ಸೌಲಭ್ಯ ಕೊರತೆಗೆ ಅನಕ್ಷರತೆ ಕಾರಣ
ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಫೆ. 2
ಇಂದಿನ ತಂತ್ರಜ್ಞಾನ ಯುಗದಲ್ಲಿ ಆಕಾಶದಲ್ಲಿ ಚಲಿಸುವುದು, ಗ್ರಹಗಳ ಮೇಲೆ ಹತೋಟಿ ಸಾಧಿಸುವುದು. ಏನೆಲ್ಲ ಮಾಡಿದ್ದರೂ ಭೂಮಿ ಮೇಲಿರುವ ನೀರು, ರಸ್ತೆ, ವಸತಿ, ಆರೋಗ್ಯ ಮೊದಲಾದ ಸಮಸ್ಯೆಗಳು ಹೆಚ್ಚಾಗವುದಕ್ಕೆ ಶಿಕ್ಷಣದ ಕೊರತೆ ಕಾರಣವಾಗಿದ್ದು, ಮೌಲ್ಯಾಧಾರಿತ ಶಿಕ್ಷಣ ನೀಡಬೇಕಾಗಿದೆ ಎಂದು ಆನ್ಮೂಲ್ ಶಿಕ್ಷಣ ಸಂಸ್ಥೆ ನಿರ್ದೇಶಕ ಸಿ.ಜಿ. ದಿನೇಶ ಕರೆ ನೀಡಿದರು.
ರಟ್ಟಿಹಳ್ಳಿಯ ಶಾಂತಿಸಾಗರದ ತರಳಬಾಳು ಜ. ವಿದ್ಯಾಸಂಸ್ಥೆಯ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮಕ್ಕಳ ಉತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಪಾಲಕರು ಮಕ್ಕಳಿಗೆ ಅಂಕ ಗಳಿಸುವಂತೆ ಒತ್ತಡ ಹಾಕದೆ, ಅವರಿಗೆ ಉತ್ತಮ ಸಂಸ್ಕಾರ ರೂಪಿಸಿಕೊಂಡು ಜೀವನ ನಡೆಸುವುದನ್ನು ಮಕ್ಕಳು ನೋಡಿ ಕಲಿಯಬಲ್ಲರು. ಕಾರಣ ಪೋಷಕರು ಮೊದಲು ಸುಸಂಸ್ಕೃತರಾಗಬೇಕು. ನಿತ್ಯ ಜೀವನದಲ್ಲಿ ಶಿಸ್ತು, ಪ್ರಾಮಾಣಿಕತೆ ಮೊದಲಾದ ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಕೇಂದ್ರ ಸಮಿತಿ ನಿರ್ದೇಶಕ ಎಸ್.ಎಸ್. ಪಾಟೀಲ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಆಂಗ್ಲ ಮಾಧ್ಯಮ ಶಿಕ್ಷಣ ಸಿಗುವಂತಾಗಲು ಶಿರಿಗೆರೆ ಶ್ರೀಗಳು ಇಲ್ಲಿ ಶಾಲೆ ಆರಂಭಿಸಿ ಭವ್ಯ ಕಟ್ಟಡ ಕಟ್ಟಿದ್ದಾರೆ. ಮಂದಿನ ವರ್ಷದಲ್ಲಿ ಮಕ್ಕಳಿಗೆ ಪದವಿಪೂರ್ವ ಶಿಕ್ಷಣ ನೀಡುವಂತಾಗಲು ಕಾಲೇಜು ಶಿಕ್ಷಣ ಆರಂಭಿಸಲಾಗುವುದು ಎಂದು ತಿಳಿಸಿದರು.
