಸಲಾಗುವುದು ಎಂದು ಶ್ರೀಗಳು ಹೇಳಿದರು. ನಿಡಗುಂದಿಕೊಪ್ಪದ ಶಿವಬಸವ ಸ್ವಾಮಿಗಳು, ಯಲಬುರ್ಗಾದ ಬಸವಲಿಂಗ ಶಿವಾಚಾರ್ಯ ಸ್ವಾಮಿಗಳು, ಜಿಗೇರಿಯ ಗುರು ಸಿದ್ಧಶಿವಾಚಾರ್ಯ ಸ್ವಾಮಿಗಳು ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಉಪನ್ಯಾಸಕ ಎನ್.ಎಸ್. ಹೊನ್ನೂರ ಮಾತನಾಡಿದರು. ಎಸ್.ಜಿ. ಹಿರೇಮಠ ಬಸವರಾಜ ಮೂಲಿಮನಿ, ಆರ್.ಕೆ. ಬಾಗವಾನ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

