ಹಾವೇರಿ

ನ್ಯಾಯವಾದಿಗಳಿಗೆ ಸೇವಾಮನೋಭಾವ ಅಗತ್ಯ

Published On :

ಹಾನಗಲ್ಲ: ನ್ಯಾಯವಾದಿಗಳು ಸತ್ಸಮಾಜ ನಿರ್ಮಾಪಕರು. ಅಂಕು-ಡೊಂಕುಗಳನ್ನು ತಿದ್ದುವವರು. ಇದು ಹಣ ಮಾಡುವ ವೃತ್ತಿಯಲ್ಲ, ಸೇವಾ ಮನೋಭಾವನೆ ಬೇಕು. ನ್ಯಾಯಾಲಯ ಹಾಗೂ ನ್ಯಾಯಾಧೀಶರನ್ನು ಗೌರವದಿಂದ ಕಾಣಬೇಕು ಎಂದು ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ ಹೇಳಿದರು.
ಶನಿವಾರ ಸಂಜೆ ಹಾನಗಲ್ಲಿನ ತಾಲೂಕು ನ್ಯಾಯಾಂಗ ಮತ್ತು ನ್ಯಾಯವಾದಿಗಳ ಸಂಘದಿಂದ ಏರ್ಪಡಿಸಿದ ನೂತನ ವಕೀಲರ ಭವನದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಚಳವಳಿ ಹಾಗೂ ರಾಜಕಾರಣದಲ್ಲೂ ನ್ಯಾಯವಾದಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ರಾಜಕಾರಣದಲ್ಲಿ ವಕೀಲರ ಪಾಲ್ಗೊಳ್ಳುವಿಕೆ ಇಳಿಮುಖವಾಗುತ್ತಿದೆ ಎಂದರು.
ನ್ಯಾಯವಾದಿಗಳು ಕರ್ತವ್ಯ ಮರೆಯಬಾರದು. ಇದರಿಂದ ಕಕ್ಷಿದಾರನಿಗೆ ಅನ್ಯಾಯವಾಗುತ್ತದೆ. ಕಕ್ಷಿದಾರನ ಕಣ್ಣೀರು ಒರೆಸುವುದೆ ನ್ಯಾಯವಾದಿಗಳ ಪ್ರಾಮಾಣಿಕ ಧರ್ಮ. ಸಾಮಾಜಿಕ ಪಿಡುಗುಗಳನ್ನು ತೊಡೆದುಹಾಕಿ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಿ ಎಂದು ತಿಳಿಸಿದರು.
ಬೆಳಗಾವಿಯಲ್ಲಿ ಕರ್ನಾಟಕದ ಮೊಟ್ಟಮೊದಲ ಕಾನೂನು ಮಹಾವಿದ್ಯಾಲಯ ಆರಂಭವಾದಾಗ ಅದರ ಮಹತ್ವ ತಿಳಿದಿರಲಿಲ್ಲ. ಯುವ ನ್ಯಾಯವಾದಿಗಳು ಈ ಕಾಲೇಜಿನಿಂದ ಹೊರಬಂದಾಗ ಅದರ ಒಳ್ಳೆಯ ಪರಿಣಾಮ ಸಮಾಜದ ಅರಿವಿಗೆ ಬಂತು. ಯುವ ನ್ಯಾಯವಾದಿಗಳು ತಮ್ಮ ಕಕ್ಷಿದಾರನ ಸಮಸ್ಯೆಯನ್ನು ಸರಿಯಾಗಿ ಆಲಿಸಿ, ನ್ಯಾಯಾಧೀಶರ ಮುಂದೆ ತಮ್ಮ ಕಾನೂನುಜ್ಞಾನ ಪ್ರದರ್ಶಿಸಬೇಕು. ನ್ಯಾಯವಾದಿ ಎಲ್ಲ ವಿದ್ಯೆಗಳನ್ನು ಬಲ್ಲವನಾಗಿರಬೇಕು. ಆದರೆ ವೃತ್ತಿಯಲ್ಲಿ ಯಾರೋ ಒಬ್ಬರು ತಪ್ಪು ಮಾಡುವುದರಿಂದ ಇಡೀ ವೃತ್ತಿಪರರನ್ನು ಸಮಾಜ ಅಗೌರವದಿಂದ ಕಾಣುತ್ತದೆ ಎಂದು ಎಚ್ಚರಿಸಿದ ಅವರು, ನ್ಯಾಯಕ್ಕಾಗಿ ನಿರಂತರ ಶ್ರಮಿಸುವ ನ್ಯಾಯವಾದಿಗಳಿಗೆ ಸರ್ಕಾರ ಸರಿಯಾದ ಸೌಲಭ್ಯಗಳನ್ನು ನೀಡಬೇಕು ಎಂದು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ, ನ್ಯಾಯಾಂಗ ಮೂಲಭೂತ ವ್ಯವಸ್ಥೆಗಳಿಗಾಗಿ ಕೈಚಾಚುವ ಪರಿಸ್ಥಿತಿ ಇದೆ. ಜನಸಂಖ್ಯೆಗೆ ಅನುಗುಣವಾದ ನ್ಯಾಯಾಲಯಗಳ ಸಂಖ್ಯೆ ಇಲ್ಲದಿರುವಾಗಲೂ ನ್ಯಾಯಾಧೀಶರು ನ್ಯಾಯದಾನಕ್ಕಾಗಿ ಶ್ರಮಿಸುತ್ತಿರುವುದು ಗಮನಾರ್ಹ ಸಂಗತಿ. ಸಾರ್ವಜನಿಕರಿಗೆ ನ್ಯಾಯಾಲಯ ಹಾಗೂ ಕಾನೂನಿನ ಅರಿವಿನ ಕೊರತೆಯಿಂದ ತಮ್ಮ ಹಲವಾರು ಸಮಸ್ಯೆಗಳಿಗೆ ನ್ಯಾಯದಾನ ಕೇಳಲು ಬರಲು ಆಗುತ್ತಿಲ್ಲ. ಆದರೆ ನ್ಯಾಯವಾದಿಗಳು ಹಾಗೂ ತಿಳಿವಳಿಕೆ ಉಳ್ಳವರು ನ್ಯಾಯದಾನ ಕುರಿತು ಸಾರ್ವಜನಿಕರಲ್ಲಿ ಪೂರಕ ವಾತಾವರಣ ನಿರ್ಮಿಸಬೇಕು ಎಂದರು.
ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎನ್.ಕೆ. ಪಾಟೀಲ, ನ್ಯಾಯಮೂರ್ತಿ ಡಾ. ಜಾವದ್ ರಹೀಮ್ ಮಾತನಾಡಿದರು. ಹಾನಗಲ್ಲ ನ್ಯಾಯಾಲಯದಲ್ಲಿ ನ್ಯಾಯವಾದಿಗಳಾಗಿ ಸೇವೆ ಸಲ್ಲಿಸಿ, ಈಗ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿರುವ ಎಂ.ಎ. ಜಾಡರ, ಎಸ್.ಪಿ. ಗುಡಗುಡಿ, ಸಿ.ಎಸ್. ಶಿವನಗೌಡರ ಹಾಗೂ ಸರ್ಕಾರಿ ಸಹಾಯಕ ಅಭಿಯೋಜಕರಾಗಿ  ಸೇವೆ ಸಲ್ಲಿಸುತ್ತಿರುವ ಎಸ್.ಎಂ. ಗೆಜ್ಜೆಹಳ್ಳಿ, ಆರ್.ಎಂ. ಮಳಗಿಕರ, ಎಸ್.ಐ. ಮಡಿವಾಳರ, ಹಾಗೂ ಹಾನಗಲ್ಲ ಹಿರಿಯ ವಿಭಾಗದ ಸಿವಿಲ್ ನ್ಯಾಯಾಧೀಶರಾದ ಎಂ. ರಾಮಚಂದ್ರ, ಬೆಂಗಳೂರು ಬಿಬಿಎಂಪಿ ಕಾನೂನು ಅಧಿಕಾರಿ ಎಚ್.ಎಸ್. ತಳವಾರ ಅವರನ್ನು ಗೌರವಿಸಲಾಯಿತು.
ಶಾಸಕ ಮನೋಹರ ತಹಶೀಲ್ದಾರ, ಮಾಜಿ ಸಚಿವ ಸಿ.ಎಂ. ಉದಾಸಿ, ಹಾವೇರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎನ್. ಸಾವಿತ್ರಿ ವಿನಾಯಕ, ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸ್ಯ ಕೆ. ಶಿವಲಿಂಗಪ್ಪ, ಕಾರ್ಯದರ್ಶಿ ರಂಗನಾಥ ಅಕ್ಕಿವಳ್ಳಿ ಇದ್ದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ರವಿ ವಡೆಯರ ಸ್ವಾಗತಿಸಿದರು. ನ್ಯಾಯವಾದಿ ರವಿಬಾಬು ಪೂಜಾರ ಹಾಗೂ ಯಾಶೀರ ಅರಾಫತ್ ಮಕಾನದಾರ ನಿರೂಪಿಸಿದರು.
ನ್ಯಾಯವಾದಿಗಳು ಕರ್ತವ್ಯ ಮರೆಯಬಾರದು. ಇದರಿಂದ ಕಕ್ಷಿದಾರನಿಗೆ ಅನ್ಯಾಯವಾಗುತ್ತದೆ. ಕಕ್ಷಿದಾರನ ಕಣ್ಣೀರು ಒರೆಸುವುದೆ ನ್ಯಾಯವಾದಿಗಳ ಪ್ರಾಮಾಣಿಕ ಧರ್ಮ. ಸಾಮಾಜಿಕ ಪಿಡುಗುಗಳನ್ನು ತೊಡೆದುಹಾಕಿ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು.
- ಕೆ.ಎಲ್. ಮಂಜುನಾಥ,
ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.