ತರಳಬಾಳು ಶಾಲೆಯ ಅಧ್ಯಕ್ಷ ಬಿ.ಎಸ್. ಸಣ್ಣಗೌಡ್ರ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯೋಪಾಧ್ಯಾಯ ಡಿ.ಕೆ. ಸಂದಾನಂದಪ್ಪ, ಕರ್ನಾಟಕ ಬ್ಯಾಂಕಿನ ವ್ಯವಸ್ಥಾಪಕ ಗುರುರಾಜ, ಶಾಲೆ ಮುಖ್ಯೋಪಾಧ್ಯಾಯ ಎಂ.ಡಿ. ಶಿಮಿಕೇರಿ ಹಾಗೂ ಆಡಳಿತ ಮಂಡಳಿ ನಿರ್ದೇಶಕರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಬ್ಯಾಂಕಿನಿಂದ ಕುಡಿಯುವ ನೀರಿನ ಫಿಲ್ಟರ್ ಶಾಲೆಗೆ ಕೊಡುಗೆಯಾಗಿ ನೀಡಿದರು. ಶಾಲೆಯ ವಿದ್ಯಾರ್ಥಿಗಳಿಂದ ಮನರಂಜನೆ ಕಾರ್ಯಕ್ರಮಗಳು ಜರುಗಿದವು.
ಡಿಸ್ಕೋ ಸಂಸ್ಕೃತಿಯಿಂದ ಮಕ್ಕಳ ಕಾರ್ಯಕ್ರಮ: ತರಳಬಾಳು ವಿದ್ಯಾಸಂಸ್ಥೆಯು ಶಿವ ತತ್ವಾಧಾರಿತವಾಗಿದ್ದು, ಶ್ರೀಗಳು ನಾಡಿನೆಲ್ಲೆಡೆ ಅಧ್ಯಾತ್ಮದಂತಹ ಮಾನವೀಯ ಗುಣ ಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ತರಳಬಾಳು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕ್ಯಾಸೆಟ್ ಡ್ಯಾನ್ಸ್ಗಳಿಂದ ಇಂಗ್ಲಿಷ್ ಹಿಂದಿ ಚಲನಚಿತ್ರ ಗೀತೆಗಳು ರಾರಾಜಿಸಿ ಪೋಷಕರ ಮನಸೂರೆಗೊಂಡವು. ಶಾಲೆಯ ಶಿಕ್ಷಕರು ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಲು ಭಾವಗೀತೆ, ಭಕ್ತಿಗೀತೆ, ಜಾನಪದ ಗೀತೆ, ಲಾವಣಿ, ಕೋಲಾಟ , ಸಾಮೂಹಿಕ ಜಾನಪದ ನೃತ್ಯ, ಏಕ ಪಾತ್ರಾಭಿನಯ ಮಹಾಭಾರತ ಹಾಗೂ ರಾಮಾಯಣದಲ್ಲಿರುವ ನಾಟಕಗಳನ್ನು ಕಲಿಸಿ ಅವುಗಳನ್ನು ರಂಗದ ಮೇಲೆ ಮಾಡಿಸುವುದನ್ನು ಬಿಟ್ಟು ದುಬಾರಿ ಹಣ ತೆತ್ತು ಡ್ಯಾನ್ಸ್ ಕಲಿಸುವುದರ ಮೂಲಕ ಸಂಸ್ಕೃತಿಯ ಬದಲು ವಿಕೃತಿ ಕಲಿಸಿರುವುದು ಸರಿಯಲ್ಲ ಎಂದು ಪೋಷಕರು ದೂರಿದರು.
ಇನ್ನಾದರೂ ಶಾಲೆಯ ಆಡಳಿತ ಮಂಡಳಿ ವ್ಯಾಪಾರಿ ಸಂಸ್ಕೃತಿ ಕೈಬಿಟ್ಟು ಉತ್ತಮ ಸಂಸ್ಕೃತಿಯನ್ನು ಬೀರುವ ಕಾರ್ಯಕ್ರಮಗಳನ್ನು ಕಲಿಸಬೇಕೆಂದು ಮನವಿ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

