ಅತಿಥಿ ಉಪನ್ಯಾಸಕರ ಬಂಧನ: ಪ್ರತಿಭಟನೆ
ಶಿಗ್ಗಾಂವಿ: ಉಪನ್ಯಾಸಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೋಮವಾರ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಾವಿರಕ್ಕೂ ಅಧಿಕ ಅತಿಥಿ ಉಪನ್ಯಾಸಕರು, ಎಸ್ಎಫ್ಐ, ಡಿವೈಎಫ್ಐ ಮುಖಂಡರನ್ನು ಬಂಧಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಶಿಗ್ಗಾಂವಿ ತಾಲೂಕು ಸಮಿತಿ ಖಂಡಿಸಿದ್ದು, ನಗರದ ಕಾಳಿಕಾಮಾತಾ ಐಟಿಐ ಕಾಲೇಜು ಬಳಿ ಪ್ರತಿಭಟನೆ ನಡೆಸಿತು.
ಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶಿ ಮಲ್ಲೇಶ ಗೋಟನವರ ಮಾತನಾಡಿ, ನಮ್ಮ ಹೋರಾಟ ಅತಿಥಿ ಉಪನ್ಯಾಸಕರ ವೇತನ ಅಥವಾ ಉದ್ಯೋಗ ಭದ್ರತೆಗೆ ಸೀಮಿತವಾಗಿಲ್ಲ. ಉನ್ನತ ಶಿಕ್ಷಣವನ್ನು ಸಾಮಾನ್ಯ ಬಡ ವಿದ್ಯಾರ್ಥಿಗಳಿಗೆ ಉಳಿಸುವುದಕ್ಕೂ ಆಗಿದೆ ಎಂದರು.
ಎಸ್ಎಫ್ಐ ತಾಲೂಕು ಅಧ್ಯಕ್ಷ ಸಂತೋಷ ಹಿರೆಹೊಳ್ಳಿ ಮಾತನಾಡಿದರು. ಮಂಜುನಾಥ ಹರಿಜನ, ಈರಣ್ಣ ಚಿಟ್ಟಿ, ಸುನೀಲ ಲಮಾಣಿ ಇದ್ದರು.
ವಿವೇಕಾನಂದ, ನೇತಾಜಿ ಆದರ್ಶ ಪಾಲಿಸಿ
ಹಿರೇಕೆರೂರು: ಸ್ವಾಮಿ ವಿವೇಕಾನಂದರು ಹಾಗೂ ನೇತಾಜಿ ಸುಭಾಶ್ಚಂದ್ರ ಬೋಸ್ ಅವರ ಆದರ್ಶಗಳನ್ನು ವಿದ್ಯಾರ್ಥಿಗಳು ಪಾಲಿಸಬೇಕು. ಭ್ರಷ್ಟಾಚಾರ, ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೂ ಇದೇ ಅಸ್ತ್ರವಾಗಬಲ್ಲದು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಪ್ರಾಂತೀಯ ಸಂಘಟನಾ ಕಾರ್ಯದರ್ಶಿ ಸ್ವಾಮಿ ಮರಳಾಪುರ ಹೇಳಿದರು.
