ರಾಯಚೂರು

ಕಾಂಗ್ರೆಸ್‌ನಲ್ಲಿ ಈಗ ಬಂಡಾಯದ ಕರಿನೆರಳು...

Published On :

ಕನ್ನಡಪ್ರಭ ವಾರ್ತೆ, ಮುದಗಲ್, ಏ.6
ಲಿಂಗಸ್ಗೂರು ವಿಧಾನಸಭೆ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿತ್ತು. ಇದೀಗ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಹೈಕಮಾಂಡ್ ಪಾಮಯ್ಯ ಮುರಾರಿಗೆ ಟಿಕೆಟ್ ನೀಡಿದ್ದರಿಂದ ತಾಲೂಕಿನ ಕೈ ಪಾಳಯದಲ್ಲಿ ಭಿನ್ನಮತ ಭುಗಿಲೆದ್ದಿದೆ.
ಕಾಂಗ್ರೆಸ್ ಟಿಕೆಟ್ ಪಡೆಯಲು ಮುಖಂಡರಾದ ಡಿ.ಎಸ್. ಹೂಲಗೇರಿ, ನಿವೃತ್ತ ಡಿಐಜಿ ಟಿ.ಆರ್. ನಾಯಕ, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಬಾಲಸ್ವಾಮಿ ಕೊಡ್ಲಿ, ಪಾಮಯ್ಯ ಮುರಾರಿ ನಡುವೆ ತೀವ್ರ ಪೈಪೋಟಿಯಿತ್ತು. ಅಲ್ಲದೆ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣಪ್ಪ ಮೇಟಿ ಟಿ.ಆರ್.ನಾಯಕ ಅಥವಾ ಪಾಮಯ್ಯ ಮುರಾರಿಗೆ ಟಿಕೆಟ್ ಕೊಡಿಸಲು ಜಿಲ್ಲಾಧ್ಯಕ್ಷ ಎ.ವಸಂತಕುಮಾರ ಮುಖಾಂತರ ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಾಯಕರ ಬಳಿ ನಿಯೋಗ ತೆರಳಿದ್ದರು.
ಇತ್ತ ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ, ಕೆಪಿಸಿಸಿ ಸದಸ್ಯ ಶರಣಗೌಡ ಬಯ್ಯಾಪುರ ತನ್ನ ಕಟ್ಟಾ ಬೆಂಬಲಿಗ ಡಿ.ಎಸ್. ಹೂಲಗೇರಿಗೆ ಟಿಕೆಟ್ ಕೊಡಿಸಲು ಸತತ ಒಂದು ವರ್ಷದಿಂದ ಪ್ರಯತ್ನ ಪಟ್ಟರು. ಟಿಕೆಟ್‌ಗಾಗಿ ಲಿಂಗಸ್ಗೂರು ವಿಧಾನಸಭೆ ಕ್ಷೇತ್ರದಿಂದ ಒಟ್ಟು 8 ಜನ ಅರ್ಜಿ ಸಲ್ಲಿಸಿದ್ದರು. ಡಿ.ಎಸ್. ಹೂಲಗೇರಿ ಬಯ್ಯಾಪುರ ಮುಖಾಂತರ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ, ಪ್ರಧಾನ ಕಾರ್ಯದರ್ಶಿ ಎನ್.ಎಸ್. ಬೋಸರಾಜುಗೆ ಒತ್ತಡ ತಂದಿದ್ದರು.
ಇಬ್ಬರ ಜಗಳದಲ್ಲಿ ಮೂರನೆಯವನಿಗೆ ಲಾಭ: ನಿವೃತ್ತ ಡಿಐಜಿ ಟಿ.ಆರ್. ನಾಯಕ್ ಅವರು ಆಸ್ಕರ್ ಫರ್ನಾಂಡಿಸ್, ಎಂ.ವೀರಪ್ಪ ಮೊಯ್ಲಿ, ಮಲ್ಲಿಕಾರ್ಜುನ ಖರ್ಗೆ ಮುಖಾಂತರ ಒತ್ತಡ ತಂದು ಟಿಕೆಟ್ ಪಡೆಯಲು ಪ್ರಯತ್ನಿಸಿದ್ದರು. ಇಬ್ಬರ ನಡುವೆ ಟಿಕೆಟ್‌ಗಾಗಿ ಭಾರಿ ಪೈಪೋಟಿ ಇದ್ದುದರಿಂದ ಕೆಪಿಸಿಸಿಗೆ ಭಾರಿ ತಲೆನೋವಾಗಿ ಪರಿಣಮಿಸಿತ್ತು. ಕೊನೆ ಗಳಿಗೆವರೆಗೆ ಇಬ್ಬರ ನಡುವೆ ಒಮ್ಮತ ಏರ್ಪಡದ ಕಾರಣ 3ನೇ ವ್ಯಕ್ತಿ ಪಾಮಯ್ಯ ಮುರಾರಿಗೆ ಟಿಕೆಟ್ ನೀಡುವ ಮೂಲಕ ಟಿಕೆಟ್ ಆಕಾಂಕ್ಷಿಗಳಾಗಿದ್ದ ಟಿ.ಆರ್. ನಾಯಕ, ಡಿ.ಎಸ್. ಹೂಲಗೇರಿಯವರ ಆಸೆಗೆ ತಣ್ಣೀರು ಎರಚಿದಂತಾಗಿದೆ.
