ಹೆಣ್ಣು ಸಂಸ್ಕೃತಿಯಾಗಬೇಕೇ ಹೊರತು ವಿಕೃತಿ ಆಗಬಾರದು
ಸಂತ ಶಿಶುನಾಳ ಷರೀಫ ಮಹಾವೇದಿಕೆ, ಶಿಗ್ಗಾಂವಿ: ಮಹಿಳೆ ಪ್ರಕೃತಿ, ತಾಯಿ ಸಂಸ್ಕತಿ. ಇವೆರಡೂ ಇಲ್ಲದ ಸಮಾಜವೇ ವಿಕೃತಿ. ವಿಕೃತಿಯಿಂದಲೇ ಇಂದು ಮಹಿಳೆಯರ ಸಂಖ್ಯೆ ಕಡಿಮೆಯಾಗುತ್ತಿದೆ. ಸಮಾಜದ ಮೌಲ್ಯಗಳು ನೆಲಕಚ್ಚುತ್ತಿವೆ. ಈ ದುಸ್ಥಿತಿಗೆ ಪುರುಷರೇ ಕಾರಣ ಎಂದು ಮಹಿಳೆಯರು ಪುರುಷ ದ್ವೇಷಿಯಾಗುವುದು ಸರಿಯಲ್ಲ ಎಂದು ಖ್ಯಾತ ವೈದ್ಯರೂ ಹಾಗೂ ಲೇಖಕಿ ಡಾ. ವಿಜಯಲಕ್ಷ್ಮೀ ಬಾಳೇಕುಂದ್ರಿ ಹೇಳಿದರು.
ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಶುಕ್ರವಾರ ಸಮಾಜ ಮತ್ತು ಮಹಿಳೆ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು. ತಾಯಿಯೇ ದೇವರು. ನಾವು ದೇವರನ್ನು ಹುಡುಕಲು ಬೇರೆಲ್ಲೂ ಹೋಗಬೇಕಿಲ್ಲ. ಆದರೆ, ಇಂದು ತಾಯಿಗಿಂತಲೂ ಹಣಕ್ಕೆ ಪ್ರಾಮುಖ್ಯತೆ ಹೆಚ್ಚಾಗುತ್ತಿದೆ. ಪುತ್ರ ವಾತ್ಸಲ್ಯದಲ್ಲಿ ಬಿದ್ದು ತಂದೆ ಆತನ ತಪ್ಪು ನೋಡಿಯೂ ಸುಮ್ಮನಿರುತ್ತಿದ್ದಾನೆ. ತಾಯಿ ಗಾಂಧಾರಿಯಾಗುತ್ತಿರುವುದು ದುರಂತ. ಆದರೆ ಆ ಮಕ್ಕಳಿಗೆ ಅಂತಃಕರಣ ಇಲ್ಲವಾಗುತ್ತಿದೆ. ಇದಕ್ಕೆ ಮಕ್ಕಳನ್ನೇ ದೂರುವುದು ಸರಿಯಲ್ಲ. ಇಂದು ಮಿಂಡರಿಗಾಗಿ ಗಂಡನನ್ನೇ ಸುಪಾರಿ ಕೊಟ್ಟು ಕೊಲ್ಲಿಸುವ ಪರಿಸ್ಥಿತಿ ಬಂದಿದೆ. ಇಂಥ ಮಹಿಳೆ ಸಮಾಜಕ್ಕೆ ಬೇಕಾಗಿಲ್ಲ ಎಂದು ಹೇಳಿದರು. ಪಾಶ್ಚಾತ್ಯ ಸಂಸ್ಕೃತಿ ನಮ್ಮ ಸಂಸ್ಕೃತಿಯನ್ನು