ಎಬಿವಿಪಿ 64ನೇ ಸಂಸ್ಥಾಪನಾ ದಿನದ ಅಂಗವಾಗಿ ರಟ್ಟಿಹಳ್ಳಿಯಲ್ಲಿ ವಿದ್ಯಾರ್ಥಿಗಳನ್ನು ಪುರಸ್ಕರಿಸುವ ಸಮಾರಂಭದಲ್ಲಿ ಅವರು ಮಾತನಾಡಿದರು. ಎಬಿವಿಪಿ ರಟ್ಟಿಹಳ್ಳಿ ಘಟಕದ ಅಧ್ಯಕ್ಷ ಡಾ ಎಂ.ಬಿ. ತಲ್ಲೂರ, ಕುಮಾರೇಶ್ವರ ವಿದ್ಯಾಸಂಸ್ಥೆಯ ಅಧ್ಯಕ್ಷ ಸುರೇಶ ಅಘನಾಶಿನಿಕರ, ಪ್ರಾಚಾರ್ಯ ಎನ್.ಸಿ. ಕಠಾರೆ, ಚಾಮರಾಜ ಕಮ್ಮಾರ, ಉಪನ್ಯಾಸಕ ಡಿ. ಭರಮಗೌಡ ಮಾತನಾಡಿದರು. ಉಪನ್ಯಾಸಕ ಎಸ್.ಪಿ. ಬೆನಕನಕೊಂಡ, ಎಚ್.ವಿ. ಪ್ರಕಾಶ, ಎಂ.ಎಚ್. ಬೆಟ್ಟಣ್ಣನವರ, ಎಬಿವಿಪಿ ಕಾರ್ಯಕರ್ತರಾದ ಪ್ರಶಾಂತ ದ್ಯಾವಕ್ಕಳವರ, ಸುನೀಲ್ ಹೊಳೆಜೋಗಿ, ಮಧು ಹರವಿಶೆಟ್ಟರ, ಗಣೇಶ ಸೊಪ್ಪಿನವರ, ಮನೋಜ ಗೋಣೆಪ್ಪನವರ, ಬಸವರಾಜ ಚಲುವಾದಿ, ದೀಪಕ್ ಕಾಲ್ಪಾಲ್, ಮಂಜು ತಳವಾರ, ಚೇತನ ಅಂಗರಗಟ್ಟಿ, ನಿಂಗರಾಜ ವಾಲಿ, ಪಾಲಾಕ್ಷ ಎನ್ .ಕೆ., ಜಯದೇವ ಹೇಂದ್ರೆ, ಭಾರ್ಗವಿ ಭೀಮಪ್ಪನವರ, ಪವಿತ್ರಾ ಕೂಲೇರ, ರೇಖಾ ಪಿ.ಎಸ್., ದೀಪಾ ಸಾಳುಂಕೆ ಇದ್ದರು. ವಿವೇಕಾನಂದ ಹಾಗೂ ನೇತಾಜಿ ಭಾವಚಿತ್ರಗಳ ಮೆರವಣಿಗೆ ಮಾಡಲಾಯಿತು.
ಸಾಹಿತ್ಯ ಸಮ್ಮೇಳನ ಸ್ಥಳ ನಿಗದಿ ಗೊಂದಲ: ಕಸಾಪ ಸಭೆ ಇಂದು
ಹಾನಗಲ್ಲ: 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿ ಜಿಲ್ಲೆಯ ಯಾವ ಸ್ಥಳದಲ್ಲಿ ನಡೆಸಬೇಕೆಂಬ ನಿಲುವು ಪ್ರಕಟಿಸಲು ಜ. 29ರಂದು ಬುಧವಾರ ಸಂಜೆ 4 ಗಂಟೆಗೆ ಹಾನಗಲ್ಲಿನ ಜನತಾ ಬಾಲಕಿಯರ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಪದಾಧಿಕಾರಿಗಳ ಹಾಗೂ ಸಾಹಿತ್ಯಾಸಕ್ತರ ಸಭೆ ಕರೆಯಲಾಗಿದೆ ಎಂದು ತಾಲೂಕು ಅಧ್ಯಕ್ಷ ವಿ.