ಕಾಂಗ್ರೆಸ್ನವರಿಗೆ ಬಡವರಬಗ್ಗೆ ಮಾತನಾಡುವ ಚಪಲ
ಹಾನಗಲ್ಲ: ಭಯೋತ್ಪಾದನೆ ನಿಯಂತ್ರಿಸಲಾಗದೆ, ಬೃಹತ್ ಹಗರಣಗಳನ್ನು ಹುಟ್ಟುಹಾಕಿದ ಕಾಂಗ್ರೆಸ್ಗೆ ಈಗ ಬಡವರ ಬಗ್ಗೆ ಮಾತನಾಡುವ ಚಪಲ ಆರಂಭವಾಗಿದೆ ಎಂದು ಮಾಜಿ ಸಚಿವ, ಬಿಜೆಪಿ ನಾಯಕ ಸಿ.ಎಂ. ಉದಾಸಿ ಹೇಳಿದರು.
ಮಂಗಳವಾರ ಹಾನಗಲ್ಲಿನ ಉದಾಸಿ ಸಾವಿತ್ರಮ್ಮ ಕಲ್ಯಾಣ ಮಂಟಪದಲ್ಲಿ ನಡೆದ ಬಿಜೆಪಿ ಪೂರ್ವಭಾವಿ ಕಾರ್ಯಕರ್ತರ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರ ಜನಪರ ಆಡಳಿತ ನೀಡಿ ರೈತರು ಜನಸಾಮಾನ್ಯರನ್ನು ತಲುಪಿ, ಅಭಿವೃದ್ಧಿಯ ಶಕೆಯನ್ನೇ ಆರಂಭಿಸಿತು. ವಾಜಪೇಯಿ ಸರ್ಕಾರವೇ 2004ರಲ್ಲಿ ಪುನರ್ ಆಯ್ಕೆಯಾಗಿದ್ದರೆ ಈ ದೇಶ ಇಂತಹ ದುಸ್ಥಿತಿ ಅನುಭವಿಸುತ್ತಿರಲಿಲ್ಲ. ಯಾವುದೋ ಕಾರಣಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬಂದು ದೇಶ ಆರ್ಥಿಕ ಸಂಕಷ್ಟವನ್ನು ಎದುರಿಸುವಂತಾಗಿದೆ. ರೈತನ ಬೆಳೆಗೆ ನ್ಯಾಯಯುತ ಬೆಲೆ ಇಲ್ಲ. ಬೃಹತ್ ಹಗರಣಗಳನ್ನೇ ಹೊತ್ತ ಕಾಂಗ್ರೆಸ್ ದಿನದಿಂದ ದಿನಕ್ಕೆ ರೈತರು ಬಡವರ ಪರ ಮಾತನಾಡಲು ಆರಂಭಿಸಿರುವುದು ಚುನಾವಣಾ ತಂತ್ರವಷ್ಟೇ ಎಂದು ಆರೋಪಿಸಿದರು.
