ಭೂಮಿ ಕಳೆದುಕೊಂಡ ರೈತರ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಜೂ. 23
ತುಂಗಾ ಮೇಲ್ದಂಡೆ ಯೋಜನೆಗೆ ಭೂಮಿ ಕಳೆದುಕೊಂಡ ರೈತರ ವಿವಿಧ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘ (ಚುನಾವಣೆ ರಹಿತ) ತಾಲೂಕು ಘಟಕದ ಕಾರ್ಯಕರ್ತರು ಹಾಗೂ ಭೂಮಿ ಕಳೆದುಕೊಂಡು ಪರಿಹಾರ ಸಿಗದ ರೈತರು ರಟ್ಟಿಹಳ್ಳಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ರಾಸ್ತಾ ರೋಕೊ ಚಳವಳಿ ನಡೆಸಿದರು.
ತಾಲೂಕಿನ ರಟ್ಟಿಹಳ್ಳಿಯ ಹಳೇ ಬಸ್ ನಿಲ್ದಾಣದಿಂದ ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಾಕಾರರು, ಸರ್ಕಾರ, ನೀರಾವರಿ ಇಲಾಖೆಯ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತಾ ಹೊಸ ಬಸ್ ನಿಲ್ದಾಣ ಬಳಿ ಬಂಕಾಪುರ ಕ್ರಾಸ್ನಲ್ಲಿ ರಾಸ್ತಾ ರೋಕೊ ಚಳವಳಿ ನಡೆಸಿದರು.
ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಸಿದ್ದನಗೌಡ ಪಾಟೀಲ ಮಾತನಾಡಿ, ಹಿರೇಕೆರೂರು ತಾಲೂಕಿನಲ್ಲಿ ಅಪ್ಪರ್ ತುಂಗಾ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಸಿಗಬೇಕಾದ ಭೂ ಪರಿಹಾರ, ಗಿಡಮರಗಳ ನಷ್ಟ ಪರಿಹಾರ, ಹಿನ್ನೀರಿನ ಪರಿಹಾರದ ಸಲುವಾಗಿ ಕಳೆದ 2011ರಿಂದ ಇಲ್ಲಿಯವರೆಗೆ ರಾಜ್ಯ ರೈತ ಸಂಘದಿಂದ ಹಲವಾರು ಹೋರಾಟ ನಡೆಸಲಾಗಿದೆ. ಅಲ್ಲದೆ ರಾಣಿಬೆನ್ನೂರಿನಲ್ಲಿ ನೀರಾವರಿ ಮಂತ್ರಿಗಳೊಂದಿಗೆ ಸುದೀರ್ಘವಾಗಿ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಿದಾಗ ನೀರಾವರಿ ವಿಭಾಗದ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ಜೂನ್ ತಿಂಗಳು ಮುಗಿಯುತ್ತಾ ಬಂದಿದ್ದರೂ ರೈತರ ಯಾವುದೆ ಬೇಡಿಕೆ ಈಡೇರಿಸಿಲ್ಲ. ತಕ್ಷಣವೇ ರೈತರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ರಾಜ್ಯ ಸಮಿತಿ ಸದಸ್ಯ ಮಹೇಶ ಕೊಟ್ಟೂರ ಮಾತನಾಡಿ, ಅಪ್ಪರ್ ತುಂಗಾ ಯೋಜನೆಯ ಕಾಮಗಾರಿಗಳು ಅವ್ಯವಹಾರದಿಂದ ಕೂಡಿದ್ದು, ಲೋಕಾಯುಕ್ತ ತನಿಖೆಯಾಗಬೇಕು. ಮಕರಿ ಗ್ರಾಮದಲ್ಲಿ ಎರಡು ಸೇತುವೆಗಳು ಟೆಂಡರ್ ಆದರೂ ಕಾಮಗಾರಿ ಕೈಗೊಂಡಿಲ್ಲ. ತಕ್ಷಣ ಕಾಮಗಾರಿ ಆರಂಭಿಸಬೇಕು ಎಂದು ಆಗ್ರಹಿಸಿದರು. ತಾಲೂಕು ಅಧ್ಯಕ್ಷ ಚಂದ್ರು ಜೋಗಿಹಳ್ಳಿ ಮಾತನಾಡಿದರು. ರಾಸ್ತಾ ರೋಕೊ ಚಳವಳಿ ಸುಮಾರು 4 ಗಂಟೆವರೆಗೆ ನಡೆಸಿದ್ದರಿಂದ ಸಂಚಾರಕ್ಕೆ ಅಡ್ಡಿಯಾಯಿತು. ಶಿಕಾರಿಪುರ, ರಾಣಿಬೆನ್ನೂರು ರಸ್ತೆ ಸಂಪೂರ್ಣ ಬಂದ್ ಆಗಿದ್ದರಿಂದ ಪ್ರಯಾಣಿಕರು ಬಸ್ಗಾಗಿ ಪರದಾಡುವಂತಾಯಿತು.