ಜಿ. ಶಾಂತಪುರಮಠ ತಿಳಸಿದ್ದಾರೆ. ಸೋಮವಾರ ನಡೆದ ಜಿಲ್ಲಾ ಕಾರ್ಯಕಾರಿ ಸಭೆಯಲ್ಲಿ ವೈಯಕ್ತಿಕ ಅಭಿಪ್ರಾಯ ಹೇಳಿದ್ದೇನೆ. ಆದರೆ ಇದು ತಾಲೂಕಿನ ಪರಿಷತ್ ಸದಸ್ಯರು, ಸಾಹಿತ್ಯಾಭಿಮಾನಿಗಳ ಅಭಿಪ್ರಾಯವಲ್ಲ. ಹಾವೇರಿಯಲ್ಲಿ ಸಮ್ಮೇಳನ ನಡೆಸಲು ಹಲವು ಕೊರತೆಗಳಿವೆ ಎಂಬ ಅಭಿಪ್ರಾಯವಿದೆ. ಅದಕ್ಕಾಗಿ ರಾಣಿಬೆನ್ನೂರಿನಲ್ಲಿ ನಡೆಸುವುದು ಸೂಕ್ತ ಎಂದು ಹೇಳಿದ್ದೆ. ಹಾವೇರಿಯಲ್ಲಿ ನಡೆದ ಜಿಲ್ಲಾ ಕಾರ್ಯಕಾರಿ ಸಭೆ ವಾತಾವರಣ ಗಂಭೀರವಾಗಿರುವುದರಿಂದ ಈ ಅಭಿಪ್ರಾಯವನ್ನು ಮರು ಪರಿಶೀಲಿಸುತ್ತಿದ್ದೇನೆ ಎಂದರು. ಬುಧವಾರ ನಡೆಯುವ ಸಭೆಯಲ್ಲಿ ಹಾನಗಲ್ಲ ತಾಲೂಕು ಸಾಹಿತ್ಯ ಸಮ್ಮೇಳನ ನಡೆಸುವ ಕುರಿತೂ ಚರ್ಚಿಸಲಾಗುವುದು ಎಂದರು.
ನಾಳೆ ಜೆಡಿಯು ಸಮಾವೇಶ
ಶಿಗ್ಗಾಂವಿ: ಸಂಯುಕ್ತ ಜನತಾದಳ ಕಾರ್ಯಕರ್ತರ ಸಮಾವೇಶ ಜ. 30ರಂದು ಮಧ್ಯಾಹ್ನ 2 ಗಂಟೆಗೆ ಪಟ್ಟಣದ ಶರೀಫ ಭವನದಲ್ಲಿ ನಡೆಯಲಿದೆ. ರಾಜ್ಯಾಧ್ಯಕ್ಷ ಡಾ ಎಂ.ಪಿ. ನಾಡಗೌಡ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಸಾವಿತ್ರಿ ಗುಂಡಿ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಕೋರಿಶೆಟ್ಟರ ಆಗಮಿಸುವರು. ಹೊಸ ಕಾರ್ಯಕರ್ತರನ್ನು ಪಕ್ಷಕ್ಕೆ ಬರ ಮಾಡಿಕೊಳ್ಳಲಾಗುವುದು ಎಂದು ತಾಲೂಕು ವಿದ್ಯಾರ್ಥಿ ಘಟಕದ ಅಧ್ಯಕ್ಷ ಶಿವಕುಮಾರಸ್ವಾಮಿ ಕೊಟಗಿಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫೆ. 5: ಸಾಮೂಹಿಕ ವಿವಾಹ
ಹಾನಗಲ್ಲ: ಬಮ್ಮನಹಳ್ಳಿ ವಿರಕ್ತಮಠದ ಶಿವಯೋಗೀಶ್ವರ ಸ್ವಾಮಿಗಳ ಪಟ್ಟಾಧಿಕಾರದ 15ನೇ ವಾರ್ಷಿಕೋತ್ಸವ, ಪುರಾಣ ಪ್ರವಚನದ ಅಂಗವಾಗಿ ಫೆ. 5ರಂದು 101 ಜೊತೆ ಉಚಿತ ಸಾಮೂಹಿಕ ವಿವಾಹ ಏರ್ಪಡಿಸಲಾಗಿದೆ. ಆಸಕ್ತರು ಜ. 30ರೊಳಗಾಗಿ ಹೆಸರು ನೋಂದಾಯಿಸಬೇಕೆಂದು ವಿವಾಹ ಸಮಿತಿ ಅಧ್ಯಕ್ಷ ಜಿ.