ಹಾವೇರಿ

ಮೋದಿ ಪ್ರಧಾನಿಯಾದರೆ ನಿರುದ್ಯೋಗ ನಿವಾರಣೆ

Published On :

ಕನ್ನಡಪ್ರಭ ವಾರ್ತೆ, ಹಾವೇರಿ, ಮಾ. 7
ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಬಂದರೆ ನಿರುದ್ಯೋಗ ನಿವಾರಣೆ, ಬಡತನ ನಿರ್ಮೂಲನೆ ಮಾಡುತ್ತೇವೆಂದು ಇಲ್ಲೇ ಪ್ರಮಾಣ ಮಾಡಿದರೆ ನಾವೂ ನಿಮಗೇ ಮತ ಹಾಕುವ ಪ್ರಮಾಣ ಮಾಡುತ್ತೇವೆ. ಕುಟುಂಬ ರಾಜಕಾರಣ ಎಂದು ಹೇಳುವ ನಿಮ್ಮ ಪಕ್ಷದಲ್ಲಿ ಅಪ್ಪ-ಮಕ್ಕಳು ರಾಜಕಾರಣಿಗಳಿಲ್ಲವೇ? ಚುನಾವಣೆ ಬಂದಾಗ ನೆನಪಾಗುವ ನಾವು ನಂತರ ಯಾಕೆ ಕಾಣಿಸಿಕೊಳ್ಳುವುದಿಲ್ಲ...
ಇಂಥ ಹತ್ತಾರು ಪ್ರಶ್ನೆಗಳನ್ನು ಕೇಳಿದವರು ಯಾವ ರಾಜಕಾರಣಿಗಳಲ್ಲ, ನಗರದ ದಾನೇಶ್ವರಿ ಕಲಾ ಮಂದಿರದಲ್ಲಿ ಶುಕ್ರವಾರ ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿದ್ದ ರಾಷ್ಟ್ರ ರಾಜಕಾರಣದಲ್ಲಿ ಯುವಕರ ಪಾತ್ರ ಕುರಿತು ಸಂಸದ ಶಿವಕುಮಾರ ಉದಾಸಿಯವರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು. ವಿದ್ಯಾರ್ಥಿ ಸಮುದಾಯ ಕೇಳಿದ ಪ್ರಶ್ನೆಗಳು ಪ್ರಸ್ತುತ ದೇಶದ ಯುವ ಸಮುದಾಯವೇ ಎದುರಿಸುತ್ತಿರುವ ಹಾಗೂ ಕೇಳುತ್ತಿರುವ ಪ್ರಶ್ನೆಗಳಂತಿದ್ದವು.
 ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಸಂವಾದದಲ್ಲಿ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡು ಸಂಸದರಿಗೆ ಪ್ರಶ್ನೆಗಳ ಸುರಿಮಳೆಗೈದರು. ಅದಕ್ಕೆ ಸಂಸದ ಶಿವಕುಮಾರ ಉದಾಸಿ ಅವರು ಸಮಾಧಾನದಿಂದಲೇ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನಮಾಡಿದರು.
ಪ್ರಮಾಣ ಮಾಡಿ
ಶಿಕಾರಿಪುರದ ವಿದ್ಯಾರ್ಥಿ ಶಿವರಾಜ ಮಾತನಾಡಿ, 65 ವರ್ಷಗಳಿಂದ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರ ಬಡತನ ನಿರ್ಮೂಲನೆ, ನಿರುದ್ಯೋಗ ನಿವಾರಣೆ ಮಾಡುವಲ್ಲಿ ಕ್ರಮ ಕೈಗೊಂಡಿಲ್ಲ ಎಂದು ಬಿಜೆಪಿಯವರು ಹೇಳುತ್ತೀರಿ. ಹಾಗಾದರೆ ಮೋದಿ ಪ್ರಧಾನಿಯಾದರೆ ಈ ಸಮಸ್ಯೆ ಬಗೆಹರಿಸುತ್ತೇವೆ ಎಂಬ ಪ್ರಮಾಣ ಮಾಡಿ. ನಾವೂ ಇದೇ ವೇದಿಕೆಯಲ್ಲಿ ಮೋದಿಯವರಿಗೆ ಮತ ಹಾಕುವ ಪ್ರಮಾಣ ಮಾಡುತ್ತೇವೆ ಎಂಬ ಸವಾಲು ಹಾಕಿದರು. ಇದಕ್ಕೆ ಶಿವಕುಮಾರ ಉದಾಸಿ, ಪದವಿ ಪಡೆದವರೆಲ್ಲ ಉದ್ಯೋಗ ಪಡೆಯುವಷ್ಟು ಕೌಶಲ್ಯ ಪಡೆದಿಲ್ಲ. ಕೇವಲ ಪದವಿ ಪಡೆದರೆ ಸಾಲದು. ಔದ್ಯೋಗೀಕರಣದಿಂದ ಮಾತ್ರ ನಿರುದ್ಯೋಗ ನಿವಾರಣೆ ಸಾಧ್ಯವಿದೆ. ಆದ್ದರಿಂದ ಪದವಿ ಪಡೆದವರು ಅಗತ್ಯ ವೃತ್ತಿ ಕೌಶಲ್ಯ ಹೊಂದಿರುವುದು ಅಗತ್ಯವಿದೆ. ಆದ್ದರಿಂದ ಕೇವಲ ಮತ ಪಡೆಯುವ ಕಾರಣಕ್ಕಾಗಿ ನಿಮ್ಮೆದುರು ಶಪಥ ಮಾಡುವುದಿಲ್ಲ. ಆದರೆ, ಮೋದಿ ಪ್ರಧಾನಿಯಾದರೆ ಕೈಗಾರಿಕೆ ಸ್ಥಾಪನೆಗೆ ಒತ್ತು ನೀಡುವ ಮೂಲಕ ಹೆಚ್ಚಿನ ಉದ್ಯೋಗ ಸೃಷ್ಟಿ ಮಾಡುವುದು ನಿಶ್ಚಿತ ಎಂದು ಉತ್ತರಿಸಿದರು.
ನಿಮ್ಮದು ಕುಟುಂಬ ರಾಜಕಾರಣವಲ್ಲವೇ?
ವಿದ್ಯಾರ್ಥಿ ಆನಂದ ಮಾತನಾಡಿ, ಕಾಂಗ್ರೆಸ್ನಲ್ಲಿ ಕುಟುಂಬ ರಾಜಕಾರಣ, ವಂಶ ರಾಜಕಾರಣವಿದೆ. ನೆಹರು ಕುಟುಂಬ ಪಂಶಪಾರಂಪರ್ಯವಾಗಿ ಅಧಿಕಾರ ನಡೆಸುತ್ತಿದೆ ಎಂದು ನಿಮ್ಮ ಪಕ್ಷದವರು ಆರೋಪ ಮಾಡುತ್ತಾರೆ. ಅಂಥ ವಂಶ ರಾಜಕಾರಣ ವಿರೋಧಿಸುವ ನಿಮ್ಮ ಪಕ್ಷದಲ್ಲಿ ಆ ರೀತಿ ಇಲ್ಲವೇ ಎಂಬ ಪ್ರಶ್ನೆ ಹಾಕಿದರು. ಇದಕ್ಕೆ ಶಿವಕುಮಾರ ಉದಾಸಿ, ಈ ಪ್ರಶ್ನೆ ನೇರವಾಗಿ ನನಗೆ ಕೇಳಿದಂತಿದೆ. ನನ್ನ ತಂದೆಯವರೂ ರಾಜಕಾರಣಿ. ಆದರೆ, ನಾನು ಕುಟುಂಬದ ಹೆಸರನ್ನೇ ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಿಲ್ಲ. ಅಲ್ಲದೇ ನನ್ನನ್ನು ಆಯ್ಕೆ ಮಾಡುವ ಅಧಿಕಾರ ನಿಮ್ಮಲ್ಲಿಯೇ ಇದೆ. ದೇಶದಲ್ಲಿ ಸಾಮಾನ್ಯ ವ್ಯಕ್ತಿಗೂ ಚುನಾವಣೆಗೆ ನಿಲ್ಲುವ ಅವಕಾಶವಿದೆ. ತಂದೆ ರಾಜಕಾರಣಿಯಾಗಿದ್ದಾರೆ ಎಂಬ ಕಾರಣಕ್ಕೆ ಸಾಮರ್ಥ್ಯ ಇದ್ದರೂ ಮಗ ರಾಜಕೀಯಕ್ಕೆ ಬರಬಾರದು ಎಂಬುದು ಸರಿಯಲ್ಲ ಎಂದು ತಮ್ಮನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಿದರು. ಇದಕ್ಕೆ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ತೇಜಸ್ವಿ ಸೂರ್ಯ ಧ್ವನಿಗೂಡಿಸಿ, ಸಾಮರ್ಥ್ಯ ಇದ್ದರೆ ರಾಹುಲ್ ಪ್ರಧಾನಿಯಾಗಲಿ. ಆದರೆ, ಸಾಮರ್ಥ್ಯ ಇಲ್ಲದಿದ್ದರೂ ಕೇವಲ ಗಾಂಧಿ ಕುಟುಂಬದ ಕುಡಿ ಎಂಬ ಕಾರಣಕ್ಕಾಗಿ ಅವರು ರಾಜಕೀಯಕ್ಕೆ ಬಂದಿದ್ದಾರೆ ಎಂದು ಹೇಳಿದರು.
