ಯೂರಿಯಾ ಸೇವಿಸಿ 4 ಜಾನುವಾರು ಸಾವು
ಬ್ಯಾಡಗಿ: ಯೂರಿಯಾ ರಸಗೊಬ್ಬರ ಸೇವಿಸಿ ನಾಲ್ಕು ಜಾನುವಾರುಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂರು ಜಾನುವಾರು ತೀವ್ರ ಅಸ್ವಸ್ಥಗೊಂಡ ಧಾರುಣ ಘಟನೆ ತಾಲೂಕಿನ ಚಿನ್ನಿಕಟ್ಟಿ ಗ್ರಾಮದಲ್ಲಿ ಶನಿವಾರ ನಡೆದಿದೆ.
ಜಾನುವಾರುಗಳು ಗ್ರಾಮದ ಪ್ರಗತಿಪರ ಕೃಷಿಕ ಶ್ರೇಣಿಕರಾಜ ಯಳವತ್ತಿ ಎಂಬುವರಿಗೆ ಸೇರಿದ್ದು, ಯೂರಿಯಾ ರಸಗೊಬ್ಬರ ತೋಯಿಸಿ ಇಟ್ಟಿದ್ದ ಬಕೆಟ್ನಲ್ಲೇ ಹೊಟ್ಟು ಕಲಸಿ ಜಾನುವಾರುಗಳಿಗೆ ತಿನ್ನಲು ನೀಡಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ.
ಆಗಿದ್ದೇನು?: ಮಾಲೀಕ ಶ್ರೇಣಿಕರಾಜ್ ಶನಿವಾರ ಬೆಳಗ್ಗೆ ಎಂದಿನಂತೆ ಹೊಟ್ಟು ಕಲಸಿ ಜಾನುವಾರುಗಳಿಗೆ ತಿನ್ನಿಸಲು ಮುಂದಾಗಿದ್ದಾರೆ. ಆದರೆ, ಕಳೆದ ರಾತ್ರಿ 6 ಕೆಜಿಯಷ್ಟು ಯೂರಿಯಾ ಗೊಬ್ಬರವನ್ನು ಕಲಿಸಿ ಇಟ್ಟಿದ್ದ ಬಕೆಟ್ನ್ನು ಮುಸುರೆ ತುಂಬಿದ ಬಕೆಟ್ ಎಂದು ಗ್ರಹಿಸಿ, ಅದರಲ್ಲೇ ಹೊಟ್ಟು ಕಲಸಿ ಜಾನುವಾರುಗಳಿಗೆ ತಿನ್ನಲು ನೀಡಿದ್ದರು.
ಗೊಬ್ಬರ ಸಮೇತ ಹೊಟ್ಟು ತಿಂದ 10 ನಿಮಿಷಗಳಲ್ಲಿ 7 ಜಾನುವಾರಗಳ ಹೊಟ್ಟೆಯುಬ್ಬಿ ನೆಲಕ್ಕೆ ಉರುಳಿವೆ. ಇದನ್ನು ಕಂಡು ದಿಕ್ಕು ತೋಚದಂತಾದ ಶ್ರೇಣಿಕರಾಜ ತಕ್ಷಣ ವೈದ್ಯರನ್ನು ಸಂಪರ್ಕಿಸಿದ್ದಾರೆ. ಘಟನಾ ಸ್ಥಳಕ್ಕೆ ಪಶು ವೈದ್ಯಾಧಿಕಾರಿಗಳ ದಂಡೇ ತೆರಳಿತಾದರೂ ನಾಲ್ಕು ಜಾನುವಾರುಗಳು ಸಾವನ್ನಪ್ಪಿದವು. ಮಾಲೀಕ ಶ್ರೇಣಿಕರಾಜ್ ಕಣ್ಣೀರಿಟ್ಟಿದ್ದು, ಗ್ರಾಮಸ್ಥರ ಕರುಳು ಚುರುಕ್ ಎನ್ನುವಂತೆ ಮಾಡಿತು.
ಪತ್ರಿಕೆಯೊಂದಿಗೆ ಮಾತನಾಡಿದ ಡಾ ನಾಗರಾಜ, ರಸಗೊಬ್ಬರ ಸೇವಿಸಿದ ಜಾನುವಾರುಗಳು ತಕ್ಷಣದಲ್ಲೇ ಬೇರೆ ಆಹಾರ ಸೇವಿಸಿದ್ದಲ್ಲಿ ಬದಕುಳಿಯುವ ಸಾಧ್ಯತೆ ಇತ್ತು. ಆದರೆ, ಜಾನುವಾರುಗಳು ನೆಲಕ್ಕುರುಳಿದ್ದರಿಂದ ಚಿಕಿತ್ಸೆ ಫಲಕಾರಿಯಾಗಲಿಲ್ಲ. ವೈದ್ಯಾಧಿಕಾರಿಗಳು ತಂಡ ದಿನವಿಡೀ ಸ್ಥಳದಲ್ಲಿದ್ದು, ಉಳಿದ ಮೂರು ಜಾನುವಾರುಗಳನ್ನು ಗಮನಿಸಿ, ಚಿಕಿತ್ಸೆ ನೀಡಲಿದೆ ಎಂದರು.
ನೂಕುನುಗ್ಗಲು: ಮೃತ ಹಾಗೂ ಅಸ್ವಸ್ಥ ಜಾನುವಾರುಗಳನ್ನು ನೋಡಲು ಬಹುತೇಕ ಗ್ರಾಮಸ್ಥರು ಧಾವಿಸಿ ಬಂದಿದ್ದರು. ಇದರಿಂದಾಗಿ ಸ್ಥಳದಲ್ಲಿ ನೂಕುನುಗ್ಗಲು ಉಂಟಾಯಿತು. ಘಟನಾ ಸ್ಥಳಕ್ಕೆ ಶಾಸಕ ಬಸವರಾಜ ಶಿವಣ್ಣನವರ, ಪುರಸಭೆ ಸದಸ್ಯ ಮುರಿಗೆಪ್ಪ ಶೆಟ್ಟರ, ಎಪಿಎಂಸಿ ಮಾಜಿ ಅಧ್ಯಕ್ಷ ರವೀಂದ್ರ ಪಟ್ಟಣಶೆಟ್ಟಿ ಭೇಟಿ ನೀಡಿ, ಕೃಷಿಕ ಶ್ರೇಣಿಕರಾಜ ಅವರಿಗೆ ಸಾಂತ್ವನ ತಿಳಿಸಿದರು.
ಪಶು ವೈದ್ಯಾಧಿಕಾರಿಗಳಾದ ಎಸ್.ಎಸ್. ಸಣ್ಣಪುಟ್ಟಕ್ಕನವರ, ರಮೇಶ ಬ್ಯಾಡಗಿ, ಎನ್.ಎಸ್. ಚೌಡಾಳ, ಖಾಜಾ ನಿಜಮಾಮುದ್ದೀನ್ ಎಸ್.ಬಿ. ಹೊಸಳ್ಳಿ, ಭಾಗ್ಯಬಾಯಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

