ಹಾವೇರಿ

20ರಂದು ಕಳಪೆ ಬೀಜ ಕಂಪನಿ ವಿರುದ್ಧ ಪ್ರತಿಭಟನೆ

Published On :

ಹಾವೇರಿ:  ಕಳಪೆ ಬಿಟಿ ಹತ್ತಿ ಬೀಜ ಮಾರಿದ ಬೀಜ ಕಂಪನಿಯನ್ನು ರಾಜ್ಯದಿಂದಲೇ ತೊಲಗಿಸಬೇಕು ಹಾಗೂ ಹಾನಿಗೊಳಗಾದ ರೈತರಿಗೆ ಯೋಗ್ಯ ಬೆಲೆ ನೀಡಲು ಒತ್ತಾಯಿಸಿ ಫೆ. 20ರಂದು ಮೊಟೆಬೆನ್ನೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ತಿಳಿಸಿದರು.
ಕಳಪೆ ಬಿಟಿ ಹತ್ತಿ ಬೀಜದಿಂದಾದ ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಲು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಕಳೆದ 13 ದಿನಗಳಿಂದ ವಿವಿಧ ರೀತಿಯಲ್ಲಿ ಪ್ರತಿಭಟನೆ, ಧರಣಿ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಜಿಲ್ಲಾಧಿಕಾರಿ ಕಚೇರಿ ಎದುರಿನ ಧರಣಿ ಕೈಬಿಟ್ಟು, ಈ ಹೋರಾಟ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಕಾಶ ಹುಕ್ಕೇರಿ ಈ ಹಿಂದೆ ಧರಣಿ ಸ್ಥಳಕ್ಕೆ ಭೇಟಿ ನೀಡಿ, ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಹಾಗೂ ಕೃಷಿ ಸಚಿವರೊಂದಿಗೆ ಚರ್ಚಿಸಿ ಈ ಸಮಸ್ಯೆ ಬಗೆಹರಿಸಿಕೊಳ್ಳೋಣ. ಮುಖಂಡರು ಬೆಂಗಳೂರಿಗೆ ಬನ್ನಿ ಎಂದು ಆಹ್ವಾನ ನೀಡಿದ್ದರು. ಅಂತೆಯೇ ಮುಖಂಡರು ಬೆಂಗಳೂರಿಗೆ ಹೋಗಿದ್ದೆವು. ಅಲ್ಲಿ ತಮ್ಮನ್ನು ಕರೆದಿದ್ದ ಜಿಲ್ಲಾ ಉಸ್ತುವಾರಿ ಸಚಿವರೇ ಇರಲಿಲ್ಲ. ಅಲ್ಲಿ ಕೃಷಿ ಬಜೆಟ್ ಪೂರ್ವಭಾವಿಯಾಗಿ ಕರೆದ ರೈತರ ಸಭೆಯಾಗಿದ್ದು, ಕಳಪೆ ಬಿಟಿ ಹತ್ತಿ ಬೀಜದ ಬಗ್ಗೆ ಪ್ರಸ್ತಾಪವೇ ಆಗಲಿಲ್ಲ. ಸಭೆ ಬಳಿಕ ಕೃಷಿ ಸಚಿವರಲ್ಲಿ ಚರ್ಚಿಸಿದಾಗ, ಈಗಾಗಲೇ ಹೆಕ್ಟೇರ್‌ಗೆ ರು. 4500 ಪರಿಹಾರ ಘೋಷಿಸಲಾಗಿದೆ. ಇನ್ನೂ ಹೆಚ್ಚು ಬೇಕೆಂದರೆ ನ್ಯಾಯಾಲಯಕ್ಕೆ ಹೋಗಿ ಎನ್ನುವ ಮೂಲಕ ಉದ್ಧಟತನ ತೋರಿದರು. ಮರುದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಭೇಟಿಯಾದಾಗ ಅವರು ಈ ಬಗ್ಗೆ ಇನ್ನೊಮ್ಮೆ ಕೃಷಿ ಸಚಿವರೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ. ಆದರೆ, ಅವರ ಭರವಸೆಯ ಮಾತಿನ ಮೇಲೆ ನಂಬಿಕೆ ಇಲ್ಲ. ಆದ್ದರಿಂದ ಫೆ. 20 ರಂದು ಬೃಹತ್ ಪ್ರತಿಭಟನೆ ನಡೆಸಿ ಹೆದ್ದಾರಿ ಬಂದ್ ಮಾಡಲು ತೀರ್ಮಾನಿಸಿದ್ದೇವೆ ಎಂದರು.
ಸಂಸದ ಉದಾಸಿ ಭೇಟಿ: ರೈತರ ಧರಣಿ ಶುರುವಾಗಿ 13 ದಿನಗಳಾದರೂ ಬಾರದ ಜನಪ್ರತಿನಿಧಿಗಳ ವಿರುದ್ಧ ರೈತರು ಧಿಕ್ಕಾರ ಕೂಗಿದರು. ಕೊನೆಯ ದಿನವಾದ ಶನಿವಾರ ಮಧ್ಯಾಹ್ನ ಸ್ಥಳಕ್ಕೆ ಭೇಟಿ ನೀಡಿದ ಸಂಸದ ಶಿವಕುಮಾರ ಉದಾಸಿ ವಿರುದ್ಧವೂ ರೈತರು ಧಿಕ್ಕಾರ ಕೂಗಿದರು. ವಿಳಂಬವಾಗಿ ಭೇಟಿಯಾಗಿದ್ದಕ್ಕೆ ಸಂಸದ ಶಿವಕುಮಾರ ಉದಾಸಿ ರೈತರ ಕ್ಷಮೆಯಾಚಿಸಿದರು. ತಾವು ಸದಾ ರೈತರಪರವಾಗಿದ್ದು, ಅದಕ್ಕಾಗಿ ಸಿಕ್ಕ ಎಲ್ಲ ವೇದಿಕೆಗಳಲ್ಲಿ ಚರ್ಚಿಸಿದ್ದೇನೆ. ಕಳಪೆ ಹತ್ತಿ ಬೀಜದಿಂದಾದ ಹಾನಿಗೆ ಈಗ ಸರ್ಕಾರ ಘೋಷಿಸಿರುವ ರು. 4500 ಗಿಂತ ಹೆಚ್ಚಿನ ಪರಿಹಾರ ನೀಡುವಂತೆ ಸ್ವತಃ ಕೃಷಿ ಸಚಿವರಲ್ಲಿ ಕೋರಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.