ಹಾಳು ಮಾಡುತ್ತಿದೆ. ಮಹಿಳೆಯರಿಗೆ ಮಾಡಲು ಬೇಕಾದಷ್ಟು ಕೆಲಸವಿದ್ದರೂ ಟೀವಿಗಳ ಮುಂದೆ ಕೂರುತ್ತಿದ್ದಾರೆ. ಎಲ್ಲದಕ್ಕೂ ಪುರುಷರನ್ನೇ ದೂರುವುದು ಸರಿಯಲ್ಲ. ಕಾರಣವಿಲ್ಲದೇ ಯಾರಲ್ಲೂ ವೈರತ್ವ ಬೇಡ. ಕಣ್ಣು ಚಿಕ್ಕದಾದರೂ ನಾವು ನೋಡುವ ದೃಷ್ಟಿಕೋನ ವಿಶಾಲವಾಗಿರಬೇಕು. ಸರ್ವಶಕ್ತಳಾಗಿರುವ ಹೆಣ್ಣನ್ನು ಹುಟ್ಟುವ ಮೊದಲೇ ಚಿವುಟಬಾರದು. ಮುಂದೆ ಗಂಡಿಗೆ ಹೆಣ್ಣು ಸಿಗದ ಕಾಲ ಬರಬಹುದು. ಭಗವಂತನ ಹೆಸರಿನಲ್ಲಿ ನೀಚ ಕೆಲಸವಾಗುತ್ತಿದೆ. ಗಂಡಸರು ಮಾಡುವ ಎಲ್ಲ ಕೆಲಸ ಮಹಿಳೆ ಮಾಡಬಹುದು. ಆದರೆ ಮಕ್ಕಳನ್ನು ಹೆರುವ, ಸಲಹುವ ಕೆಲಸ ಪುರುಷರಿಂದ ಸಾಧ್ಯವಿಲ್ಲ ಎಂದು ಹೇಳಿದರು.
ಅರಿಷಡ್ವರ್ಗ ತೊರೆದರೆ ಉತ್ತಮ ಜೀವನ: ನಮ್ಮ ಮನಸ್ಸಿನಲ್ಲಿನ ಅರಿಷಡ್ವರ್ಗ ತೆಗೆದುಹಾಕಿದರೆ ಉತ್ತಮ ಜೀವನ ನಡೆಸಬಹುದು. ಸೊಕ್ಕು, ಸೇಡು, ಸಿಟ್ಟು, ಉಪ್ಪು, ಬೇಕರಿ ಖಾದ್ಯ, ಸಕ್ಕರೆ ಇವೇ ಆಧುನಿಕ ಅರಿಷಡ್ವರ್ಗಗಳಾಗಿವೆ. ಸಕ್ಕರೆ ಬಿಟ್ಟು ಬೆಲ್ಲ ಉಪಯೋಗಿಸಲು ಮಹಿಳೆಯರು ಇಂದಿನಿಂದಲೇ ಆರಂಭಿಸಬೇಕು. ಕಡಿಮೆ ಉಪ್ಪು ಬಳಸಿ ಸಿಟ್ಟು, ಸೇಡು, ಸೊಕ್ಕು ಕಡಿಮೆ ಮಾಡಬೇಕು. ಇದರಲ್ಲಿ ಗೆದ್ದರೆ ಅರಿಷಡ್ವರ್ಗ ಗೆದ್ದಂತೆ ಎಂದು ಹೇಳಿದರು. ನಮ್ಮದು ಪುರುಷ ಪ್ರಧಾನ ಎಂದು ಹೇಳುತ್ತೇವೆ. ಗಂಡಸರ ಸಾಮೂಹಿಕ ಬಲತ್ಕಾರ ಸಮಾಜ ತಲೆತಗ್ಗಿಸುವಂತಾಗಿದೆ. ಹೆಣ್ಣು ಮಕ್ಕಳ ಪರವಾಗಿದ್ದೇವೆ ಎಂಬುದನ್ನು ಎಲ್ಲ ಮಹಿಳೆ ತೋರಿಸಿಕೊಡಬೇಕು.
