ಕುಡಿವ ನೀರು ಕಾಮಗಾರಿಗೆ ಆದ್ಯತೆ ನೀಡಿ
ಕನ್ನಡಪ್ರಭ ವಾರ್ತೆ, ರಾಯಚೂರು, ಏ.4
ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಎದುರಿಸಬಹುದಾದ ಜಿಲ್ಲೆಯ ಗ್ರಾಮಗಳ ಕುರಿತು ಹಾಗೂ ಪ್ರತಿ ಗ್ರಾಮದಲ್ಲಿ ನೀರಿನ ಸಮರ್ಪಕ ಪೂರೈಕೆಗೆ ಕೈಗೊಳ್ಳಬೇಕಾದ ಸಿದ್ಧತೆಯ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಉಜ್ವಲ್ಕುಮಾರ್ ಘೋಷ್ ಸೂಚಿಸಿದರು.
ನಗರದಲ್ಲಿ ಬುಧವಾರ ಕರೆದಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಬೇಸಿಗೆಯಲ್ಲಿ ಕುಡಿಯುವ ನೀರಿನ ಗ್ರಾಮಗಳನ್ನು ಗುರುತಿಸಿ ಆದ್ಯತೆಯ ಮೇಲೆ ನೀರು ಸರಬರಾಜಿಗೆ ಬೇಕಾದ ಕ್ರಮ ಜರುಗಿಸಬೇಕೆಂದೂ ಸೂಚಿಸಿದರು.
ಎಲ್ಲೆಲ್ಲಿ ನೀರಿನ ಸಮಸ್ಯೆ?: ಸಿಂಧನೂರು ತಾಲೂಕಿನಲ್ಲಿ ಇಟಗಿ ಗ್ರಾಮವು ನೀರಿನ ತೊಂದರೆ ಅನುಭವಿಸುತ್ತಿದ್ದು, ಇದಕ್ಕೆ ಪೋತ್ನಾಳ ಹಳ್ಳದಿಂದ ನೀರು ಒದಗಿಸಲಾಗುತ್ತಿದೆ. ಹಳ್ಳದಲ್ಲಿ ನೀರಿನ ಹರಿವು ಕಡಿಮೆಯಾಗಿದೆ. ಅದರಿಂದ ನೀರು ಪೂರೈಕೆಗೆ ಅಡಚಣೆಯಾಗಿದೆ. ಅದೇ ರೀತಿ ತುರ್ವಿಹಾಳ, ವೀರಾಪುರ, ಮುಳ್ಳೂರು ಗ್ರಾಮಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಯಿಸುವ ಅವಶ್ಯಕತೆಯಿದೆ ಎಂದು ತಾಪಂ ಎಂಜಿನಿಯರ್ ಸಭೆಗೆ ವಿವರಿಸಿದರು.
ದೇವದುರ್ಗ ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ಕೊಳವೆಬಾವಿಗೆ ಕೊಳವೆ ಮಾರ್ಗ ಅಳವಡಿಕೆಗೆ 35 ಲಕ್ಷ ಅಗತ್ಯವಿದೆ. ವಂದಲಿ-ಮಲ್ಲಾಪುರ ಗ್ರಾಮದಲ್ಲಿ ನೀರಿನ ತೊಂದರೆಯಿದ್ದು, ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೊರೆಯಿಸಿದ 19 ಕೊಳವೆಬಾವಿಗಳಲ್ಲಿ ನೀರಿಲ್ಲವಾಗಿದೆ ಎಂದು ಸಭೆಗೆ ತಿಳಿಸಲಾಯಿತು.
ಮಾನವಿ ತಾಲೂಕಿನ ಮುಸ್ಲಾಪುರ, ನಂದಿಹಾಳ, ರಾಜಲದಿನ್ನಿ ಹಳ್ಳಗಳಲ್ಲಿ ನೀರು ಬತ್ತಿದೆ. ಮರಾಠಾ ಗ್ರಾಮದಲ್ಲಿ 4 ಕೊಳವೆ ಬಾವಿಗಳನ್ನು ಕೊರೆಯಿಸಿದರೂ ನೀರು ದೊರೆತಿಲ್ಲ. ಖಾಸಗಿಯವರ ಕೊಳವೆ ಬಾವಿಯಿಂದ ನೀರು ಪಡೆಯಲಾಗುತ್ತಿದೆ. ಹೀರಾ ಗ್ರಾಮದಲ್ಲಿ ನೀರು ದೊರೆಯುತ್ತಿಲ್ಲ. ಮಾನವಿ ನಗರ ಪ್ರದೇಶದ ವಾರ್ಡ್ 6ರಲ್ಲಿ ನೀರಿನ ಸಮಸ್ಯೆಯಿದೆ ಎಂದು ಸಭೆಗೆ ತಿಳಿಸಲಾಯಿತು.
