ಹತ್ತಿಮತ್ತೂರಲ್ಲಿ ಮತದಾರರ ಜಾಗೃತಿಗಾಗಿ ಮಾನವ ಸರಪಳಿ
ಹಾವೇರಿ: ಭಾರತ ಗ್ರಾಮಗಳ ದೇಶ, ಗ್ರಾಮಗಳಲ್ಲಿ ಮತದಾನದ ಪ್ರಮಾಣ ಹೆಚ್ಚಾದಾಗ ಭಾರತ ದೇಶದ ಪ್ರಜಾಪ್ರಭುತ್ವಕ್ಕೆ ಬೆಲೆ ಬರುತ್ತದೆ ಎಂದು ಸಾಕ್ಷರ ಭಾರತ ಜಿಲ್ಲಾ ಸಂಯೋಜಕರಾದ ಎಲ್.ಯು. ನಾಯ್ಕರ್ ತಿಳಿಸಿದರು.
ಅವರು ತಾಲೂಕು ಲೋಕ ಶಿಕ್ಷಣ ಸಮಿತಿ, ಸವಣೂರು ಹಾಗೂ ಗ್ರಾಮ ಪಂಚಾಯಿತಿ ಲೋಕ ಶಿಕ್ಷಣ ಸಮಿತಿ, ಹತ್ತಿಮತ್ತೂರ ಇವರ ಆಶ್ರಯದಲ್ಲಿ ಹತ್ತಿಮತ್ತೂರಲ್ಲಿ ಏರ್ಪಡಿಸಿದ ಮಾನವ ಸರಪಳಿ ಹಾಗೂ ಮತದಾರರ ಜಾಗೃತಿ ಸಭೆಯಲ್ಲಿ ಅತಿಥಿಯಾಗಿ ಮಾತನಾಡಿದರು.
ಸವಣೂರು ತಾಲೂಕಿನಾದ್ಯಂತ ಸಾಕ್ಷರತಾ ಪ್ರೇರಕರು ಹಾಗೂ ಸ್ವಯಂ-ಸೇವಕರು ಮತದಾರರ ಜಾಗೃತಿ ಸಭೆ, ಜಾಥಾ, ಹಾಡು, ಬೀದಿ ನಾಟಕಗಳನ್ನು ನೇರವೇರಿಸಿಕೊಡಬೇಕೆಂದು ತಾಲೂಕು ಸಂಯೋಜಕರಾದ ಎಚ್.ಎಫ್. ದ್ಯಾವನಗೌಡ್ರ ಹೇಳಿದರು. ಮಾನವ ಸರಪಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಿಜಗುಣ ಶಿವಯೋಗಿ ಸ್ವಾಮಿಗಳು, ಮತದಾನದ ಸರಪಳಿ ಗಟ್ಟಿಯಾಗಿದ್ದಾಗ ಪ್ರಜಾಭುತ್ವದ ಸೌಧ ಬಿಗಿಯಾಗಿ ನಿಲ್ಲುವುದೆಂದು ಹೇಳಿದರು. ನಿಷ್ಪಕ್ಷಪಾತವಾಗಿ ಸಮಾಜದ ಎಲ್ಲ ಸಂಘ-ಸಂಸ್ಥೆಗಳು ಮತದಾರರ ಜಾಗೃತಿ ಹಾಗೂ ಮತದಾನದ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಲು ಶ್ರಮಿಸಬೇಕು ಹಾಗೂ ಚುನಾವಣಾ ಆಯೋಗದ ಸ್ವೀಪ್ ಕಾರ್ಯಕ್ರಮ ಉತ್ತಮವಾದದ್ದು ಎಂದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಜಗದೀಶ ವಡಕಮ್ಮನವರ, ಮಹಿಳಾ ಮಂಡಳದ ಅಧ್ಯಕ್ಷೆ ಸುವರ್ಣಾ ಪಟ್ಟಣಶಟ್ಟಿ, ಅಕ್ಕಮ್ಮ ಬಳಿಗಾರ, ಪ್ರೇರಕಿ ಶಿಲ್ಪಾ ನೆಗಳೂರು ಮುಂತಾದವರು ಉಪಸ್ಥಿತರಿದ್ದರು.
ಜಾಗೃತಿ ಸಭೆಯ ನಂತರ ಏರ್ಪಡಿಸಲಾದ ಮತದಾರರ ಒಗ್ಗಟ್ಟು ಪ್ರದರ್ಶಿಸುವ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಪ್ರೇರಕರು, ಸ್ವಯಂ-ಸೇವಕರು, ಸ್ತ್ರೀ-ಶಕ್ತಿ ಸಂಘದ ಸದಸ್ಯರು, ಆಶಾ ಕಾರ್ಯಕರ್ತೆಯರು, ಶಿಕ್ಷಕರು, ಪಂಚಾಯಿತಿ ಸಿಬ್ಬಂದಿವರ್ಗ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಶಿಕ್ಷಕ ಚಂದ್ರಶೇಖರ ಕುಳೇನೂರ ಸ್ವಾಗತಿಸಿ, ನಿರೂಪಿಸಿದರು. ಗಿರೀಶ ಪಾಟೀಲ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

