ಜಾನಪದದಿಂದ ಸಂಸ್ಕೃತಿ ಶ್ರೀಮಂತ
ಹಾವೇರಿ: ಗ್ರಾಮೀಣ ಜನಪದರ ಉಸಿರಾಗಿರುವ ವಿವಿಧ ಕಲೆಗಳು ನಾಡಿನ ಸಂಸ್ಕೃತಿಯ ಶ್ರೀಮಂತಿಕೆ ಪ್ರತೀಕವಾಗಿವೆ. ಇಂತಹ ಕಲೆಗಳು ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸ ಸರ್ಕಾರಗಳಿಂದ ನಡೆಯಬೇಕು ಎಂದು ನಗರಸಭೆ ಉಪಾಧ್ಯಕ್ಷೆ ರತ್ನಾ ಭೀಮಕ್ಕನವರ ಹೇಳಿದರು.
ನಗರದ ಜಿಲ್ಲಾ ಗುರುಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶುಕ್ರವಾರ ಹಮ್ಮಿಕೊಂಡಿದ್ದ ಸುಗ್ಗಿ-ಹುಗ್ಗಿ ಜಾನಪದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜನಪದ ಕಲೆ ಉಸಿರಾಗಲಿ: ನಾಡಿನ ಸಂಸ್ಕೃತಿಯನ್ನು ವಿದೇಶಿಯರು ಅಪ್ಪಿಕೊಂಡಿರುವಾಗ ದೇಶಿಯರಾದ ನಾವು ನಮ್ಮ ಸಂಸ್ಕೃತಿ ಕಡೆಗಣಿಸುವುದು ಸರಿಯಲ್ಲ. ಜನಪದ ಪ್ರತಿಯೊಬ್ಬರ ಉಸಿರಾಗಬೇಕು. ಹಳ್ಳಿಗಳ ಜನಪದ ಕಲೆಗಳನ್ನು ಬಳಸಿ, ಉಳಿಸಿ, ಬೆಳೆಸಬೇಕು. ಅಲ್ಲದೇ, ಜನಪದ ಕಲೆಗಳನ್ನು ಮುಂದಿನ ಪೀಳಿಗೆಗೆ ಬಳುವಳಿ ನೀಡುವ ಕೆಲಸ ಇಂದಿನ ಕಲಾವಿದರು ಮಾಡಬೇಕು ಎಂದರು.
ದೇಸಿ ಸಂಸ್ಕೃತಿ ಬೆಳೆಸಿ: ಜಾನಪದ ಅಕಾಡೆಮಿ ಸದಸ್ಯ ಡಾ. ಆನಂದಪ್ಪ ಬಿ.ಎಚ್. ಮಾತನಾಡಿ, ಭಾರತೀಯ ಜಾನಪದ ಸಂಸ್ಕೃತಿಯು ಜಗತ್ತಿನ ಇತರ ರಾಷ್ಟ್ರಗಳಿಗೆ ಮಾದರಿಯಾಗಿದೆ. ಅಲ್ಲದೇ ಜನಪದ ಸಂಸ್ಕೃತಿ ಸಮಾಜದಲ್ಲಿ ಬದುಕುವ ರೀತಿ, ನೀತಿ ತಿಳಿಸಿಕೊಡುತ್ತದೆ. ಪಾಶ್ಚಿಮಾತ್ಯರ ಅನುಕರಣೆಯಿಂದ ದೇಶದ ಜಾನಪದ ಕಲೆಗಳು ನಶಿಸುತ್ತಿವೆ. ಈ ಕುರಿತು ಜಾನಪದ ಕಲಾವಿದರು ಜಾಗೃತರಾಗಿ, ಕಲೆ ಉಳಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.
ಜನಪದ ಉಸಿರಾಗಿ, ಬದುಕು ಹಸಿರಾಗಲಿ: ಅಧ್ಯಕ್ಷತೆ ವಹಿಸಿದ್ದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ಸಿ. ನಾಗರಜ್ಜಿ ಮಾತನಾಡಿ, ಜಾನಪದ ಕಲೆಯು ಮನುಷ್ಯನ ಅವಿಭಾಜ್ಯ ಅಂಗ. ಈ ಹಿನ್ನೆಲೆಯಲ್ಲಿ ಜಗವೆಲ್ಲ ಹಸಿರಾಗಿ, ಜನಪದ ಉಸಿರಾದಾಗ ಬದುಕು ಬಹಳ ಸೊಗಸಾಗಿರುತ್ತದೆ. ರೈತರು ಜನಪದರ ಸಂಪ್ರದಾಯದ ಪ್ರಕಾರ ಸುಗ್ಗಿಯ ಕಾಲದಲ್ಲಿ ಹಿಗ್ಗಿನಿಂದ ದುಡಿದು ಬೆಳೆ ಬಂದ ಕಾಲಕ್ಕೆ ಹುಗ್ಗಿ ಮಾಡಿ ಕೂಡಿ ಉಣ್ಣುವ ಮತ್ತು ಉಣಿಸುವ ಸಂಸ್ಕೃತಿಯನ್ನು ಎಂದಿಗೂ ಮರೆಯಬಾರದು ಎಂದು ಕಿವಿಮಾತು ಹೇಳಿದರು.
ಪ್ರಿಯಾ ಸವಣೂರ ಮತ್ತು ಸಂಗಡಿಗರ ಜನಪದ ನೃತ್ಯ, ಮಹಾರುದ್ರಪ್ಪ ಇಟಗಿ ಅವರ ಪುರವಂತಿಕೆ, ಬೀರಪ್ಪ ಕಂಬಳಿ ಅವರ ಡೊಳ್ಳು ಕುಣಿತ ನೋಡಗರ ಕಣ್ಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಪ್ರಗತಿ ಗುಡ್ಡನವರ ಮತ್ತು ಸಂಗಡಿಗರ ಜನಪದ ನೃತ್ಯ, ನಾಗರಜ್ಜಿ ತಂಡದ ಜಾನಪದ ಹಾಡು, ನಾಗರಾಜ ಜೋಗಿ ಅವರ ಕಿಂದರಿ ಜೋಗಿ ಪದಗಳು ಹಾಗೂ ಅಡಿವೆಪ್ಪ ಕುರಿ ಅವರ ತತ್ವ ಪದಗಳು ಇಂಪು ನೀಡಿದವು.
ಈ ಸಂದರ್ಭ ಜಿಲ್ಲಾ ವಾರ್ತಾಧಿಕಾರಿ ಎಂ. ಜುಂಜಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ, ಕಲಾವಿದ ಅಡಿವೆಪ್ಪ ಕುರಿ ಇತರರು ಇದ್ದರು. ಇದಕ್ಕೂ ಮೊದಲು ನಗರದ ಪುರಸಿದ್ಧೇಶ್ವರ ದೇವಸ್ಥಾನದ ಆವರಣದಿಂದ ಆರಂಭವಾದ ಎತ್ತು, ಜಕ್ಕಡಿಗಳ ನಿಬ್ಬಣದ ಮೆರವಣಿಗೆಗೆ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ. ಅಂಬಳಿಕೆ ಹಿರಿಯಣ್ಣ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಪುರವಂತಿಕೆ, ಡೊಳ್ಳು, ಸಮಾಳ, ಝಾಂಜ್ ಮೇಳ ಸೇರಿದಂತೆ ಹತ್ತಾರು ಜನಪದ ವಾದ್ಯ ಕಲಾತಂಡಗಳು ಪಾಲ್ಗೊಂಡಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

