ಹಾವೇರಿ

ಗಣಿ ಕಣಿವೆಯಲ್ಲಿ ಲಾಭ ನಷ್ಟದ ಲೆಕ್ಕಾಚಾರ

Published On :

ಶಶಿಧರ ಮೇಟಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮೇ 3
ಎ ಮತ್ತು ಬಿ ಕೆಟಗರಿ ಗಣಿ ಕಂಪನಿಗಳ ಗುತ್ತಿಗೆದಾರರಿಗೆ ದಂಡ ವಿಧಿಸುವ ಮೂಲಕ ಗಣಿಗಾರಿಕೆ ಆರಂಭಿಸಲು ಸಮ್ಮತಿಸಿದ್ದರೆ, ಸಿ ಕೆಟಗರಿಯಲ್ಲಿ ಸಾಕಷ್ಟು ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ಅದನ್ನು ಜಾಗತಿಕ ಟೆಂಡರ್ ಪ್ರಕ್ರಿಯೆ ಮೂಲಕ ಹರಾಜು ಉದ್ದೇಶದಿಂದ ಎಲ್ಲ ಸಿದ್ಧತೆಯನ್ನು ಸಿಇಸಿ ಆದೇಶದಂತೆ ರಾಜ್ಯ ಸರ್ಕಾರ ಮಾಡುತ್ತಿದೆ. ಸಿ ಕೆಟಗರಿಯ ಅದಿರು ನಷ್ಟವಾಗಿರುವುದನ್ನು ಪತ್ತೆಹಚ್ಚಿ, ಪರಿಸರ ಪುನರುಜ್ಜೀವನ ಮತ್ತು ಪುನರ್ ನಿರ್ಮಾಣದ ಸಿದ್ಧತೆಗಳು ಭರದಿಂದ ಸಾಗಿವೆ.
ಸುರತ್ಕಲ್ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ಸಂಸ್ಥೆ ಪೈಲಟ್ ಪ್ರಾಜೆಕ್ಟಾಗಿ ಸಿ ಕೆಟಗರಿಯ ಕಂಪನಿಯಲ್ಲಿ ಸಂಗ್ರಹವಿರುವ ಅದಿರು ಪ್ರಮಾಣವನ್ನು ಲೆಕ್ಕ ಹಾಕುತ್ತಿದೆ. ಇದರ ಬೆನ್ನಲ್ಲೇ ಐಸಿಎಫ್ಆರ್ಇ ತಂಡ ಸಿ ಕೆಟಗರಿಯಲ್ಲಿರುವ ಪರಿಸರ ಪುನರುಜ್ಜೀವನ ಹಾಗೂ ಪುನರ್ನಿರ್ಮಾಣ (ಆರ್ ಅಂಡ್ ಆರ್) ಯೋಜನೆ ಸಿದ್ಧ ಮಾಡುತ್ತಿದೆ. ಸಿ ಕೆಟಗರಿಯಲ್ಲಿ ಆಗಿರುವ ನಷ್ಟ ಕಂಡು ಹಿಡಿಯಲು ರಾಜ್ಯ ಸರ್ಕಾರದ ಲಾಸ್ ಅಸೆಸ್ಮೆಂಟ್ ಕಮಿಟಿಯ ರಿಮೋಟ್ ಸೆನ್ಸಿಂಗ್ ಏಜೆನ್ಸಿ ಬಳ್ಳಾರಿಗೆ ಆಗಮಿಸಿದೆ.
