ರಾಯಚೂರು

ಎಸ್‌ಯುಸಿಐ(ಕಮ್ಯುನಿಸ್ಟ್) 11 ಅಭ್ಯರ್ಥಿಗಳು ಕಣಕ್ಕೆ

Published On :

ಕನ್ನಡಪ್ರಭ ವಾರ್ತೆರಾಯಚೂರು ಏ.1
ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ (ಸೋಷಿಯಲ್ ಕಮ್ಯುನಿಟಿ ಸೆಂಟರ್ ಆಫ್ ಇಂಡಿಯಾ) ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷವು ರಾಜ್ಯದ 11 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಪಕ್ಷದ ರಾಜ್ಯ ಸಮಿತಿ ಸದಸ್ಯ ಮಂಜುನಾಥ್ ಬಿ.ಆರ್. ತಿಳಿಸಿದರು.
ಅವರು ನಗರದಲ್ಲಿ ಸೋಮವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಸ್ ಯುಸಿಐ ಪಕ್ಷದ ಕಾರ್ಯಕರ್ತರು ಕಳೆದ ಅನೇಕ ವರ್ಷಗಳಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ನಿರಂತರ ಹೋರಾಟ ನಡೆಸಿದ್ದಾರೆ. ಇಂಥ ಕಾರ್ಯಕರ್ತರನ್ನೇ ಅಭ್ಯರ್ಥಿಗಳಾಗಿ ಕಣಕ್ಕಿಳಿಸಲಾಗುತ್ತಿದೆ. ಆ ಮೂಲಕ ಅವರು ಆಯ್ಕೆಯಾದಲ್ಲಿ ಜನರ ಆಶೋತ್ತರಗಳಿಗೆ ಸ್ಪಂದಿಸಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂಕಷ್ಟ: ಅಪ್ಪಟ ಜನವಿರೋಧಿಗಳಾಗಿರುವ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ನಂಥ ಪ್ರಮುಖ ಪಕ್ಷಗಳಿಂದ ರಾಜ್ಯ ಮತ್ತು ದೇಶದ ಅಭಿವೃದ್ಧಿ ಅಸಾಧ್ಯ. ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣ ನೀತಿಗಳ ಮೂಲಕ ಜನರಿಗೆ ಅನೇಕ ರೀತಿಯ ಸಂಕಷ್ಟಗಳನ್ನು ಈ ಎಲ್ಲ ರಾಜಕೀಯ ಪಕ್ಷಗಳು ತಂದೊಡ್ಡಿವೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಕುಟಿಲ ಕುತಂತ್ರದ ರಾಜಕಾರಣ ವ್ಯವಸ್ಥೆಯನ್ನು ಜಾರಿಗೆ ತಂದ ಬಿಜೆಪಿ ಸರ್ಕಾರ ಆಪರೇಷನ್ ಕಮಲದ ಮೂಲಕ ಮತದಾರರಿಗೆ ಅವಮಾನ ಮಾಡಿದೆ. ರಾಜಕೀಯದಲ್ಲಿ ನೈತಿಕ ಅಧಃಪತನಕ್ಕೆ ದಾರಿ ಮಾಡಿದೆ. ರೈತರಿಗೆ ರಸಗೊಬ್ಬರ ಸಮರ್ಪಕವಾಗಿ ಒದಗಿಸದೇ ವಂಚಿಸಿದೆ ಎಂದು ಆರೋಪಿಸಿದರು.