ಶರಣ ಸಂಸ್ಕೃತಿಯಂತೆ ಗಂಡು- ಹೆಣ್ಣು ಒಂದಾಗಿ ಬದುಕಿ ಶಿವಭಕ್ತರಾಗುವುದು ಅಗತ್ಯ. ನಮ್ಮ ಸಂಸ್ಕೃತಿ ಎತ್ತಿ ಹಿಡಿಯಬೇಕಾದವರು ನಾವು. ಅದನ್ನು ಗೌರವಿಸಬೇಕಾದವರು ಬೇರೆಯವರಾಗಬೇಕು. ಶರಣ ಸಂಸ್ಕೃತಿ ಬಿಟ್ಟು ನಾವಿಂದು ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿರುವುದು, ಹೆಣ್ಣಿನ ಶೋಷಣೆ, ಅತ್ಯಾಚಾರ ಮಾಡುತ್ತಿರುವುದು ದುರಂತ. ಶರಣ ಸಂಸ್ಕೃತಿಯೇ ನಮಗೆ ಮಾರ್ಗದರ್ಶನವಾಗಬೇಕು. ಅರ್ಧನಾರೀಶ್ವರನೇ ಮಾದರಿಯಾಗಬೇಕು. ಸಮಾಜ ಒಡೆಯುವ ಕೆಲಸಕ್ಕೆ ಮಹಿಳೆ ಮುಂದಾಗಬಾರದು. ಸಮಾಜವನ್ನು ಕಟ್ಟುವ ಕೆಲಸ ಮಹಿಳೆಯರಿಂದಾಗಬೇಕು ಎಂದು ಡಾ. ವಿಜಯಲಕ್ಷ್ಮೀ ಬಾಳೇಕುಂದ್ರಿ ಹೇಳಿದರು.
ಸಿರಿಗೆರೆ ತರಳಬಾಳು ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾಣೇಹಳ್ಳಿ, ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ, ಶಿರಹಟ್ಟಿ ಫಕ್ಕೀರೇಶ್ವರ ಮಠದ ಜಗದ್ಗುರು ಫಕ್ಕೀರ ಸಿದ್ದರಾಮ ಸ್ವಾಮೀಜಿ, ಶಾಸಕ ಬಸವರಾಜ ಬೊಮ್ಮಾಯಿ, ಶಾಸಕ ರುದ್ರಪ್ಪ ಲಮಾಣಿ, ದಾವಣಗೆರೆ ವಿವಿ ಕುಲಪತಿ ಬಿ.ಬಿ. ಕಲಿವಾಳ, ಅರವಿಂದ ಜತ್ತಿ ಇತರರು ಇದ್ದರು.
ಪಾಶ್ಚಾತ್ಯ ಸಂಸ್ಕೃತಿ ನಮ್ಮ ಸಂಸ್ಕೃತಿಯನ್ನು ಹಾಳು ಮಾಡುತ್ತಿದೆ. ಮಹಿಳೆಯರಿಗೆ ಮಾಡಲು ಬೇಕಾದಷ್ಟು ಕೆಲಸವಿದ್ದರೂ ಟೀವಿಗಳ ಮುಂದೆ ಕೂರುತ್ತಿದ್ದಾರೆ. ಎಲ್ಲದಕ್ಕೂ ಪುರುಷರನ್ನೇ ದೂರುವುದು ಸರಿಯಲ್ಲ. ಕಾರಣವಿಲ್ಲದೇ ಯಾರಲ್ಲೂ ವೈರತ್ವ ಬೇಡ. ಕಣ್ಣು ಚಿಕ್ಕದಾದರೂ ನಾವು ನೋಡುವ ದೃಷ್ಟಿಕೋನ ವಿಶಾಲವಾಗಿರಬೇಕು.
ಡಾ. ವಿಜಯಲಕ್ಷ್ಮೀ ಬಾಳೇಕುಂದ್ರಿ, ಲೇಖಕಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

