ಹಾವೇರಿ

ಸಂಕ್ರಾಂತಿ ಸಂಭ್ರಮ ಹೆಚ್ಚಿಸಿದ ಗಾಡಾ ಓಡಿಸುವ ಸ್ಪರ್ಧೆ

Published On :

ಶಿಗ್ಗಾಂವಿ: ತಾಲೂಕಿನ ಶ್ಯಾಡಂಬಿ ಗ್ರಾಮದ ಶ್ರೀ ವೀರಭದ್ರೇಶ್ವರ ಯುವಕ ಶಕ್ತಿ ಸಂಘದ ಆಶ್ರಯದಲ್ಲಿ ಮಕರ ಸಂಕ್ರಮಣ ನಿಮಿತ್ತ ಜೋಡೆತ್ತಿನ ಗಾಡಾ ಓಡಿಸುವ ರಾಜ್ಯ ಮಟ್ಟದ ಸ್ಪರ್ಧೆ ಬುಧವಾರ ನಡೆಯಿತು.
ಗ್ರಾಮದ ಶಿವಪ್ಪ ಈರಪ್ಪ ಹರಕುಣ್ಣಿ ಅವರ ಹೊಲದಲ್ಲಿ ನಡೆದ ಸ್ಪರ್ಧೆ ನೋಡಲು ಎರಡು ಕಣ್ಣು ಸಾಲದಂತಿತ್ತು. ಒಂದು ಗಾಡಾ ರಸ್ತೆಗೆ ಬಂದು, ಬಾಲಕನೊಬ್ಬನನ್ನು ಗಾಯಗೊಳಿಸಿದ್ದಲ್ಲದೆ ದ್ವಿಚಕ್ರ ವಾಹನ ಜಖಂ ಮಾಡಿತು. ಆಮೇಲೆ ಯುವಕರು ಬಡಿಗೆ ಹಿಡಿದು ನಿಯಂತ್ರಿಸಿದರು.
ಧಾರವಾಡ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಂದ 70 ಗಾಡಾಗಳು ಪಾಲ್ಗೊಂಡಿದ್ದವು. ಒಂದು ನಿಮಿಷದಲ್ಲಿ 2100 ಅಡಿ ಓಡಿಸುವ ಸ್ಪರ್ಧೆಯಲ್ಲಿ ಒಟ್ಟು 26 ಬಹುಮಾನಗಳಿದ್ದವು. ಶಿಗ್ಗಾಂವಿ-ಸವಣೂರು ಶಾಸಕ ಬಸವರಾಜ ಬೊಮ್ಮಾಯಿ ಕೊಡಮಾಡಿದ ಒಂದು ತೊಲೆ ಬಂಗಾರವನ್ನು ಹಾವೇರಿ ತಾಲೂಕಿನ ಕಂಚಿ ನೆಗಳೂರು ಗ್ರಾಮದ ಜಕ್ಕಯ್ಯ ಯಶವಂತಪ್ಪ ಕಸ್ತೂರಿ ಎಂಬುವರ ಹೋರಿಗಳು ಪಡೆದವು. ಮಡ್ಲಿ ಗ್ರಾಪಂ ಸಮಿತಿ ನೀಡಿದ ಕಬ್ಬಿಣದ ಚಕ್ಕಡಿ ದ್ವಿತೀಯ ಸ್ಥಾನಿ ಕುಂದಗೋಳ ತಾಲೂಕಿನ ಭೂತರ್ಲಘಟ್ಟ ಗ್ರಾಮದ ಉಡಚಮ್ಮ ದೇವಿ ಪಡೆದರು. ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಕೊಡಮಾಡಿದ 20 ತೊಲೆ ಬೆಳ್ಳಿ ಮೂರನೇ ಬಹುಮಾನ ಕುಂದೂರ ನೀರಲಗಿಯ ಸಂಕಪ್ಪ ದೊಡ್ಡಮನಿ ಪಾಲಾಯಿತು.


