ಸಾಹಿತ್ಯ ಸಮ್ಮೇಳನ ಗೊಂದಲ ಬೇಡ: ಉದಾಸಿ
ಕನ್ನಡಪ್ರಭ ವಾರ್ತೆ, ಹಾನಗಲ್ಲ, ಜ. 30
ಅಖಿಲ ಭಾರತ 81ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಕುರಿತು ಸ್ಥಳದ ಗೊಂದಲಕ್ಕೆ ಅವಕಾಶವಿಲ್ಲದೆ ಅರ್ಥಪೂರ್ಣವಾಗಿ ನಡೆಸುವ ಅಗತ್ಯವಿದೆ ಎಂದು ಮಾಜಿ ಸಚಿವ ಸಿ.ಎಂ. ಉದಾಸಿ ತಿಳಿಸಿದರು.
ಹಾನಗಲ್ಲಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಾಹಿತ್ಯ, ಸಾಂಸ್ಕೃತಿಕ ಹಿರಿಮೆಯ ಹಾವೇರಿ ಜಿಲ್ಲೆಗೆ ಬಹಳ ಪ್ರಯತ್ನದಿಂದ ಸಮ್ಮೇಳನ ನಡೆಸುವ ಅವಕಾಶ ದೊರೆತಿದೆ. ಇಂಥ ಸಂದರ್ಭದಲ್ಲಿ ಹಾವೇರಿ ಜಿಲ್ಲೆಯಲ್ಲಿಯೇ ಸ್ಥಳ ಆಯ್ಕೆ ಮಾಡುವ ಗೊಂದಲ ಸೃಷ್ಟಿಸುವುದು ಬೇಡ. ಕಸಾಪ ಕಾರ್ಯಕಾರಿ ಸಮಿತಿಯು ಜಿಲ್ಲೆಯ ಸಾಹಿತಿಗಳು, ಪರಿಷತ್ ಸದಸ್ಯರು, ಸಂಘ-ಸಂಸ್ಥೆಗಳು, ಮಠಾದೀಶರು, ಚುನಾಯಿತ ಜನಪ್ರತಿನಿಧಿಗಳನ್ನು ಸಂಪರ್ಕಿಸಿ ಒಂದು ಸಭೆ ನಡೆಸಿ ತೀರ್ಮಾನಕ್ಕೆ ಬರುವುದು ಉಚಿತ. ಇದಕ್ಕೆ ರಾಜ್ಯ ಕಾರ್ಯಕಾರಿ ಸಮಿತಿಯ ಮಾರ್ಗದರ್ಶನ ಪಡೆಯಬೇಕು. ಗೊಂದಲ ಸೃಷ್ಟಿಸಿ ಸಮ್ಮೇಳನ ಕೈ ತಪ್ಪುವಂತೆ ಮಾಡುವುದು ಬೇಡ ಎಂದು ಸಲಹೆ ಮಾಡಿದರು.
ಹಾವೇರಿಯಲ್ಲಿ ಸಮ್ಮೇಳನ ನಡೆಸಲು ಯಾವುದೇ ವ್ಯವಸ್ಥೆಯ ಕೊರತೆ ಇಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಇಚ್ಛಾಶಕ್ತಿಯಿಂದ ಒಗ್ಗೂಡಿ ಕೆಲಸ ಮಾಡುವ ಅಗತ್ಯವಿದೆ. ಒಮ್ಮೆ ಅಸಹಕಾರ ಹುಟ್ಟು ಹಾಕಿದರೆ ಸಮ್ಮೇಳನ ಯಶಸ್ವಿಯಾಗುವುದು ಕಷ್ಟ. ಸಮ್ಮೇಳನ ಮಡಿಕೇರಿಯಲ್ಲಿ ಘೋಷಣೆಯಾದ ನಂತರ ಹಾವೇರಿಯಲ್ಲಿ ಜಿಲ್ಲೆಯ ಸಾಹಿತ್ಯಾಸಕ್ತರು, ಜನಪ್ರತಿನಿಧಿಗಳು. ಸಂಘ-ಸಂಸ್ಥೆಗಳು, ಪರಿಷತ್ ಸದಸ್ಯರನ್ನೊಳಗೊಂಡು ಸಭೆಯೊಂದನ್ನು ನಡೆಸಿ ಸಮಾಲೋಚಿಸಿ ನಿರ್ಣಯ ಪ್ರಕಟಿಸಿದ್ದರೆ ಇಂತಹ ಗೊಂದಲ ಸೃಷ್ಟಿಯಾಗುತ್ತಿರಲಿಲ್ಲ. ಸೌಹಾರ್ದ ವಾತಾವರಣ ಮೂಡಿಸಿ ಹಾವೇರಿ ಜಿಲ್ಲೆಗೆ ಬಂದ ಸಮ್ಮೇಳನವನ್ನು ಅರ್ಥಪೂರ್ಣವಾಗಿ ನಡೆಸುವ ನಿಟ್ಟಿನಲ್ಲಿ ಸಮನ್ವಯದ ನಿರ್ಣಯ ತೆಗೆದುಕೊಳ್ಳುವುದು ಈಗಿನ ಅಗತ್ಯವಾಗಿದೆ. ಅನಗತ್ಯ ವಿವಾದಕ್ಕೆ ಅವಕಾಶ ನೀಡದೆ ಸಮ್ಮೇಳನದ ವಿಷಯದಲ್ಲಿ ಜಾಗೃತಿಯಿಂದ ಮುನ್ನಡೆಯಲು ಜಿಲ್ಲಾ ಕಾರ್ಯಕಾರಿ ಸಮಿತಿ ಕಾಳಜಿ ವಹಿಸಬೇಕು ಎಂದು ಅವರು ಸಲಹೆ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

