ರೈತರಿಗೆ ವರ ವ್ಯವಸಾಯೋತ್ಪನ್ನ ಮಾರಾಟ ಸಂಘ
ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಮೇ 19
ಜೂನ್ ತಿಂಗಳು ಮೊದಲ ವಾರ ಬಂತೆಂದರೆ ರೈತರಿಗೆ ಬಿತ್ತನೆ ಬೀಜ, ಗೊಬ್ಬರ ಸಂಗ್ರಹಣೆ ಕೊಳ್ಳುವುದು ಸಹಜ. ಆದರೆ, ಕಳೆದೆರಡು ವರ್ಷಗಳಲ್ಲಿ ರೈತರು ಪಟ್ಟ ಪಾಡು ಪ್ರಸಕ್ತ ವರ್ಷ ಇಲ್ಲದಂತಾಗಿದೆ. ಇದಕ್ಕೆ ತಾಲೂಕಿನ ಹೆಮ್ಮೆಯ ರೈತರ ಸಹಕಾರಿ ಸಂಸ್ಥೆಯಾದ ಹಿರೇಕೆರೂರು ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಂಘ ಲಿ., ಹಿರೇಕೆರೂರು ಈ ಭಾಗದ ರೈತರ ವರದಾನದ ಸಂಸ್ಥೆಯಾಗಿದೆ. ಕೃಷಿಕರ ಕಾಮಧೇನು ಎಂಬ ಖ್ಯಾತಿ ಪಡೆದಿದೆ.
ತಾಲೂಕು ಸಹಕಾರಿ ಮಾರಾಟ ಸಂಘ ಹಿರೇಕೆರೂರು 1959ರಲ್ಲಿ ಸ್ಥಾಪನೆಯಾಗಿ ಇಲ್ಲಿವರೆಗೂ ರೈತರ ಬದುಕಿಗೆ ಪೂರಕವಾಗಿ ಕೆಲಸ ಮಾಡುತ್ತಾ ಹಾವೇರಿ ಜಿಲ್ಲೆಯ ಹೆಮ್ಮೆಯ ಸಹಕಾರಿ ಸಂಸ್ಥೆಯಾಗಿ ಅವಿಭಜಿತ ಧಾರವಾಡ ಜಿಲ್ಲೆಯ ಸಹಕಾರಿ ಕ್ಷೇತ್ರದ ಹೆಮ್ಮರವಾಗಿ ಎತ್ತರಕ್ಕೆ ಬೆಳೆದಿದೆ. ರಾಜ್ಯದಲ್ಲಿಯೇ ಮಾದರಿ ಸಹಕಾರಿ ಸಂಘವೆಂದು ಪ್ರಶಸ್ತಿ ಪಡೆದಿದೆ. ಆರಂಭದಿಂದಲೂ ಈ ಸಂಘ ರೈತರ ಕೃಷಿಗೆ ಅಗತ್ಯವಾಗಿ ಬೇಕಾಗುವ ಗೊಬ್ಬರ ಪೂರೈಸಿದೆ. ರಾಜ್ಯದಲ್ಲಿ ಯಾವುದೇ ಜಿಲ್ಲೆಯಲ್ಲಿ ಗೊಬ್ಬರ ಕೊರತೆ ಇದ್ದರೂ ಇಲ್ಲಿ ಗೊಬ್ಬರ ಕೊರತೆ ಎಂದಿಗೂ ಆಗಿಲ್ಲ ಎನ್ನುವುದಂತೂ ಸತ್ಯ ಸಂಗತಿ. ಹಿರೇಕೆರೂರು ಕೇಂದ್ರ ಕಚೇರಿ ಹಾಗೂ ಮಾಸೂರ ರಸ್ತೆಯಲ್ಲಿರುವ 4 ಉಗ್ರಾಣಗಳು ಸೇರಿದಂತೆ ತಾಲೂಕಿನಲ್ಲಿ ಹಂಸಬಾವಿ, ಮಾಸೂರು, ಕೋಡ, ಚಿಕ್ಕೇರೂರು ಹಾಗೂ ರಟ್ಟಿಹಳ್ಳಿ ಶಾಖೆಗಳಲ್ಲಿ ಗೊಬ್ಬರ ಮಾರಾಟ ವರ್ಷದ 12 ತಿಂಗಳಲ್ಲೂ ನಡೆಯುತ್ತಿದೆ. ಅಲ್ಲದೆ ಹಿರೇಕೆರೂರು ತಾಲೂಕಿನ ರೈತರಿಗೆ ಅಷ್ಟೆ ಅಲ್ಲ, ಪಕ್ಕದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಕಡೇನಂದಿಹಳ್ಳಿ, ಸುಣ್ಣದಕೊಪ್ಪ ಸೇರಿದಂತೆ ನೂರಾರು ಗ್ರಾಮಗಳ ರೈತರು ಇಲ್ಲಿಂದಲೇ ಗೊಬ್ಬರ ಪಡೆಯುತ್ತಾರೆ.