ಭಕ್ತರಿಂದ ಪವಿತ್ರ ಸ್ನಾನ
ಹಿರೇಕೆರೂರು: ತುಂಗಭದ್ರಾ ನದಿ ದಂಡೆಯಲ್ಲಿರುವ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಭೈರನಪಾದದಲ್ಲಿ ಸಾವಿರಾರು ಭಕ್ತರು ಮಕರ ಸಂಕ್ರಾಂತಿ ಹಬ್ಬದ ನಿಮಿತ್ತ ವಿಶೇಷ ಪೂಜೆ ಸಲ್ಲಿಸಿದರು.
ರೈತರೆಲ್ಲರೂ ಸುಗ್ಗಿ ಮುಗಿಸಿ ನಿರಾಳರಾಗಿದ್ದಾರೆ. ಕೆಲವರು ತಾವು ಬೆಳೆದ ಕಾಳು-ಕಡಿಗಳನ್ನು ಒಕ್ಕಣೆ ಮಾಡಿ, ಮನೆ ತುಂಬಿಸಿಕೊಳ್ಳುವ ತವಕದಲ್ಲಿದ್ದಾರೆ. ಸಂಕ್ರಾಂತಿ ಎಂದರೆ ಹಸಿರು, ಸಂಕ್ರಾಂತಿ ಎಂದರೆ ಸಮೃದ್ಧಿ, ಸಂಕ್ರಾಂತಿ ಎಂದರೆ ಎಳ್ಳು-ಬೆಲ್ಲ. ಹೀಗಾಗಿ, ಸಂಕ್ರಾಂತಿ ಹಬ್ಬ ಎಂದರೆ ಎಲ್ಲರಿಗೂ ಬಲು ಪ್ರೀತಿ.
ಸೂರ್ಯ ತನ್ನ ಪಥ ಬದಲಾಯಿಸುವ ಈ ಶುಭ ದಿನದಂದು ನದಿಯಲ್ಲಿ ಪುಣ್ಯಸ್ನಾನ ಮಾಡುವುದು ವಾಡಿಕೆ. ಹೀಗಾಗಿ, ಆಸ್ತಿಕರು ಕುಮದ್ವತಿ ಹಾಗೂ ತುಂಗಭದ್ರಾ ನದಿಯಲ್ಲಿ ಮಿಂದು ಪುನೀತರಾದರು. ಎಳ್ಳು-ಬೆಲ್ಲ ವಿನಿಮಯ ಮಾಡಿಕೊಂಡು, ಹಬ್ಬದ ಶುಭಾಶಯ ತಿಳಿಸಿದರು.
ಮದಗ ಮಾಸೂರು ಕೆರೆ ಪ್ರವಾಸಿಗರ ಸ್ವರ್ಗ. ತಾಲೂಕು ಕೇಂದ್ರದಲ್ಲಿರುವ ಹಿರೇಕೆರೂರು ದುರ್ಗಾದೇವಿ ಕೆರೆಗೂ ಹೆಚ್ಚು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ಪುಣ್ಯಸ್ನಾನ ಮಾಡಿ, ದುರ್ಗಾದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಕಡೂರ ಸಮೀಪದ ಭಗವತಿ ಕೆರೆಯಲ್ಲಿ ನೀರು ಜಿನುಗುವ ಸ್ಥಳದಲ್ಲಿ ಶಿರವಿಟ್ಟು, ಸ್ನಾನ ಮಾಡಿ, ಪುಣ್ಯ ಸಂಪಾದಿಸಿದರು. ತಿಪ್ಪಾಯಿಕೊಪ್ಪದ ಶ್ರೀ ಮೂಕಪ್ಪ ಶಿವಯೋಗಿಗಳ ಮಠದಲ್ಲೂ ಭಕ್ತರ ದಂಡೇ ನೆರೆದಿತ್ತು.
ಗಂಗಿಭಾವಿಗೆ ಭಕ್ತರ ದಂಡು
ಶಿಗ್ಗಾಂವಿ: ತಾಲೂಕಿನ ಸುಕ್ಷೇತ್ರ ಗಂಗಿಭಾವಿಯಲ್ಲಿ ಮಕರ ಸಂಕ್ರಮಣ ನಿಮಿತ್ತ ಭಕ್ತರು ಶ್ರೀ ರಾಮಲಿಂಗೇಶ್ವರನ ದರ್ಶನ ಪಡೆದರು. ಮುನಿ ಸರೋವರ ತೀರ್ಥಸಾಗರದಲ್ಲಿ ಸ್ನಾನ ಮಾಡಿ, ಪುನೀತರಾದರು. ಚಕ್ಕಡಿ, ಟ್ರ್ಯಾಕ್ಟರ್, ಬೈಕ್‌ಗಳಲ್ಲಿ ಬಂದ ಭಕ್ತರು ಬಂಧು-ಮಿತ್ರರೊಂದಿಗೆ ಸೇರಿ ಹಬ್ಬದೂಟ ಸವಿದರು. ಜೋಕಾಲಿ ಮುಂತಾದ ಮನೋರಂಜನಾ ಚಟುವಟಿಕೆಯಲ್ಲಿ ಮಕ್ಕಳು, ಮಹಿಳೆಯರು ಪಾಲ್ಗೊಂಡು ಸಂಭ್ರಮಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.