ಕೊಕ್ಕರಗುಂದಿ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರದ ನಿರ್ಧಾರ
ಶಿರಹಟ್ಟಿ: ತಾಲೂಕಿನ ಕೊಕ್ಕರಗುಂದಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 75 ವಿದ್ಯಾರ್ಥಿಗಳಿಗೆ ಆಟದ ಮೈದಾನ, ಇತರ ಸೌಲಭ್ಯಗಳಿಲ್ಲ. ಸಮಸ್ಯೆಯನ್ನು 15 ದಿನಗಳಲ್ಲಿ ಬಗೆಹರಿಸದಿದ್ದರೆ, ಮತದಾನ ಬಹಿಷ್ಕರಿಸುವುದಾಗಿ ಎಚ್ಚರಿಸಿ ಗ್ರಾಮಸ್ಥರು ತಹಸೀಲ್ದಾರ್ಗೆ ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ.
ವಸಂತಗೌಡ ನಾಗನಗೌಡ ಪಾಟೀಲ, ಶ್ರೀಕಾಂತಗೌಡ ಪಾಟೀಲ ಮಾತನಾಡಿ, ಶಾಲೆ ಮಕ್ಕಳಿಗೆ ಆಟದ ಮೈದಾನವಿಲ್ಲ. ಇದ್ದ ಜಾಗೆಯಲ್ಲಿ ಜಾಲಿ ಮರ ಬೆಳೆದಿವೆ. ಹಾವಿನ ದೊಡ್ಡ ಹುತ್ತವೇ ಶಾಲಾ ಅಂಗಳದಲ್ಲಿದೆ. ಈ ಹಿಂದೆ ಇಬ್ಬರು ಮಕ್ಕಳಿಗೆ ಹಾವು ಕಚ್ಚಿದ್ದು, ಶಿಕ್ಷಕರ ಕಾಳಜಿಯಿಂದಾಗಿ ಪಾರಾಗಿದ್ದಾರೆ. ಶಾಲೆ ಸುತ್ತ ಆವರಣ ಗೋಡೆ ಇಲ್ಲ. ದನ ಕಟ್ಟುವುದು, ಜೂಜುಕೋರರ ಹಾವಳಿ ಹೆಚ್ಚಿದೆ. ಶಾಲಾ ಕೊಠಡಿಗಳು ಬಿರುಕು ಬಿಟ್ಟಿವೆ. 1990-91ರಲ್ಲಿ ದೇವರಡ್ಡಿ ಬಸವರಡ್ಡಿ ಬೆನ್ನೂರ ಎಂಬುವರು ಶಾಲೆಗೆ 20 ಗುಂಟೆ ಜಾಗೆ ಕೊಟ್ಟಿದ್ದಾರೆ. ಅವರ ಮರಣಾನಂತರ ಮಕ್ಕಳು ದಾವೆ ಹೂಡಿದ್ದರಿಂದ ತೊಂದರೆಯಾಗಿದೆ ಎಂದು ದೂರಿದರು.
20 ಗುಂಟೆ ಜಾಗೆಯ ಸಮಸ್ಯೆಯನ್ನು 15 ದಿನಗಳಲ್ಲಿ ಬಗೆಹರಿಸದಿದ್ದರೆ ಕೊಕ್ಕರಗುಂದಿ ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸಲಿದ್ದಾರೆ. ಚುನಾವಣಾ ಸಿಬ್ಬಂದಿ ಹಾಗೂ ಮತಪೆಟ್ಟಿಗೆಯನ್ನು ಗ್ರಾಮಕ್ಕೆ ಕಳಿಸಿದ್ದೇ ಆದಲ್ಲಿ ಅನಾಹುತವಾದರೆ, ಅಧಿಕಾರಿಗಳೇ ಹೊಣೆಯಾಗುತ್ತಾರೆ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ. ಬಸಪ್ಪ ದೊಡ್ಡಮನಿ, ಶಿವಪುತ್ರಪ್ಪ ನೆಲಗುಡ್ಡದ, ಫಕೀರಸಾಬ ನದಾಫ್, ಮುದಕನಗೌಡ ಪಾಟೀಲ, ನೀಲಪ್ಪ ತಳವಾರ, ಶಂಕರಗೌಡ ಪಾಟೀಲ, ಚನ್ನಬಸನಗೌಡ ಪಾಟೀಲ, ನಿಂಗಪ್ಪ ಹೊಸಮನಿ ಮನವಿ ಇದ್ದರು.
ಜಾಗೃತಿಗಾಗಿ ರಂಗೋಲಿ
ಹಾವೇರಿ: ಜಿಪಂ, ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಜನಸಾಮಾನ್ಯರಿಗೆ ಮತದಾನದ ಮಹತ್ವ, ಎಲ್ಲ ನಾಗರಿಕರ ಮತದಾನದಿಂದ ಪ್ರಜಾಪ್ರಭುತ್ವಕ್ಕೆ ಸಹಾಯಕವಾಗುವ ಅಂಶಗಳ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ದೃಷ್ಟಿಯಿಂದ ತಾಲೂಕಿನ ಕುರುಬಗೊಂಡ ಗ್ರಾಮದಲ್ಲಿ ರಂಗೋಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರಂಗೋಲಿ ಕಾರ್ಯಕ್ರಮದಲ್ಲಿ ಕುರುಬಗೊಂಡ ವಲಯದ ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಮೇಲ್ವಿಚಾರಕಿಯರು ಮತ್ತು ಸ್ತ್ರೀಶಕ್ತಿ ಸಂಘಗಳ ಸದಸ್ಯರು ಪಾಲ್ಗೊಂಡಿದ್ದರು. ಮಾರುತಿ ದೇವಸ್ಥಾನದ ಆವರಣದಲ್ಲಿ ಸ್ತ್ರೀಶಕ್ತಿ ಸಂಘದ ಸದಸ್ಯರು, 18 ವರ್ಷ ತುಂಬಿದ ಎಲ್ಲರೂ ಮತ ಚಲಾಯಿಸುವ ಬಗ್ಗೆ ರಂಗೋಲಿ ಹಾಕುವ ಮೂಲಕ ಜನರಲ್ಲಿ ಅರಿವು ಮೂಡಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಂಗನವಾಡಿ ಕಾರ್ಯಕರ್ತೆಯರು ಸಾರ್ವಜನಿಕರಿಗೆ ಮತದಾನದ ಮಾರ್ಗದರ್ಶನ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

