ಒಕ್ಕಲೆಬ್ಬಿಸಿದವರನ್ನು ಮರೆತ ನಗರಸಭೆ
ಕನ್ನಡಪ್ರಭ ವಾರ್ತೆ, ಹಾವೇರಿ, ಜೂ. 8
ಮೂಗು ಮುಚ್ಚಿಕೊಂಡೇ ಇರುವಷ್ಟು ಕೊಳಚೆ, ಕಾಲಿಟ್ಟಲ್ಲೆಲ್ಲ ತ್ಯಾಜ್ಯ, ಸ್ವಚ್ಛತೆ ಇಲ್ಲದೆ ಅಸಹ್ಯ ಹುಟ್ಟಿಸುವಂಥ ವಾತಾವರಣದ ಮಧ್ಯೆ ಜೀವನ. ಇದು ನಗರಸಭೆ ವ್ಯಾಪ್ತಿಯ ಶಾಂತಿನಗರದ ನಿವಾಸಿಗಳ ಸದ್ಯದ ಸ್ಥಿತಿ.
ಹೌದು, ನಗರಸಭೆಯ ವಾರ್ಡ್ ಸಂಖ್ಯೆ 3ರ ಶಾಂತಿನಗರ ನಿವಾಸಿಗಳು ಅಕ್ಷರಶಃ ಸ್ಲಂ ಏರಿಯಾದಲ್ಲಿ ಜೀವನ ನಡೆಸುತ್ತಿದ್ದಾರೆ. 6 ವರ್ಷಗಳ ಹಿಂದೆ ಅವರು ನಗರದ ಮಧ್ಯಭಾಗದ ಅಕ್ಕಮಹಾದೇವಿ ಹೊಂಡದಿಂದ ಸ್ಥಳಾಂತರಗೊಂಡವರು. ಹೊಂಡ ಅತಿಕ್ರಮಣ ಮಾಡಿಕೊಂಡು ಸುಮಾರು 25-30 ವರ್ಷಗಳಿಂದ ಜೀವನ ಸಾಗಿಸುತ್ತಿದ್ದವರನ್ನು ಹೊಂಡ ದುರಸ್ತಿ ಕಾಮಗಾರಿ ವೇಳೆ ಶಾಂತಿನಗರಕ್ಕೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ಆಶ್ರಯ ಯೋಜನೆಯಡಿ ಮನೆ ನೀಡಿ ಒಕ್ಕಲೆಬ್ಬಿಸಲಾಗಿತ್ತು. ಮನೆ ನಿರ್ಮಿಸಿಕೊಟ್ಟು ಇನ್ನು ಬಡಾವಣೆಯಲ್ಲಿ ಅಗತ್ಯ ಮೂಲ ಸೌಲಭ್ಯ ಕಲ್ಪಿಸುತ್ತಾರೆ ಎಂದು ಕಾದಿದ್ದ ಸುಮಾರು 70ರಷ್ಟು ಕುಟುಂಬಗಳು ಇಂದು ಪರಿತಪಿಸುತ್ತಿದ್ದಾರೆ. ಗಿಡಗಂಟಿಗಳು ಬೆಳೆದು ವಿಷಜಂತುಗಳ ಮಧ್ಯೆ ಕತ್ತಲೆಯಲ್ಲಿ ಜೀವನ ಸಾಗುತ್ತಿದ್ದಾರೆ. ಇಷ್ಟೆಲ್ಲ ದಯನೀಯ ಸ್ಥಿತಿಯಲ್ಲಿ ಅವರು ಬದುಕುತ್ತಿದ್ದರೂ ನಗರಸಭೆ ಮಾತ್ರ ತನಗೆ ಸಂಬಂಧಿಸಿದ್ದಲ್ಲ ಎಂಬಂತೆ ವರ್ತಿಸುತ್ತಿರುವುದು ಶಾಂತಿನಗರ ಬಡಾವಣೆ ನಿವಾಸಿಗಳಿಗೆ ಬೇಸರ ಮೂಡಿಸಿದೆ.
ಶೌಚಾಲಯವೇ ಇಲ್ಲ: ಯಾವುದೇ ಸೌಲಭ್ಯ ಇಲ್ಲದೆಯೂ ಶಾಂತಿನಗರ ಬಡಾವಣೆ ಜನತೆ ಇದುವರೆಗೂ ಶಾಂತವಾಗಿಯೇ ಇದ್ದಾರೆ. ನಗರದಲ್ಲೇ ಇದ್ದರೂ ಅಲ್ಲಿಯ ಜನರನ್ನು ಅನಾಗರಿಕರಂತೆ ಇರಿಸಲಾಗಿದೆ. ಶೌಚಾಲಯ ವ್ಯವಸ್ಥೆ ಕೂಡ ಕಲ್ಪಿಸದ್ದರಿಂದ ನಿವಾಸಿಗಳು ಅಕ್ಕಪಕ್ಕದ ಹೊಲಗಳಿಗೆ ಹೋಗುತ್ತಿದ್ದಾರೆ. ಆದರೆ, ಹೊಲಗಳ ರೈತರು ಶಾಂತಿನಗರದ ಜನರು ಬಹಿರ್ದೆಸೆಗೆ ಬರುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಸಮಸ್ಯೆ ಎದುರಾಗಿದೆ. ಕಲುಷಿತ ವಾತಾವರಣದಿಂದಾಗಿ ಬಡಾವಣೆಯ ಮಕ್ಕಳು ಆಸ್ಪತ್ರೆ ಸೇರುವುದು ಮಾಮೂಲಿ ಎನ್ನುವಂತಾಗಿದೆ.