ನಷ್ಟದ ಪತ್ತೆ ಕಾರ್ಯ: ರಿಮೋಟ್ ಸೆನ್ಸಿಂಗ್ ಏಜೆನ್ಸಿ ರಾಜ್ಯದ ಬಳ್ಳಾರಿ, ತುಮಕೂರು, ಚಿತ್ರದುರ್ಗದಲ್ಲಿರುವ ಸಿ ಕೆಟಗರಿಯ 51 ಗಣಿ ಕಂಪನಿಗಳಲ್ಲಿ ಈವರೆಗೆ ಎಷ್ಟು ಅದಿರನ್ನು ತೆಗೆಯಲಾಗಿದೆ, ಎಷ್ಟು ನಷ್ಟವಾಗಿದೆ ಎಂಬುದನ್ನು ಪತ್ತೆಮಾಡಲಿದೆ. ಜಿಡಿಪಿಎಸ್ ಹಾಗೂ ಏರಿಯಲ್ ಸರ್ವೆ ಮೂಲಕ ಸಿ ಕೆಟಗರಿಯ ಗಣಿ ಗುತ್ತಿಗೆ ಪ್ರಕಾರವಾಗಿ ನಷ್ಟವನ್ನು ಕಂಡು ಹಿಡಿದು, ವರದಿ ಸಲ್ಲಿಸಲಿದೆ. ಸಿ ಕೆಟಗರಿಯಲ್ಲಿ ಗಣಿ ಕಂಪನಿಗಳಿಂದ ಮಾಡಿರುವ ನಷ್ಟ, ಅದನ್ನು ತುಂಬುವ ನಿಟ್ಟಿನಲ್ಲಿ ಆಲೋಚನೆ ಸಾಧ್ಯವಾಗುತ್ತದೆ.
ನಷ್ಟ ತುಂಬುವ ಚಿಂತನೆ: ಎ ಮತ್ತು ಬಿ ಕೆಟಗರಿಯಲ್ಲಿ ಆರ್ ಅಂಡ್ ಆರ್ ಯೋಜನೆಯನ್ನು ಆಯಾ ಗಣಿ ಗುತ್ತಿಗೆ ಪ್ರದೇಶದವರು ಅನುಷ್ಠಾನ ಮಾಡುವ ಮೂಲಕ ಗಣಿ ಗುತ್ತಿಗೆ ಪರವಾನಿಗೆ ಪಡೆದಿದ್ದರೆ, ಸಿ ಕೆಟಗರಿಯಲ್ಲಿ ಗಣಿ ಗುತ್ತಿಗೆ ಪ್ರದೇಶದಲ್ಲಿ ಸಾಕಷ್ಟು ಅಕ್ರಮವಾಗಿರುವುದರಿಂದ ಪರಿಸರ ಹಾನಿ ಹಾಗೂ ಅದಿರು ನಷ್ಟವನ್ನು ಪತ್ತೆ ಮಾಡಿ, ನಷ್ಟವನ್ನು ಆಯಾ ಕಂಪನಿಯವರು ಭರಿಸುವ, ಅವರ ಮೂಲಕ ಪರಿಸರ ಪುನರುಜ್ಜೀವನ ಮತ್ತು ಪುನರ್ ನಿರ್ಮಾಣ ಮಾಡುವುದರ ಬಗ್ಗೆ ಸರ್ಕಾರ ನಿರ್ಧರಿಸುವುದು ಅಥವಾ ಮ್ಯಾನಿಟರಿಂಗ್ ಕಮಿಟಿ ನಷ್ಟವನ್ನು ವಸೂಲಿ ಮಾಡಿ, ಆರ್ ಆಂಡ್ ಆರ್ ಯೋಜನೆ ಅನುಷ್ಠಾನಕ್ಕೆ ಮುಂದಾಗಲು ಸಾಧ್ಯವಾಗುತ್ತದೆ. ಆದರೆ ಗುತ್ತಿಗೆಯನ್ನು ಅವರಿಗೆ ನೀಡದೆ, ಜಾಗತಿಕ ಟೆಂಡರ್ ಮೂಲಕ ಹರಾಜು ಮಾಡಲಿದೆ.
