ಬರದ ನೋವಲ್ಲೂ ಮೇವು ಹಗರಣ
ಕನ್ನಡಪ್ರಭ ವಾರ್ತೆ, ಕೊಪ್ಪಳ, ಮಾ. 16
ಬಿಹಾರದಂತೆ ಕೊಪ್ಪಳದಲ್ಲಿಯೂ ಮೇವು ಹಗರಣ ನಡೆದಿದೆ ಎಂಬ ಸುದ್ದಿ ಹರಡಿದೆ. ಈ ಹಗರಣದಲ್ಲಿ ಅಧಿಕಾರಿಗಳೇ ಶಾಮೀಲಾಗಿದ್ದರಿಂದ ನಿಜವಾಗಿಯೂ ಮೇವು ಪೂರೈಕೆ ಮಾಡಿದ ರೈತರು ಬಾಕಿಗಾಗಿ ಅಲೆದಾಡುವಂತಾಗಿದೆ.
ಯಾರೋ ಎಲ್ಲಿಂದಲೋ ಮೇವು ತಂದು ಪೂರೈಕೆ ಮಾಡಿದ್ದೇವೆ ಎಂದು ಲಕ್ಷ ಲಕ್ಷ ಹಣ ಎತ್ತಿದ್ದಾರೆ. ಗೋಶಾಲೆ ಲೆಕ್ಕಾಚಾರ ನೋಡಿದರೆ ಅಕ್ರಮ ನಡೆದಿರುವುದು ಗೊತ್ತಾಗುತ್ತದೆ.
ತರಕಾರಿ ವ್ಯಾಪಾರಿಯೊಬ್ಬರು ಜಿಲ್ಲಾಡಳಿತ ಆರಂಭಿಸಿದ್ದ ಗೋಶಾಲೆಗಳಿಗೆ 49 ಟ್ರಕ್ ಮೇವು ಪೂರೈಸಿದ್ದಾರೆ. ಸಾಮಾನ್ಯವಾಗಿ ರೈತರು ಕಬ್ಬು ಬೆಳೆಯುತ್ತಾರೆ. ಆದರೆ, ಇಲ್ಲಿ ತರಕಾರಿ ವ್ಯಾಪಾರಿ ಕಬ್ಬಿನ ಮೇವು ಪೂರೈಕೆ ಮಾಡಿರುವುದೇ ಅಕ್ರಮದ ಮೂಲ ಎನ್ನಲಾಗುತ್ತಿದೆ.
ಅಚ್ಚರಿ ಎಂದರೆ, ಅವರೊಬ್ಬರೇ 49 ಟ್ರಕ್ ಮೇವು ಪೂರೈಕೆ ಮಾಡಿದ್ದಾರೆ. ಇಷ್ಟೊಂದು ಮೇವು ಎಲ್ಲಿಂದ ಪೂರೈಸಿದರು? ಕಬ್ಬು ಎಲ್ಲಿ ಬೆಳೆದರು? ಅವರ ಬಳಿ ಪಹಣಿ ಇರುವ ಕುರಿತು ತನಿಖೆಯಿಂದಲೇ ಗೊತ್ತಾಗಬೇಕಾಗಿದೆ.