ಭಂಡಾಯ ಭೀತಿ:
ಪಕ್ಷ ಸಂಘಟನೆಗೆ ಗ್ರಾಪಂ, ತಾಪಂ, ಜಿಪಂ ಚುನಾವಣೆಗಳಲ್ಲಿ ಪ್ರಾಮಾಣಿಕವಾಗಿ ಶ್ರಮಿಸಿದ ಡಿ.ಎಸ್. ಹೂಲಗೇರಿಗೆ ಕಾಂಗ್ರೆಸ್ ಟಿಕೆಟ್ ದೊರೆಯದ ಕಾರಣ ಅವರ ಬೆಂಬಲಿಗರು, ಆಪ್ತರಲ್ಲಿ ತೀವ್ರ ಅಸಮಾಧಾನ ಉಂಟಾಗಿದೆ. ಜಿಲ್ಲಾ ಮತ್ತು ರಾಜ್ಯ, ರಾಷ್ಟ್ರ ಮಟ್ಟದ ಕಾಂಗ್ರೆಸ್ ಮುಖಂಡರ ಮೇಲೆ ಆಕ್ರೋಶಗೊಂಡಿದ್ದಾರೆ. ಹೂಲಗೇರಿಗೆ ಅಥವಾ ಟಿ.ಆರ್. ನಾಯಕರಿಗೆ ಟಿಕೆಟ್ ನೀಡಿದ್ದರೆ ಯಾವುದೇ ತೊಂದರೆ ಇರಲಿಲ್ಲ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್ ಟಿಕೆಟ್ ನೀಡದಿದ್ದರೇನಂತೆ.. ಬಿಜೆಪಿ ಇನ್ನೂ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಇಬ್ಬರಲ್ಲಿ ಯಾರಾದರೊಬ್ಬರು ಬಿಜೆಪಿ ಮೊರೆ ಹೋಗಬಹುದು. ಇಲ್ಲವೇ ಪಕ್ಷೇತರರಾಗಿ ಸ್ಪರ್ಧಿಸಿ ಕಾಂಗ್ರೆಸ್ ಸೋಲಿಗೆ ಕಾರಣವಾಗಬಹುದು ಎಂದೂ ಹೇಳಲಾಗುತ್ತಿದೆ.  ಪ್ರಯಾಸ ಪಡದೆ ಪಾಮಯ್ಯ ಮುರಾರಿ ಅವರಿಗೆ ಟಿಕೆಟ್ ಸಿಕ್ಕಿದೆ ನಿಜ. ಆದರೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಅವರ ಗೆಲವಿಗೆ ಯಾವ ರೀತಿ ಸ್ಪಂದಿಸುತ್ತಾರೆ ಎನ್ನವುದನ್ನು ಕಾದು ನೋಡಬೇಕು.
ವಜ್ಜಲ್‌ಗೆ ಅನುಕೂಲವಾದೀತೆ?: ಇನ್ನೊಂದೆಡೆ ಮುರಾರಿಗೆ ಟಿಕೆಟ್ ಸಿಕ್ಕಿದ್ದರಿಂದ ಜೆಡಿಎಸ್ ಅಭ್ಯರ್ಥಿ, ಮಾಜಿ ಶಾಸಕ ಮಾನಪ್ಪ ವಜ್ಜಲ್ ತನ್ನ ದಾರಿ ಸುಗಮವಾಗಿದೆ ಎಂದು ಮನದಲ್ಲಿ ಮಂಡಿಗೆ ತಿನ್ನುತ್ತಿದ್ದರೆ, ಇತ್ತ ಬಿಎಸ್ಸಾರ್ ಕಾಂಗ್ರೆಸ್ ಅಭ್ಯರ್ಥಿ ಸಿದ್ದು ಬಂಡಿ ಹೊಸ ಅಲೆ ಎಬ್ಬಿಸಿದ್ದು, ಶಾಸಕ ವಜ್ಜಲ್ ದುರಾಡಳಿತ ಮತ್ತು ಕಾಂಗ್ರೆಸ್ ಭಿನ್ನಮತದ ಲಾಭ ಪಡೆಯಲು ಹವಣಿಸುತ್ತಿದ್ದಾರೆ. ಕೆಜೆಪಿ ಅಭ್ಯರ್ಥಿ ಎಚ್.ಬಿ. ಮುರಾರಿ, ಕಾಂಗ್ರೆಸ್ ಅಭ್ಯರ್ಥಿ ಪಾಮಯ್ಯ ಮುರಾರಿ ಸಹೋದರಾಗಿದ್ದರಿಂದ ತಾಲೂಕಿನ ಮತದಾರರು ಯಾವ ರೀತಿ ಇವರನ್ನು ಸ್ವೀಕರಿಸುತ್ತಾರೋ ಅವರೇ ಬಲ್ಲರು.

-ಪಂಪಯ್ಯ ಮಠ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.