ಯುವ ಪೀಳಿಗೆಗೆ ರಂಗಭೂಮಿಯ ಪರಿಚಯ ಅಗತ್ಯ
ಕನ್ನಡಪ್ರಭ ವಾರ್ತೆ, ಹಾನಗಲ್ಲ, ಜ. 6
ನಾಳಿನ ಪೀಳಿಗೆಗೆ ಸಹೃದಯತೆ ನೀಡುವ ರಂಗಭೂಮಿಯ ಪರಿಚಯ ಅಗತ್ಯವಾಗಿದ್ದು, ಗ್ರಾಮೀಣ ಸಮುದಾಯದಲ್ಲಿ ಮಾತ್ರ ಇಂಥ ಪ್ರಯತ್ನಗಳು ಹೆಚ್ಚು ಸಾಫಲ್ಯ ಕಾಣುತ್ತಿವೆ ಎಂದು ಸಾಹಿತಿ ಸತೀಶ ಕುಲಕರ್ಣಿ ಆಭಿಪ್ರಾಯಪಟ್ಟರು.
ತಾಲೂಕಿನ ರಂಗ ಗ್ರಾಮ ಶೇಷಗಿರಿ ಸಿ.ಎಂ. ಉದಾಸಿ ರಂಗಮಂದಿರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಗಜಾನನ ಯುವಕ ಮಂಡಳದ ಆಶ್ರಯದಲ್ಲಿ ನಡೆದ ಡಾ. ಬಾಳಾಸಾಹೇಬ ಲೋಕಾಪುರ ಅವರ ಕಥೆ ಆಧರಿಸಿ ರಚಿಸಿದ, ಬಸವಜ್ಜನರ ವಿದ್ಯಾರ್ಥಿ ತಂಡದ ಪ್ರದರ್ಶಿಸಿದ 'ನಾಯಿ ಭರಮ್ಯಾ' ನಾಟಕ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ರಂಗ ಕ್ಷೇತ್ರ ಸಮುದಾಯಕ್ಕೆ ಹತ್ತಿರವಾಗಬೇಕು. ಮನಸ್ಸನ್ನು ಅರಳಿಸಿ, ಪ್ರತಿಭೆಗಳನ್ನು ಬೆಳೆಸಿ, ಸಂಬಂಧಗಳನ್ನು ಕಟ್ಟುವ ಈ ನಾಟಕಗಳ ಅಂತಃಸ್ಸತ್ವ ಅರಿಯಬೇಕು. ಸಾಮಾಜಿಕ ಸಮಸ್ಯೆಗಳ ನಡುವೆಯೂ ಸಂತೃಪ್ತಿಯ ಸಖ್ಯ ನೀಡುವ ರಂಗಭೂಮಿ ಎಂದೆಂದಿಗೂ ತನ್ನ ಸತ್ವ ಉಳಿಸಿಕೊಂಡು ಬೆಳೆಯುವ ಶಕ್ತಿ ಹೊಂದಿದೆ. ಇದಕ್ಕೆ ಸಮಾಜದ ಪ್ರೀತ್ಯಾದರ ಮುಖ್ಯ ಎಂದರು.
ರಂಗಭೂಮಿ ಕಲಾವಿದ ಉದಯ ನಾಸಿಕ ಮಾತನಾಡಿ, ರಂಗ ತರಬೇತಿ ನೀಡುವ ಕಾಲ ಬಂದಿದೆ. ಆದರೆ ಸಹಜವಾಗಿಯೇ ರಂಗಾಸಕ್ತಿಗೆ ಇಂಬು ನೀಡುವ ಸಾಮಾಜಿಕ ಪರಿಸರ ನಮ್ಮಿಂದ ದೂರವಾಗಿದೆ. ಈಗ ಪ್ರತಿಭೆಗಳನ್ನು ಗುರುತಿಸಿ ರಂಗಕ್ಕೆ ತರಬೇಕಾದ ಸ್ಥಿತಿ ಉಂಟಾಗಿದೆ. ಹಿಂದೊಂದು ದಿನ ಎಲ್ಲರಲ್ಲೂ ಸಹಜವಾಗಿಯೇ ರಂಗ ಪ್ರೀತಿ ಹಚ್ಚ ಹಸರಾಗಿರುತ್ತಿತ್ತು. ರಂಗ ವೈಭವವೇ ಒಂದು ಹಬ್ಬವಾಗಿರುತ್ತಿತ್ತು ಎಂದರು.
ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಪ್ರೊ. ಮಾರುತಿ ಶಿಡ್ಲಾಪುರ ಮಾತನಾಡಿ, ರಂಗಾಭಿವ್ಯಕ್ತಿ ಅನುಭವಿಸುವುದೆ ಒಂದು ಪುಣ್ಯ. ಸಾಮಾಜಿಕ ವೈಕಲ್ಯಗಳಾದಿಯಾಗಿ, ವಾಸ್ತವ ತೆರೆದಿಡುವ ರಂಗ ಚಟುವಟಿಕೆ ಸಮುದಾಯಕ್ಕೆ ಪಾಠಶಾಲೆಯಿದ್ದಂತೆ ಎಂದರು.
ಮಂಡಲ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ.ಎಂ. ಅಪ್ಪಾಜಿ ಸಮಾರಂಭದ ಅಧ್ಯಕ್ಷತೆ ವಹಿಸಿ, ಪ್ರದರ್ಶನ ಉದ್ಘಾಟಿಸಿದರು. ನಾಟಕದ ನಿರ್ದೇಶಕ ಜಿ.ಎಂ. ಓಂಕಾರಣ್ಣನವರ ಅವರನ್ನು ಸನ್ಮಾನಿಸಲಾಯಿತು. ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪ್ರಭು ಗುರಪ್ಪನವರ, ಹಿರಿಯರಾದ ಪಿ.ಎಂ. ನೋಟದ, ಬಣಕಾರ ಮಾಸ್ತರ, ಪತ್ರಿ ಪ್ರತಿಷ್ಠಾನದ ಅಧ್ಯಕ್ಷ ವಿ.ಎಂ. ಪತ್ರಿ, ಶಂಕ್ರಣ್ಣ ಗುರಪ್ಪನವರ, ನಾಗರಾಜ ಧಾರೇಶ್ವರ, ಎಸ್.ಆರ್. ಹಿರೇಮಠ, ಸಿದ್ದಪ್ಪ ರೊಟ್ಟಿ, ಸಿ.ಎ. ಕೂಡಲಮಠ, ಸಿ.ಆರ್. ಮಾಳಗಿ, ಟಿ. ಶಿವಕುಮಾರ, ನಾಗರಾಜ ನಡುವಿನಮಠ ಭಾಗವಹಿಸಿದ್ದರು.
ಮನಗೆದ್ದ 'ನಾಯಿ ಭರಮ್ಯಾ'
ಹಾನಗಲ್ಲ: ಖಡಕ್ ಮಾತುಗಳಿಂದ ನಾಯಿ ಭರಮ್ಯಾ ನಾಟಕ ಸಹೃದಯರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು. ಶೇಷಗಿರಿಯ ಸಿ.ಎಂ. ಉದಾಸಿ ರಂಗ ಮಂದಿರಲ್ಲಿ ಡಾ ಬಾಳಾಸಾಹೇಬ ಲೋಕಾಪುರ ಅವರ ಮೂಲ ಕಥೆ ಆಧರಿಸಿ, ಸತೀಶ ಕುಲಕರ್ಣಿ ರಚಿಸಿ, ಶಿಕ್ಷಕ ಜೆ.ಎಂ. ಓಂಕಾರಣ್ಣನವರ ನಿರ್ದೇಶನದಲ್ಲಿ ಕಂಚಿನೆಗಳೂರಿನ ಚನ್ನಬಸವಜ್ಜರ ವಿದ್ಯಾರ್ಥಿ ಕಲಾ ತಂಡ ನಾಟಕ ಪ್ರದರ್ಶನಗೊಂಡಿತು. ಗಂಡನನ್ನು ಉಳಿಸಿಕೊಳ್ಳುವ ಶ್ರೀಮಂತ ಮಹಿಳೆ ಸೋನುಬಾಯಿ ಪಾತ್ರದಲ್ಲಿ ಸಂಗೀತಾ ಬೆಳವತ್ತಿ ಅದ್ಭುತ ಪ್ರದರ್ಶನ ನೀಡಿದಳು. ನಿವೇದಿತಾ ಗಿರಿಯಣ್ಣನವರ ತಮ್ಮಣ್ಣ ಹಾಗೂ ಯಮುನ್ಯಾ ಪಾತ್ರಗಳಲ್ಲಿ ನುರಿತ ಅಭಿವ್ಯಕ್ತಿ ನೀಡಿದಳು. ಅಪ್ಪಟ ಮಂದ ಬುದ್ಧಿಯ ಹುಡುಗ ಭರಮ್ಯಾ ಆಗಿದ್ದವನು ಪ್ರಕಾಶ ಗುಂಡೇನಹಳ್ಳಿ. ರೇಣಮ್ಮಜ್ಜಿ ಪಾತ್ರದಲ್ಲಿ ದಿವ್ಯಾ ಆಲದಕಟ್ಟಿ, ಇತರ ಪಾತ್ರಗಳಲ್ಲಿ ಚೈತ್ರಾ ಕಲ್ಲೇಗೌಡರ, ಕಾವ್ಯಾ ಮಲಗುಂದ, ಬಸವರಾಜ ಜವಳಿ ಮಿಂಚಿದರು.
