ವಿವಿಗಳಲ್ಲಿ ಚರ್ಚೆಯಿಂದ ಸಾಮಾಜಿಕ ಸಮಸ್ಯೆ ಪರಿಹಾರ
ಶಿಗ್ಗಾಂವಿ: ಜ್ಞಾನ ಮಂದಿರವಾಗಿರುವ ವಿಶ್ವವಿದ್ಯಾಲಯಗಳಲ್ಲಿ ನಡೆಯುವ ಚಿಂತನೆ ಮತ್ತು ಚರ್ಚೆಗಳಿಂದ ಸಮಾಜದಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಸಮಾಜದ ಸ್ವಾಸ್ಥ್ಯ ಕಾಪಾಡಬಹುದಾಗಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಪಿ. ವೆಂಕಟರಾಮಯ್ಯ ಅಭಿಪ್ರಾಯಪಟ್ಟರು.
ತಾಲೂಕಿನ ಗೋಟಗೊಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ನ ಸಹಯೋಗದಲ್ಲಿ ಹಮ್ಮಿಕೊಂಡಿರುವ ಉನ್ನತ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಎಂಬ 2 ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಈಗಾಗಲೇ ವಿಶ್ವವಿದ್ಯಾಲಯ ಮಟ್ಟದಲ್ಲಿ ಗ್ರಾಮೀಣಾಭಿವೃದ್ಧಿ ಎಂಬ ಶೈಕ್ಷಣಿಕ ಶಿಸ್ತಿನ ಅಡಿಯಲ್ಲಿ ಪ್ರಧಾನ ವಿಷಯವಾಗಿ ಅಧ್ಯಯನ ನಡೆಯುತ್ತಿದೆ. ಇದರೊಂದಿಗೆ ಎಲ್ಲ ಶೈಕ್ಷಣಿಕ ಶಿಸ್ತುಗಳಲ್ಲೂ ಗ್ರಾಮೀಣಾಭಿವೃದ್ಧಿ ವಿಷಯವನ್ನು ಕಡ್ಡಾಯಗೊಳಿಸಿ ಪಠ್ಯಕ್ರಮದಲ್ಲಿ ಸೇರಿಸಿದರೆ, ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸನ್ನು ಸಾಕಾರಗೊಳಿಸಲು ಸಾಧ್ಯವಾಗುತ್ತದೆ. ಇಂದಿನ ಶಿಕ್ಷಣ ಯುವಕರನ್ನು ಉದ್ಯೋಗಸ್ಥರನ್ನಾಗಿಸದೆ ಪರಾವಲಂಬಿಗಳನ್ನಾಗಿಸಿದೆ. ಇದಕ್ಕೆ ಪರಿಹಾರವಾಗಿ ಅಧ್ಯಯನ ವಿಷಯದ ಆಯ್ಕೆಯಲ್ಲಿ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ನೀಡುವುದರೊಂದಿಗೆ ಶೈಕ್ಷಣಿಕ ಪಠ್ಯ ವ್ಯವಸ್ಥೆಯಲ್ಲಿ ವಿಶೇಷ ಕೌಶಲ್ಯಗಳನ್ನು ಕಲಿಸಿದ್ದೇ ಆದಲ್ಲಿ ಪದವೀಧರರನ್ನು ಸ್ವಾವಲಂಬಿಗಳನ್ನಾಗಿಸಬಹುದು ಎಂಬ ಅಶಯ ವ್ಯಕ್ತಪಡಿಸಿದರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಂಬಳಿಕೆ ಹಿರಿಯಣ್ಣ ಮಾತನಾಡಿ, ಅತ್ಮವಿಶ್ವಾಸ ಹೆಚ್ಚಿಸುವ ಶಿಕ್ಷಣ ಪದವೀಧರರ ಉದ್ಯೋಗ ಗಳಿಕೆಗೆ ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಶೈಕ್ಷಣಿಕ ಪಠ್ಯಗಳನ್ನು ರೂಪಿಸಿದ್ದು, ಪದವಿ ಪಡೆದ ವಿದ್ಯಾರ್ಥಿಗಳನ್ನು ಸ್ವಾವಲಂಬಿಗಳನ್ನಾಗಿಸುತ್ತದೆ ಎಂದರು. ಇಂದಿನ ಗ್ರಾಮೀಣಾಭಿವೃದ್ಧಿ ಸಿದ್ಧಾಂತಗಳು ಬಂಡವಾಳಶಾಹಿ ಮತ್ತು ಅಧಿಕಾರಶಾಹಿಗಳ ಪರವಾಗಿವೆ. ನಗರ ಮತ್ತು ಗ್ರಾಮಗಳ ನಡುವೆ ಸಂಬಂಧವೇ ಇಲ್ಲ ಎನ್ನುವ ಪರಿಸ್ಥಿತಿ ಇಂದು ನಿರ್ಮಾಣವಾಗುತ್ತಿದೆ. ಇದಕ್ಕೆ ಕಾರಣಗಳೇನು ಮತ್ತು ಗ್ರಾಮೀಣಾಭಿವೃದ್ಧಿಗೆ ಬೇಕಾಗುವ ಗುಣಾತ್ಮಕ ಸಿದ್ಧಾಂತಗಳನ್ನು ನೀಡುವ ಜವಾಬ್ದಾರಿ ಇಂದಿನ ಸಂಶೋಧಕರ ಮುಂದಿದೆ ಎಂದು ಎಚ್ಚರಿಸಿದರು.