ಚುನಾವಣೆ ನಂತರ ಬರುವುದಿಲ್ಲ
ವಿದ್ಯಾರ್ಥಿನಿ ಶೋಭಾ ಮಾತನಾಡಿ, ರಾಜಕಾರಣಿಗಳಿಗೆ ಚುನಾವಣೆ ಬಂದಾಗ ಮಾತ್ರ ಮತದಾರ ನೆನಪಾಗುತ್ತಾನೆ. ನಂತರ ಮತದಾರನ ಸಮಸ್ಯೆ ಬಗೆಹರಿಸುವುದಿಲ್ಲ. ಇಂಥ ವರ್ತನೆ ಏಕೆ ಎಂದು ಕೇಳಿದರು. ಇದಕ್ಕೆ ಶಿವಕುಮಾರ ಉದಾಸಿ ಉತ್ತರಿಸಿ, ನಾನು ಸಾರ್ವಜನಿಕರೊಂದಿಗೆ ಎಷ್ಟು ಸಮಯ ಕಳೆದಿದ್ದೇನೆ ಎಂಬುದರ ಬಗ್ಗೆ ಹೆಚ್ಚು ಒತ್ತು ನೀಡುವುದಿಲ್ಲ. ಆದರೆ, ಎಷ್ಟು ಉಪಯುಕ್ತ ಹಾಗೂ ಮೌಲ್ಯಯುತ ಸಮಯವನ್ನು ಅವರಿಗಾಗಿ ನೀಡಿದ್ದೇನೆ ಎಂಬುದು ಮುಖ್ಯ. ಸಾರ್ವಜನಿಕರಿಗಾಗಿ ಮೌಲ್ಯಯುತ ಸಮಯ ನೀಡಿದ ತೃಪ್ತಿಯಿದೆ. ಕ್ಷೇತ್ರದ ವ್ಯಾಪ್ತಿ ಹೆಚ್ಚಿರುವುದರಿಂದ ಎಲ್ಲ ಗ್ರಾಮಗಳಿಗೂ ಭೇಟಿ ನೀಡುವುದು ಕಷ್ಟ ಎಂದು ಸಮಜಾಯಿಶಿ ನೀಡಿದರು.
ವಿದ್ಯಾರ್ಥಿನಿ ರಜಿನಿ, ರು. 1ಗೆ 1 ಕೆಜಿ ಅಕ್ಕಿ ನೀಡುವ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಇಂಥ ಯೋಜನೆ ಎಷ್ಟು ದುರುಪಯೋಗ ಆಗುತ್ತಿದೆ ಎಂಬುದನ್ನು ನೋಡುತ್ತಿಲ್ಲ. ಅಕ್ಕಿ ಮಾರಿ ಸಾರಾಯಿ ಕುಡಿದು ಯೋಜನೆ ದುರುಪಯೋಗ ಆಗುತ್ತಿದೆ. ಅಕ್ಕಿ ನೀಡಿ ಬೇರೆ ಅಗತ್ಯ ವಸ್ತುಗಳ ಬೆಲೆ ಏರಿಸುತ್ತಲೇ ಇದ್ದೀರಿ. ಇಂಥ ಯೋಜನೆ ಬೇಕೇ ಎಂದು ಪ್ರಶ್ನಿಸಿದರು. ಈ ಪ್ರಶ್ನೆಗೆ ಉತ್ತರಿಸಿದ ಉದಾಸಿ, ಯಾವ ಬಡ ಕುಟುಂಬವೂ ಹಸಿವಿನಿಂದ ಬಳಲಬಾರದು, ಸಮಾನತೆ ಬರಬೇಕು ಎಂಬ ಬಡವರ ಕಾಳಜಿಯಿಂದ ಸರ್ಕಾರ ಯೋಜನೆ ಜಾರಿಗೆ ತಂದಿದೆ. ಬಡತನದ ಹಸಿವು ಅದನ್ನು ಅನುಭವಿಸಿದವನಿಗೇ ಗೊತ್ತು. ಯೋಜನೆಯಿಂದ ಎಷ್ಟೋ ಕುಟುಂಬಗಳಿಗೆ ಅನುಕೂಲವಾಗಿದೆ. ಇದರಲ್ಲಿ ದುರುಪಯೋಗ ಆಗುತ್ತಿರುವುದು ಸತ್ಯ. ಅದು ನಿಲ್ಲಬೇಕು ಎಂದರು.