ಟ್ಯಾಂಕರ್ ಮೂಲಕ ನೀರು: ಲಿಂಗಸ್ಗೂರು ತಾಲೂಕಿನ ಕೆಲ ಗ್ರಾಮಗಳು ನೀರಿನ ಅಭಾವ ಎದುರಿಸುತ್ತಿದ್ದು, ಟ್ಯಾಂಕರ್ನಿಂದ ನೀರೊದಗಿಸುವ ಬಗ್ಗೆ ಸಹಾಯಕ ಆಯುಕ್ತರಿಂದ ಮನವಿ ಬಂದಲ್ಲಿ ಅದಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಸಭೆಗೆ ತಿಳಿಸಿದರು. ಸಿಂಧನೂರು ನಗರದಲ್ಲಿ ನೀರಿನ ಸಮಸ್ಯೆಯಿಲ್ಲ. ವಿದ್ಯುತ್ ಕಡಿತದಿಂದ ನೀರೊದಗಿಸಲು ಸಮಸ್ಯೆಯಾಗುತ್ತಿದೆ ಎಂದು ದೂರಿದರು.
ರಾಯಚೂರು ನಗರಸಭೆ ವತಿಯಿಂದ 363 ಕೊಳವೆಬಾವಿ ಕೊರೆಯಿಸಿದ್ದು, 43 ವಿಫಲವಾಗಿವೆ. ಸಿಂಧನೂರು ನಗರಸಭೆ ವತಿಯಿಂದ ಕೊರೆಯಿಸಿದ್ದ 37 ಕೊಳವೆಬಾವಿಗಳಲ್ಲಿ 12 ವಿಫಲವಾಗಿವೆ. ಅದೇ ರೀತಿ ಮಾನವಿ ಪುರಸಭೆಯ 94ರ ಪೈಕಿ 23, ದೇವದುರ್ಗ ಪುರಸಭೆಯಿಂದ ಕೊರೆಯಿಸಿದ 103ರ ಪೈಕಿ 15, ಲಿಂಗಸ್ಗೂರು ಪುರಸಭೆಯಿಂದ ಕೊರೆಯಿಸಿದ 48ರಲ್ಲಿ 18 ಕೊಳವೆಬಾವಿಗಳು ವಿಫಲವಾಗಿವೆ. ಅದೇ ರೀತಿ ಮುದಗಲ್ ಪಪಂ ವತಿಯಿಂದ ಕೊರೆಯಿಸಿದ 88 ಕೊಳವೆಬಾವಿಗಳಲ್ಲಿ 19 ವಿಫಲವಾಗಿವೆ ಎಂದು ಸಭೆಗೆ ತಿಳಿಸಲಾಯಿತು.
ಕ್ರಮಕ್ಕೆ ಡಿಸಿ ಸೂಚನೆ: ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಘೋಷ್ ಅವರು, ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗದಂತೆ ಮುಂಜಾಗ್ರತೆ ಕ್ರಮಗಳನ್ನು ವಹಿಸಿ, ಕ್ರಿಯಾಯೋಜನೆಗಳನ್ನು ಅಂದಾಜು ಪಟ್ಟಿಯೊಂದಿಗೆ ಸಲ್ಲಿಸಿ ಕಾರ್ಯಪ್ರವೃತ್ತರಾಗಲು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ. ಬಿಸನಳ್ಳಿ, ಸಹಾಯಕ ಆಯುಕ್ತರಾದ ಮಂಜುಶ್ರೀ, ಯೋಗೀಶ್, ಹೆಚ್ಚುವರಿ ಎಸ್ಪಿ ಮಹಾಂತೇಶ್, ಸೇರಿ ಎಲ್ಲ ತಾಲೂಕುಗಳ ಅಧಿಕಾರಿಗಳು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