ನಂತರ ನಡೆದ ವಿಚಾರ ಸಂಕಿರಣದ ಗೋಷ್ಠಿಯಲ್ಲಿ ಡಾ. ವೀರಭದ್ರ ನಾಯ್ಕ ಅವರು ಗ್ರಾಮೀಣಾಭಿವೃದ್ಧಿ ಪರಿಕಲ್ಪನೆಯ ಭಿನ್ನ ಪರಿಣಾಮಗಳ ಒಂದು ಸಮಗ್ರ ಅಧ್ಯಯನ ಎಂಬ ವಿಷಯವಾಗಿ ವಿಚಾರ ಮಂಡಿಸಿದರು. ಡಾ. ಚನ್ನೇಶ್ ಗ್ರಾಮೀಣ ಮತ್ತು ನಗರ ಪರಿಸರ ವ್ಯವಸ್ಥೆಗಳ ನಡುವೆ ನಡೆಯುವ ಸರಕುಗಳ ವರ್ಗಾವಣೆಯನ್ನು ಹೊಂದಾಣಿಕೆ ಮಾಡುವ ಮೂಲಕ ಪರಿಸರ ಸಂಬಂಧಿ ಬಿಕ್ಕಟ್ಟುನ್ನು ಅರ್ಥೈಸಿಕೊಳ್ಳುವಿಕೆ ಕರ್ನಾಟಕದ ಒಂದು ವಿಶ್ಲೇಷಣೆ ಎಂಬ ವಿಷಯವಾಗಿ ವಿಚಾರ ಪ್ರಸ್ತುತಪಡಿಸಿದರು. ಉತ್ಪಾದಕತೆಯನ್ನು ಹೆಚ್ಚಿಸುವ ಮೂಲಕ ಗ್ರಾಮೀಣಾಭಿವೃದ್ಧಿ ಸಾಧ್ಯ ಎಂಬ ವಿಚಾರವಾಗಿ ಡಾ. ದೇಶಪಾಂಡೆ ವಿಷಯ ಮಂಡಿಸಿದರು. ಕರ್ನಾಟಕದಲ್ಲಿನ ಜಾಗತೀಕರಣೋತ್ತರ ಕೃಷಿ ಬಿಕ್ಕಟ್ಟು-ಕೆಲವು ಟಿಪ್ಪಣಿಗಳು ಎಂಬ ವಿಷಯ ಕುರಿತು ಬೆಂಗಳೂರಿನ ಚಿಂತಕ ಶಿವಸುಂದರ್ ಪ್ರಬಂಧ ಮಂಡಿಸಿದರು.
ಕುಲಸಚಿವ ಪ್ರೊ. ಡಿ.ಬಿ ನಾಯ್ಕ, ಕುಲಸಚಿವ ಮೌಲ್ಯಮಾಪನ ಪ್ರೊ. ಸ.ಚಿ. ರಮೇಶ್, ಹಿರಿಯ ಸಂಶೋಧನಾಧಿಕಾರಿ ಡಾ.ಕೆ.ಪ್ರೇಮಕುಮಾರ ಮತ್ತು ವಿವಿಯ ಅಧ್ಯಾಪಕ ವರ್ಗದವರು ಉಪಸ್ಥಿತರಿದ್ದರು. ಡೀನರು ಮತ್ತು ಎಂಬಿಎ ವಿಭಾಗದ ಮುಖ್ಯಸ್ಥರು ಪ್ರೊ. ಎಂ. ಚಂದ್ರ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಎಂಎ ಕಲಾ ವಿಭಾಗದ ವಿದ್ಯಾರ್ಥಿ ಎಚ್.ವೈ. ಬೆಂಗೇರಿ ಮತ್ತು ಸಂಗಡಿಗರು ಜನಪದ ಗೀತೆ ಪ್ರಸ್ತುತಪಡಿಸಿದರು. ಸಹಾಯಕ ಪ್ರಾಧ್ಯಾಪಕರಾದ ಡಾ. ವೃಷಭ ಕುಮಾರ ಸ್ವಾಗತಿಸಿ, ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