ಇದೇ ರೀತಿ ಭ್ರಷ್ಟಾಚಾರ ನಿರ್ಮೂಲನೆ ಹೇಗೆ ಮಾಡುತ್ತೀರಿ? ಈ ಬಗ್ಗೆ ನಿಮ್ಮ ಯೋಜನೆಯೇನು? ಗ್ರಾಮೀಣ ಭಾಗದ ಜನರ ಅಭಿವೃದ್ಧಿಗಾಗಿ ಏನು ಕ್ರಮ ಕೈಗೊಳ್ಳುತ್ತೀರಿ? ಇತ್ಯಾದಿ ಹತ್ತಾರು ಪ್ರಶ್ನೆಗಳನ್ನು ವಿದ್ಯಾರ್ಥಿಗಳು ಕೇಳಿದರು.
ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ತೇಜಸ್ವಿ ಸೂರ್ಯ ಮಾತನಾಡಿ, ದೇಶ ಎದುರಿಸುತ್ತಿರುವ ಹಲವಾರು ಪ್ರಶ್ನೆಗಳನ್ನು ಸ್ವಾತಂತ್ರ್ಯಾ ನಂತರ ದೇಶವನ್ನಾಳಿದ ಕಾಂಗ್ರೆಸ್ಗೆ ಕೇಳಬೇಕಿದೆ. ಕಾಂಗ್ರೆಸ್ನ ವಂಶಾಡಳಿತ, ಭ್ರಷ್ಟಾಚಾರದಿಂದ ಮುಕ್ತಿ ಸಿಗಬೇಕಿದ್ದು, ಅದಕ್ಕಾಗಿ ಮೋದಿ ಅವರನ್ನು ಯುವಕರು ಬೆಂಬಲಿಸಬೇಕಿದೆ. ದೇಶದಲ್ಲಿ ಬದಲಾವಣೆ ಕಾಣಬೇಕಿದ್ದರೆ ಸಮರ್ಥ ನಾಯಕತ್ವದ ಸರ್ಕಾರ ಬರಬೇಕಿದೆ. ಆದ್ದರಿಂದ ಮೋದಿ ಅವರನ್ನು ಪ್ರಧಾನಿಯಾಗಿಸಲು ಇಲ್ಲಿ ಶಿವಕುಮಾರ ಉದಾಸಿಯವರನ್ನು ಯುವ ಸಮುದಾಯ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಭೋಜರಾಜ ಕರೂದಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಾಜಿ ಎಂಎಲ್ಸಿ ಶಿವರಾಜ ಸಜ್ಜನರ, ಬಿಜೆಪಿ ರಾಜ್ಯ ಕಾರ್ಯದರ್ಶಿ ಭಾರತಿ ಜಂಬಗಿ, ಸಿದ್ದರಾಜ ಕಲಕೋಟಿ, ಪ್ರಭು ಹಿಟ್ನಳ್ಳಿ ಇತರರು ಇದ್ದರು. ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರದೀಪ ಮಳ್ಳೂರ ಅಧ್ಯಕ್ಷತೆ ವಹಿಸಿದ್ದರು. ಸೋಮೇಶ್ವರ ಕುರ್ಡೇಕರ ಸ್ವಾಗತಿಸಿದರು.


65 ವರ್ಷಗಳಿಂದ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರ ಬಡತನ ನಿರ್ಮೂಲನೆ, ನಿರುದ್ಯೋಗ ನಿವಾರಣೆ ಮಾಡುವಲ್ಲಿ ಕ್ರಮ ಕೈಗೊಂಡಿಲ್ಲ ಎಂದು ಬಿಜೆಪಿಯವರು ಹೇಳುತ್ತೀರಿ. ಹಾಗಾದರೆ ಮೋದಿ ಪ್ರಧಾನಿಯಾದರೆ ಈ ಸಮಸ್ಯೆ ಬಗೆಹರಿಸುತ್ತೇವೆ ಎಂಬ ಪ್ರಮಾಣ ಮಾಡಿ. ನಾವೂ ಇದೇ ವೇದಿಕೆಯಲ್ಲಿ ಮೋದಿಯವರಿಗೆ ಮತ ಹಾಕುವ ಪ್ರಮಾಣ ಮಾಡುತ್ತೇವೆ.
    - ಶಿವರಾಜ, ಶಿಕಾರಿಪುರದ ವಿದ್ಯಾರ್ಥಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.