ಎಲ್ಲವೂ ಅವ್ಯವಸ್ಥೆ: ಶಾಂತಿನಗರದಲ್ಲಿ ಯಾವ ವ್ಯವಸ್ಥೆಯೂ ಸಮರ್ಪಕವಾಗಿಲ್ಲ. ಬೀದಿ ದೀಪಗಳು ಉರಿಯುವುದೇ ಅಪರೂಪ. ರಸ್ತೆಯಂತೂ ಇಲ್ಲ. ಕುಡಿಯುವ ನೀರಿನ ಸೌಲಭ್ಯವೂ ಸರಿಯಾಗಿಲ್ಲ. ಟ್ಯಾಂಕ್ ಇದ್ದರೂ ಪೈಪ್ ಲೈನ್ ಸಂಪರ್ಕ ನೀಡಿಲ್ಲ. 70 ಕುಟುಂಬಗಳಿಗೆ ಸೇರಿದಂತೆ 1 ಬೋರ್ವೆಲ್ ಇದ್ದು, ಬೇಸಿಗೆ ಸಂದರ್ಭ ಸವಳು ನೀರು ಬರುತ್ತಿದೆ. ಇನ್ನು ಕೆಲವರು ಮನೆಯಿಲ್ಲದೇ ಗುಡಿಸಲು ಹಾಕಿಕೊಂಡಿದ್ದಾರೆ. ನಗರಸಭೆಯವರು ಈ ಬಡಾವಣೆಯನ್ನೇ ಮರೆತಂತಿದ್ದು, ಕಸ ವಿಲೇವಾರಿ, ಶೌಚಾಲಯ ನಿರ್ಮಾಣದತ್ತ ಗಮನ ನೀಡಿಲ್ಲ. ಚುನಾವಣೆ ಸಂದರ್ಭ ಮಾತ್ರ ಬಡಾವಣೆ ಕಡೆಗೆ ಜನಪ್ರತಿನಿಧಿಗಳು ಬರುತ್ತಾರೆ. ನಂತರ ಸಮಸ್ಯೆ ತೆಗೆದುಕೊಂಡು ಹೋದರೆ ತಮಗೆ ಸಂಬಂಧಿಸಿದ್ದಲ್ಲ ಎಂಬ ಉತ್ತರ ನೀಡುತ್ತಾರೆ ಎಂದು ಬಡಾವಣೆಯ ನಿವಾಸಿ ಶ್ರೀಕಾಂತ ಕೊರವರ ಆಕ್ರೋಶ ವ್ಯಕ್ತಪಡಿಸುತ್ತಾರೆ.
ಶೀಘ್ರದಲ್ಲಿ ಸೌಲಭ್ಯ: ಈ ಕುರಿತು 3ನೇ ನಂ. ವಾರ್ಡಿನ ಸದಸ್ಯ ಮಲ್ಲೇಶಪ್ಪ ಪಟ್ಟಣಶೆಟ್ಟಿ ಅವರನ್ನು ಕೇಳಿದಾಗ, ಶಾಂತಿನಗರದ ಆಶ್ರಯ ನಿವೇಶನ ಬಡಾವಣೆ ಸೌಲಭ್ಯ ವಂಚಿತವಾಗಿರುವುದು ಗಮನಕ್ಕೆ ಬಂದಿದೆ. ಶೌಚಾಲಯ ಇಲ್ಲದ್ದರಿಂದ ತೊಂದರೆಯಾಗಿದೆ. ಶೌಚಾಲಯ ಕಟ್ಟಿಸಿಕೊಡುವಂತೆ ಶಾಸಕರಲ್ಲಿ ಮನವಿ ಮಾಡಲಾಗಿದ್ದು, ಅವರು ಒಪ್ಪಿಗೆ ನೀಡಿದ್ದಾರೆ. ನೀರಿನ ಸೌಲಭ್ಯಕ್ಕಾಗಿ ಪೈಪ್ಲೈನ್ ಇಲ್ಲದ್ದರಿಂದ ಸಮಸ್ಯೆಯಾಗಿದೆ. ಆಶ್ರಯ ಯೋಜನೆಗಾಗಿಯೇ ರು. 1 ಕೋಟಿ ಅನುದಾನ ಬಂದಿದ್ದು, ಅಂಗನವಾಡಿ, ಶೌಚಾಲಯ, ಚರಂಡಿ, ರಸ್ತೆ ಇತ್ಯಾದಿ ಸೌಲಭ್ಯ ಶೀಘ್ರದಲ್ಲಿ ಕಲ್ಪಿಸಲಾಗುವುದು. ಶಾಂತಿನಗರದ ಸಮಸ್ಯೆ ಕುರಿತು ಪೌರಾಯುಕ್ತರ ಗಮನಕ್ಕೂ ತರಲಾಗಿದೆ ಎಂದು ತಿಳಿಸಿದ್ದಾರೆ.
ನಾರಾಯಣ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

