ಹಾವೇರಿ

ಹಾವೇರಿ-ಕಾರವಾರ ಹೆದ್ದಾರಿ ಶೀಘ್ರ

Published On :

ಹಾವೇರಿ: ಬಂದರು ಸಂಪರ್ಕಿಸುವ ಹಾಗೂ ರಾಷ್ಟ್ರೀಯ ಹೆದ್ದಾರಿ 17, 13 ಹಾಗೂ 4ನ್ನು ಸಂಪರ್ಕಿಸುವ ಹಾವೇರಿ-ಕಾರವಾರ ಮತ್ತು ಕೈಗಾ ನೂತನ ರಾಷ್ಟ್ರೀಯ ಹೆದ್ದಾರಿಗೆ ಶೀಘ್ರದಲ್ಲಿಯೇ ಮಂಜೂರಾತಿ ದೊರೆಯಲಿದೆ ಎಂದು ಸಂಸದ ಶಿವಕುಮಾರ ಉದಾಸಿ ಭರವಸೆ ವ್ಯಕ್ತಪಡಿಸಿದರು.
ನಗರಸಭೆ ಆಡಳಿತ ಮಂಡಳಿ ಏರ್ಪಡಿಸಿದ್ದ ಪೌರಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ನೂತನ ಹೆದ್ದಾರಿಯು ಕಾರವಾರ ಕೈಗಾ, ಗದಗ, ಹಾವೇರಿ, ಹಾನಗಲ್ಲ ಮತ್ತಿತರ ನಗರಗಳನ್ನು ಹಾದು ಹೋಗಲಿದೆ. ಈ ಬಗ್ಗೆ ಈಗಾಗಲೆ ತಾವು ಕೇಂದ್ರ ಸರ್ಕಾರದ ಅಧಿಕಾರಿಗಳ ಜತೆ ಮಾತನಾಡಿದ್ದು, ಶೀಘ್ರದಲ್ಲಿಯೇ ಈ ಯೋಜನೆಗೆ ಅಂಗೀಕಾರ ದೊರೆಯುವ ವಿಶ್ವಾಸವಿದೆ ಎಂದರು.
ಹಾವೇರಿ ನಗರದ ನಾಗೇಂದ್ರನ ಮಟ್ಟಿಯ ರೇಲ್ವೆ ಕೆಳಸೇತುವೆ ತುಂಬಾ ಚಿಕ್ಕದಿರುವುದು ತಮ್ಮ ಗಮನಕ್ಕೆ ಬಂದಿದ್ದು, ಇಲ್ಲಿ ರಸ್ತೆ ಅಗಲಗೊಳಿಸುವ ಬಗ್ಗೆ ರೈಲ್ವೆ ಅಧಿಕಾರಿಗಳು ಜೊತೆ ಚರ್ಚಿಸಿ ಇದಕ್ಕೆ ಪರಿಹಾರ ಕಂಡುಕೊಳ್ಳಲಾಗುವುದು. ಜಿಲ್ಲೆಯ ಬ್ಯಾಡಗಿ, ರಾಣಿಬೆನ್ನೂರು ತಾಲೂಕಿನಲ್ಲಿ ಹಾಗೂ ಗದಗ ಜಿಲ್ಲೆಯಲ್ಲಿ ಅವಶ್ಯವಿರುವ ಕಡೆಗಳಲ್ಲಿ ಆರ್‌ಓಬಿ ನಿರ್ಮಿಸಲಾಗುವುದು ಎಂದರು.
ಕೇಂದ್ರ ಸರ್ಕಾರದಲ್ಲಿ ಸ್ಲಂಗಳ ಅಭಿವೃದ್ಧಿಗೆ ಅನೇಕ ಕಾರ್ಯಕ್ರಮಗಳಿವೆ. ಹಾವೇರಿ ನಗರದ ಅಭಿವೃದ್ಧಿಗೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ರು. 93 ಕೋಟಿ ಪ್ರಸ್ತಾವನೆ ವಾಪಸ್ ಬಂದಿದೆ. ಹೆಗ್ಗೇರಿ ಕೆರೆ ಅಭಿವೃದ್ಧಿಗೆ ಸೇರಿದಂತೆ ಅನೇಕ ಯೋಜನೆಗಳ ಬಗ್ಗೆ ಪ್ರಸ್ತಾವನೆ ನೀಡಿದರೆ, ಕೇಂದ್ರ ಸರ್ಕಾರದ ಸಚಿವಾಲಯದ ಜೊತೆ ಚರ್ಚಿಸಿ ಇವುಗಳ ಮಂಜೂರಾತಿಗೆ ಪ್ರಯತ್ನಿಸುವುದಾಗಿ ಸಂಸದ ಶಿವಕುಮಾರ ಉದಾಸಿ ಭರವಸೆ ನೀಡಿದರು.