ಉಗ್ರಾಣ: ಗೊಬ್ಬರ ಸಂಗ್ರಹ ತಾಲೂಕು ಕೇಂದ್ರವಾದ ಹಿರೇಕೆರೂರು ಪಟ್ಟಣದಲ್ಲಿ ಗೊಬ್ಬರ ಸಂಗ್ರಹಿಸಲು 5000 ಟನ್ ಸಾಮರ್ಥ್ಯದ ಉಗ್ರಾಣವನ್ನು ಸಂಘ ಹೊಂದಿದ್ದರಿಂದ ಮುಂಗಾರು ಮಾನ್ಸೂನ್ ಅರಂಭಕ್ಕೂ ಮೊದಲೆ ಸಾಕಷ್ಟು ಗೊಬ್ಬರ ಸಂಗ್ರಹವಾಗಿರುತ್ತದೆ. ಮಾಸೂರು, ಚಿಕ್ಕೇರೂರು, ರಟ್ಟಿಹಳ್ಳಿ, ಕೋಡ, ಹಂಸಬಾವಿ ಇಲ್ಲಿಯೂ ಸಾವಿರಾರು ಟನ್ ಗೊಬ್ಬರ ದಾಸ್ತಾನು ಮಾಡುವ ದೊಡ್ಡ ದೊಡ್ಡ ಉಗ್ರಾಣಗಳನ್ನು ಹೊಂದಿದ್ದು, ಅಲ್ಲದೆ ಈ ಸಂಘವು ಅತಿ ದೊಡ್ಡ ಗೊಬ್ಬರ ಕಂಪನಿಗಳಾದ ಇಪ್ಕೋ ಹಾಗೂ ಕ್ರಿಪ್ಕೋ ಕಂಪನಿಯ ಸದಸ್ಯತ್ವ ಪಡೆದಿದ್ದರಿಂದ ಈ ಕಂಪನಿಗಳಿಂದ ನೇರವಾಗಿ ಗೊಬ್ಬರ ಖರೀದಿಸಿ ರೈತರಿಗೆ ಮಾರಾಟ ಮಾಡುತ್ತಿದೆ. ಮುಂಜಾಗ್ರತೆ ವಹಿಸಿ ಸಂಘದ ಅಧ್ಯಕ್ಷ, ಸಹಕಾರಿ ಧುರೀಣ ಎಸ್.ಎಸ್. ಪಾಟೀಲ ಯೋಜನೆಯಂತೆ ಗೊಬ್ಬರ ಸಂಗ್ರಹವಾಗಿದ್ದರೂ ಕಳೆದ ವರ್ಷ ರೈತರು ರಾತ್ರಿ, ಇರಳು ಗೊಬ್ಬರಕ್ಕಾಗಿ ಮಹಿಳೆಯರು, ಮಕ್ಕಳೆನ್ನದೆ ಸರದಿಯಲ್ಲಿ ನಿಂತು ಗೊಬ್ಬರ ಪಡೆಯಬೇಕಾಗಿತ್ತು. ಆಗ ಎಸ್.ಎಸ್. ಪಾಟೀಲರು ಪುನಹಃ ಕೇಂದ್ರದಿಂದ ಹೆಚ್ಚುವರಿ ಗೊಬ್ಬರ ಪಡೆದು ರೈತರ ನೆರವಿಗೆ ಬಂದಿರುವುದು ವಿಶೇಷ. ಗೊಬ್ಬರದ ಕೊರತೆಯಾಗದಂತೆ 2013-14ನೇ ಸಾಲಿನಲ್ಲಿ ರು. 24 ಕೋಟಿ ಮೊತ್ತದ 20250 ಟನ್ ಗೊಬ್ಬರ ಮಾರಾಟ ಮಾಡಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆಯಲು ಸಹಕಾರಿಯಾಯಿತು.
ತಾಲೂಕಿನಲ್ಲಿ ಒಟ್ಟಾರೆ ಬಿತ್ತನೆಗೆ ಬೇಕಾಗುವ ಗೊಬ್ಬರ ರೈತರಿಗೆ ದೊರಕುವ ಮೂಲಕ ಉತ್ತಮ ಬೆಳೆ ಬೆಳೆಯಲು ಪೂರಕವಾದ ವಾತಾವರಣ ಹಾಗೂ ಗದ್ದಲವಿಲ್ಲದೆ ಗೊಬ್ಬರ ಸಿಗುವ ಮೂಲಕ ರೈತರು ಬಿತ್ತನೆ ಕಾರ್ಯಕ್ಕೆ ಭೂಮಿ ಹದಗೊಳಿಸಿ, ಗೊಬ್ಬರ ಖರೀದಿಗೆ ಮುಂದಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