ಏಕಕಾಲದಲ್ಲಿ ಸಿದ್ಧತೆ: ಏಕಕಾಲದಲ್ಲಿ ಸಿ ಕೆಟಗರಿಯ ಗಣಿ ಗುತ್ತಿಗೆ ಪ್ರದೇಶದಲ್ಲಿರುವ ಅದಿರು ಪ್ರಮಾಣ, ಅದಿರು ನಷ್ಟವನ್ನು ಕಂಡು ಹಿಡಿಯುವುದು ಹಾಗೂ ಆರ್ ಅಂಡ್ ಆರ್ ಯೋಜನೆ ಸಿದ್ಧತೆ ನಡೆಸಲಾಗುತ್ತಿದೆ. ಸುರತ್ಕಲ್ನ ಎನ್ಐಟಿಕೆ ಅದಿರು ಸಂಗ್ರಹ ಮಾಹಿತಿ ಕಲೆ ಹಾಕುತ್ತಿದ್ದರೆ, ಐಸಿಎಫ್ಆರ್ಇ ತಂಡ ಪರಿಸರ ಪುನರುಜ್ಜೀವನ ಮತ್ತು ಪುನರ್ ನಿರ್ಮಾಣಕ್ಕೆ ಯೋಜನೆ ಸಿದ್ಧಮಾಡುತ್ತಿದೆ. ಈಗ ಲಾಸ್ ಅಸೆಸ್ಮೆಂಟ್ ಕಮಿಟಿ ಅಧೀನದ ರಿಮೋಟ್ ಸೆನ್ಸಿಂಗ್ ಏಜೆನ್ಸಿಯ ಸಲೀಂ ಎಂಬುವರ ನೇತೃತ್ವದಲ್ಲಿ 15 ಜನರ ತಂಡ ಬಳ್ಳಾರಿಗೆ ಗುರುವಾರದೊಳಗೆ ಆಗಮಿಸಿ, ಸಿ ಕೆಟಗರಿಯಲ್ಲಿ ಅದಿರು ನಷ್ಟದ ಪ್ರಮಾಣವನ್ನು ಪತ್ತೆ ಹಚ್ಚಲಿದೆ. ಒಂದು ತಿಂಗಳ ಕಾಲ ಜಿಲ್ಲೆಯಲ್ಲಿ ಬಿಡಾರ ಹೂಡುವ ಸಾಧ್ಯತೆ ಇದೆ.
ಸಿ ಕೆಟಗರಿಯಲ್ಲಿರುವ ರಾಜ್ಯದ 51 ಕಂಪನಿಗಳ ಗಣಿ ಗುತ್ತಿಗೆ ಪ್ರದೇಶವನ್ನು ಜಾಗತಿಕ ಟೆಂಡರ್ ಹಾಕುವುದರಿಂದ ಸಾಕಷ್ಟು ಪ್ರಮಾಣದ ಆದಾಯ ಸರ್ಕಾರಕ್ಕೆ ಹರಿದು ಬರಲಿದೆ. ಅಕ್ರಮದಿಂದ ಆಗಿರುವ ನಷ್ಟವನ್ನು ಪರಿಸರ ಪುನರುಜ್ಜೀವನ ಮತ್ತು ಪುನರ್ ನಿರ್ಮಾಣ ಯೋಜನೆ ಸಿದ್ಧಗೊಳಿಸಿ, ಆಯಾ ಗಣಿ ಕಂಪನಿಗಳಿಂದ ಭರಿಸುವ ಕೆಲಸ ಆಗುತ್ತಿದೆ. ಜತೆಗೇ ಸಿ ಕೆಟಗರಿ ಗಣಿ ಕಂಪನಿಗಳ ಗಣಿ ಗುತ್ತಿಗೆ ಪ್ರದೇಶಗಳನ್ನು ಜಾಗತಿಕ ಟೆಂಡರ್ ಮೂಲಕ ಹರಾಜು ಮಾಡುವ ಸಿದ್ಧತೆಯೂ ಭರದಿಂದ ನಡೆಯುತ್ತಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.