ರಿಯಲ್ ಎಸ್ಟೇಟ್ ದಂಧೆ: ರೈತರ ಜಮೀನು ಸ್ವಾಧೀನಪಡಿಸಿಕೊಂಡು ರಿಯಲ್ ಎಸ್ಟೇಟ್ ದಂಧೆಗೆ ಬಳಕೆ ಮಾಡಿಕೊಳ್ಳಲಾಗಿದೆ. ಮಠಮಾನ್ಯಗಳಿಗೆ ಜನರ ತೆರಿಗೆಯ ಹಣವನ್ನು ಮನಬಂದಂತೆ ಬಜೆಟ್‌ನಲ್ಲಿ ಒದಗಿಸಲಾಗಿದೆ. ಆದರೆ ಅದೇ ವೇಳೆ ರೈತರ ಸಮಸ್ಯೆಗಳ ಪರಿಹಾರಕ್ಕೆ ಅನುದಾನದ ಕೊರತೆಯ ಮಾತನಾಡಿರುವುದು ಬಿಜೆಪಿ ಪಕ್ಷವು ಕೆಳ ಮತ್ತು ಮಧ್ಯಮ ವರ್ಗದವರ ಬಗ್ಗೆ ಇರಿಸಿಕೊಂಡಿರುವ ಕಾಳಜಿ ಸ್ಪಷ್ಟಪಡಿಸಿದೆ ಎಂದು ದೂರಿದರು.
ಭಾರೀ ಸಂಖ್ಯೆಯ ಉದ್ಯೋಗ ಸೃಷ್ಟಿಸುವ ನೆಪದಲ್ಲಿ ಕೋಟ್ಯಂತರ ರು. ವೆಚ್ಚದಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಆಯೋಜಿಸಿದ್ದ ಬಿಜೆಪಿ ಸರ್ಕಾರ ತನ್ನ ಉದ್ದೇಶದಲ್ಲಿಯೇ ವಿಫಲವಾಯಿತು. ಲಕ್ಷಾಂತರ ಉದ್ಯೋಗ ಸೃಷ್ಟಿ ಸಾಧ್ಯವಾಗಿಲ್ಲ. ಕಾಯಂ ಸ್ವರೂಪದ ಉದ್ಯೋಗಗಳು ಕಂಡುಬರುತ್ತಿಲ್ಲ. ಎಲ್ಲ ಇಲಾಖೆಗಳಲ್ಲಿ ಗುತ್ತಿಗೆ ಆಧಾರದಲ್ಲಿಯೇ ನೇಮಿಸಿಕೊಳ್ಳಲಾಗುತ್ತಿದೆ ಎಂದು ಟೀಕಿಸಿದರು.
ದರ ಏರಿಕೆ: ಸರ್ಕಾರ ಆರೋಗ್ಯ, ಶಿಕ್ಷಣ, ಕುಡಿಯುವ ನೀರಿನ ಖಾಸಗೀಕರಣಕ್ಕೆ ಆದ್ಯತೆ ನೀಡುವ ಮೂಲಕ ಬಡವರಿಗೆ ಈ ಸೌಲಭ್ಯಗಳಿಂದ ವಂಚಿತಗೊಳಿಸಿದೆ. ಕೇಂದ್ರ ಸರ್ಕಾರ ಸಹ ಲಕ್ಷಾಂತರ ಕೋಟಿ ರು. ವಿವಿಧ ಹಗರಣದಲ್ಲಿ ಸಿಲುಕಿ ಭ್ರಷ್ಟಾಚಾರಕ್ಕೆ ದಾರಿ ಮಾಡಿದೆ. ಲೋಕಪಾಲ ಮಸೂದೆ ಜಾರಿಗೆ ಕೇಂದ್ರ ಹಿಂದೇಟು ಹಾಕುತ್ತಿದೆ. ತೈಲ ಬೆಲೆಗಳ ಮೇಲೆ ನಿಯಂತ್ರಣ ಹೇರಿಕೆಯನ್ನು ಹಿಂಪಡೆಯುವ ಮೂಲಕ ಅಗತ್ಯ ವಸ್ತುಗಳ ದರ ಏರಿಕೆಗೆ ಕಾರಣವಾಗಿದೆ ಎಂದು ದೂರಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೀತಿಗಳಿಂದಾಗಿ ಶ್ರೀಮಂತರು ಶ್ರೀಮಂತರಾಗುತ್ತಿದ್ದಾರೆ. ಆದರೆ ಬಡವರ ಜೀವನದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಇಂಥ ಪಕ್ಷಗಳ ಆಡಳಿತವಿರುವ ಸರ್ಕಾರಗಳಿಂದ ಬಡ ಮತ್ತು ಮಧ್ಯಮ ವರ್ಗದವರ ಏಳಿಗೆ ಅಸಾಧ್ಯ ಎಂದ ಅವರು ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಎಸ್ ಯುಸಿಐ(ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ರಾಯಚೂರು ಕ್ಷೇತ್ರದ ನಿಯೋಜಿತ ಅಭ್ಯರ್ಥಿ ಅಪರ್ಣಾ ಬಿ.ಆರ್., ಡಾ. ಸುನೀತ್ ಕುಮಾರ್, ವೀರೇಶ್, ಎನ್.ಎಸ್. ಚನ್ನಬಸವ ಜಾನೇಕಲ್ ಸೇರಿದಂತೆ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.