ಒಂದೇ ತೂಕ: ಇನ್ನೂ ಅಚ್ಚರಿ ಎಂದರೆ, ತರಕಾರಿ ವ್ಯಾಪಾರಿ ಪೂರೈಸಿದ 49 ಟ್ರಕ್ ಮೇವಿನ ತೂಕ ಒಂದೇ ರೀತಿ ಇತ್ತು! ಹೊಲದಲ್ಲಿ ಟ್ರಕ್ಗೆ ಕಬ್ಬಿನ ಮೇವು ಲೋಡ್ ಮಾಡುವಾಗ ಅಳೆದು ತೂಗುವುದು ಅಸಾಧ್ಯದ ಮಾತು. 49 ಟ್ರಕ್ ಮೇವಿನ ಲೋಡಿನ ತೂಕವೂ 2920 ಕೆಜಿ ಬಂದಿದೆ. ಒಂದು ಕೆಜಿಯೂ ವ್ಯತ್ಯಾಸ ಆಗದಂತೆ 49 ಲೋಡ್ ಮೇವು ತಂದಿದ್ದು ಹೇಗೆ? ಇದಕ್ಕಾಗಿ ಸುಮಾರು ರು. 6 ಲಕ್ಷ ತಕ್ಷಣಕ್ಕೆ ಪಾವತಿ ಮಾಡಲಾಗಿದೆ. ವಿಶೇಷ ಎಂದರೆ, ರೈತರು ಪೂರೈಸಿದ ಮೇವಿನ ತೂಕದಲ್ಲಿ ವ್ಯತ್ಯಾಸವಿದೆ. ಅಷ್ಟೇ ಏಕೆ, ಒಬ್ಬನೇ ರೈತ ತಂದಿರುವ ಎರಡು ಲೋಡ್ ಮೇವಿನ ತೂಕದಲ್ಲೂ ವ್ಯತ್ಯಾಸವಿದೆ. ತರಕಾರಿ ವ್ಯಾಪಾರಿ ಪೂರೈಸಿರುವ ಮೇವು ಗೋಶಾಲೆಗೆ ಪೂರೈಕೆಯೇ ಆಗಿಲ್ಲ. ಇದೆಲ್ಲ ವೇ ಬ್ರಿಜ್ನಲ್ಲಿ ನಡೆದಿರುವ ಕರಾಮತ್ತು ಎನ್ನುವ ಆರೋಪ ಬಲವಾಗಿ ಕೇಳಿ ಬರುತ್ತಿದೆ. ಇದೆಲ್ಲವೂ ಪೇಮೆಂಟ್ ಮಾಡಿರುವ ದಾಖಲೆಯಿಂದ ಲಭ್ಯವಾಗಿವೆ. ಮಾಹಿತಿ ಹಕ್ಕು ಕಾರ್ಯಕರ್ತ ಕಳಕನಗೌಡ ಪಾಟೀಲ ಪಡೆದ ಮಾಹಿತಿಯಲ್ಲಿ ಇದು ಬಯಲಾಗಿದೆ.
ಏಕೆ ಪಾವತಿಸಿಲ್ಲ?: ಮೇವು ಪೂರೈಸಿದ ಶೇ. 80ರಷ್ಟು ರೈತರ ಹಣವನ್ನು ಪೂರ್ತಿಯಾಗಿ ಪಾವತಿಸಿಲ್ಲ. ಬಹುತೇಕ ರೈತರ ಬಿಲ್ ಬಾಕಿ ಇದೆ. ಕೆಲವರಿಗಷ್ಟೇ ಏಕೆ ಬಿಲ್ ಪಾವತಿಸಲಾಗಿದೆ? ದೊಡ್ಡ ಮೊತ್ತವನ್ನು ಸಲೀಸಾಗಿ ಪಾವತಿ ಮಾಡಲಾಗಿದೆ. ಸಣ್ಣಪುಟ್ಟ ಮೊತ್ತ ಬಾಕಿ ಉಳಿದಿದ್ದು ಹೇಗೆ ಎಂಬುದಕ್ಕೆ ಜಿಲ್ಲಾಡಳಿತ ಉತ್ತರಿಸಬೇಕಾಗಿದೆ.
ಧಮ್ಕಿ ಹಾಕುವ ತಹಸೀಲ್ದಾರ್: ಗೋಶಾಲೆಗೆ ಮೇವು ಪೂರೈಕೆ ಮಾಡಿದ ರೈತರು ಹಣ ಪಾವತಿಗಾಗಿ ಹಲವು ಬಾರಿ ಮನವಿ ಮಾಡಿದರೂ ತಹಸೀಲ್ದಾರ್ ಸ್ಪಂದಿಸಿಲ್ಲ. ಒತ್ತಾಯ ಮಾಡಿ ಕೇಳಿದರೆ ಇಲ್ಲದ ಸಬೂಬು ನೀಡುವ ಅವರು ಧಮ್ಕಿಯನ್ನೂ ಹಾಕುತ್ತಿದ್ದಾರೆ ಎಂದು ರೈತರು ಆಪಾದಿಸುತ್ತಿದ್ದಾರೆ. ಕೆಲ ಸಾರಿ ರೈತರ ಕೊರಳ ಪಟ್ಟಿ ಹಿಡಿದು, ಹೊರಹಾಕಿದ್ದಾರೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