ವಿ. ಕಂಬಾಳಿಮಠ ತಿಳಿಸಿದ್ದಾರೆ. ವಧುವಿಗೆ ತಾಳಿ, ಸೀರೆ, ಖಣ, ವರನಿಗೆ ವಸ್ತ್ರ ಉಪವಸ್ತ್ರಗಳನ್ನು ಶಾಸಕ ಮನೋಹರ ತಹಶೀಲ್ದಾರ್ ನೀಡಲಿದ್ದಾರೆ. ಸುತ್ತೂರು ಸಂಸ್ಥಾನಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು, ಹುಬ್ಬಳ್ಳಿ ಮೂರುಸಾವಿರಮಠದ ಗುರುಸಿದ್ದ ರಾಜಯೋಗೀಂದ್ರ ಸ್ವಾಮಿಗಳು, ಬೆಳಗಾವಿ ಮುಕ್ತಿಮಠದ ಸೋಮೇಶ್ವರ ಶಿವಾಚಾರ್ಯ ಶ್ರೀಗಳು ಪಾಲ್ಗೊಳ್ಳಲಿದ್ದಾರೆ ಎಂದರು. ಸಮಿತಿ ಸದಸ್ಯರಾದ ಸೋಗಾಜಿ ಪುರೋಹಿತ, ಎಸ್.ಎಂ. ಪಾಟೀಲ, ಬಸವರಾಜ ಕೂಡಲಮಠ, ಪ್ರಭುದೇವ ಸಾಲಿಮಠ, ಸಿ.ಜಿ. ಮಲ್ಲಮ್ಮನವರ ಇದ್ದರು.
ಹೈನುಗಾರಿಕೆ ಶಿಬಿರ
ಶಿಗ್ಗಾಂವಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹೈನುಗಾರಿಕಾ ತರಬೇತಿ ಶಿಬಿರ ಹತ್ತಿಮತ್ತೂರ ವಲಯದ ಬಸವನಕೊಪ್ಪ ಗ್ರಾಮದಲ್ಲಿ ಜರುಗಿತು. ಹೈನುಗಾರಿಕೆ ಅಧಿಕಾರಿ ಪ್ರವೀಣ ದೊಡ್ಡಮನಿ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಯೋಜನೆಯ ನೀರು-ನೈರ್ಮಲ್ಯ ಸಂಯೋಜಕ ಗುರುರಾಜ ಪ್ರಾಸ್ತಾವಿಕ ಮಾತನಾಡಿದರು. ನಾಗರಾಜ ವಂದಿಸಿದರು.
ಆಹಾರ ಪಡಿತರ ಖಾತ್ರಿ ಯೋಜನೆ ಜಾರಿ
ಹಾವೇರಿ: ಫೆಬ್ರವರಿ ತಿಂಗಳಿಂದ ಆಹಾರಧಾನ್ಯ ಹಂಚಿಕೆಗೆ ಸಂಬಂಧಿಸಿ ಬಿಪಿಎಲ್ ಆಹಾರಧಾನ್ಯಗಳ ಪ್ರಮಾಣವನ್ನು ಪರಿಷ್ಕೃತಗೊಳಿಸಿ ಹಂಚಿಕೆ ಮಾಡಲಾಗಿದೆ. ಜನವರಿ ತಿಂಗಳಿಂದ ಸೀಮೆಎಣ್ಣೆ ದರ ಏಕರೂಪದಲ್ಲಿ ಪ್ರತಿ ಲೀಟರ್ಗೆ ರು. 17.50ರಂತೆ ಪರಿಷ್ಕೃತಗೊಂಡಿದೆ ಎಂದು ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ತಿಳಿಸಿದ್ದಾರೆ. ಅಂತ್ಯೋದಯ ಯೋಜನೆ ಫಲಾನುಭವಿಗಳಿಗೆ ಪ್ರತಿ ಕೆಜಿಗೆ ರು. 1ರಂತೆ 29 ಕೆಜಿ ಅಕ್ಕಿ ಹಾಗೂ 6 ಕೆಜಿ ಗೋದಿ, ಬಿಪಿಎಲ್ ಏಕ ಸದಸ್ಯ ಫಲಾನುಭವಿಗಳಿಗೆ ಪ್ರತಿ ಕೆಜಿಗೆ ರು. 