ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ
ಕನ್ನಡಪ್ರಭ ವಾರ್ತೆ, ಹಾವೇರಿ, ಜ. 10
ನೌಕರಿ ಕಾಯಂಗೊಳಿಸುವುದು ಹಾಗೂ ಕನಿಷ್ಠ ವೇತನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಫೆಡರೇಷನ್ ಮತ್ತು ಎಐಟಿಯುಸಿ ನೇತೃತ್ವದಲ್ಲಿ ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಶುಕ್ರವಾರ ನಗರದ ಸಿದ್ದಪ್ಪ ವೃತ್ತದಲ್ಲಿ ಜೈಲ್ಭರೋ ಚಳವಳಿ ನಡೆಸಿದರು.
ನಗರದ ಮುರುಘರಾಜೇಂದ್ರ ಮಠದಿಂದ ಪ್ರತಿಭಟನೆ ಆರಂಭಿಸಿದ ಕಾರ್ಯಕರ್ತೆಯರು, ಸಹಾಯಕಿಯರು ಮಹಾದೇವ ಮೈಲಾರ ವೃತ್ತ, ಮಹಾತ್ಮಾ ಗಾಂಧಿ ವೃತ್ತ, ಜೆ.ಪಿ. ಸರ್ಕಲ್ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಿದ್ದಪ್ಪ ವೃತ್ತಕ್ಕೆ ಆಗಮಿಸಿದರು.
ಮೆರವಣಿಗೆಯುದ್ದಕ್ಕೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರಲ್ಲದೇ, ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಸುಮಾರು ನಾಲ್ಕು ತಾಸಿಗೂ ಹೆಚ್ಚು ಕಾಲ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಎಐಟಿಯುಸಿ ಜಿಲ್ಲಾ ಸಮಿತಿ ಅಧ್ಯಕ್ಷ ಹೊನ್ನಪ್ಪ ಮರೆಮ್ಮನವರ ಮಾತನಾಡಿ, ಅಂಗನವಾಡಿ ಸಿಬ್ಬಂದಿ ಬೇಡಿಕೆ ಈಡೇರಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜವಾಗಿಲ್ಲ. ಉಭಯ ಸರ್ಕಾರಗಳು ಅಂಗನವಾಡಿ ಸಿಬ್ಬಂದಿ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿವೆ ಎಂದು ಆರೋಪಿಸಿದರು.
ರಾಜ್ಯದಲ್ಲಿ 1.25 ಲಕ್ಷಕ್ಕಿಂತ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಇದ್ದಾರೆ. ಸರ್ಕಾರ ಅವರೆಲ್ಲರಿಗೆ ಕಡಿಮೆ ವೇತನ ನೀಡುವುದಲ್ಲದೇ, ಅಂಗನವಾಡಿ ಕೆಲಸಗಳನ್ನು ಹೊರತುಪಡಿಸಿ ಸರ್ಕಾರಿ ಕೆಲಸಗಳಾದ ಚುನಾವಣೆ, ಜನಗಣತಿ, ಆರೋಗ್ಯ ಇಲಾಖೆಯ ಪೋಲಿಯೋ, ಬಿಪಿಲ್ ಫಲಾನುಭವಿಗಳ ಗಣತಿ ಇತ್ಯಾದಿ ಕಾರ್ಯಗಳಿಗೆ ಬಳಸಿಕೊಳ್ಳುವ ಮೂಲಕ ಐಸಿಡಿಎಸ್ ಯೋಜನೆ ಉದ್ದೇಶಕ್ಕೆ ಧಕ್ಕೆ ತರುತ್ತಿದೆ ಎಂದು ದೂರಿದರು.
ಬ್ಯಾಡಗಿ ತಾಲೂಕು ಸಮಿತಿ ಸಂಚಾಲಕಿ ಹೇಮಾವತಿ ಅಸಾದಿ, ಸ್ಥಳೀಯ ಜನಪ್ರತಿನಿಧಿಗಳಿಂದ ಅಂಗನವಾಡಿ ಸಿಬ್ಬಂದಿಗೆ ಉಂಟಾಗುವ ಅನಗತ್ಯ ಕಿರಿಕಿರಿ ತಡೆಗಟ್ಟಬೇಕು. ಕಾರ್ಯಕರ್ತೆಯರನ್ನು ಗ್ರೂಪ್ ಸಿ ಮತ್ತು ಸಹಾಯಕಿಯರನ್ನು ಗ್ರೂಪ್ ಡಿ ನೌಕರರೆಂದು ಪರಗಣಿಸಿ ಸರ್ಕಾರಿ ಸೌಲಭ್ಯಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.
ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸೇವಾವಧಿ ಆಧಾರದಲ್ಲಿ ಪ್ರತಿ ವರ್ಷಕ್ಕೆ ರು. 200 ಹೆಚ್ಚಿಸಬೇಕು. ಅಂಗನವಾಡಿಗೆ ಸಂಬಂಧಿಸಿದ ಕೆಲಸಗಳನ್ನು ಬಿಟ್ಟು ಉಳಿದ ಇಲಾಖೆಗಳ ಕೆಲಸ ವಹಿಸಬಾರದರು. ಅಂಗನವಾಡಿ ನಿರ್ವಹಣೆ ಜವಾಬ್ದಾರಿಯನ್ನು ಎನ್ಜಿಓಗಳಿಗೆ ಹಸ್ತಾಂತರಿಸಿದೆ. ಐಸಿಡಿಎಸ್ ಇಲಾಖೆಯಿಂದ ಸರ್ಕಾರವೇ ನಿರ್ವಹಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಹೆದ್ದಾರಿ ತಡೆ ನಡೆಸಿದ ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನು ಪೊಲೀಸರು ಬಂಧಿಸಿ ವಾಹನದಲ್ಲಿ ಗ್ರಾಮೀಣ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು. ನಂತರ ಪ್ರತಿಭಟನಾಕಾರರು ಆಗಮಿಸಿ ಬಂಧಿಸಿದ ಕಾರ್ಯಕರ್ತೆಯರನ್ನು ಬಿಡುಗಡೆ ಮಾಡುವಂತೆ ಪೊಲೀಸ್ ಕಚೇರಿ ಎದುರು ಧರಣಿ ಕುಳಿತಕೊಳ್ಳುತ್ತಿದ್ದಂತೆ ಬಂಧಿತರನ್ನು ಬಿಡುಗಡೆ ಮಾಡಲಾಯಿತು.
ಕೇಂದ್ರ ಸರ್ಕಾರದ ಆದೇಶದಂತೆ ಅಂಗನವಾಡಿ ಸಿಬ್ಬಂದಿಗೆ ಆರು ತಿಂಗಳ ಹೆರಿಗೆ ರಜೆ ಮತ್ತು ಎಲ್ಲ ರೀತಿಯ ಭತ್ಯೆಗಳನ್ನು ಕೊಡಬೇಕು. ಹಾಲಿ ಇರುವ ಕಡಿಮೆ ಪಿಂಚಣಿ ಮೊತ್ತ ಹೆಚ್ಚಿಸಬೇಕು. ಪಿಂಚಣಿ ಯೋಜನೆಗೆ ಒಳಪಡೆದಿರುವ ಕಾರ್ಯಕರ್ತೆಯರಿಗೆ ರು. 3 ಲಕ್ಷ, ಸಹಾಯಕಿಯರಿಗೆ ರು. 2 ಲಕ್ಷ ನೀಡುವುದು ಸೇರಿದಂತೆ ಅನೇಕ ಬೇಡಿಕೆಗಳ ಮನವಿಯನ್ನು ತಹಸೀಲ್ದಾರ್ಗೆ ಸಲ್ಲಿಸಿದರು.
ಜೈಲ್ ಭರೋ ಚಳವಳಿಯಲ್ಲಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ಜಿಲ್ಲಾ ಉಪಾಧ್ಯಕ್ಷೆ ಸುನಿತಾ ಮರಕಳ್ಳಿ, ಪ್ರಧಾನ ಕಾರ್ಯದರ್ಶಿ ಜಿ.ಡಿ. ಪೂಜಾರ, ಸಹ ಕಾರ್ಯದರ್ಶಿ ಲಲಿತಮ್ಮ ನಾಗನಗೌಡ್ರ, ಸುನಂದಮ್ಮ ರೇವಣಕರ, ಹಿರೆಕೇರೂರು ತಾಲೂಕು ಅಧ್ಯಕ್ಷೆ ನೀಲಮ್ಮ ವಾಲಿ, ಸವಣೂರು ತಾಲೂಕು ಅಧ್ಯಕ್ಷೆ ವಾಣಿಶ್ರೀ ಜೀವಣ್ಣನವರ ಸೇರಿದಂತೆ ಸಾವಿರಾರು ಕಾರ್ಯಕರ್ತೆಯರು, ಸಹಾಯಕಿಯರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

