ಗೌಡಶಾಹಿ ದಬ್ಬಾಳಿಕೆ ಬದುಕು ಸಾಕು: ಮಹಾದೇವ
ಕನ್ನಡಪ್ರಭ ವಾರ್ತೆ,ಸಿಂಧನೂರು,ಏ.7
ದಲಿತರ ಉದ್ಧಾರ ಮಾಡುತ್ತೇನೆಂದು ಕಾಂಗ್ರೆಸ್ಸಿಗರು ಹೇಳುತ್ತಾ 60 ವರ್ಷ ಗತಿಸಿದರೂ ಗುಡಿಸಲಲ್ಲಿರುವ ದಲಿತರೂ ಇನ್ನೂ ಗುಡಿಸಲಿಂದ ಹೊರಬರಲು ಆಗುತ್ತಿಲ್ಲ. ಬಿಜೆಪಿ ಮತ್ತು ಜೆಡಿಎಸ್ ಸಹ ಚುನಾವಣೆ ಸಂದರ್ಭದಲ್ಲಿ ನಮ್ಮನ್ನು ಬಳಸಿಕೊಂಡು ಆಯ್ಕೆಯಾದ ನಂತರ ಮತ್ತೆ ತಮ್ಮ ದಬ್ಬಾಳಿಕೆಯನ್ನು ಮುಂದುವರಿಸಿದರು. ಇನ್ನಾದರೂ ದಲಿತರು ಎಚ್ಚೆತ್ತುಕೊಳ್ಳಬೇಕಿದೆ. ಗೌಡಶಾಹಿ ದಬ್ಬಾಳಿಕೆಯಲ್ಲಿ ಬದುಕುವುದು ಬೇಡ. ದಲಿತರ ಆಶಾಕಿರಣವಾದ ಶ್ರೀರಾಮುಲು ಅವರ ಬಿಎಸ್ಸಾರ್ ಕಾಂಗ್ರೆಸ್ಗೆ ಸೇರಿ ನೆಮ್ಮದಿಯ ಬದುಕು ಸಾಗಿಸೋಣವೆಂದು ದಲಿತ ಸಂಘದ ಸಂಚಾಲಕ ಮಹಾದೇವ ಧುಮತಿ ಹೇಳಿದರು.
ನಗರದಲ್ಲಿನ ಪಕ್ಷದ ಕಾರ್ಯಾಲಯದಲ್ಲಿ ನಡೆದ ಸಿದ್ರಾಂಪುರ ದಲಿತ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಅಂಬೇಡ್ಕರರನ್ನು ಸಂವಿಧಾನ ರಚನಾ ಸಮಿತಿಯಲ್ಲಿ ಸೋಲಿಸಿದ ಪಕ್ಷ ಕಾಂಗ್ರೆಸ್. ಅಂತಹ ಸಂವಿಧಾನ ಶಿಲ್ಪಿಯನ್ನೇ ಸೋಲಿಸಿದ ಪಕ್ಷಕ್ಕೆ ನಮ್ಮ ಬೆಂಬಲ ಉಚಿತವೇ ನೀವೇ ಪ್ರಶ್ನಿಸಿಕೊಳ್ಳಿ ಎಂದರು.
ಸ್ವಾಭಿಮಾನ ಉಳಿಸಿಕೊಳ್ಳೋಣ: ಶ್ರೀರಾಮುಲು ಅವರು ಅಂಬೇಡ್ಕರರ ಕುಡಿಯನ್ನು ಗುರುತಿಸಿ ರಾಯಚೂರಿನಲ್ಲಿ ನಡೆದ ದಲಿತ ಸಮಾವೇಶದಲ್ಲಿ ಸನ್ಮಾನಿಸಿರುವುದು ಅವರ ದಲಿತಪರ ಕಾಳಜಿಯನ್ನು ತೋರಿಸುತ್ತದೆ. ಅಂತಹ ವ್ಯಕ್ತಿಯನ್ನು ಬೆಂಬಲಿಸಿ ನಮ್ಮ ಸ್ವಾಭಿಮಾನವನ್ನು ನಾವೇ ಉಳಿಸಿಕೊಳ್ಳೋಣ ಎಂದು ತಿಳಿಸಿದರು.