1ರಂತೆ 6 ಕೆಜಿ ಅಕ್ಕಿ ಹಾಗೂ 4 ಕೆಜಿ ಗೋದಿ, ದ್ವಿಸದಸ್ಯ ಫಲಾನುಭವಿಗಳಿಗೆ ಪ್ರತಿ ಕೆಜಿಗೆ ರು. 1ರಂತೆ 14 ಕೆಜಿ ಅಕ್ಕಿ ಹಾಗೂ 6 ಕೆಜಿ ಗೋದಿ, ತ್ರಿ ಸದಸ್ಯ ಹಾಗೂ ಮೇಲ್ಪಟ್ಟ ಕುಟುಂಬಕ್ಕೆ ಪ್ರತಿ ಕೆಜಿಗೆ ರು. 1ರಂತೆ 20 ಕೆಜಿ ಅಕ್ಕಿ ಹಾಗೂ 10 ಕೆಜಿ ಗೋದಿ ವಿತರಿಸಲಾಗುವುದು. ಫೆಬ್ರವರಿ ತಿಂಗಳಿಂದ ಪಡಿತರ ಖಾತ್ರಿ ಯೋಜನೆ ಜಾರಿಯಾಗಲಿದ್ದು, ನ್ಯಾಯಬೆಲೆ ಅಂಗಡಿಯವರು ಪ್ರತಿ ತಿಂಗಳು 1ರಿಂದ 10ನೇ ತಾರೀಖಿನವರೆಗೆ ಬೆಳಗ್ಗೆ 8ರಿಂದ ರಾತ್ರಿ 8 ಗಂಟೆ ವರೆಗೆ ಹಾಗೂ ರಜಾ ದಿನ ಹೊರತುಪಡಿಸಿ ಫೆ. 11ರಿಂದ ತಿಂಗಳ ಅಂತ್ಯದವರೆಗೆ ಬೆಳಗ್ಗೆ 8ರಿಂದ ಮಧ್ಯಾಹ್ನ 12ರ ತನಕ ಮತ್ತು ಸಂಜೆ 4ರಿಂದ ರಾತ್ರಿ 8 ಗಂಟೆ ವರೆಗೆ ಕಡ್ಡಾಯವಾಗಿ ಪಡಿತರ ವಿತರಣೆಗೆ ಆದೇಶ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ದೂರುಗಳಿದ್ದಲ್ಲಿ ಸಾರ್ವಜನಿಕರು ತಹಸೀರ್ದಾರ್, ತಾಪಂ ಇಒ ಹಾಗೂ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಆಹಾರ ವಿಭಾಗವನ್ನು ಸಂಪರ್ಕಿಸಬೇಕೆಂದು ತಿಳಿಸಿದ್ದಾರೆ.
ನೌಕರರ ಸಂಘಕ್ಕೆ ನೇಮಕ
ಹಾವೇರಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಹಾವೇರಿ ಜಿಲ್ಲಾ ಘಟಕಕ್ಕೆ ಆಡಳಿತ ನಿಯಮದ ಪ್ರಕಾರ 2013-18ರ ಅವಧಿಯ ಕಾರ್ಯಕಾರಿ ಸಮಿತಿಗೆ ಜಿಪಂ ಶೀಘ್ರ ಲಿಪಿಗಾರ ಪಿ.ಎಂ. ಸಾಲಿಮಠ ಅವರನ್ನು ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿ ಜಿಲ್ಲಾ ಸಂಘದ ಅಧ್ಯಕ್ಷ ಎಸ್.ಬಿ. ಕಿನ್ನಾಳ ಆದೇಶ ಹೊರಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