ಭಾರತದ ಪ್ರಧಾನಿಯಾಗಬೇಕೆಂದು ನರೇಂದ್ರ ಮೋದಿ ಅವರನ್ನು ಇಡೀ ದೇಶವೇ ಅಪೇಕ್ಷಿಸಿದೆ. ಗುಜರಾತ ಮುಖ್ಯಮಂತ್ರಿಯಾಗಿ ಮೂರು ಅವಧಿಗಳ ಕಾಲ ಜಗತ್ತೇ ಪ್ರಶಂಸಿಸುವಂತೆ ಆಡಳಿತ ನೀಡಿದ ಮೋದಿ ಈ ದೇಶದ ಪ್ರಧಾನಿಯಾಗುವುದು ಖಚಿತ. ಸುಭದ್ರ ರಾಷ್ಟ್ರಕಟ್ಟುವ ಅಭಿವೃದ್ಧಿಯನ್ನೇ ಮೂಲಮಂತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿಸಲು ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುವುದು ಅಗತ್ಯ ಎಂದ ಉದಾಸಿ, ಯುವ ಪೀಳಿಗೆಯ ಭವಿಷ್ಯಕ್ಕೆ ನರೇಂದ್ರ ಮೋದಿ ಅತ್ಯುತ್ತಮ ಸರ್ಕಾರ ನೀಡಬಲ್ಲರು ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಭೋಜರಾಜ ಕರೂದಿ ಮಾತನಾಡಿ, ಮತವಿಭಜನೆಯಿಂದಾಗಿ ಅಧಿಕಾರ ಕಳೆದುಕೊಂಡ ಹಿಂದಿನ ಬಿಜೆಪಿ ಸರ್ಕಾರದಲ್ಲಿದ್ದ ನಾಯಕರಿಗೆ ತಪ್ಪಿನ ಅರಿವಾಗಿದೆ. ಈಗ ಎಲ್ಲರೂ ಸೇರಿ ದೇಶದಲ್ಲಿ ನರೇಂದ್ರ ಮೋದಿ ನೇತೃತ್ವದ ಆಡಳಿತಕ್ಕೆ ಶ್ರಮಿಸಬೇಕಾಗಿದೆ. ರಾಜ್ಯದಲ್ಲಿ ಪಕ್ಷ ಗಟ್ಟಿಯಾಗಬೇಕಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಪಕ್ಷದ ಸಂಘಟನೆ ಪ್ರಭಲವಾಗಬೇಕಾಗಿದೆ. ನರೇಂದ್ರ ಮೋದಿ ಪ್ರಧಾನಿಯಾಗುವುದಕ್ಕಾಗಿ ಬಿಜೆಪಿಗೆ ಪ್ರತಿಯೊಬ್ಬ ಮತದಾರ ಕಟಿಬದ್ಧನಾಗುವಂತೆ ಎಲ್ಲ ಕಾರ್ಯಕರ್ತರು ಶ್ರಮಿಸಿ ಎಂದರು.
ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ವೀರಪ್ಪ ನಿಂಬಣ್ಣನವರ, ತಾಪಂ ಉಪಾಧ್ಯಕ್ಷೆ ಅನಿತಾ ಶಿವೂರ, ಜಿಪಂ ಸದಸ್ಯರಾದ ಪದ್ಮನಾಭ ಕುಂದಾಪುರ, ಬಸವರಾಜ ಹಾದಿಮನಿ, ಗೀತಾ ಅಂಕಸಖಾನಿ, ಕಸ್ತೂರವ್ವ ವಡ್ಡರ, ಮಾಜಿ ಸದಸ್ಯರಾದ ಎಂ.ಆರ್. ಪಾಟೀಲ, ಕೃಷ್ಣಾ ಈಳಿಗೇರ, ರಾಜಣ್ಣ ಪಟ್ಟಣದ, ಎನ್.ಬಿ. ಪೂಜಾರ, ಎ.ಎಸ್. ಬಳ್ಳಾರಿ, ಬಿ.ಎಸ್. ಅಕ್ಕಿವಳ್ಳಿ, ಸಿದ್ಧಲಿಂಗಪ್ಪ ಶಂಕ್ರಿಕೊಪ್ಪ, ಕಲ್ಯಾಣಕುಮಾರ ಶೆಟ್ಟರ್, ಮಾಲತೇಶ ಸೊಪ್ಪಿನ, ವಿಕಾಸ ನಿಂಗೋಜಿ, ಗೀತಾ ಪೂಜಾರ, ಬಿ.ಎಸ್. ಕುಲಕರ್ಣಿ, ಬಸಣ್ಣ ಸಂಶಿ, ರತ್ನವ್ವ ಗುಡ್ಡದಮತ್ತಿಹಳ್ಳಿ, ನಂದಿನಿ ವಿರುಪಣ್ಣನವರ, ಎಸ್.ಎಚ್. ಕೋಟಿ, ಸುರೇಶ ರಾಯ್ಕರ, ಮಹ್ಮದಜಾಫರ್ ಕೇಣಿ, ಚನ್ನವೀರಸ್ವಾಮಿ ಹಿರೇಮಠ, ಗಣೇಶ ಮೂಡ್ಲಿಯವರ, ರವಿ ಕಲಾಲ, ಹಸೀನಾಬಿ ನಾಯಕನವರ, ಶಿವಲಿಂಗಪ್ಪ ತಲ್ಲೂರ ಇತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