ಮುಖಂಡರಾದ ಜಿಲ್ಲಾ ಸಂಚಾಲಕ ಸಯ್ಯದ ಮಿಟ್ಟಿಮನಿ, ಮಹಾದೇವ ಧುಮತಿ, ಹುಲುಗೇಶ ಹಂಚಿನಾಳ, ದುರುಗಪ್ಪ ಉಪ್ಪಲದೊಡ್ಡಿ, ಮಂಜುನಾಥ, ಕೃಷ್ಣ ಬೈಲಗುಡ್ಡ, ಈರಪ್ಪ ಹಿರೇಮನಿ ದೊಡ್ಡಲಾಲಸಾಬ್, ಶಿವಪ್ಪ, ಪರಸುರಾಮ ಕಮ್ಮನೂರು, ಬಸಪ್ಪ ಹರಿಜನ, ನಿಂಗಪ್ಪ ನಜೇರಿ, ಶರಣಪ್ಪ ತಾವರಗೇರಾ, ಶರಣಪ್ಪ ಹರಿಜನ, ತಿಮ್ಮಣ್ಣ, ಪಂಚಾಕ್ಷರಿ, ರಾಜಪ್ಪ, ವಿರೇಶ ಹಿರೇಮನಿ, ಬಸವರಾಜ, ಶಂಕ್ರಪ್ಪ ಇದ್ದರು.
ಜಿಲಾನಿಪಾಷಾ ವಿರುದ್ಧ ಕೇಸ್
ಸಿಂಧನೂರು: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆಂದು ತಹಸೀಲ್ದಾರ್ ನಿಂಗನಗೌಡ ಅವರ ದೂರಿನ ಆಧಾರದ ಮೇಲೆ ಜೆಡಿಎಸ್ ಮುಖಂಡ ಕೆ. ಜಿಲಾನಿಪಾಷಾ ಅವರ ವಿರುದ್ಧ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಸಮಯದಲ್ಲಿ ನಗರದ ಪಿಡಬ್ಯ್ಲೂಡಿ ಕ್ಯಾಂಪ್ನಲ್ಲಿರುವ ಶಾಸಕ ವೆಂಕಟರಾವ್ ನಾಡಗೌಡರ ನಿವಾಸದ ಮುಂದೆ ಹಮ್ಮಿಕೊಂಡಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ನಾಡಗೌಡರ ಅಭಿವೃದ್ಧಿ ಕಾರ್ಯಗಳೇ ಅವರ ಗೆಲವಿಗೆ ಶ್ರೀರಕ್ಷೆ ಎಂದು ನಗರಸಭೆ ಮಾಜಿ ಉಪಾಧ್ಯಕ್ಷ ಕೆ.ಜಿಲಾನಿಪಾಷಾ ಮಾಡಿದ ಭಾಷಣದ ಆಧಾರದ ಮೇಲೆ ಹಾಗೂ ಚುನಾವಣಾಧಿಕಾರಿಗಳ ಮತ್ತು ಪೊಲೀಸ್ ಠಾಣೆಯ ಅನುಮತಿ ಪಡೆಯದೇ ಸಭೆ ನಡೆಸಿದ್ದರ ಹಿನ್ನೆಲೆಯಲ್ಲಿ ತಹಸೀಲ್ದಾರ್ ಅವರ ದೂರಿನ ಮೇಲೆ ಶಹರ್ ಠಾಣೆ ಪಿಎಸ್ಐ ನಿಂಗಪ್ಪ ಎನ್.ಆರ್. ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಜೆಡಿಯು ಜಿಲ್ಲಾಧ್ಯಕ್ಷರ ವಾಹನ ಜಪ್ತಿ
ಸಿಂಧನೂರು: ರಾಯಚೂರು ಜಿಲ್ಲಾ ಜೆಡಿಯು ಅಧ್ಯಕ್ಷ ಶಾಂತಗೌಡ ಜಾಗೀರದಾರ ಅವರ ಜೀಪನ್ನು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯ ಹಿನ್ನೆಲೆಯಲ್ಲಿ ಭಾನುವಾರ ಶಹರ್ ಪೊಲೀಸ್ ಠಾಣೆ ಪಿಎಸ್ಐ ಲಿಂಗಪ್ಪ ಎನ್.ಆರ್. ಜಪ್ತಿ ಮಾಡಿದರು.
ಕಳೆದ ಒಂದು ವಾರದಿಂದ ಜಿಲ್ಲಾಧ್ಯಕ್ಷರು ತಮ್ಮ ವಾಹನಕ್ಕೆ ಪಕ್ಷದ ಬಾವುಟವನ್ನು ಕಟ್ಟಿಕೊಂಡು ಸಂಚರಿಸುತ್ತಿದ್ದರು. ಪೊಲೀಸ್ ಅಧಿಕಾರಿಗಳು ಮೌಖಿಕವಾಗಿ ಹೇಳಿದರು ಸಹ ಧ್ವಜವನ್ನು ಬಿಚ್ಚದೆ ತಿರುಗಾಡುತ್ತಿದ್ದನ್ನು ಗಮನಿಸಿದ ಪೊಲೀಸರು ಜಪ್ತಿ ಮಾಡಿದರು ಎಂದು ತಿಳಿದು ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

