ಹಾವೇರಿ

ಜಾತ್ರೆಗಳು ಜಾಗೃತಿ ಮೂಡಿಸುವ ವೇದಿಕೆಯಾಗಲಿ

Published On :

ಕನ್ನಡಪ್ರಭ ವಾರ್ತೆ, ಹಾವೇರಿ, ಫೆ. 22
ಪ್ರಸ್ತುತ ಎಲ್ಲ ಜಾತ್ರೆಗಳು ಜನಜಂಗುಳಿಯಾಗುತ್ತಿವೆ. ಇದರ ಬದಲಾಗಿ ಜಾತ್ರೆಗಳು ನೆರೆದ ಜನರಲ್ಲಿ ಜಾಗೃತಿ, ಅರಿವು, ವಿವೇಕ ಮೂಡಿಸುವ ತಾಣವಾಗಬೇಕು. ಅಂದಾಗ ಮಾತ್ರ ದೇಶ ಬಲಿಷ್ಠವಾಗುವುದರಲ್ಲಿ ಸಂದೇಹವಿಲ್ಲ ಎಂದು ಚಿತ್ರದುರ್ಗದ ಡಾ. ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.
ನಗರದ ಮುರುಗೀಸ್ವಾಮಿಮಠದ ಆವರಣದಲ್ಲಿ ಹೊಸಮಠದ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಧಾರವಾಡ ಸಹಕಾರಿ ಹಾಲು ಒಕ್ಕೂಟ, ಕೃಷಿ, ಪಶು ಸಂಗೋಪನೆ, ತೋಟಗಾರಿಕೆ, ಜಲಾನಯನ ಅಭಿವೃದ್ಧಿ, ರೇಷ್ಮೆ, ಮೀನುಗಾರಿಕೆ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಕೃಷಿ ಉತ್ಸವಕ್ಕೆ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.
ಕೃಷಿ ಉತ್ಸವ ಖುಷಿ ಉತ್ಸವವಾಗಲಿ:
ಎಲ್ಲೆಡೆ ನಡೆಯುವ ಜಾತ್ರೆಗಳು ಆಗಮಿಸುವ ಜನತೆಗೆ ಕೇವಲ ಪ್ರಸಾದ ನೀಡುವುದಕ್ಕೆ ಸೀಮಿತವಾಗಬಾರದು. ಜನತೆಗೆ ವಿವಿಧ ಬಗೆಯ ಜ್ಞಾನ, ನೂತನ ಆವಿಷ್ಕಾರಗಳ ಬಗ್ಗೆ ಸಂಪೂರ್ಣ ಮಾಹಿತಿ, ಅವುಗಳ ಬಳಕೆ ಬಗ್ಗೆ ಅರಿವು ಮೂಡಿಸಿದರೆ ಆಯಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಯಾವುದೇ ಕ್ಷೇತ್ರದಲ್ಲಿ ಶೂನ್ಯ ವಾತಾವರಣ ಕವಿದಾಗ ಬುದ್ಧಿಜೀವಿಗಳು ಶೂನ್ಯ ಭರ್ತಿ ಮಾಡಲು ಮುಂದಾಗಬೇಕಿದೆ. ಪ್ರಸಕ್ತ ಕೃಷಿ ಬಗ್ಗೆ ದೇಶದಲ್ಲಿ ತಾತ್ಸಾರ ಮನೋಭಾವ ಆವರಿಸಿದ್ದು, ಇದನ್ನು ಹೋಗಲಾಡಿಸಿ ಕೃಷಿ ಉತ್ಸವವನ್ನು ಖುಷಿ ಉತ್ಸವವನ್ನಾಗಿ ಮಾಡಬೇಕಿದೆ ಎಂದರು.
ಎಲ್ಲರ ದುಡಿಮೆ ಇರಲಿ:
ಮನೆ ಯಜಮಾನ ದುಡಿದು ಉಳಿದವರೆಲ್ಲ ಅದರಲ್ಲಿ ಮಜಾ ಮಾಡುವ ಪದ್ಧತಿ ತೊಲಗಬೇಕು. ಎಲ್ಲರೂ ದುಡಿದು ತಿನ್ನುವುದನ್ನು ರೂಢಿಸಿಕೊಂಡು ದುಡಿಯುವ ವ್ಯಕ್ತಿಗೆ ಮನೆ ಮಂದಿ ಸಹಾಯ, ಸಹಕಾರ ನೀಡಿದಾಗ ಮನೆ ಉದ್ಧಾರ ಸಾಧ್ಯ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು. ಕೃಷಿ ಬಗ್ಗೆ ಅಸಡ್ಡೆ ಮನೋಭಾವ ಬೆಳೆಸಿಕೊಳ್ಳದೇ ಲವಲವಿಕೆಯಿಂದ ಕೃಷಿ ಕಾರ್ಯದಲ್ಲಿ ತೊಡಗಿಕೊಂಡಾಗ ಎಲ್ಲ ಕ್ಷೇತ್ರಗಳಿಗಿಂತಲೂ ಇದರಲ್ಲಿ ಹೆಚ್ಚು ಸಾಧನೆ ಮಾಡಲು ಸಾಧ್ಯ ಎಂದರು.
ರೈತರಿಗೆ ಸೌಲಭ್ಯ ಕೊಡಿ:
ಮಾಜಿ ಎಂಎಲ್ಸಿ ಶಿವರಾಜ ಸಜ್ಜನರ ಮಾತನಾಡಿ, ರೈತರೇ ದೇಶದ ಬೆನ್ನೆಲುಬು ಎಂದು ಹೇಳಲಾಗುತ್ತಿದೆ. ಆದರೆ, ಅನೇಕ ಜ್ವಲಂತ ಸಮಸ್ಯೆಗಳ ಸುಳಿಗೆ ಸಿಲುಕಿ ರೈತರ ಬೆನ್ನು ಮುರಿಯುತ್ತಿದೆ. ರೈತರ ಬಗ್ಗೆ ಸಮಾಜದಲ್ಲಿ ತಾತ್ಸಾರ ಉಂಟಾಗುತ್ತಿದೆ. ಹಾಗಾಗಿ ಯುವ ಜನಾಂಗ ಒಕ್ಕಲುತನದಿಂದ ವಿಮುಖರಾಗುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ಊಟಕ್ಕಾಗಿ ಪರದಾಡುವ ಪರಿಸ್ಥಿತಿ ಎದುರಾಗುತ್ತದೆ. ಸರ್ಕಾರದ ಅನುತ್ಪಾದಕ ಯೋಜನೆಗಳಿಂದಾಗಿ ಕೃಷಿ ಕಾರ್ಮಿಕರು, ಕೂಲಿಕಾರರು ಕೆಲಸಕ್ಕೆ ಬರುತ್ತಿಲ್ಲ. ಹಾಗಾಗಿ ಸರ್ಕಾರ ಇಂಥ ಯೋಜನೆಗಳನ್ನು ಜಾರಿಗೊಳಿಸುವುದನ್ನು ಬಿಟ್ಟು ರೈತರಿಗೆ ಸಕಲ ಸೌಲಭ್ಯಗಳನ್ನು ನೀಡಬೇಕು. ರೈತರು ಬೆಳೆದ ಫಸಲಿಗೆ ಮಾರುಕಟ್ಟೆಯಲ್ಲಿ ಯೋಗ್ಯ ಬೆಲೆ ದೊರೆಯುವಂತಾಗಬೇಕು ಎಂದರು.
ಜಂಟಿ ಕೃಷಿ ನಿರ್ದೇಶಕ ಗಣೇಶ ನಾಯಕ ಪ್ರಾಸ್ತಾವಿಕ ಮಾತನಾಡಿದರು. ಹೊಸಮಠದ ಶಾಂತಲಿಂಗ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಜಿಪಂ ಉಪಾಧ್ಯಕ್ಷೆ ಶೋಭಾ ನಿಸ್ಸೀಮಗೌಡ್ರ, ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡ, ನಾಗೇಂದ್ರ ಕಟಕೋಳ, ಜಿಲ್ಲಾ ಜಲಾನಯನ ಅಭಿವೃದ್ಧಿ ಅಧಿಕಾರಿ ಮಂಜುನಾಥ, ಕರಿಯಲ್ಲಪ್ಪ ಕೊರಚರ, ಡಾ. ಬಸವರಾಜ, ಡಾ. ರಾಮಚಂದ್ರ ಭಟ್ಟ, ಕೃಷ್ಣ ಉಕ್ಕುಂದ, ಡಾ. ಮೃತ್ಯುಂಜಯ ವಾಲಿ, ಡಾ. ವಾಮದೇವ, ಚನ್ನಬಸಪ್ಪ ಕೊಂಬಳಿ, ಗುಡ್ಡನಗೌಡ ಅಂದಾನಿಗೌಡ್ರ ಇತರರಿದ್ದರು. ಸಂಜೀವಕುಮಾರ ನೀರಲಗಿ ಸ್ವಾಗತಿಸಿದರು.
ಎಲ್ಲೆಡೆ ನಡೆಯುವ ಜಾತ್ರೆಗಳು ಆಗಮಿಸುವ ಜನತೆಗೆ ಕೇವಲ ಪ್ರಸಾದ ನೀಡುವುದಕ್ಕೆ ಸೀಮಿತವಾಗಬಾರದು. ಜನತೆಗೆ ವಿವಿಧ ಬಗೆಯ ಜ್ಞಾನ, ನೂತನ ಆವಿಷ್ಕಾರಗಳ ಬಗ್ಗೆ ಸಂಪೂರ್ಣ ಮಾಹಿತಿ, ಅವುಗಳ ಬಳಕೆ ಬಗ್ಗೆ ಅರಿವು ಮೂಡಿಸಿದರೆ ಆಯಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಯಾವುದೇ ಕ್ಷೇತ್ರದಲ್ಲಿ ಶೂನ್ಯ ವಾತಾವರಣ ಕವಿದಾಗ ಬುದ್ಧಿಜೀವಿಗಳು ಶೂನ್ಯ ಭರ್ತಿ ಮಾಡಲು ಮುಂದಾಗಬೇಕಿದೆ. ಪ್ರಸಕ್ತ ಕೃಷಿ ಬಗ್ಗೆ ದೇಶದಲ್ಲಿ ತಾತ್ಸಾರ ಮನೋಭಾವ ಆವರಿಸಿದ್ದು, ಇದನ್ನು ಹೋಗಲಾಡಿಸಿ ಕೃಷಿ ಉತ್ಸವವನ್ನು ಖುಷಿ ಉತ್ಸವವಾಗಬೇಕು.
                                    - ಶಿವಮೂರ್ತಿ ಮುರುಘಾ ಶರಣರು, ಚಿತ್ರದುರ್ಗ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.