ಕಾಂಗ್ರೆಸ್ ಗೊಂದಲಕ್ಕೆ ತೆರೆಸಲೀಂ ಅಹ್ಮದ್ ಅಭ್ಯರ್ಥಿ
ಕನ್ನಡಪ್ರಭ ವಾರ್ತೆ ಹಾವೇರಿ ಮಾ. 24
ಹಲವು ದಿನಗಳಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಬಗ್ಗೆ ಮೂಡಿದ್ದ ಕುತೂಹಲಕ್ಕೆ ಬ್ರೇಕ್ ಬಿದ್ದಿದೆ. ಸೋಮವಾರ 6ನೇ ಪಟ್ಟಿ ಬಿಡುಗಡೆ ಮಾಡಿರುವ ಕಾಂಗ್ರೆಸ್ ಹಾವೇರಿ ಕ್ಷೇತ್ರಕ್ಕೆ ಸಲೀಂ ಅಹ್ಮದ್ ಅವರಿಗೆ ಟಿಕೆಟ್ ಘೋಷಿಸಿದೆ.
ಬಿಜೆಪಿಯಿಂದ ಹಾಲಿ ಸಂಸದ ಶಿವಕುಮಾರ ಉದಾಸಿ ಅವರಿಗೆ ಟಿಕೆಟ್ ನೀಡಲಾಗಿದ್ದು, ಕಳೆದ ಚುನಾವಣೆಯಲ್ಲಿ ಉದಾಸಿ ಅವರಿಗೆ ನೇರ ಸ್ಪರ್ಧೆ ಒಡ್ಡಿದ್ದ ಕಾಂಗ್ರೆಸ್‌ನ ಸಲೀಂ ಅಹ್ಮದ್ ಅವರಿಗೆ ಕೈ ಟಿಕೆಟ್ ಒಲಿದಿದೆ. ರಾಜ್ಯದ ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಟಿಕೆಟ್ ಫೈನಲ್ ಆಗಿದ್ದರೂ ಹಾವೇರಿ ಕ್ಷೇತ್ರಕ್ಕೆ ಹೆಸರು ಅಂತಿಮಗೊಳಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ಎದುರಾಳಿ ಪಕ್ಷ ಹಾಗೂ ಅಭ್ಯರ್ಥಿಗಳೂ ಸೇರಿದಂತೆ ಕಾರ್ಯಕರ್ತರಲ್ಲಿ ಕೈ ಟಿಕೆಟ್ ಯಾರಿಗೆ ಎಂಬ ಕುತೂಹಲ ಕೆರಳಿಸಿತ್ತು. ಮಾಜಿ ಶಾಸಕ ಡಿ.ಆರ್. ಪಾಟೀಲ್ ಹಾಗೂ ಭಾರತ ಸರ್ಕಾರದ ನೆಹರು ಯುವಕೇಂದ್ರದ ಮಹಾನಿರ್ದೇಶಕ ಸಲೀಂ ಅಹ್ಮದ್ ಅವರ ನಡುವೆ ಕ್ಷೇತ್ರದ ಟಿಕೆಟ್‌ಗೆ ತೀವ್ರ ಪೈಪೋಟಿ ಏರ್ಪಟ್ಟಿದ್ದರಿಂದ ಹೈಕಮಾಂಡ್‌ಗೆ ತೀವ್ರ ತಲೆನೋವಾಗಿ ಪರಿಣಮಿಸಿತ್ತು. ಅಂತಿಮವಾಗಿ ಸಲೀಂ ಅಹ್ಮದ್ ಮೇಲೆ ಭರವಸೆ ಇಟ್ಟು ಕಾಂಗ್ರೆಸ್ ಮತ್ತೊಮ್ಮೆ ಟಿಕೆಟ್ ಅವಕಾಶ ನೀಡಿದೆ. ಇದರಿಂದ ಉದಾಸಿ ಹಾಗೂ ಸಲೀಂ ನಡುವಿನ ಮಹಾಯುದ್ಧಕ್ಕೆ ಎರಡನೇ ಬಾರಿಗೆ ಕ್ಷೇತ್ರ ಸಾಕ್ಷಿಯಾಗುತ್ತಿದೆ.
