ಸಹಕಾರಿ ಸಂಘಗಳು ಬಲಿಷ್ಠವಾಗಿ ಬೆಳೆಯಬೇಕು
ಕನ್ನಡಪ್ರಭ ವಾರ್ತೆ, ಹಾವೇರಿ, ಮಾ. 5
ಸರ್ಕಾರದ ವಿವಿಧ ಯೋಜನೆಗಳ ಸದುಪಯೋಗ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಲು ಸಹಕಾರ ಸಂಘಗಳು ಬಲಿಷ್ಠವಾಗಿ ಬೆಳೆಯಬೇಕು ಎಂದು ಧಾರವಾಡ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಐ.ಎಸ್. ಪಾಟೀಲ ಹೇಳಿದರು.
ನಗರದ ಕೃಷ್ಣ ಕಲ್ಯಾಣ ಮಂಟಪದಲ್ಲಿ ಬುಧವಾರ ರಾಜ್ಯ ಸಹಕಾರ ಮಹಾಮಂಡಳ, ರಾಜ್ಯ ಪಟ್ಟಣ ಸಹಕಾರ ಬ್ಯಾಂಕ್ಗಳ ಮಹಾಮಂಡಳ, ರಾಜ್ಯ ಪತ್ತಿನ ಸಹಕಾರ ಸಂಘಗಳ ಮಹಾಮಂಡಳ ಹಾಗೂ ಹಾವೇರಿ ಜಿಲ್ಲಾ ಸಹಕಾರ ಯೂನಿಯನ್ ನಿಯಮಿತದ ಆಶ್ರಯದಲ್ಲಿ ನಡೆದ ಜಿಲ್ಲೆಯ ಪಟ್ಟಣ ಸಹಕಾರ ಬ್ಯಾಂಕ್ಗಳ ಮತ್ತು ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಸಿಇಓಗಳಿಗೆ ಕಾರ್ಯದಕ್ಷತೆ ವೃದ್ಧಿಸುವ ರಾಜ್ಯ ಮಟ್ಟದ ವಿಶೇಷ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇಂದು ಸರ್ರ್ಕಾರ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ, ಸ್ತ್ರೀ ಶಕ್ತಿ ಸಂಘಗಳಿಗೆ ಶೇ.4ರ ಬಡ್ಡಿದರದಲ್ಲಿ ಸಾಲ ನೀಡುತ್ತಿದೆ. ಇಂತಹ ಸರ್ಕಾರದ ಅನೇಕ ಯೋಜನೆಗಳನ್ನು ಜನತೆಗೆ ತಿಳಿಸುವ ಹಾಗೂ ತಲುಪಿಸುವ ಕಾರ್ಯ ಸಹಕಾರಿ ಕ್ಷೇತ್ರದಿಂದ ಆಗಬೇಕು. ಕೆಸಿಸಿ ಬ್ಯಾಂಕ್ ಇಂದು ಉತ್ತಮ ಸ್ಥಿತಿಗೆ ಬಂದಿದ್ದು, ಪ್ರತಿ ವರ್ಷ ಲಾಭಾಂಶದಿಂದ ಮುನ್ನಡೆಯುತ್ತಿದೆ. ಗದಗ ಜಿಲ್ಲೆ ಕಣಗಿನಹಾಳದ ಸಿದ್ದನಗೌಡ ಪಾಟೀಲರು ಪ್ರಥಮ ಬಾರಿಗೆ ಸಹಕಾರ ಕ್ಷೇತ್ರವನ್ನು ಹುಟ್ಟು ಹಾಕಿ ಗಣನೀಯ ಕೊಡುಗೆ ನೀಡಿದರು. ಆದರೂ ಇಂದು ನಾವು ಸಹಕಾರಿ ರಂಗದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಬೆಳೆದಿಲ್ಲ. ಸಹಕಾರಿ ರಂಗದಲ್ಲಿ ಕೆಲಸ ಮಾಡುವವರಿಗೆ ಕಾನೂನಿನ ಅರಿವು ಅವಶ್ಯವಾಗಿದೆ. ಇದಕ್ಕಾಗಿ ಸಹಕಾರಿ ಮಹಾಮಂಡಳದವರು ಹಮ್ಮಿಕೊಳ್ಳುವ ತರಬೇತಿ ಅವಶ್ಯವಾಗಿದೆ ಎಂದರು.
ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಬಾಪೂಗೌಡ ಪಾಟೀಲ ಮಾತನಾಡಿ, ತರಬೇತಿ, ಶಿಕ್ಷಣ, ಪ್ರಚಾರ ಮಹಾಮಂಡಳದ ಉದ್ದೇಶವಾಗಿದೆ. ಎಲ್ಲ ಸಹಕಾರ ಸಂಘಗಳಿಗೆ ತರಬೇತಿ ನಮ್ಮ ಧ್ಯೇಯೋದ್ದೇಶವಾಗಿದೆ. ಇದಕ್ಕಾಗಿ ಕ್ಲಸ್ಟರ್, ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ತರಬೇತಿ ಶಿಬಿರ ಆಯೋಜಿಸಲಾಗುತ್ತಿದೆ ಎಂದರು.
ರಾಜ್ಯ ಪತ್ತಿನ ಸಹಕಾರ ಸಂಘಗಳ ಮಹಾಮಂಡಳದ ನಿರ್ದೇಶಕ ಗುರುರಾಜ ಹುಣಸೀಮರದ ಮಾತನಾಡಿ, ಸಹಕಾರ ಸಂಘಗಳು ಆರಂಭಗೊಂಡ ಹಳೇ ಧಾರವಾಡ ಜಿಲ್ಲೆಯಲ್ಲಿಯೇ ಸಹಕಾರ ಸಂಘವು ಅವನತಿ ಹೊಂದಿದ್ದು ದುರಂತ. ಜಾಗತೀಕರಣದಿಂದಾಗಿ ಇಂದು ಸಹಕಾರ ಕ್ಷೇತ್ರವು ಸ್ಪರ್ಧೆ ಎದುರಿಸುತ್ತಿದೆ. ಆದ್ದರಿಂದ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಹೇಳಿದರು.
ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಶಿವನಗೌಡ ಬಿರಾದಾರ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿದರು. ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ ಅಧ್ಯಕ್ಷತೆ ವಹಿಸಿದ್ದರು. ಕೆಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ವೈ. ಪಾಟೀಲ, ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ, ಶಿವಯೋಗಿಸ್ವಾವು ಹಿರೇಮಠ, ಎಸ್.ಎಂ. ಪಾಟೀಲ, ಶಂಭಣ್ಣ ಬಸೇಗಣ್ಣಿ, ವಿಜಯೇಂದ್ರ ಕನವಳ್ಳಿ, ಮಂಜುಳಾ ಬಾಳಿಕಾಯಿ, ಬಾವಲಿಂಗಯ್ಯ ಹಿರೇಮಠ ಇತರರು ಇದ್ದರು.
ಮಹಿಳಾ ಸಹಕಾರ ಶಿಕ್ಷಣಾಧಿಕಾರಿ ಅನ್ನಪೂರ್ಣ ಹೊಸಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲಿಕಾರ್ಜುನ ಸಾತೇನಹಳ್ಳಿ ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

