ಅಕ್ರಮ ಗಣಿಗಾರಿಕೆ; ಮೂಲೆ ಸೇರಿದ ವರದಿ
ಕನ್ನಡಪ್ರಭ ವಾರ್ತೆ, ರಾಯಚೂರು, ಏ.4
ಜಿಲ್ಲೆಯ ಲಿಂಗಸ್ಗೂರು ತಾಲೂಕಿನ ಮುದಗಲ್ ಸುತ್ತಲಿನ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂಬ ಕಂದಾಯ ಇಲಾಖೆಯ ಅಧಿಕಾರಿಗಳ ವರದಿಯಾಧರಿಸಿ ಲಿಂಗಸ್ಗೂರು ಸಹಾಯಕ ಆಯುಕ್ತರ ಆದೇಶಕ್ಕೆ ಸಂಬಂಧಿಸಿ ಜಿಲ್ಲಾಡಳಿತದಿಂದ ಯಾವುದೇ ರೀತಿಯ ಕ್ರಮ ಜರುಗದಿರುವುದು ಬೆಳಕಿಗೆ ಬಂದಿದೆ.
ಮುದಗಲ್ ಮತ್ತು ಸುತ್ತಲಿನ ಪ್ರದೇಶದಲ್ಲಿ ಅಕ್ರಮವಾಗಿ ಗ್ರಾನೈಟ್ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಬಂದ ದೂರುಗಳ ಹಿನ್ನೆಲೆ ಕಂದಾಯ ಇಲಾಖೆಯ ಕಂದಾಯ ನಿರೀಕ್ಷಕರು 2011ರಲ್ಲಿಯೇ ವರದಿ ನೀಡಿದ್ದಾರೆ. ಆ ವರದಿಯಾಧರಿಸಿ ಲಿಂಗಸ್ಗೂರು ಸಹಾಯಕ ಆಯುಕ್ತರು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಇದುವರೆಗೆ ಈ ನಿಟ್ಟಿನಲ್ಲಿ ಯಾವುದೇ ಕ್ರಮ ಜರುಗಿಲ್ಲ ಎಂಬ ಆರೋಪ ಕೇಳಿಬಂದಿದೆ.
ಆಗ ಎಸಿ, ಈಗ ಡಿಸಿ: ಮುದಗಲ್ ಸುತ್ತ ಒಟ್ಟು 74 ಜನರು ಅಕ್ರಮವಾಗಿ ಗಣಿಗಾರಿಕೆಯಲ್ಲಿ ತೊಡಗಿರುವ ಬಗ್ಗೆ ಕಂದಾಯ ನಿರೀಕ್ಷಕರು ಸಲ್ಲಿಸಿದ ವರದಿಯಾಧರಿಸಿ 2011ರ ಅಕ್ಟೋಬರ್ 1ರಂದು ಹಾಗೂ ನವೆಂಬರ್ 8ರಂದು ಸಹಾಯಕ ಆಯುಕ್ತರು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಕ್ರಮ ಕೈಗೊಂಡು ಅಕ್ರಮ ತಡೆಗೆ ಸೂಚಿಸಿದ್ದಾರೆ.
ಸುಮಾರು 232 ಎಕರೆ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದ ಸರ್ಕಾರಕ್ಕೆ ಕೋಟ್ಯಂತರ ರು. ಆದಾಯದ ಹಾನಿಯಾಗಿದೆ. ಇಂಥ ಅಕ್ರಮ ತಡೆಯುವಂತೆ ಆಗ ಲಿಂಗಸ್ಗೂರು ಸಹಾಯಕ ಆಯುಕ್ತರಾಗಿದ್ದ ಉಜ್ವಲ್‌ಕುಮಾರ್ ಘೋಷ್(ಹಾಲಿ ರಾಯಚೂರು ಡಿಸಿ) ಅವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಶಿಫಾರಸು ಮಾಡಿದ್ದರು.
ಎರಡು ಬಾರಿ ಇಲಾಖೆಗೆ ಪತ್ರ ಬರೆದರೂ ಇಲಾಖೆಯು ಇದುವರೆಗೆ ಕ್ರಮ ಜರುಗಿಸಿಲ್ಲ ಎಂಬ ಆರೋಪ ಕೇಳಿಬಂದಿದ್ದು, ಸರ್ಕಾರದ ಬೊಕ್ಕಸಕ್ಕೆ ಭಾರಿ ಪ್ರಮಾಣದಲ್ಲಿ ಹಾನಿಯುಂಟಾಗಿದೆ ಎಂದು ಹೇಳಲಾಗಿದೆ.
ಅಕ್ರಮ ತಡೆಗೆ ಮುಂದಾಗುವರೇ?: 2011ರ ಅಕ್ಟೋಬರ್ 1ರಂದು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸಲ್ಲಿಸಿದ ವರದಿಯಲ್ಲಿ ಮಾಕಾಪುರ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನಿನಲ್ಲಿಯೇ ಅಕ್ರಮ ಗಣಿಗಾರಿಕೆ ನಡೆಸಲಾಗುತ್ತಿದೆ. ಪರವಾನಗಿ ಪಡೆದ ಪ್ರದೇಶಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ಗಣಿಗಾರಿಕೆಯನ್ನು ಕೈಗೊಳ್ಳುತ್ತಿರುವ ಬಗ್ಗೆ ಸಹಾಯಕ ಆಯುಕ್ತರು ವರದಿಯಲ್ಲಿ ತಿಳಿಸಿದ್ದಾರೆ.
ಕಳೆದ ಒಂದೂವರೆ ವರ್ಷ ಹಿಂದೆಯೇ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸಲ್ಲಿಸಿದ ಶಿಫಾರಸಿಗೆ ಇಲಾಖೆ ಗಮನ ಹರಿಸಿಲ್ಲ ಎಂಬ ಆರೋಪ ಕೇಳಿಬಂದಿದ್ದು, ಹಿಂದೆ ಲಿಂಗಸ್ಗೂರು ಸಹಾಯಕ ಆಯುಕ್ತರಾಗಿದ್ದ ಉಜ್ವಲ್‌ಕುಮಾರ್ ಘೋಷ್ ಅವರೇ ಸದ್ಯ ರಾಯಚೂರು ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದಾರೆ.
ಅಕ್ರಮ ಗಣಿಗಾರಿಕೆಯನ್ನು ತಡೆದು ಸುತ್ತಲಿನ ಪರಿಸರ ಸಂರಕ್ಷಣೆಯ ಜತೆಗೆ ಸರ್ಕಾರಿ ಜಮೀನು ರಕ್ಷಣೆಗೆ ಗಣಿ ಇಲಾಖೆ ಮುಂದಾಗಬೇಕಿದೆ. ಜತೆಗೆ ಸರ್ಕಾರಕ್ಕೆ ಆಗುತ್ತಿರುವ ಕೋಟ್ಯಂತರ ರು. ಹಾನಿಯ ತಡೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಈಗಲಾದರೂ ಎಚ್ಚೆತ್ತು ಕ್ರಮಕ್ಕೆ ಮುಂದಾಗಬೇಕಿದೆ ಎಂಬ ಒತ್ತಾಯ ಕೇಳಿಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