ನಗರಗಳ ಅಭಿವೃದ್ಧಿಗೆ ಯೋಜನಾ ಬದ್ಧ ಕಾರ್ಯಕ್ರಮ ರೂಪಿಸುವ ಅಗತ್ಯವಿದೆ. ಜನರು ಸಹ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸ್ಪಂದಿಸಬೇಕು. ಅಂದಾಗ ಯಾವುದೆ ಯೋಜನೆಗಳು ಯಶಸ್ವಿಯಾಗಲು ಸಾಧ್ಯ. ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಮಾಡದೆ ಜಿಲ್ಲೆಯ ಅಭಿವೃದ್ಧಿಗೆ ಪಕ್ಷ ಭೇದ ಮರೆತು ಶ್ರಮಿಸೋಣ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ಸಂಜೀವಕುಮಾರ ನೀರಲಗಿಯವರನ್ನು ಇದೇ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಸಂಜೀವಕುಮಾರ ನೀರಲಗಿ ಮಾತನಾಡಿ, ಹಾವೇರಿಯಲ್ಲಿ ವಿಶೇಷ ಕೈಗಾರಿಕಾ ವಲಯ ಸ್ಥಾಪನೆ ಅಗತ್ಯವಿದೆ. ಟಾಟಾ ಉಕ್ಕು ಕಾರ್ಖಾನೆ ಸ್ಥಾಪನೆಯಾದರೆ ಅನೇಕ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಈ ನಿಟ್ಟಿನಲ್ಲಿ ಸಂಸದ ಶಿವಕುಮಾರ ಉದಾಸಿ ಕಾರ್ಯಪ್ರವೃತ್ತರಾಗಬೇಕೆಂದು ಮನವಿ ಮಾಡಿದರು.
ನಗರಸಭೆ ಅಧ್ಯಕ್ಷ ಐ.ಯು. ಪಠಾಣ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ರತ್ನಾ ಭೀಮಕ್ಕನವರ, ಪೌರಾಯುಕ್ತ ಶಿವಕುಮಾರಯ್ಯ, ಸದಸ್ಯರಾದ ರಮೇಶ ಕಡಕೋಳ, ಸುರೇಶ ದೊಡ್ಡಮನಿ, ಗುಡ್ಡನಗೌಡ ಅಂದಾನಿಗೌಡ್ರ, ಶಿವಬಸವ ವನಳ್ಳಿ, ಹನುಮಂತಪ್ಪ ದೇವಗೆರಿ, ಜಗದೀಶ ಮಲಗೋಡ, ಮಲ್ಲೇಶಪ್ಪ ಪಟ್ಟಣಶೆಟ್ಟಿ, ಕರಬಸಪ್ಪ ಹಳದೂರು, ಸಚಿನ ಡಂಬಳ, ಇರ್ಫಾನ್ ಪಠಾಣ, ಡಾ. ಮಲ್ಲೇಶಪ್ಪ ಹರಿಜನ, ಉಳೆವೆಪ್ಪ ಹಲಗಣ್ಣನವರ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.