ಶೋಷಿತ ವರ್ಗದ ವೇದನೆಯೇ ದಲಿತ ಸಾಹಿತ್ಯ
ಹಾವೇರಿ: ಶತಮಾನಗಳಿಂದ ಸಾಮಾಜಿಕ ವ್ಯವಸ್ಥೆಯಲ್ಲಿ ಅಸ್ಪೃಶ್ಯತೆ, ಜಾತಿ ಕ್ರೌರ್ಯ, ದಬ್ಬಾಳಿಕೆ, ಮೂಢನಂಬಿಕೆ, ಕಂದಾಚಾರ, ಪುರೋಹಿತಶಾಹಿ, ಬಂಡವಾಳಶಾಹಿಗಳ ಕಪಿಮುಷ್ಟಿಯಲ್ಲಿ ಸಿಕ್ಕು ನರಳಿದ ಶೋಷಿತ ವರ್ಗದ ವೇದನೆಯ ಧ್ವನಿಯೇ ದಲಿತ ಸಾಹಿತ್ಯ ಎಂದು ಅಹಿಂದ ಮುಖಂಡ, ಚಿಂತಕ ಬಸವರಾಜ ಪೇಲನವರ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಜಿಲ್ಲಾ ದಲಿತ ಸಾಹಿತ್ಯ ಪರಿಷತ್ ಘಟಕ ಆಯೋಜಿಸಿದ್ದ ದಸಾಪ 17ನೇ ಸಂಸ್ಥಾಪನಾ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದಲಿತ ಸಾಹಿತ್ಯ ಎಂದಿಗೂ ಬತ್ತದ ಗಂಗೆ. ಮೊಗೆದಷ್ಟು, ಬರೆದಷ್ಟು, ನಿರಂತರವಾಗಿ ನೀರು ಚಿಮ್ಮುವ ವರತೆ ಇದ್ದಂತೆ. ಅದು ನೊಂದವರ, ದೀನ ಪರಿಸ್ಥಿತಿಯಲ್ಲಿರುವ ಸಹಜ ಚಿತ್ರಣ. ದಲಿತ ಸಾಹಿತ್ಯಕ್ಕೆ ತನ್ನದೇ ಆದ ವಿಶಿಷ್ಟತೆಯಿದ್ದು, ಸಾಮಾನ್ಯ ಸಾಹಿತ್ಯವಾಗಿರದೇ ಅದು ಓದುಗರಿಗೆ ರುಚಿಸುತ್ತದೆಯೋ ಇಲ್ಲವೋ, ಆದರೆ ತನ್ನ ಒಡಲಾಳದ, ದಿಕ್ಕೆಟ್ಟ ಬದುಕಿನ ಚಹರೆಗಳನ್ನು ಹೇಳುವ ಕಥನ ವೇದಿಕೆಯಾಗಿರುತ್ತದೆ ಎಂದು ಹೇಳಿದರು.
ಸಮಾಜದ ವಾಸ್ತವವನ್ನು ತೆರೆದಿಡುವ ಪ್ರಯತ್ನ ಬಂಡಾಯ ಸಾಹಿತ್ಯದಿಂದ ಹೊರಹೊಮ್ಮುತ್ತದೆ. ತಬ್ಬಲಿಗಳು, ದಿಕ್ಕೆಟ್ಟವರು, ಅತಂತ್ರ ಸ್ಥಿತಿಯಲ್ಲಿ ನರಳುವವರು, ಅನಾಥರು ರಚಿಸಿದ ಸಾಹಿತ್ಯವೇ ಶ್ರೇಷ್ಠ ಸಾಹಿತ್ಯ. ಜೀವನದಲ್ಲಿ ಗೆದ್ದವನಿಗೆ ಸಿಗುವ ಭಾಷೆ ತುಂಬ ಕಡಿಮೆ. ಆತನ ಅನುಭವಗಳನ್ನು ಹಂಚಿಕೊಳ್ಳಲು ಹೆಚ್ಚು ಪದಗಳೇ ಬೇಕಾಗುವುದಿಲ್ಲ. ಆದರೆ, ಜೀವನದಲ್ಲಿ ಸೋತು ಸುಣ್ಣವಾಗಿರುವ, ದುಃಖದಲ್ಲಿ ಜೀವಿಸುತ್ತಿರುವವನ ಅನುಭವ ಅಪಾರ. ಆತನ ದನಿ ಒಂದೇಸಮನೆ ಹೊರಹೊಮ್ಮುತ್ತದೆ. ಅಲ್ಲಿಯ ಧ್ವನಿಗೆ ಹೆಚ್ಚು ಪ್ರಾಮುಖ್ಯತೆಯಿರುತ್ತದೆ, ದುಃಖವೇ ನಿಜವಾದ ಸಾಹಿತ್ಯವನ್ನು ತೋರಿಸುವ ಆಲೋಚನಾಶಕ್ತಿಯಾಗಿದೆ ಎಂದು ಪೇಲನವರ ಹೇಳಿದರು. ಜಿಲ್ಲಾ ದಸಾಪ ಅಧ್ಯಕ್ಷ, ಸಾಹಿತಿ ಮಾಲತೇಶ ಅಂಗೂರ ಮಾತನಾಡಿ, ಸಂಸ್ಕೃತದ ಕಪಿಮುಷ್ಟಿಯಿಂದ ಹೊರಬಂದು ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯ ವಚನಗಳನ್ನು ರಚಿಸಿದ ಬಸವಣ್ಣ ಹಾಗೂ ವಚನಕಾರರು ನಿಜಕ್ಕೂ ಸಮಾಜ ಸುಧಾರಣೆಗಾಗಿ ಶ್ರಮಿಸಿದರು. ಆಡು ಭಾಷೆಯಲ್ಲೇ ವಚನಗಳನ್ನು ರಚಿಸಿ ಸಮಾಜದ ಏಕತೆಗೆ ಮುಂದಾದವರು. ಸಮಾಜದ ಸಮಾನತೆಯನ್ನು ಸಾರಿದ ವಚನ ಸಾಹಿತ್ಯ ಇಡೀ ಪ್ರಪಂಚದಲ್ಲೇ ಮತ್ತೆಲ್ಲೂ ರೂಪಗೊಂಡಿಲ್ಲ. ಇದುವೇ ಸರ್ವಶ್ರೇಷ್ಠ ಎಂದರು.
ಶಾಹೀದ್ ದೇವಿಹೊಸೂರ ಸ್ವಾಗತಿಸಿದರು. ಪ್ರಾಚಾರ್ಯ ಕೃಷ್ಣ ಜವಳಿ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

