ಹಾವೇರಿ

ಜನಮನ ಸೂರೆಗೊಂಡ ನಾಟಕ ಪ್ರದರ್ಶನ

Published On :

ಹಾನಗಲ್ಲ: ತಾಲೂಕಿನ ಶೇಷಗಿರಿ ಗ್ರಾಮದ ಸಿ.ಎಂ. ಉದಾಸಿ ಕಲಾಕ್ಷೇತ್ರದಲ್ಲಿ ಇತ್ತೀಚಿಗೆ ಪ್ರದರ್ಶನಗೊಂಡ ಚಂದ್ರಗುಪ್ತ ಮೌರ್ಯ ಮತ್ತು ಊರು ಸುಟ್ಟರೂ ಹನುಮಪ್ಪ ಹೊರಗೆ ನಾಟಕಗಳು ಜನಮನ ರಂಜಿಸುವಲ್ಲಿ ಯಶಸ್ವಿಯಾದವು.
ಮಹಾಂತೇಶ ನವಲಕಲ್ ರಚನೆಯ ಚಂದ್ರಗುಪ್ತ ಮೌರ್ಯ ನಾಟಕ ಮಾರಪ್ಪ ಬೆಜ್ಜಿಹಳ್ಳಿ ನಿರ್ದೇಶನದಲ್ಲಿ ಅದ್ಭುತವಾಗಿ ಮೂಡಿಬಂದಿತು. ಚಂದ್ರಗುಪ್ತ ಮೌರ್ಯನು ಚಾಣಕ್ಯನ ಉಪಟಳದಲ್ಲಿ ತನಗೆ ತಾನು ಹೇಳಿಕೊಳ್ಳುವ ಅಸ್ತಿತ್ವದ ಒಂದು ಮಾತು ನಾನು ಚಂದ್ರಗುಪ್ತ ಮೌರ್ಯ. ಮೌರ್ಯ ಎಂಬ ಶಬ್ಧವೊಂದೆ ಅವರ ಅಸ್ತಿತ್ವ. ದಾಖಲಿತ ಇತಿಹಾಸದ ಮೊದಲ ಚಕ್ರವರ್ತಿ ಚಂದ್ರಗುಪ್ತ ಮೌರ್ಯ. ಇಲ್ಲಿ ಚಾಣಕ್ಯರು ರಾಜನನ್ನು ರಾಜ್ಯವ್ಯವಸ್ಥೆಯನ್ನು ಮಾತ್ರ ಬದಲಿಸಲಿಲ್ಲ. ಜನರ ಆಧ್ಯಾತ್ಮಿಕ ಆಚರಣೆಯ ನಡೆಯನ್ನೇ ಬದಲಿಸಿದರು. ಚಾತುವರ್ಣವನ್ನು ಭದ್ರಗೊಳಿಸಿದರು. ಸಾಮಾಜಿಕ ಅಸಮಾನತೆಯ ಎಂಬುದು ಹರಿಯಲಾರದ ನೀರಂತೆ ನಿಂತಲ್ಲಿಯೇ ನಿಂತಾಗ ಚಂದ್ರಗುಪ್ತರಿಗೂ ಹೇಸಿಗೆ ಎನಿಸಿತು. ಹಸಿವು, ನಿದ್ದೆ, ನೀರಡಿಕೆ, ನೆಮ್ಮದಿಗಳನ್ನು ಕಳೆದುಕೊಂಡ ಚಂದ್ರಗುಪ್ತ ಪ್ರಾಯಶ್ಚಿತಕ್ಕಾಗಿ ತನ್ನ ಕೊನೆಗಾಲದಲ್ಲಿ ಜೀನತ್ವ ಧರ್ಮ ಸ್ವೀಕರಿಸುತ್ತಾನೆ. ದ್ರಾವಿಡ ದೇಶದ ಶ್ರವಣಬೆಳಗೊಳ ಬೆಟ್ಟಕ್ಕೆ ಬರುತ್ತಾರೆ.
ಒಂದು ರಾತ್ರಿ ಕಾಲನಿಗೆದುರಾಗಿ ನಿಂತು ತನ್ನ ಕತೆಯನ್ನು ತಾವೇ ನೆನಪಿಸಿಕೊಳ್ಳುತ್ತಾರೆ. ಜೀನತತ್ವದ ವಿಶಾಲ ಮನೋಭಾವದ ನೆರಳಲ್ಲಿ ನಿಂತಿರುವಾಗ ಚಾಣಕ್ಯನೆಂಬ ವ್ಯಕ್ತಿಯ ಆಟಗಳು ನೆನಪಾಗುತ್ತವೆ. ತಾನು, ಹೆಂಡತಿ ಕಾರ್ನಿಯಾ, ತಂದೆ ಮೌರ್ಯ ದಂಡನಾಯಕ, ನಂದರಾಜರು, ಅಮಾತ್ಯ ರಾಕ್ಷಸರು ಎಲ್ಲರೂ ಪಗಡೆಯಾಟದ ಕಾಯಿಗಳಾಗಿ ಚಲಿಸಿದಂತೆ ಭಾಸವಾಗುವ ಐತಿಹಾಸಿಕ ನಾಟಕ ಉತ್ತಮವಾಗಿ ಮೂಡಿಬಂದು ನೆರೆದ ಮನಸ್ಸುಗಳಿಗೆ ಮುದ ನೀಡಿತು.