ಇಂದು ದೇಗುಲ ಬೆಳ್ಳಿಹಬ್ಬ
ಶಿಗ್ಗಾಂವಿ: ತಾಲೂಕಿನ ಅ.ಮ. ಕೊಪ್ಪ-ದುಂಡಶಿ ಗ್ರಾಮದ ಶ್ರೀ ಗಜಾನನ ದೇವಸ್ಥಾನದ ರಜತ ಮಹೋತ್ಸವ ಜ. 7 ಹಾಗೂ 8ರಂದು ನಡೆಯಲಿದೆ. ಜ. 7ರಂದು ಬೆಳಗ್ಗೆ 6 ಗಂಟೆಗೆ ವಿಶೇಷ ಪೂಜೆ ಇದೆ. ಮಧ್ಯಾಹ್ನ 2.45ಕ್ಕೆ ಬಾಲೇಹೊಸೂರನ ಶ್ರೀ ದಿಂಗಾಲೇಶ್ವರ ಮಹಾಸ್ವಾಮಿಗಳು, ದುಂಡಶಿಯ ಶ್ರೀ ದಿಂಗಾಲೇಶ್ವರ ಮಹಾಸ್ವಾಮಿಗಳು, ಅಭಿನವ ಸ್ವಸ್ತಿ ಶ್ರೀ ಭಟ್ಟಾಕಲಂಕ ಭಟ್ಟಾರಕ ಮಹಾಸ್ವಾಮಿಗಳ ಪಾದಯಾತ್ರೆ ಜರುಗಲಿದೆ. ಸಂಜೆ 5ಕ್ಕೆ ಶ್ರೀಗಳ ಸಾನ್ನಿಧ್ಯದಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಶಾಸಕ ಬಸವರಾಜ ಬೊಮ್ಮಾಯಿ ಉದ್ಘಾಟಿಸುವರು. ಸಮಿತಿ ಅಧ್ಯಕ್ಷ ವರ್ಧಮಾನ ಎಂ. ಹಾವೇರಿ ಅಧ್ಯಕ್ಷತೆ ವಹಿಸುವರು. ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ಪ್ರಹ್ಲಾದ ಜೋಶಿ, ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ಮಾಜಿ ಶಾಸಕರಾದ ರಾಜಶೇಖರ ಸಿಂಧೂರ, ಅಜ್ಜಂಪೀರ ಖಾದ್ರಿ, ಮಾಜಿ ಸಂಸದ ಮಂಜುನಾಥ ಸಿ. ಕುನ್ನೂರ, ಜಿಪಂ ಸದಸ್ಯರಾದ ಬಿ.ಟಿ. ಇನಾಮತಿ, ಸರೋಜಾ ಆಡೀನ, ತಾಪಂ ಅಧ್ಯಕ್ಷೆ ಸುಜಾತಾ ಕಲಕಟ್ಟಿ, ಸದಸ್ಯೆ ಉಮಾ ಡವಗಿ, ತಿಪ್ಪಣ್ಣಾ ಸಾಥಣ್ಣವರ, ಹೊಸೂರ ಗ್ರಾಪಂ ಅಧ್ಯಕ್ಷ ಚನ್ನಪ್ಪ ಬಿಂದ್ಲಿ, ದುಂಡಶಿ ಗ್ರಾಪಂ ಅಧ್ಯಕ್ಷ ಈರಣ್ಣ ಮಹಾಜನಶೆಟ್ಟರ ಪಾಲ್ಗೊಳ್ಳುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