ಉದಾಸಿ ವರ್ಸಸ್ ಸಲೀಂ: ಕ್ಷೇತ್ರ ಮರುವಿಂಗಡಣೆ ಬಳಿಕ ರಚನೆಗೊಂಡ ಹಾವೇರಿ ಕ್ಷೇತ್ರಕ್ಕೆ 2009ರಲ್ಲಿ ನಡೆದ ಮೊದಲ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಶಿವಕುಮಾರ ಉದಾಸಿ ಹಾಗೂ ಕಾಂಗ್ರೆಸ್‌ನಿಂದ ಸಲೀಂ ಅಹ್ಮದ್ ಸ್ಪರ್ಧಿಸಿದ್ದರು. ತೀವ್ರ ಹಣಾಹಣಿ ನಡುವೆ ಶಿವಕುಮಾರ ಉದಾಸಿ, ಸಲೀಂ ಅಹ್ಮದ್ ಅವರನ್ನು 87,920 ಮತಗಳ ಅಂತರದಿಂದ ಸೋಲಿಸಿದ್ದರು. ಉದಾಸಿ 4,30,293 ಮತಗಳನ್ನು ಪಡೆದರೆ, ಸಲೀಂ ಅಹ್ಮದ್ 3.42,373 ಮತ ಪಡೆದಿದ್ದರು. ಮಾಜಿ ಸಚಿವ ಸಿ.ಎಂ. ಉದಾಸಿ ಅವರೊಂದಿಗೆ ಕೆಜೆಪಿಯಲ್ಲಿ ಗುರುತಿಸಿಕೊಂಡಿದ್ದ ಸಂಸದ ಶಿವಕುಮಾರ ಉದಾಸಿ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಆದರೆ, ಕಾಂಗ್ರೆಸ್ ಟಿಕೆಟ್ ಪಡೆಯುವುದು ಸಲೀಂ ಅವರಿಗೆ ಅಷ್ಟು ಸುಲಭವಾಗಿರಲಿಲ್ಲ. ಉದಾಸಿಗೆ ಸ್ಪರ್ಧೆ ನೀಡಲು ಬಹುಸಂಖ್ಯಾತ ಲಿಂಗಾಯತ ಸಮುದಾಯದ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಆದರೆ, ಧಾರವಾಡ ಕ್ಷೇತ್ರದಲ್ಲಿ ವಿನಯ ಕುಲಕರ್ಣಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದರಿಂದ ಪಕ್ಕದ ಕ್ಷೇತ್ರ ಹಾವೇರಿಯಲ್ಲಿ ಸಲೀಂ ಅವರಿಗೆ ಟಿಕೆಟ್ ಪಕ್ಕಾ ಆಗುವಂತಾಯಿತು. ಇದರೊಂದಿಗೆ ಹಲವು ದಿನಗಳ ಗೊಂದರಕ್ಕೆ ತೆರೆ ಬಿದ್ದಿದೆ.
ನೇರ ಹಣಾಹಣಿ: ಹಾವೇರಿ ಲೋಕಸಭೆ ಕ್ಷೇತ್ರದಲ್ಲಿ ಇಬ್ಬರು ಅಭ್ಯರ್ಥಿ, 2 ರಾಜಕೀಯ ಪಕ್ಷಗಳ ನಡುವೆ ನೇರ ಪೈಪೋಟಿ ನಡೆಯುತ್ತ ಬಂದಿದ್ದು ವಿಶೇಷ. ಇಲ್ಲಿ ಮೂರನೇಯವರು ಮೂಲೆಗುಂಪಾಗಿ ಠೇವಣಿ ಕಳೆದುಕೊಂಡ ಇತಿಹಾಸವೇ ಹೆಚ್ಚು.
ಹೆಚ್ಚಿದ ಕುತೂಹಲ: ಕ್ಷೇತ್ರದಲ್ಲಿ ಈ ಸಲ ಬಿಜೆಪಿ ಹ್ಯಾಟ್ರಿಕ್ ಗೆಲವಿನ ಕನಸು ಕಾಣುತ್ತಿದೆ. 2004ರಲ್ಲಿ ಮಂಜುನಾಥ ಕುನ್ನೂರ ಹಾಗೂ 2009ರಲ್ಲಿ ಶಿವಕುಮಾರ ಉದಾಸಿ ಗೆದ್ದು ಕ್ಷೇತ್ರದಲ್ಲಿ ಕಮಲ ಅರಳಿಸಿದ್ದರು. ಆದ್ದರಿಂದ ಈಗ ಬಾರಿ ಮತ್ತೆ ಗೆಲ್ಲಲು ಉದಾಸಿ ರಣತಂತ್ರ ರೂಪಿಸಿದ್ದರೆ, ಒಮ್ಮೆ ಸೋಲನುಭವಿಸಿದ್ದ ಸಲೀಂ ಈ ಬಾರಿ ಒಂದು ಕೈ ನೋಡುವ ತವಕದಲ್ಲಿದ್ದಾರೆ. ಜೆಡಿಎಸ್ ಕೂಡ ಒಗ್ಗಟ್ಟಿನ ಮಂತ್ರ ಜಪಿಸುತ್ತಿದೆ. ಅಭ್ಯರ್ಥಿ ರವಿ ಮೆಣಸಿನಕಾಯಿ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದು, ಕೈ ಹಾಗೂ ಕಮಲಕ್ಕೆ ಪೈಪೋಟಿ ನೀಡಲು ಸನ್ನದ್ಧರಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಬಳಿಕ ಕ್ಷೇತ್ರದಲ್ಲಿ ಚುನಾವಣಾ ಕಣಕ್ಕೆ ಕಳೆ ಬಂದಿದ್ದು, ಪ್ರಚಾರದ ಅಬ್ಬರ ಜೋರಾಗುವ ಸಾಧ್ಯತೆಯಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

