ಹಾವೇರಿ

ವಿಷಪರಿಹಾರೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ

Published On :

ಹಿರೇಕೆರೂರು: ತಾಲೂಕಿನ ಬಾಳಂಬೀಡ ಗ್ರಾಮದ ವಿಷಪರಿಹಾರೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಹಬ್ಬದ ನಿಮಿತ್ತ ತಾಲೂಕಿನ ನೂರಾರು ಭಕ್ತರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಪುನೀತರಾಗುತ್ತಾರೆ. ತಾಲೂಕಿನಲ್ಲಿರುವ ಜನರಿಗೆ ವಿಷ ಜಂತುಗಳು ಕಚ್ಚಿದಾಗ ವಿಷವನ್ನು ಹೀರುವ ವಿಷಪರಿಹಾರೇಶ್ವರ ಎಂದು ಪ್ರಸಿದ್ಧಿ ಪಡೆದಿರುವ ಬಾಳಂಬೀಡ ದೇವಸ್ಥಾನದಲ್ಲಿ ಶಿವರಾತ್ರಿ ಮತ್ತು ಇತರೆ ಅಮವಾಸ್ಯೆ ದಿನಗಳಲ್ಲಿ ಭಕ್ತರ ದಂಡು ಸೇರಿರುತ್ತದೆ. ಉತ್ತರ ಕರ್ನಾಟಕ ಸೇರಿದಂತೆ ಪಕ್ಕದ ರಾಜ್ಯಗಳಾದ ಗೋವಾ, ಮಹಾರಾಷ್ಟ್ರ ಮತ್ತಿತರ ರಾಜ್ಯಗಳಿಂದ ಅಸಂಖ್ಯಾತ ಭಕ್ತರು ಇಲ್ಲಿಗೆ ಬಂದು ವಿಷದಿಂದ ಪಾರಾಗಿದ್ದಾರೆ. ಈಗಾಗಲೇ ಸುಮಾರು ಎಂಟು ಸಾವಿರಕ್ಕೂ ಹೆಚ್ಚು ಜನ ಇಲ್ಲಿಯ ವಿಷಪರಿಹಾರೇಶ್ವರ ಸನ್ನಿಧಾನದ ಮೊರೆ ಹೋಗಿ ಉತ್ತಮ ಆರೋಗ್ಯ ಪಡೆದಿದ್ದಾರೆ. ದೇಹಕ್ಕೆ ವಿಷ ಜಂತು ಕಚ್ಚಿದಾಗ ರಾಜ್ಯದ ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಗುಣ ಮುಖವಾಗದ ರೋಗಿಗಳು ಇಲ್ಲಿನ ತೀರ್ಥ, ಪ್ರಸಾದ ಪಡೆದು ಸಂಪೂರ್ಣ ಗುಣ ಮುಖರಾಗಿದ್ದಾರೆ ಎಂದು ದೇವಸ್ಥಾನ ಕಮಿಟಿ ಅಧ್ಯಕ್ಷ ನಾಗೇಂದ್ರಪ್ಪ ತಡಗಣಿ ಹೇಳುತ್ತಾರೆ.
ಭಕ್ತ ಸಾಗರ: ಹಾವು ಕಚ್ಚಿಸಿಕೊಂಡು ಪ್ರಾಣಪಾಯಕ್ಕೆ ತುತ್ತಾಗಿರುವ ರೋಗಿಗಳು ವಿಷಪರಿಹಾರೇಶ್ವರನಲ್ಲಿಗೆ ಬಂದು ವಿಶೇಷ ದರ್ಶನ ಪಡೆದು ಪೂಜೆ ಸಲ್ಲಿಸುತ್ತಾರೆ. ವಿಷದ ಮುಳ್ಳು ಚುಚ್ಚಿದರೆ ಇಸಬು, ಚರ್ಮರೋಗ, ಸರ್ಪ ಹುಣ್ಣು, ಮೈಮೇಲೆ ಗುಳಿ ಕೊಳೆಯುವಂತ ಗಾಯಗಳು ನಂಜುಬಾಧೆ ಮೊದಲಾದ ರೋಗಗಳಿಗೆ ಈ ಸ್ವಾಮಿ ವಾಸಿ ಮಾಡುತ್ತಾನೆ ಎಂಬ ನಂಬಿಕೆ ಭಕ್ತ ವಲಯದಲ್ಲಿದೆ. ಇದೇ ಕಾರಣದಿಂದ ರಾಜ್ಯದ ನಾನಾ ಕಡೆಗಳಿಂದ  ಅಸಂಖ್ಯಾತ ಭಕ್ತರು ಸ್ವಾಮಿಯ ದರ್ಶನ ಮತ್ತು ತೀರ್ಥ ಪಡೆಯುವರು. ಹಾವು ಕಚ್ಚಿಕೊಂಡವರಿಗೆ ಈಶ್ವರನ ಮೈ ತೊಳೆದ ತೀರ್ಥ ಕುಡಿಸಿ, ಗಾಯದ ಮೇಲೆ ಲೇಪಿಸಲಾಗುತ್ತದೆ. ಹೀಗೆ ಅನೇಕ ರೋಗಗಳಿಂದ ಬಳಲಿದವರು ಸ್ವಾಮಿಯ ದೇವಸ್ಥಾನಕ್ಕೆ ಬಂದು ತಮ್ಮ ನೋವು ಸಂಕಟಗಳನ್ನು ನಿವಾರಿಸುವಂತೆ ದೇವರಲ್ಲಿ ಮೂರೆ ಇಡುತ್ತಾರೆ.  ಶಿವರಾತ್ರಿ ಹಬ್ಬದ ದಿನ ವಿವಿಧೆಡೆಗಳಿಂದ ಅಪಾರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ದೇವಸ್ಥಾನ ಸೇರಿದಂತೆ ಇಡಿ ಗ್ರಾಮವೇ ಶೃಂಗಾರಗೊಂಡಿರುತ್ತದೆ. ಮನೆಗಳ ಎದುರಿಗೆ ವಿವಿಧ ಚಿತ್ತಾಕರ್ಷಕ ರಂಗೋಲಿಗಳು ಮತ್ತು ಮಾವಿನ ತಳಿರು ತೋರಣಗಳಿಂದ ಇಡಿ ಗ್ರಾಮ ಶೋಭಿಸುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.