ಕಲಾವಿದರಾದ ಉಮೇಶ ಪಾಟೀಲ, ಅನಿಲ ರೇವೂರ, ಯತೀಶ ಕೊಳ್ಳೇಗಾಲ, ಗೀತಾ ಮೋಹಿತೆ, ಧನಂಜಯ ರಂಗಸಮುದ್ರ, ರೇಖಾ ಹೊಂಗಲ, ಮಾರಪ್ಪ ಬೆಜ್ಜಿಹಳ್ಳಿ, ಮಹದೇವ ಹಡಪದ ವಿವಿಧ ಪಾತ್ರಗಳಲ್ಲಿ ಮನೋಜ್ಞವಾಗಿ ಅಭಿನಯಿಸಿದರು.
ಹನುಮಂತ ಹಾಲಗೇರಿ ರಚನೆಯ ಊರು ಸುಟ್ಟರೂ ಹನುಮಪ್ಪ ಹೊರಗೆ ಎಂಬ ಹಾಸ್ಯ ನಾಟಕ ನೆರೆದವರನ್ನು ನಗೆಗಡಲಿನಲ್ಲಿ ತೇಲಿಸುವಲ್ಲಿ ಯಶಸ್ವಿಯಾಯಿತು. ದೇವರು ಮತ್ತು ಬದುಕಿನ ಅಸ್ತಿತ್ವವನ್ನು ವಿಷಾದಭರಿತ ವ್ಯಂಗ್ಯದ ದಾಟಿಯಲ್ಲಿ ಯಥಾವತ್ ವಾಸ್ತವ ನೋಡುತ್ತಿರುತ್ತದೆ. ಆ ವಾಸ್ತವ ವ್ಯವಸ್ಥೆಯ ಮತ್ತು ಊರೆಂಬ ದೈವ ನಿಯಂತ್ರಿತ ಸಮಾಜವನ್ನು ಪೂರ್ವಾಗ್ರಹಗಳಿಲ್ಲದೆ ಸ್ವೀಕರಿಸುತ್ತಿರುತ್ತದೆ. ಆದರೆ, ಮನುಷ್ಯ ನಿರ್ಮಿತ ಪ್ರತಿಷ್ಠೆಗಳು, ಪ್ರಮಾಣಗಳು, ಗಡಿಯೆಂಬ ಸರಹದ್ದುಗಳು ವಾಗ್ವಾದಕ್ಕಿಳಿಯುತ್ತವೆ. ಈ ನಾಟಕ ಎರಡು ಹಳ್ಳಿಗಳ ನಡುವಿನ ತಿಕ್ಕಾಟವನ್ನು ಕೇಂದ್ರಿಕರಿಸಿತ್ತು.
ಪೂಜೆ, ಆರಾಧನೆಯ ಹಕ್ಕಿಗಾಗಿ ಊರ ಸೀಮೆಯಲ್ಲಿದ್ದ ಹನುಮಪ್ಪ ದೇವರ ಸಲುವಾಗಿ ಜಿದ್ದಿನ ಜಗಳ ಆರಂಭವಾಗುತ್ತದೆ. ಯಾವುದರ ಗೊಡವೆಯೇ ಬೇಡವೆಂದು ಆ ಮೂರ್ತಿಯನ್ನು ತಂದು ಪೊಲೀಸ್ ವ್ಯವಸ್ಥೆ ತನ್ನ ಸುಪರ್ದಿಯೊಳಗೆ ಇಟ್ಟುಕೊಳ್ಳುತ್ತದೆ. ಮುಗ್ಧ ಭಕ್ತರಿಗೆ ಪೊಲೀಸ್ ಠಾಣೆಯೇ ದೇವಸ್ಥಾನವಾಗುತ್ತದೆ. ಅರ್ಥವಿಲ್ಲದ ಬಡಬಡಿಕೆಯಂತೆ ಪುರಾಣ, ಐತಿಹ್ಯ, ಸಮಾಜ, ವ್ಯವಸ್ಥೆ ಎಂದು ಹಗಲು ರಾತ್ರಿ ಬೊಗಳೆ ಬಿಡುವ ಮಾಧ್ಯಮಗಳ ಕುರುಪತನ, ರಾಜಕಾರಣಿಗಳ ಇಬ್ಬಂದಿತನ, ಪೊಲೀಸರ ಅಸಹಾಯಕತೆ, ಜನತೆಯ ಸೋಲು... ಹೀಗೆ ಹತ್ತಾರು ಘಟನೆಗಳ ಕಥಾಹಂದರವೇ ಈ ನಾಟಕ. ವಜ್ರಮಟ್ಟಿ, ಧರಗಟ್ಟಿ ಎಂಬ ಎರಡು ಊರುಗಳ ನಡುವಿನ ಸೀಮೆದೇವರು ಹನುಮಪ್ಪ ವಾಸ್ತವದ ಪ್ರತಿನಿಧಿಯಂತೆ ಕಾಣುತ್ತಾನೆ.
ಕಲಾವಿದರಾದ ಧನಂಜಯ ರಂಗಸಮುದ್ರ, ಮಾರಪ್ಪ ಬೆಜ್ಜಿಹಳ್ಳಿ, ಉಮೇಶ ಪಾಟೀಲ, ಯತೀಶ ಕೊಳ್ಳೇಗಾಲ, ಮಹದೇವ ಹಡಪದ, ಗೀತಾ ಮೋಹಿತೆ, ಅನಿಲ ರೇವೂರ, ರೇಖಾ ಹೊಂಗಲ ವಿವಿಧ ಪಾತ್ರಗಳಿಗೆ ಜೀವ ತುಂಬಿ ಅಭಿನಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.