ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ
ಹಾನಗಲ್ಲ: ಪರಿಸರ ಸಂರಕ್ಷಣೆ ಮತ್ತು ನೈಸರ್ಗಿಕ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಾಮೂಹಿಕ ಜವಾಬ್ದಾರಿ ಪ್ರದರ್ಶಿಸಬೇಕಿದೆ. ಹೊಣೆಗಾರಿಕೆಯನ್ನು ಸರ್ಕಾರ ಅಥವಾ ಇನ್ನೊಬ್ಬರ ಮೇಲೆ ಹೊರಿಸಿ ಮೌನ ವಹಿಸುವುದು ಸಲ್ಲದು ಎಂದು ಮುಖ್ಯೋಪಾಧ್ಯಾಯ ಎಂ.ಎನ್. ಚಿಲಕವಾಡ ಹೇಳಿದರು.
ತಾಲೂಕಿನ ಯಳ್ಳೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪರಿಸರದ ಕುರಿತು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಚಿತ್ರ ಬಿಡಿಸುವ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು, ಹಿಂದಿನ ಕಾಲದವರಿಗೆ ಪರಿಸರದ ಮೇಲಿದ್ದ ಪ್ರೀತಿ, ಆಸಕ್ತಿ ಇಂದಿಗೆ ಯುವ ಸಮೂಹದಲ್ಲಿ ಇಲ್ಲದಂತಾಗಿದೆ. ಇತ್ತೀಚಿನ ಕೆಲ ವರ್ಷಗಳಲ್ಲಿ ಪರಿಸರ ನಾಶ ಹೆಚ್ಚಲು ಜನರ ದುರಾಸೆಯೇ ಪ್ರಮುಖ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಿಕ್ಷಕ ಟಿ. ಶಿವಕುಮಾರ ಮಾತನಾಡಿ, ಮಲೆನಾಡಿನ ಜನರು ಭಾಗ್ಯವಂತರು. ಶುದ್ಧ ನೀರು, ಗಾಳಿ ಸೇವಿಸುತ್ತಿದ್ದಾರೆ. ಬಯಲು ಸೀಮೆಯ ವಿದ್ಯಾರ್ಥಿಗಳಿಗೆ ಹೋಲಿಸಿದರೆ ಮಲೆನಾಡಿನ ಮಕ್ಕಳು ವಿಭಿನ್ನ ಚಟುವಟಿಕೆಗಳಲ್ಲಿ ತೊಡಗಿ ತಮ್ಮ ಬಿಡುವಿನ ವೇಳೆ ಕಳೆಯುತ್ತಾರೆ. ಈ ನಿಟ್ಟಿನಲ್ಲಿ ಮಲೆನಾಡಿನ ಜನರಿಗೆ ಪರಿಸರದ ಮೇಲೆ ಹೆಚ್ಚು ಕಾಳಜಿಯಿದೆ ಎಂದರು. ಶಿಕ್ಷಕ ಆರ್.ಎನ್. ಜವಳಿ ಸೇರಿದಂತೆ ಎಸ್ಡಿಎಂಸಿ ಸದಸ್ಯರು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.
ಕಾಲೇಜಿನಲ್ಲಿ ಸಮಸ್ಯೆ: ಪ್ರತಿಭಟನೆ
ಸವಣೂರು: ಪ್ರವೇಶ ನೀಡುವಲ್ಲಿ ವಿಳಂಬ, ಮೂಲಸೌಲಭ್ಯಗಳ ಕೊರತೆ, ಪ್ರಾಚಾರ್ಯರು ಹಾಗೂ ಉಪನ್ಯಾಸಕರ ಗೈರು ಹಾಜರಿ ಖಂಡಿಸಿ ಪಟ್ಟಣದ ಹೊರವಲಯದ ಲಲಿತಾದೇವಿ ಸಿಂಧೂರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.
ಕಾಲೇಜಿನ ಅವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿಗಳು, ಕಳೆದ 8 ದಿನಗಳಿಂದ ಪ್ರಾಚಾರ್ಯರು, ಕೆಲ ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿ ಕಾಲೇಜಿಗೆ ಬಂದಿಲ್ಲ. ಹೊಸ ಶೈಕ್ಷಣಿಕ ವರ್ಷ ಪ್ರಾರಂಭಗೊಂಡಿದ್ದು, ಪದವಿ ತರಗತಿಗೆ ಪ್ರವೇಶ ಕೋರಿ ಬರುವ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಓರ್ವ ಗುಮಾಸ್ತ, ಕೆಲ ಅತಿಥಿ ಉಪನ್ಯಾಸಕರು ಪ್ರವೇಶ ನೀಡುವ ಕೆಲಸಕ್ಕೆ ಮುಂದಾಗಿದ್ದಾರೆ. ಇಲಾಖೆ ನಿಯಮಗಳ ಗಂಧ ಗಾಳಿ ಗೊತ್ತಿಲ್ಲದ ಇವರು ತಮಗೆ ತಿಳಿದ ರೀತಿ ಪ್ರವೇಶಾತಿ ಮಾಡಿಕೊಳ್ಳುತ್ತಿದ್ದು, ಅಮಾಯಕ ವಿದ್ಯಾರ್ಥಿಗಳು ಪ್ರವೇಶಕ್ಕಾಗಿ ನಿತ್ಯ ಅಲೆದಾಡುವಂತಾಗಿದೆ. ಶಿಕ್ಷಣ ಇಲಾಖೆ ನಿಗದಿಪಡಿಸಿದ ಶುಲ್ಕಕ್ಕಿಂತ ಹೆಚ್ಚಿನ ಹಣ ಪಡಿಯುತ್ತಿದ್ದಾರೆ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆರೋಪಿಸಿದರು.
ನಗರದಿಂದ 3 ಕಿಮೀ ಅಂತರದ ವಿದ್ಯಾಲಯಕ್ಕೆ ಬಸ್ ನಿಲುಗಡೆ ವ್ಯವಸ್ಥೆಯಿಲ್ಲ, ಕಾಲೇಜಿನಲ್ಲಿ ವಿದ್ಯುತ್, ನೀರು, ಶೌಚಾಲಯ ಹಾಗೂ ಸಮರ್ಪಕ ಆಸನಗಳ ವ್ಯವಸ್ಥೆ ಇಲ್ಲ. ತಿಂಗಳಲ್ಲಿ ಕೆಲ ದಿನಗಳ ಮಟ್ಟಿಗೆ ಸಂದರ್ಶಕರ ರೀತಿ ವಿದ್ಯಾಲಯಕ್ಕೆ ಭೇಟಿ ನೀಡುವ ಪ್ರಾಚಾರ್ಯರು, ವಿದ್ಯಾರ್ಥಿಗಳ ಭವಿಷ್ಯದ ಜತೆಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಪೋಷಕರು ಆರೋಪಿಸಿದರು. ಶಿಕ್ಷಣ ಇಲಾಖೆಯವರು ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಬಲೀಕರಣ ಶ್ಲಾಘನೀಯ: ಶಾಸಕ ಯು.ಬಿ. ಬಣಕಾರ
ಹಿರೇಕೆರೂರು: ಬ್ಯಾಂಕುಗಳ ಗ್ರಾಮಾಭಿವೃದ್ದಿಗೆ ತನ್ನದೆ ಆದ ಕೊಡುಗೆ ನೀಡುತ್ತಾ ಗ್ರಾಮೀಣ ಪ್ರದೇಶದ ಜನತೆಯ ಮೂಲ ಸೌಲಭ್ಯ ಸೇರಿದಂತೆ ಆರ್ಥಿಕವಾಗಿ ಸಬಲೀಕರಣಕ್ಕೆ ಮುಂದಾಗಿದ್ದು, ವಿಶೇಷವಾಗಿ ಕೆನರಾ ಬ್ಯಾಂಕ್ ಹಿರೇಕೆರೂರು ತಾಲೂಕಿನ ಚಿಕ್ಕಮೊರಬ ಗ್ರಾಮವನ್ನು ದತ್ತು ತೆಗೆದುಕೊಂಡು ಅಭಿವೃದ್ದಿಗೊಳಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಶಾಸಕ ಯು.ಬಿ. ಬಣಕಾರ ತಿಳಿಸಿದರು. ಅವರು ತಾಲೂಕಿನ ಚಿಕ್ಕಮೊರಬ ಗ್ರಾಮದಲ್ಲಿ ಕೆನರಾ ಬ್ಯಾಂಕಿನ ಮಾಸೂರ ಶಾಖೆಯು ಆರ್ಥಿಕ ಸೇರ್ಪಡೆ ಅಂಗವಾಗಿ ಚಿಕ್ಕಮೂರಬ ಗ್ರಾಮ ದತ್ತು ಸ್ವೀಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳಾ ಸಬಲೀಕರಣ ಸೇರಿದಂತೆ ಹಲವು ಯೋಜನೆಗಳು ಪರಿಣಾಮಕಾರಿಯಾಗಿ ಜಾರಿಗೆ ತಂದು ಗ್ರಾಮ ಅಭಿವೃದ್ದಿ ಪಡಿಸುವತ್ತ ಬ್ಯಾಂಕುಗಳು ದಿಟ್ಟ ಹೆಜ್ಜೆ ಇಟ್ಟಿರುವುದು ಉತ್ತಮ ಬೆಳವಣಿಗೆ. ಗ್ರಾಮದ ಜನತೆ ಈ ಯೋಜನೆ ಯಶಸ್ವಿಗೆ ಎಲ್ಲರೂ ಒಗ್ಗಟ್ಟಿನಿಂದ ಸ್ಪಂದಿಸಬೇಕು ಎಂದರು.ಕೆನರಾ ಬ್ಯಾಂಕಿನ ಹುಬ್ಬಳ್ಳಿ ವಲಯ ಸಹಾಯಕ ಮಹಾ ಪ್ರಭಂದಕ ಕೆ.ಎ. ದಾಸರ ಮಾತನಾಡಿದರು. ಅತಿಥಿಗಳಾಗಿ ಗ್ರಾಪಂ ಅಧ್ಯಕ್ಷ ಹಾಲನಗೌಡ ಮುದಿಗೌಡ್ರ, ಸದಸ್ಯ ಬಿ.ಆರ್. ಪಾಟೀಲ, ರುದ್ರಪ್ಪ ಮಲಗಿನಹಳ್ಳಿ, ಎಚ್.ಎಫ್. ಬೆನ್ನೂರ, ವಿ.ಬಿ. ದ್ಯಾವನಕಟ್ಟಿ, ಎಸ್.ಎನ್. ಕರಿಗಾರ, ಎಂ.ಎಂ. ತಳವಾರ, ಸಿ.ಎಸ್. ನಾಗಳೇರ, ಪಿ.ಜಿ. ಕುರುಬರ ಉಪಸ್ಥಿತರಿದ್ದರು. ಪ್ರಭಂದಕ ಜಮೀರ ಅಹ್ಮದ್ ಎಂ.ಎಚ್. ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