ಅಧಿಕಾರಿ ತರಾಟೆಗೆ: ಪ್ರತಿಭಟನಾ ಸ್ಥಳಕ್ಕೆ ಸಹಾಯಕ ಅಭಿಯಂತ ನಾಗಪ್ಪ ಭೇಟಿ ನೀಡಿ ರೈತರ ಸಮಸ್ಯೆಗಳ ಪರಿಹಾರ ಭರವಸೆ ನೀಡಲು ಮುಂದಾದಾಗ ಕೆಲ ರೈತರು ಅವರನ್ನು ತರಾಟೆಗೆ ತೆಗೆದುಕೊಂಡರು. ಪೊಲೀಸರ ಮಧ್ಯಸ್ಥಿಕೆಯಲ್ಲಿ ಮಾತನಾಡಿದ ಸಹಾಯಕ ಅಭಿಯಂತ ಹಿನ್ನೀರಿನ ಪರಿಹಾರಕ್ಕೆ ಸಮಿತಿ ನೇಮಕ ಮಾಡಲಾಗಿದೆ. ಆ ಸಮಿತಿಯು ವರದಿ ನೀಡಿಲ್ಲ. ವರದಿ ಆಧರಿಸಿ ಪರಿಹಾರ ನೀಡಲಾಗುವುದು. ಮತ್ತಿತರ ಬೇಡಿಕೆಗಳನ್ನು ಕಾನೂನಿನ ವ್ಯಾಪ್ತಿಯಲ್ಲಿ ಕ್ರಮಕೈಗೊಂಡು ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಭರವಸೆ ನೀಡಿದರು. ಅದಕ್ಕೂ ತೃಪ್ತರಾಗದ ರೈತರು ಪ್ರತಿಭಟನೆ ಮುಂದುವರಿಸಿದರು.
ರೈತ ಸಂಘದ ಉಪಾಧ್ಯಕ್ಷ, ಗದಿಗೆಪ್ಪ ದಾನಮ್ಮನವರ, ಜಿಲ್ಲಾಧ್ಯಕ್ಷ ಸುಭಾಸ ಗವಿಯಪ್ಪನವರ, ಈರನಗೌಡ ಪ್ಯಾಟಿಗೌಡ್ರ, ಶಿವನಗೌಡ ಪಾಟೀಲ, ವೀರಣ್ಣ ಹಲಗೇರಿ, ರಾಜು ಪೂಜಾರ, ಮಲ್ಲನಗೌಡ ಸೊರಟೂರ, ಚಂದ್ರಶೇಖರಪ್ಪ ತುಮ್ಮನಕಟ್ಟಿ, ಕರೇಗೌಡ ಮಾಜಿಗೌಡ್ರ, ಸೋಮಣ್ಣ ಕಣಗೊಟಗಿ, ದಾನಪ್ಪ ಶಿದ್ದಗೇರಿ, ಗಂಗನಗೌಡ ಪಾಟೀಲ, ಪ್ರಕಾಶ ಪಾಟೀಲ, ಶಿದ್ದನಗೌಡ ಚನ್ನಗೌಡ್ರ ಸೇರಿದಂತೆ 21 ಗ್ರಾಮಗಳ ರೈತರು ಇದ್ದರು. ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಹಿರೇಕೆರೂರು ತಾಲೂಕಿನಲ್ಲಿ ಅಪ್ಪರ್ ತುಂಗಾ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ, ಗಿಡಮರಗಳ ನಷ್ಟ ಪರಿಹಾರ, ಹಿನ್ನೀರಿನ ಪರಿಹಾರಕ್ಕಾಗಿ 2011ರಿಂದ ಈವರೆಗೆ ರಾಜ್ಯ ರೈತ ಸಂಘ ಹಲವು ಹೋರಾಟ ನಡೆಸಿದೆ. ರಾಣಿಬೆನ್ನೂರಲ್ಲಿ ನೀರಾವರಿ ಸಚಿವರ ಜತೆ ಚರ್ಚಿಸಿದಾಗ ನೀರಾವರಿ ವಿಭಾಗ ಅಧಿಕಾರಿಗಳು ನೀಡಿದ ಭರವಸೆ ಅವಧಿ ಜೂನ್ ತಿಂಗಳು ಮುಗಿದರೂ ರೈತರ ಬೇಡಿಕೆ ಈಡೇರಿಸಿಲ್ಲ. ತಕ್ಷಣ ಸಮಸ್ಯೆ ಪರಿಹರಿಸಿ.
- ಸಿದ್ದನಗೌಡ ಪಾಟೀಲ,
ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

